PM Modi Bangalore Visit Highlights: ಕೆಂಪೇಗೌಡರ ಪರಿಕಲ್ಪನೆಯಂತೆ ಬೆಂಗಳೂರು ಅಭಿವೃದ್ಧಿ; ಪ್ರಧಾನಿ ನರೇಂದ್ರ ಮೋದಿ ಭರವಸೆ
PM Narendra Modi In Bangalore Highlights Updates: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನ 11) ಬೆಂಗಳೂರಿಗೆ ಆಗಮಿಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಕೆಂಪೇಗೌಡರ ಬೃಹತ್ ಪ್ರತಿಮೆ ಅನಾವರಣಗೊಳಿಸಿದರು. ಇದಕ್ಕೂ ಮೊದಲು ವಿಮಾನ ನಿಲ್ದಾಣದ 2ನೇ ಟರ್ಮಿನಲ್ಗೂ ಮೋದಿ ಅವರು ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನ 11) ಬೆಂಗಳೂರಿಗೆ ಆಗಮಿಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಧಾನಸೌಧದ ಸಮೀಪ ಕನಕದಾಸರು ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ರೈಲು ನಿಲ್ದಾಣಕ್ಕೆ ತೆರಳಿದರು. ಪ್ರತಿಷ್ಠಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಚಾಲನೆ ನೀಡಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ ಬರಬೇಕಿದ್ದ ಕೆಲ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ಭುವನಹಳ್ಳಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಜನಜಾತ್ರೆಯೇ ನೆರೆದಿದೆ. ಕೆಂಪೇಗೌಡರ ಬೃಹತ್ ಪ್ರತಿಮೆಯನ್ನೂ ಮೋದಿ ಅವರು ಅನಾವರಣಗೊಳಿಸಿದರು. ಇದಕ್ಕೂ ಮೊದಲು ವಿಮಾನ ನಿಲ್ದಾಣದ 2ನೇ ಟರ್ಮಿನಲ್ಗೆ ಚಾಲನೆ ನೀಡಿದರು.
LIVE NEWS & UPDATES
-
PM Modi In Bangalore Live: ಕೆಂಪೇಗೌಡರ ಪರಿಕಲ್ಪನೆಯಂತೆ ಬೆಂಗಳೂರು ಅಭಿವೃದ್ಧಿ
ಬೆಂಗಳೂರು ನಗರವನ್ನು ನಾಡಪ್ರಭು ಕೆಂಪೇಗೌಡರ ಪರಿಕಲ್ಪನೆಯಂತೆಯೇ ಅಭಿವೃದ್ಧಿಪಡಿಸುತ್ತೇವೆ. ಕೆಂಪೇಗೌಡರು ಬೆಂಗಳೂರನ್ನು ಆರ್ಥಿಕವಾಗಿ ಮಾತ್ರವಲ್ಲ ಸಾಂಸ್ಕೃತಿವಕಾಗಿಯೂ ಸದೃಢಗೊಳಿಸಬೇಕು ಎಂದು ಚಿಂತಿಸಿದ್ದರು. ಬೆಂಗಳೂರು ಇಂದು ಜಾಗತಿಕ ನಗರವಾಗಿ ಬೆಳೆದಿದೆ. ಬೆಂಗಳೂರಿನ ಪರಂಪರೆ ಸಂರಕ್ಷಿಸುವ ಜೊತೆಗೆ ಆಧುನಿಕ ಸೌಲಭ್ಯಗಳನ್ನೂ ಒದಗಿಸಬೇಕು. ಈ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು. ಇಲ್ಲಿ ನೆರೆದಿರುವ ಎಲ್ಲ ಸಂತರನ್ನೂ, ಹಿರಿಯರನ್ನು ನಮಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮುಗಿಸಿ ವೇದಿಕೆಯಿಂದ ತೆರಳಿದರು.
