PM Narendra Modi: ಭಾರತದ ಸ್ಟಾರ್ಟ್ಅಪ್ ಉತ್ಸಾಹವನ್ನು ಪ್ರತಿನಿಧಿಸುವ ಬೆಂಗಳೂರು; ಪ್ರಧಾನಿ ಮೋದಿ
ಬೆಂಗಳೂರು ಭಾರತದ ಯುವಶಕ್ತಿಯ ಪ್ರತೀಕವಾಗಿದೆ. ಇದು ದೇಶದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಆಗಿ ಹೊರಹೊಮ್ಮಿದೆ ಎಂದು ಮೋದಿ ಬಣ್ಣಿಸಿದರು.
ಬೆಂಗಳೂರು: ಕರ್ನಾಟಕದ ರಾಜಧಾನಿಯು (Bengaluru) ದೇಶದ ಸ್ಟಾರ್ಟಪ್ ಉತ್ಸಾಹವನ್ನು ಪ್ರತಿನಿಧಿಸುವ ನಗರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಬಣ್ಣಿಸಿದರು. ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಬೆಂಗಳೂರಿನ ಕೊಡುಗೆಯನ್ನು ಶ್ಲಾಘಿಸಿದರು. ಮೂರು ವರ್ಷ ಇಡೀ ವಿಶ್ವ ಕೋವಿಡ್ ಸಾಂಕ್ರಾಮಿಕದಿಂದ ಬಳಲಿತ್ತು. ಕೋವಿಡೋತ್ತರ ಕಾಲಘಟ್ಟದಲ್ಲಿ ದೇಶವು ಆರ್ಥಿಕವಾಗಿ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದು, ಇದರಲ್ಲಿ ಕರ್ನಾಟಕದ ಪಾಲು ಸಾಕಷ್ಟಿದೆ ಎಂದು ಅವರು ಹೇಳಿದರು.
ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಂಗಳೂರು
ಇಂದು ಸ್ಟಾರ್ಟ್ಅಪ್ ವಿಚಾರದಲ್ಲಿ ಭಾರತವು ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಸ್ಟಾರ್ಟ್ಅಪ್ ಎನ್ನುವುದು ಒಂದು ಕಂಪನಿಯಿಂದ ಆಗುವುದಿಲ್ಲ. ಅದೊಂದು ಮನೋಭಾವ, ಸಮಗ್ರ ಪ್ರಯತ್ನದ ಫಲ. ಬೆಂಗಳೂರು ಭಾರತದ ಭವಿಷ್ಯಕ್ಕೆ ಅತ್ಯಂತ ಮುಖ್ಯ ನಗರ. ಬೆಂಗಳೂರು ಭಾರತದ ಯುವಶಕ್ತಿಯ ಪ್ರತೀಕವಾಗಿದೆ. ಇದು ದೇಶದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಆಗಿ ಹೊರಹೊಮ್ಮಿದೆ ಎಂದು ಮೋದಿ ಬಣ್ಣಿಸಿದರು.
ಇದು ಹೊಸ ಭಾರತದ ಹೊಸ ಯುಗ
ಭಾರತವು ವೇಗವಾಗಿ ಅಭಿವೃದ್ಧಿಹೊಂದುತ್ತಿದೆ. ಇದು ಹೊಸ ಭಾರತದ ಹೊಸ ಯುಗವಾಗಿದೆ. ಭಾರತದ ಭವಿಷ್ಯಕ್ಕೆ ಸ್ಟಾರ್ಟ್ಅಪ್ ಎಂಬುದು ಬಹುಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ಅದಕ್ಕೆ ಬೆಂಗಳೂರು ಬಹುದೊಡ್ಡ ಕೊಡುಗೆ ನೀಡುತ್ತದೆ. ದೇಶದ ಸ್ಟಾರ್ಟ್ಅಪ್ ಕ್ಯಾಪಿಟಲ್ ಬೆಂಗಳೂರನ್ನು ಚೆನ್ನೈ ಹಾಗೂ ಮೈಸೂರಿನೊಂದಿಗೆ ಸಂಪರ್ಕ ಬೆಸೆಯುವಂತೆ ಮಾಡಲು ವಂದೇ ಭಾರತ್ ರೈಲು ಕಲ್ಪಿಸಲಾಗಿದೆ ಎಂದು ಮೋದಿ ಹೇಳಿದರು.
ಎಫ್ಡಿಐ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿ ಕರ್ನಾಟಕ
ದೇಶದಲ್ಲಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಆಕರ್ಷಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇದು ಕೇವಲ ಐಟಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಜೈವಿಕ ತಂತ್ರಜ್ಞಾನದಿಂದ ತೊಡಗಿ ರಕ್ಷಣಾ ಉತ್ಪಾದನೆವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ಕರ್ನಾಟಕ ಕೊಡುಗೆ ನೀಡುತ್ತಿದೆ. ಬಾಹ್ಯಾಕಾಶ ಉದ್ದಿಮೆಯಲ್ಲಿಯೂ ಕರ್ನಾಟಕದ ಕೊಡುಗೆ ಬಹಳಷ್ಟಿದೆ. ದೇಶದ ಸೇನೆಗೆ ಏರ್ಕ್ರಾಫ್ಟ್, ಹೆಲಿಕಾಪ್ಟರ್ ನಿರ್ಮಿಸುವಲ್ಲಿಯೂ ಕರ್ನಾಟಕದ ಕೊಡುಗೆ ದೊಡ್ಡದು. ವಾಹನ ಉತ್ಪಾದನೆಯಲ್ಲಿಯೂ ರಾಜ್ಯ ಮುಂದಿದೆ ಎಂದು ಮೋದಿ ಹೇಳಿದರು. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿಯೂ ಕರ್ನಾಟಕ ಮುಂದಿದೆ. ಫಾರ್ಚೂನ್ 400 ಪಟ್ಟಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: PM Modi Bangalore Visit Live: ಕುಲಕುಲವೆಂದು ಹೊಡೆದಾಡದಿರಿ- ಕನಕದಾಸರ ಕೀರ್ತನೆ ನೆನೆದ ನರೇಂದ್ರ ಮೋದಿ