ನವದೆಹಲಿ: ದೇಶದ ಸ್ಟಾರ್ಟಪ್ ಫಂಡಿಂಗ್ನಲ್ಲಿ (Start-ups funding) ಭಾರೀ ಕುಸಿತವಾಗಿರುವುದು ದತ್ತಾಂಶ ತಾಣ ಟ್ರಾಕ್ಶನ್ (Tracxn) ವರದಿಯಿಂದ ತಿಳಿದುಬಂದಿದೆ. ಈ ವರ್ಷ ಜನವರಿಯಿಂದ ನವೆಂಬರ್ ಅವಧಿಯಲ್ಲಿ ಸ್ಟಾರ್ಟಪ್ ಫಂಡಿಂಗ್ನಲ್ಲಿ ಶೇಕಡಾ 35ರಷ್ಟು ಕುಸಿತವಾಗಿದೆ. 24.7 ಶತಕೋಟಿ ಡಾಲರ್ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸ್ಟಾರ್ಟಪ್ ಫಂಡಿಂಗ್ 37.2 ಶತಕೋಟಿ ಡಾಲರ್ ಆಗಿತ್ತು ಎಂದು ವರದಿ ತಿಳಿಸಿದೆ.
2021ರ ನಾಲ್ಕನೇ ತ್ರೈಮಾಸಿಕ ಅವಧಿಯಿಂದಲೇ ಫಂಡಿಂಗ್ನಲ್ಲಿ ನಿಧಾನಗತಿ ಕಾಣಿಸಲು ಆರಂಭವಾಗಿತ್ತು. ಬಡ್ಡಿ ದರ ಹೆಚ್ಚಳ, ಜಾಗತಿಕ ಆರ್ಥಿಕ ಹಿಂಜರಿತ ಮತ್ತಿತರ ಕಾರಣಗಳಿಂದಾಗಿ ಹೂಡಿಕೆದಾರರು ಅತೀವ ಎಚ್ಚರಿಕೆಯ ನಡೆ ಅನುಸರಿಸಿದ್ದರು. ಫಂಡಿಂಗ್ನಲ್ಲಿ ಗಮನಾರ್ಹ ಕುಸಿತವಾಗಿರುವುದು ಹೂಡಿಕೆ ಕುಸಿತಕ್ಕೂ ಕಾರಣವಾಗಿದೆ. ಜನವರಿ – ನವೆಂಬರ್ ಅವಧಿಯಲ್ಲಿ ಶೇಕಡಾ 45ರಷ್ಟು ಹೂಡಿಕೆ ಕುಸಿತವಾಗಿದೆ. 2021ರಲ್ಲಿ 29.3 ಶತಕೋಟಿ ಡಾಲರ್ ಇದ್ದ ಹೂಡಿಕೆ ಈ ವರ್ಷ 16.1 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ ಎಂದು ‘ಟ್ರಾಕ್ಶನ್ ಜಿಯೋ ಆ್ಯನಿವಲ್ ರಿಪೋರ್ಟ್: ಇಂಟಿಯಾ ಟೆಕ್ 2022’ ಉಲ್ಲೇಖಿಸಿ ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ.
ಇದನ್ನು ಓದಿ: PM Narendra Modi: ಭಾರತದ ಸ್ಟಾರ್ಟ್ಅಪ್ ಉತ್ಸಾಹವನ್ನು ಪ್ರತಿನಿಧಿಸುವ ಬೆಂಗಳೂರು; ಪ್ರಧಾನಿ ಮೋದಿ
ಫಿನ್ಟೆಕ್ ಮತ್ತು ರಿಟೇಲ್ ಕ್ಷೇತ್ರಗಳ ಸ್ಟಾರ್ಟಪ್ಗಳ ಫಂಡಿಂಗ್ನಲ್ಲಿ 2021ಕ್ಕೆ ಹೋಲಿಸಿದರೆ ಕ್ರಮವಾಗಿ ಶೇಕಡಾ 41 ಮತ್ತು 57ರಷ್ಟು ಕುಸಿತವಾಗಿದೆ. ಆರ್ಬಿಐ ನೀತಿಯಲ್ಲಿನ ಬದಲಾವಣೆಯು ಫಿನ್ಟೆಕ್ ಕ್ಷೇತ್ರದ ಮೇಲೆ ಭಾರೀ ಹೊಡೆತ ನೀಡಿದೆ. ಇದು ಸ್ಲೈಸ್, ಯುನಿ ಪೇಯಂಥ ಸ್ಟಾರ್ಟಪ್ಗಳ ಮೇಲೆ ಪರಿಣಾಮ ಬೀರಿದೆ. ಕ್ರಿಪ್ಟೊ ಉದ್ಯಮವೂ ಭಾರೀ ಕುಸಿತ ಕಾಣಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಎಜುಟೆಕ್ ಕ್ಷೇತ್ರದ ಸ್ಟಾರ್ಟಪ್ಗಳ ಫಂಡಿಂಗ್ನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 39ರಷ್ಟು ಕುಸಿತವಾಗಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಶಾಲೆ, ಕಾಲೇಜುಗಳು ಪುನರಾರಂಭವಾಗಿರುವುದು ಬೇಡಿಕೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. 2022ರಲ್ಲಿ ಎಜುಟೆಕ್ ಕಂಪನಿಗಳ ಫಂಡಿಂಗ್ ಪೈಕಿ ಬೈಜೂಸ್, ಅಪ್ಗಾರ್ಡ್, ಲೀಡ್ ಸ್ಕೂಲ್ ಹಾಗೂ ಫಿಸಿಕ್ಸ್ವಾಲ್ಲಾ 100 ಶತಕೋಟಿ ಡಾಲರ್ಗೂ ಹೆಚ್ಚು ಫಂಡ್ ಸಂಗ್ರಹಿಸಿವೆ. ಹಾಲಿ ಹೂಡಿಕೆದಾರರಿಂದ ಬೈಜೂಸ್ 1.2 ತಕೋಟಿ ಡಾಲರ್ ಫಂಡಿಂಗ್ ಸಂಗ್ರಹಿಸಿದೆ ಎಂದು ವರದಿ ತಿಳಿಸಿದೆ.
ಬೈಜೂಸ್ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎನ್ನಲಾಗಿದ್ದು, ವೆಚ್ಚ ಕಡಿತದ ಭಾಗವಾಗಿ ಇತ್ತೀಚೆಗೆ ಅನೇಕ ಉದ್ಯೋಗಿಗಳನ್ನು ವಜಾಗೊಳಿಸಿದೆ ಎನ್ನಲಾಗಿದೆ. ಮತ್ತೊಂದು ಎಜುಟೆಕ್ ಕಂಪನಿ ‘ಅಮೆಜಾನ್ ಅಕಾಡೆಮಿ’ಯನ್ನು ಹಂತಹಂತವಾಗಿ ಮುಚ್ಚುವುದಾಗಿ ಇತ್ತೀಚೆಗಷ್ಟೇ ಅಮೆಜಾನ್ ಘೋಷಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Sat, 10 December 22