-
PM Modi In Bangalore Live: ಕನಕದಾಸರ ಕೀರ್ತನೆ ನೆನೆದ ಮೋದಿ
ಕನಕದಾಸರು ಒಂದು ಕಡೆಯಿಂದ ಕೃಷ್ಣನ ಭಕ್ತಿಯ ಮಾರ್ಗ ತೋರಿದರು. ಮತ್ತೊಂದೆಡೆ ‘ಕುಲಕುಲವೆಂದು ಹೊಡೆದಾಡದಿರಿ’ ಎಂದು ಕಿವಿಮಾತು ಹೇಳಿದರು. ಇಂದು ಜಗತ್ತಿನಲ್ಲಿ ಕಿರುಧಾನ್ಯದ ಬಗ್ಗೆ ಮಾತು ಕೇಳಿಬರುತ್ತಿದೆ. ‘ರಾಮಧಾನ್ಯ ಚರಿತ್ರೆ’ ಮೂಲಕ ಕಿರುಧಾನ್ಯವಾದ ರಾಗಿಯ ಉದಾಹರಣೆ ನೀಡಿ ಸಾಮಾಜಿಕ ಸಮಾನತೆಯ ಸಂದೇಶ ನೀಡಿದರು. -ಮೋದಿ
-
PM Modi In Bangalore Live: ಎಲ್ಲ ರೈತರಿಗೂ ಅನುಕೂಲ
ಸಣ್ಣ ರೈತರ ಅನುಕೂಲಕ್ಕೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಆಹಾರ ಧಾನ್ಯಗಳು ಸಕಾಲಕ್ಕೆ ಮಾರುಕಟ್ಟೆ ತಲುಪಲು ಅನುಕೂಲ ಕಲ್ಪಿಸಿದ್ದೇವೆ. ಎಲ್ಲರೂ ಜೊತೆಗೂಡಿದರೆ ದೇಶ ಸದೃಢವಾಗುತ್ತದೆ. ಹೀಗಾಗಿ ದೇಶದ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಲು ಎಲ್ಲರನ್ನೂ ಭಾಗಿದಾರರಾಗಿ ಮಾಡಿಕೊಳ್ಳಲಾಗಿದೆ. -ಮೋದಿ
PM Modi In Bangalore Live: ಬೆಂಗಳೂರು ಭಾರತಕ್ಕೆ ಅತ್ಯಂತ ಮುಖ್ಯ
ಸ್ಟಾರ್ಟ್ಅಪ್ ಎನ್ನುವುದು ಒಂದು ಕಂಪನಿಯಿಂದ ಆಗುವುದಿಲ್ಲ. ಅದೊಂದು ಮನೋಭಾವ, ಸಮಗ್ರ ಪ್ರಯತ್ನದ ಫಲ. ಬೆಂಗಳೂರು ಭಾರತದ ಭವಿಷ್ಯಕ್ಕೆ ಅತ್ಯಂತ ಮುಖ್ಯ ನಗರ. ಬೆಂಗಳೂರು ಭಾರತದ ಯುವಶಕ್ತಿಯ ಪ್ರತೀಕವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ ಒಂದು ರೈಲು ಮಾತ್ರವೇ ಅಲ್ಲ. ಅದು ಹೊಸ ಭಾರತದ ಹೊಸ ಮೈಲಿಗಲ್ಲು. ಮುಂದಿನ ದಿನಗಳಲ್ಲಿ ಭಾರತದ ರೈಲುಗಲು ಹೇಗಿರಲಿವೆ ಎಂಬುದರ ಒಂದು ಝಲಕ್ ಅಷ್ಟೇ. – ಮೋದಿ
PM Modi In Bangalore Live: ಮೋದಿ ಭಾಷಣ ಆರಂಭ
ಕರ್ನಾಟಕದ ಸಮಸ್ತ ಜನರಿಗೆ ನನ್ನ ಕೋಟಿಕೋಟಿ ಪ್ರಣಾಮಗಳು ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿದರು.
PM Modi In Bangalore Live Updates: ಕೆಂಪೇಗೌಡರ ಜೀವನ ಸಾಧನೆ ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತ ಭಾಷಣ ಪೂರ್ಣಗೊಳಿಸಿದ ನಂತರ ಸಮಾವೇಶದಲ್ಲಿ ಕೆಂಪೇಗೌಡರ ಜೀವನ-ಸಾಧನೆ ಬಿಂಬಿಸುವ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸಾಕ್ಷ್ಯಚಿತ್ರವನ್ನು ಆಸಕ್ತಿಯಿಂದ ವೀಕ್ಷಿಸಿದರು.
