ಕ್ರೆಡಿಟ್ ಗ್ಯಾರಂಟಿ: ಎಂಎಸ್ಎಂಇಗಳಿಗೆ 100 ಕೋಟಿ ರೂವರೆಗೂ ಅಡಮಾನರಹಿತ ಸಾಲ: ನಿರ್ಮಲಾ ಸೀತಾರಾಮನ್
Credit guarantee scheme: ಕೇಂದ್ರ ಸರ್ಕಾರ ಎಂಎಸ್ಎಂಇಗಳಿಗೆ ಉತ್ತೇಜನ ನೀಡಲು ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಮಾಡಿದೆ. ಇನ್ನು ಕಳೆದ ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ. ಇದರಡಿಯಲ್ಲಿ ಎಂಎಸ್ಎಂಇಗಳಿಗೆ ಸರ್ಕಾರವೇ 100 ಕೋಟಿ ರೂವರೆಗಿನ ಸಾಲಕ್ಕೆ ಗ್ಯಾರಂಟಿ ಒದಗಿಸಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 11: ಸರ್ಕಾರಿ ಬ್ಯಾಂಕುಗಳು ಹೊಸ ಸಾಲ ಮೌಲ್ಯಮಾಪನ ಮಾದರಿ ರೂಪಿಸಿದ್ದು, ಆ ವ್ಯವಸ್ಥೆಯಡಿ ಎಂಎಸ್ಎಂಇಗಳಿಗೆ ಅಡಮಾನರಹಿತವಾಗಿ 100 ಕೊಟಿ ರೂಗಳವರೆಗೆ ಸಾಲ ಸಿಗುವ ಅವಕಾಶ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮೊನ್ನೆ ನಡೆದ ನ್ಯಾಷನಲ್ ಎಂಎಸ್ಎಂಇ ಕ್ಲಸ್ಟರ್ ಔಟ್ರೀಚ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಹೊಸ ಕ್ರೆಡಿಟ್ ಗ್ಯಾರಂಟೀ ಸ್ಕೀಮ್ನಿಂದ ಎಂಎಸ್ಎಂಇಗಳ ಫಂಡಿಂಗ್ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಶೀಘ್ರದಲ್ಲೇ ಕ್ಯಾಬಿನೆಟ್ ಅವಗಾಹನೆಗೆ ಹೋಗಲಿದೆ ಎಂದಿದ್ದಾರೆ.
‘ಟರ್ಮ್ ಲೋನ್ಗಳು ಸಿಗುವುದಿಲ್ಲ. ಮೆಷಿನರಿಗಳಿಗೆ ಲೋನ್ಗಳು ಸಿಗುವುದಿಲ್ಲ ಎಂಬುದು ಎಂಎಸ್ಎಂಇಗಳಿಗೆ ಮೊದಲಿಂದಲೂ ಇದ್ದ ಅಳಲು. ಬಜೆಟ್ನಲ್ಲಿ ಪ್ರಕಟಿಸಲಾದ ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ನಲ್ಲಿ ಎಂಎಸ್ಎಂಇಗಳಿಗೆ 100 ಕೋಟಿ ರೂವರೆಗೆ ಸಾಲಕ್ಕೆ ಗ್ಯಾಂರಂಟಿ ಸಿಗುತ್ತದೆ. ನೀವು ಬ್ಯಾಂಕ್ನಿಂದ 100 ಕೋಟಿ ರೂಗೂ ಹೆಚ್ಚು ಮೊತ್ತದ ಸಾಲ ಪಡೆಯಲು ಹೋದರೂ ಸರ್ಕಾರದಿಂದಲೇ ನೂರು ಕೋಟಿ ರೂಗೆ ಗ್ಯಾರಂಟಿ ಕೊಡಲಾಗುತ್ತದೆ. ಅಂದರೆ, ಅಡಮಾನರಹಿತವಾಗಿ ನೀವು 100 ಕೋಟಿ ರೂವರೆಗೆ ಸಾಲ ಪಡೆಯಬಹುದು’ ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಸೋಲಾರ್ ಮ್ಯಾನುಫ್ಯಾಕ್ಚರಿಂಗ್: ಬೇರೆ ದೇಶಗಳಿಗೆ 20 ವರ್ಷ; ಭಾರತಕ್ಕೆ ನಾಲ್ಕೈದು ವರ್ಷ ಸಾಕು: ವಿನೀತ್ ಮಿಟ್ಟಲ್
ಈ ಬ್ಯಾಂಕುಗಳೇ ಹೊಸ ಮಾದರಿಯ ಕ್ರೆಡಿಟ್ ಅಸೆಸ್ಮೆಂಟ್ ಮಾಡಲ್ ಅನ್ನು ರೂಪಿಸಲಿವೆ. ಪ್ರತಿಯೊಂದು ಬ್ಯಾಂಕ್ ಕೂಡ ತನ್ನದೇ ರೀತಿಯ ಕ್ರೆಡಿಟ್ ಅಸೆಸ್ಮೆಂಟ್ ಮಾಡಲ್ ರೂಪಿಸುತ್ತದೆ. ಇದರಿಂದ ಎಂಎಸ್ಎಂಇಗಳಿಗೆ ನೆರವಾಗಬಲ್ಲುದು ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ.
ಆರಂಭವಾಗಿರುವ ಸಿಡ್ಬಿ (SIDBI) ಬ್ಯಾಂಕ್ನ ಆರು ಹೊಸ ಶಾಖೆಗಳ ವ್ಯಾಪ್ತಿಗೆ 20 ಕೈಗಾರಿಕಾ ಕ್ಲಸ್ಟರ್ಗಳು ಬರುತ್ತವೆ. ಇದರಿಂದ ಕರ್ನಾಟಕದಲ್ಲಿ ಎಂಎಸ್ಎಂಇಗಳಿಗೆ ಹೆಚ್ಚು ಬಲ ಸಿಗಬಹುದು. ಕರ್ನಾಟಕದಲ್ಲಿರುವ ಸಿಡ್ಬಿ ಬ್ಯಾಂಕ್ ಶಾಖೆಗಳ ಪೋರ್ಟ್ಫೋಲಿಯೋದಲ್ಲಿ 1,169 ಕೋಟಿ ರೂ ಇದೆ. ಅನುತ್ಪಾದಕ ಸಾಲ ಆಸ್ತಿ ಯಾವುದೂ ಇಲ್ಲ. ಸಿಡ್ಬಿಯ ನೇರ ಹಣಕಾಸು ಸೌಲಭ್ಯಗಳಿಂದಾಗಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಕೈಗಾರಿಕೆಗಳ ಸಾಮರ್ಥ್ಯ ಬಲಗೊಳ್ಳಲಿದೆ ಎಂದು ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲೂ ತಲೆ ಎತ್ತಲಿದೆ ಟ್ರಂಪ್ ಟವರ್; ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು
ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವಗಳಲ್ಲಿ ಇಕಾಮರ್ಸ್ ಟ್ರೇಡ್ ಹಬ್ಗಳನ್ನು ಸ್ಥಾಪಿಸಲಾಗುವುದು. ಇದರಿಂದ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ರಫ್ತು ಸಂಬಂಧಿತ ಸೇವೆಗಳಿಗೆ ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