PM Modi In Bangalore Live Updates: ಮೋದಿಗೆ ವಿಶಿಷ್ಟ ಪೇಟ ಕೊಡಿಸಿದ ಸಿಎಂ ಬೊಮ್ಮಾಯಿ, ಕೆಂಪೇಗೌಡರಿಗೆ ಮೋದಿ ಪುಷ್ಪನಮನ
ಸಾರ್ವಜನಿಕ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಕೆಂಪೇಗೌಡರು ಧರಿಸುತ್ತಿದ್ದ ಮಾದರಿಯ ವಿಶಿಷ್ಟ ಪೇಟ ತೊಡಿಸಿ ಅಭಿನಂದಿಸಿದರು. ಈ ವೇಳೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಹ ಮೋದಿ ಅವರನ್ನು ಆಶೀರ್ವದಿಸಿದರು. ವೇದಿಕೆಯಲ್ಲಿ ಕನಕದಾಸರು, ಒನಕೆ ಓವಬ್ಬ ಹಾಗೂ ಕೆಂಪೇಗೌಡರ ಚಿತ್ರಪಟಗಳಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎ.ನಾರಾಯಣಸ್ವಾಮಿ, ಅಶ್ವಿನಿ ವೈಷ್ಣವ್, ಶೋಭಾ ಕರಂದ್ಲಾಜೆ, ಭಗವಂತ್ ಖೂಬಾ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಎಸ್.ಎಂ.ಕೃಷ್ಣ, ಸದಾನಂದಗೌಡ, ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು
PM Modi In Bangalore Live Updates: ಸಮಾವೇಶ ವೇದಿಕೆಗೆ ನರೇಂದ್ರ ಮೋದಿ: ಭಾಷಣ ಶೀಘ್ರ ಆರಂಭ
ಪ್ರಧಾನಿ ನರೇಂದ್ರ ಮೋದಿ ಅವರು ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪದ ಭುವನಹಳ್ಳಿಯಲ್ಲಿ ಸಾರ್ವಜನಿಕ ಸಮಾವೇಶದ ವೇದಿಕೆಗೆ ಆಗಮಿಸಿದ್ದಾರೆ. ಶೀಘ್ರದಲ್ಲಿಯೇ ಭಾಷಣ ಆರಂಭವಾಗಲಿದೆ. ಜನರಿಂದ ‘ಮೋದಿ, ಮೋದಿ’ ಘೋಷಣೆ.
PM Modi In Bangalore Live Updates: ಕೆಂಪೇಗೌಡರ ಪ್ರತಿಮೆ ಅನಾವರಣ
ಬೆಂಗಳೂರು: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. 100 ಟನ್ ಕಂಚು, 120 ಟಕ್ ಉಕ್ಕು ಬಳಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆ ಸುತ್ತಲಿನ ಸ್ಥಳದಲ್ಲಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ.
PM Modi In Bangalore Live Updates: ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಮೋದಿ, ಟರ್ಮಿನಲ್-2 ಲೋಕಾರ್ಪಣೆ
ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮಿಸಿದ್ದಾರೆ. ಶೀಘ್ರದಲ್ಲಿಯೇ ವಿಮಾನ ನಿಲ್ದಾಣದ ಟರ್ಮಿನಲ್-ಲೋಕಾರ್ಪಣೆಯಾಗಲಿದೆ. ಇದು ಏಷ್ಯಾ ಖಂಡದ ಮೊದಲ ಗಾರ್ಡನ್ ಟರ್ಮಿನಲ್-2 ಆಗಿದೆ. 2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಟರ್ಮಿನಲ್ ನಿರ್ಮಾಣಕ್ಕೆ ₹13,000 ಕೋಟಿ ವೆಚ್ಚ ಮಾಡಲಾಗಿದೆ. ವಾರ್ಷಿಕ 2.5 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯ ಈ ಟರ್ಮಿನಲ್ಗೆ ಇದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎ.ನಾರಾಯಣಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಮುನಿಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
PM Modi In Bangalore Live Updates: ದೇವನಹಳ್ಳಿ ವಿಮಾನ ನಿಲ್ದಾಣದತ್ತ ಮೋದಿ
ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದತ್ತ ಪ್ರಧಾನಿ ನರೇಂದ್ರ ಮೋದಿ ಇದೀಗ ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2ಕ್ಕೆ ಇಂದು ಚಾಲನೆ ನೀಡಲಿದ್ದಾರೆ. ಮೋದಿ ಅವರು ಎಎಫ್ಟಿಸಿಸಿ ಹೆಲಿಪ್ಯಾಡ್ನಿಂದ ತೆರಳಿದ ಹಿನ್ನೆಲೆಯಲ್ಲಿ ಹೆಬ್ಬಾಳ ವೃತ್ತದಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿತ್ತು. ಮೇಕ್ರಿ ಸರ್ಕಲ್ ಬಳಿಯೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದು, ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುತ್ತಿದ್ದಾರೆ.
PM Modi In Bangalore Live Updates: ಮೋದಿ ಕಾರ್ಯಕ್ರಮಕ್ಕೆ ಕಪ್ಪು ಬಟ್ಟೆ ಧರಿಸಿ ಬಂದರೆ ನೋ ಎಂಟ್ರಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಮಕ್ಷಮ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ಕಪ್ಪು ಬಟ್ಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಪ್ಪು ಬಣ್ಣದ ಅಂಗಿ, ಟಿಶರ್ಟ್, ಕರವಸ್ತ್ರಗಳನ್ನೂ ಪೊಲೀಸರು ಒಳಗೆ ಬಿಡುತ್ತಿಲ್ಲ. ಕಪ್ಪು ಬಣ್ಣದ ಮಾಸ್ಕ್ ಧರಿಸಿ ಬಂದವರನ್ನೂ ವಾಪಸ್ ಕಳಿಸಲಾಗುತ್ತಿದೆ. ಮಾರ್ಗದಲ್ಲಿ ಅಲ್ಲಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಮೋದಿ ಭಾಷಣದ ವೇಳೆ ಕಪ್ಪುಪಟ್ಟಿ ಪ್ರದರ್ಶಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಮೋದಿ ಚಾಲನೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ರೈಲು ನಿಲ್ದಾಣದಲ್ಲಿ ‘ಭಾರತ್ ಗೌರವ್ ಕಾಶಿ ದರ್ಶನ್’ ವಿಶೇಷ ರೈಲಿಗೆ ಶುಕ್ರವಾರ ಚಾಲನೆ ನೀಡಿದರು. ಈ ರೈಲು ಯಾತ್ರಿಗಳನ್ನು ಕಾಶಿ, ಅಯೋಧ್ಯೆ ಸೇರಿದಂತೆ ಹಲವು ಪ್ರಮುಖ ಯಾತ್ರಾ ಸ್ಥಳಗಳಿಗೆ ಕೊಂಡೊಯ್ಯಲಿದ್ದು, ಒಂದು ವಾರದಲ್ಲಿ ಮರಳಿ ಬರಲಿದೆ. ರೈಲಿಗೆ ₹ 20,000 ಶುಲ್ಕ ನಿಗದಿಪಡಿಸಲಾಗಿದ್ದು, ರಾಜ್ಯ ಸರ್ಕಾರವು ₹ 5 ಸಾವಿರ ಸಹಾಯನಧನ ಒದಗಿಸುತ್ತಿದೆ. ಹೀಗಾಗಿ ಯಾತ್ರಿಕರು ₹ 15,000 ಮೊತ್ತದಲ್ಲಿ ಕಾಶಿ ಯಾತ್ರೆ ಪೂರ್ಣಗೊಳಿಸಬಹುದಾಗಿದೆ. ಈ ಶುಲ್ಕವು ಯಾತ್ರೆಯ ಅವಧಿಯ ಊಟೋಪಚಾರವನ್ನೂ ಒಳಗೊಂಡಿರುತ್ತದೆ.
Karnataka | Prime Minister Narendra Modi flags off Bharat Gaurav Kashi Darshana Train at KSR railway station in Bengaluru.
(Source: DD) pic.twitter.com/qFdukr7JRJ
— ANI (@ANI) November 11, 2022
PM Modi In Bangalore Live Updates: ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ವಾಗತಿಸಿದರು. ಪ್ಲಾಟ್ಫಾರಂ ಸಂಖ್ಯೆ 7ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದಕ್ಕೂ ಮೊದಲು ಕೆಲ ಸಮಯ ರೈಲಿನೊಳಗೆ ಪ್ರವೇಶಿಸಿ ಪರಿಶೀಲಿಸಿದರು.
Karnataka | Prime Minister Narendra Modi flags off Vande Bharat Express at KSR railway station in Bengaluru. pic.twitter.com/wtkwR3Uv69
— ANI (@ANI) November 11, 2022
PM Modi In Bangalore Live Updates: ಕಾರಿನಿಂದ ಇಳಿದು ಕಾರ್ಯಕರ್ತರತ್ತ ಕೈ ಬೀಸಿದ ಮೋದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ರೈಲು ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಕಾರಿನಿಂದ ಕೆಳಗೆ ಇಳಿದು ಕಾರ್ಯಕರ್ತರಿಗೆ ಕೈ ಮುಗಿದು, ಕೈ ಬೀಸಿದರು. ಮೋದಿ ಅವರನ್ನು ಸ್ವಾಗತಿಸಲೆಂದು ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಕೆಲವೇ ಕ್ಷಣಗಳಲ್ಲಿ ಮೋದಿ ಅವರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಿದ್ದಾರೆ.
Thank you Bengaluru for the memorable welcome to this dynamic city. pic.twitter.com/TFOcj4XwTo
— Narendra Modi (@narendramodi) November 11, 2022
PM Modi In Bangalore Live Updates: ಶಾಸಕರ ಭವನದಿಂದ ರೈಲು ನಿಲ್ದಾಣದತ್ತ ಮೋದಿ
ಬೆಂಗಳೂರು: ಶಾಸಕರ ಭವನದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದತ್ತ ತೆರಳಿದರು. ರೈಲು ನಿಲ್ದಾಣದಲ್ಲಿ ಇಂದು ಮೋದಿ ಅವರು ಪ್ರತಿಷ್ಠಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಹಾಗೂ ಕಾಶಿ ಯಾತ್ರೆಗೆಂದು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಚಾಲನೆ ನೀಡಲಿದ್ದಾರೆ. ಬಿಜೆಪಿ ಶಾಸಕರು ಮತ್ತು ಕೇಂದ್ರ ರೈಲ್ವೆ ಸಚಿವರು ಸಹ ರೈಲು ನಿಲ್ದಾಣದತ್ತ ಧಾವಿಸಿದ್ದಾರೆ.
PM Modi In Bangalore Live Updates: ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪಾರ್ಚನೆ
ಎಚ್ಎಎಲ್ನಿಂದ ನೇರವಾಗಿ ವಿಧಾನಸೌಧದ ಬಳಿಯ ಶಾಸಕರ ಭವನಕ್ಕೆ ತೆರಳಲಿದ ಪ್ರಧಾನಿ ನರೇಂದ್ರ ಮೋದಿ ಅವರು ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಎಂಟಿಬಿ ನಾಗರಾಜ್, ಶ್ರೀರಾಮುಲು ಉಪಸ್ಥಿತರಿದ್ದರು.
PM Modi In Bangalore Live Updates: ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತ
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಹಿನ್ನಲೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಹಿನ್ನಲೆ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೂ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಹೀಗಾಗಿ ಮೆಜೆಸ್ಟಿಕ್ ಬರುವ ಪ್ರಯಾಣಿಕರನ್ನು ಹತ್ತಿರದ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಹಿನ್ನಲೆ 2 ಗಂಟೆ ಮೆಜೆಸ್ಟಿಕ್ ಬರುವ ಬಸ್ ಸಂಚಾರ ಸ್ಥಗಿತ ಮಾಡುವಂತೆ ಉಪ್ಪಾರ ಪೇಟೆ ಠಾಣೆ ಪೊಲೀಸರಿಂದ ಮನವಿ ಮಾಡಲಾಗಿತ್ತು. ಇದೇ ಕಾರಣಕ್ಕೆ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಸಹಕರಿಸುವಂತೆ ಸಾರಿಗೆ ಇಲಾಖೆ ಮನವಿಮಾಡಿಕೊಂಡಿದೆ.
PM Modi In Bangalore Live Updates: ಮಳೆಯಲ್ಲೇ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರು
ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ಇದೆ. ಬೆಂಗಳೂರು ನಗರದ ಹಲವೆಡೆ ಜಿಟಿ ಜಿಟಿ ಮಳೆ ಆರಂಭಗೊಂಡಿದ್ದು, ಇದನ್ನು ಲೆಕ್ಕಿಸದೆ ಕಾರ್ಯಕರ್ತರು ಮಳೆಯಲ್ಲೇ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭುವನಹಳ್ಳಿ ಗೇಟ್ ಬಳಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಇಂದು ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಇನ್ನೊಂದೆಡೆ ಪೊಲೀಸರು ಹಾಗೂ ಇತರೆ ಸಿಬ್ಬಂದಿಗಳು ಮಳೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.
PM Modi In Bangalore Live Updates: ರೈಲು ನಿಲ್ದಾಣ ಸುತ್ತಮುತ್ತ ಬಿಜೆಪಿ ಕಾರ್ಯಕರ್ತರ ದಂಡು
ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಅವರನ್ನು ನೋಡಬೇಕೆನ್ನುವ ಆಸೆಯಿಂದ ಬಿಜೆಪಿ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ರೈಲು ನಿಲ್ದಾಣದ ಸುತ್ತಮುತ್ತಲೂ ನೆರೆದಿದ್ದಾರೆ. ರಸ್ತೆಯ ಎರಡು ಬದಿಯಲ್ಲಿ ಕಾರ್ಯಕರ್ತರು ಕಾದು ನಿಂದಿದ್ದು, ಮೋದಿ ಅವರನ್ನು ನೋಡಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ಮಕ್ಕಳು, ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಎಚ್ಎಎಲ್ನಿಂದ ಮೇಖ್ರಿ ಸರ್ಕಲ್ಗೆ ಪ್ರಧಾನಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಹೆಲಿಕಾಪ್ಟರ್ನಲ್ಲಿ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮೇಖ್ರಿ ಸರ್ಕಲ್ ಸಮೀಪ ಇರುವ ವಾಯುಪಡೆಯ ಟ್ರೇನಿಂಗ್ ಕಮಾಂಡ್ಗೆ ಬಂದಿಳಿದರು. ಅಲ್ಲಿಂದ ಕೆಲವೇ ಕ್ಷಣಗಳಲ್ಲಿ ವಿಧಾನಸೌಧದತ್ತ ತೆರಳಲಿದ್ದಾರೆ. ಅಲ್ಲಿ ಕನಕದಾಸ, ವಾಲ್ಮೀಕಿ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
PM Modi in Bengaluru: ಬೆಂಗಳೂರಿನಲ್ಲಿ ಮಳೆ, ಮೋದಿ ಕಾರ್ಯಕ್ರಮ ಸಮಯ ಬದಲಾವಣೆ
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಚಳಿಯ ಜೊತೆಗೆ ಮಳೆಯೂ ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಮೋದಿ ಅವರ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ತುಸು ಬದಲಾವಣೆಯಾಗಿದೆ. ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿರುವ ಮೋದಿ, 9.45ಕ್ಕೆ ಕನಕದಾಸ ಮತ್ತು ವಾಲ್ಮೀಕಿ ಚಿತ್ರಪಟಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ವಿಧಾನಸೌಧದಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 10.20ರಿಂದ 10.40ರ ಸಮಯದಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್ ಹಾಗೂ ಭಾರತ ಗೌರವ್ ಕಾಶಿ ದರ್ಶನ ರೈಲುಗಳಿಗೆ
PM Modi in Bengaluru: ಶಾಸಕರ ಭವನದಲ್ಲಿ ಬಿಗಿ ಭದ್ರತೆ: ನಾಯಿ ಹಿಡಿಯಲು ಬಿಬಿಎಂಪಿ ಕಸರತ್ತು
ಬೆಂಗಳೂರು: ನಗರದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಕೆಲವೇ ಕ್ಷಣಗಳಲ್ಲಿ ವಿಧಾನಸೌಧ ಸಮೀಪದ ಶಾಸಕರ ಭವನಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಂತಿಮ ಹಂತದ ಭದ್ರತಾ ವ್ಯವಸ್ಥೆಯನ್ನು ಡಿಸಿಪಿ ಶ್ರೀನಿವಾಸ್‌ಗೌಡ ಪರಿಶೀಲಿಸಿದರು. ಇದೇ ವೇಳೆ ಶಾಸಕರ ಭವನ ಸರ್ಕಲ್ನಲ್ಲಿದ್ದ 10ಕ್ಕೂ ಹೆಚ್ಚು ನಾಯಿಗಳನ್ನು ಸೆರೆ ಹಿಡಿಯಲು ಬಿಬಿಎಂಪಿ ಸಿಬ್ಬಂದಿ ಕಸರತ್ತು ನಡೆಸಿದರು. ಬಿಬಿಎಂಪಿ ಸಿಬ್ಬಂದಿ ತಂದ ಶ್ವಾನ ಬಲೆ ನೋಡಿ ನಾಯಿಗಳು ಓಡಿಹೋದವು.
PM Narendra Modi in Bengaluru: ಬೆಂಗಳೂರಿಗೆ ಬಂದಿಳಿದ ನರೇಂದ್ರ ಮೋದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನ 11) ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸ್ವಾಗತಿಸಿದರು. ಎಚ್ಎಎಲ್ನಿಂದ ಮೋದಿ ನೇರವಾಗಿ ವಿಧಾನಸೌಧದ ಬಳಿಯ ಶಾಸಕರ ಭವನಕ್ಕೆ ತೆರಳಲಿದ್ದಾರೆ.
PM @narendramodi landed in Bengaluru a short while ago, where he was received by Governor @TCGEHLOT, CM @BSBommai, Minister @JoshiPralhad and other dignitaries as well as officials. pic.twitter.com/om0JZyEl4w
— PMO India (@PMOIndia) November 11, 2022
Vande Bharat Train: ವಂದೇ ಭಾರತ್ ರೈಲಿನಲ್ಲಿ ಕೆಲವರಿಗಷ್ಟೇ ಅವಕಾಶ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸಲು ಕೆಲವೇ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಹತ್ತಲು ಎಲ್ಲರಿಗೂ ಅವಕಾಶ ಇಲ್ಲ. ಆದರೆ ಮುಂದಿನ ನಿಲ್ದಾಣಗಳಲ್ಲಿ ಪ್ರಯಾಣಿಕರು ಮುಕ್ತವಾಗಿ ಸಂಚರಿಸಬಹುದಾಗಿದೆ. ರೈಲ್ವೆ ಇಲಾಖೆಯು ಪ್ರಧಾನಿಗೆ ಆನೆ ಮೇಲೆ ಅಂಬಾರಿ ಇರುವ ನೆನಪಿನ ಕಾಣಿಕೆ ನೀಡಲಿದೆ.
ಎಚ್ಎಎಲ್ ಏರ್ಪೋರ್ಟ್ ಸುತ್ತಮುತ್ತ ಮಳೆ: ಬಿಗಿ ಬಂದೋಬಸ್ತ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿರುವ ವಿಮಾನ ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮೊದಲು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ ತುಂತುರು ಮಳೆ ಆರಂಭವಾಗಿದೆ. ಮಳೆಯ ನಡುವೆಯೂ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದಾರೆ. ವಿಐಪಿ ಗೇಟ್ನತ್ತ ಬರುವವರನ್ನು ಸಂಪೂರ್ಣವಾಗಿ ತಪಾಸಣೆ ಮಾಡಲಾಗುತ್ತಿದೆ. ಪಾಸ್ ಇದ್ದವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ.
PM Modi in Bengaluru: ಎಚ್ಎಎಲ್ನಲ್ಲಿ ಗಣ್ಯರ ದಂಡು: ಪ್ರಧಾನಿ ಭೇಟಿಗೆ ಸಿಎಂ, ರಾಜ್ಯಪಾಲರು
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಿಂದ ಹೊರಟಿದ್ದು ಶೀಘ್ರದಲ್ಲಿಯೇ ಬೆಂಗಳೂರು ತಲುಪಲಿದ್ದಾರೆ. ಮೋದಿ ಅವರಿಗೆ ಸ್ವಾಗತ ಕೋರಲೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.
Kempegowda Airport T2 Inauguration: ವಿಮಾನ ನಿಲ್ದಾಣದ ಟರ್ಮಿನಲ್-2 ಇಂದು ಉದ್ಘಾಟನೆ
ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದು ಏಷ್ಯಾ ಖಂಡದ ಮೊದಲ ಗಾರ್ಡನ್ ಟರ್ಮಿನಲ್-2 ಆಗಿದೆ. 2.55 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಟರ್ಮಿನಲ್ ನಿರ್ಮಾಣಕ್ಕೆ ₹13,000 ಕೋಟಿ ವೆಚ್ಚ ಮಾಡಲಾಗಿದೆ. ವಾರ್ಷಿಕ 2.5 ಕೋಟಿ ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯ ಈ ಟರ್ಮಿನಲ್ಗೆ ಇದೆ.
Kempegowda Statue Inauguration: ವಿಶ್ವ ದಾಖಲೆ ಬರೆದ ಕೆಂಪೇಗೌಡ ಥೀಮ್ ಪಾರ್ಕ್: ಹತ್ತು ಹಲವು ಆಕರ್ಷಣೆ
ಬೆಂಗಳೂರು: ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಇಂದು (ನ 11) ಪ್ರಧಾನಿ ನರೇಂದ್ರ ಮೋದಿ ಅಮಾವರಣಗೊಳಿಸಲಿದ್ದಾರೆ. ಮಧ್ಯಾಹ್ನ 12.10ಕ್ಕೆ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ. 108 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ₹ 64 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಥೀಮ್ ಪಾರ್ಕ್ ನಿರ್ಮಾಣಕ್ಕೆ ವೆಚ್ಚ ₹ 20 ಕೋಟಿ ಖರ್ಚು ಮಾಡಲಾಗಿದೆ. ಪ್ರತಿಮೆ ಮತ್ತು ಪಾರ್ಕ್ ಸೇರಿ ಒಟ್ಟು ₹ 84 ಕೋಟಿ ಖರ್ಚಾಗಿದೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿರುವ ಕೆಂಪೇಗೌಡ ಪ್ರತಿಮೆಯ ಒಟ್ಟು ತೂಕ 218 ಟನ್. ಪ್ರತಿಮೆಗೆ ಅಳವಡಿಸಿರುವ ಖಡ್ಗದ ತೂಕ 4ವೇ ಟನ್ ಇದೆ. ಒಟ್ಟು 23 ಎಕರೆ ವಿಸ್ತೀರ್ಣದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ಸ್ಥಾಪನೆಯಾಗಿದೆ.
PM Modi in Bengaluru: ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಮೋದಿ ಆಗಮನ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲಿಯೇ ಬೆಂಗಳೂರಿಗೆ ಬರಲಿದ್ದು, ಅವರನ್ನು ಸ್ವಾಗತಿಸಲು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊರಟಿದ್ದಾರೆ. ವಿಶೇಷ ವಿಮಾನದ ಮೂಲಕ ಮೋದಿ ಅವರು ಎಚ್ಎಎಲ್ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದಲ್ಲಿರುವ ವಾಯುನೆಲೆಗೆ ತೆರಳಲಿದ್ದಾರೆ. ಮೋದಿ ಅವರನ್ನು ಕರೆದೊಯ್ಯಲೆಂದು ಹೆಲಿಕಾಪ್ಟರ್ ಸಿದ್ಧವಾಗಿ ನಿಂತಿದೆ.
PM Modi Speech ಸಮಾವೇಶದಲ್ಲಿ 35 ನಿಮಿಷ ಮೋದಿ ಭಾಷಣ
ದೇವನಹಳ್ಳಿ ವಿಮಾನ ನಿಲ್ದಾಣ ಸಮೀಪದ ಭುವನಹಳ್ಳಿಯಲ್ಲಿ ಮಧ್ಯಾಹ್ನ 12.30ಕ್ಕೆ ಸಮಾವೇಶದ ವೇದಿಕೆಗೆ ಮೋದಿ ಆಗಮಿಸಲಿದ್ದಾರೆ. ನಂತರ ನಾಡಗೀತೆ ಮೊಳಗಲಿದೆ. ಕೆಂಪೇಗೌಡ, ಒನಕೆ ಓಬವ್ವ ಮತ್ತು ಕನಕದಾಸರ ಚಿತ್ರಪಟಗಳಿಗೆ ಪುಷ್ಪಾರ್ಚನೆ ಮಾಡಲಾಗುವುದು. ವೇದಿಕೆಯಲ್ಲಿ ಪ್ರಧಾನಿಗೆ ಗೌರವಾರ್ಪಣೆ ನಡೆದ ನಂತರ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರಿಂದ ಸ್ವಾಗತ ಭಾಷಣ ಮಾಡಲಿದ್ದಾರೆ. ನಂತರ 4 ನಿಮಿಷಗಳ ಕಾಲ ಕೆಂಪೇಗೌಡರ ಕುರಿತ ಕಿರುಚಿತ್ರ ಪ್ರದರ್ಶನ ನಡೆಯಲಿದೆ. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 5 ನಿಮಿಷಗಳ ಕಾಲ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 12.55ರಿಂದ 1.30 ರವರೆಗೆ ಒಟ್ಟು 35 ನಿಮಿಷಗಳ ಕಾಲ ಮೋದಿ ಭಾಷಣ ಮಾಡಲಿದ್ದಾರೆ. 1.30ಕ್ಕೆ ಮೋದಿ ವೇದಿಕೆಯಿಂದ ನಿರ್ಗಮಿಸಲಿದ್ದಾರೆ.
PM Modi in Bengaluru: ವೇದಿಕೆಯಲ್ಲಿ ಮೋದಿ ಜೊತೆಗೆ 25 ಮಂದಿ
ಬೆಂಗಳೂರು: ದೇವನಹಳ್ಳಿ ಸಮೀಪ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ನಂತರ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆಯಲ್ಲಿ ಪ್ರಧಾನಿಯ ಜೊತೆಗೆ ಇತರ 25 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ವೇದಿಕೆಯಲ್ಲಿ ಪ್ರಧಾನಿ ಮೋದಿ ಜೊತೆ 25 ಆಸನ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡರು, ಕನಕದಾಸರು ಮತ್ತು ಒನಕೆ ಓಬವ್ವ ಚಿತ್ರಪಟಗಳಿಗೆ ವೇದಿಕೆಯಲ್ಲಿಯೇ ಮೋದಿ ಪುಷ್ಪಾರ್ಚನೆ ಮಾಡಲಿದ್ದಾರೆ. ಸಾರ್ವಜನಿಕ ವೀಕ್ಷಣೆಗೆ ಅನುಕೂಲವಾಗುವಂತೆ 20ಕ್ಕೂ ಹೆಚ್ಚು ಬೃಹತ್ ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.
Kempegowda Statue Inauguration: ದೇವನಹಳ್ಳಿ ಬಳಿ ಬಿಜೆಪಿ ಸಮಾವೇಶ: ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನ ಸೇರುವ ನಿರೀಕ್ಷೆ
ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಈ ವೇಳೆ ಬಿಜೆಪಿ ಸಮಾವೇಶವೂ ನಡೆಯಲಿದ್ದು, ಸುಮಾರು 2 ಲಕ್ಷ ಜನರು ಸೇರಬಹುದು ಎಂದು ನಿರೀಕ್ಷಿಸಲಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗಾಗಿ ಅಡುಗೆ ಸಿದ್ಧಪಡಿಸಲಾಗುತ್ತಿದ್ದು, 150 ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದೆ.
PM Modi In Bengaluru: ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ (Traffic Problem) ಎದುರಾಗಬಹುದು. ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬದಲಿ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಮೈಸೂರು ಬ್ಯಾಂಕ್ ವೃತ್ತ-ಅರಮನೆ ರಸ್ತೆಯಲ್ಲಿ ಸಂಚಾರ ನಿಷೇಧ ಹಿನ್ನೆಲೆ ಕೆಂಪೇಗೌಡ ರಸ್ತೆಯ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
Published On - Nov 11,2022 7:44 AM