State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭ ಶೇ 55ರಷ್ಟು ಹೆಚ್ಚಳವಾಗಿ ನಿವ್ವಳ ಲಾಭ 6504 ಕೋಟಿ ರೂಪಾಯಿ

| Updated By: Srinivas Mata

Updated on: Aug 04, 2021 | 5:02 PM

ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021-22ನೇ ಸಾಲಿನ ಮೊದಲ ತ್ರೈಮಾಸಿಕದ ಫಲಿತಾಂಶ ಬಂದಿದ್ದು, 6504 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

State Bank Of India: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭ ಶೇ 55ರಷ್ಟು ಹೆಚ್ಚಳವಾಗಿ ನಿವ್ವಳ ಲಾಭ 6504 ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (State Bank Of India) ಆಗಸ್ಟ್ 4ನೇ ತಾರೀಕು ಬುಧವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಾಗಿದೆ. ಕಳೆದ ವರ್ಷದ ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ ಶೇ 55.25ರಷ್ಟು ಹೆಚ್ಚಳವಾಗಿ, 6504 ಕೋಟಿ ರೂಪಾಯಿ ನಿವ್ವಳ ಲಾಭ ಆಗಿದೆ. ಹೋದ ವರ್ಷ ಇದೇ ಅವಧಿಯಲ್ಲಿ 4,189.34 ಕೋಟಿ ರೂಪಾಯಿ ಲಾಭ ಆಗಿತ್ತು. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಸ್​ಬಿಐ ಲಾಭ ಗಳಿಸಿದೆ. ಸಿಎನ್​ಬಿಸಿ- ಟಿವಿ18 ಅಭಿಮತದಲ್ಲಿ ವಿಶ್ಲೇಷಕರು ಮೊದಲನೇ ತ್ರೈಮಾಸಿಕದಲ್ಲಿ 6,374.5 ಕೋಟಿ ರೂಪಾಯಿ ಲಾಭದ ಅಂದಾಜು ಮಾಡಿದ್ದರು. ಅದನ್ನು ಮೀರಿ ಲಾಭ ಬಂದಿದೆ. ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಪರೇಟಿಂಗ್ ಲಾಭ ಶೇ 5.06ರಷ್ಟು ಹೆಚ್ಚಳವಾಗಿ 18,975 ಕೋಟಿ ಮುಟ್ಟಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 18,061 ಕೋಟಿ ರೂಪಾಯಿ ಲಾಭ ಆಗಿತ್ತು.

ನಿವ್ವಳ ಬಡ್ಡಿ ಆದಾಯ (NII) ಅಂದರೆ, ಬಡ್ಡಿಯ ಮೂಲಕ ಗಳಿಸಿದ ಆದಾಯದಲ್ಲಿ ಠೇವಣಿದಾರರಿಗೆ ಪಾವತಿಸಬೇಕಾದದ್ದನ್ನು ಕಳೆದ ಮೇಲೆ ಬಾಕಿ ಉಳಿದದ್ದು ನಿವ್ವಳ ಬಡ್ಡಿ ಆದಾಯ ಆಗುತ್ತದೆ. ಠೇವಣಿದಾರರಿಗೆ ಪಾವತಿಸಿದ ಬಡ್ಡಿ ವರ್ಷದಿಂದ ವರ್ಷಕ್ಕೆ ಶೇ 3.74ರಷ್ಟು ಏರಿಕೆ ಆಗಿದೆ. ನಿವ್ವಳ ಬಡ್ಡಿ ಮಾರ್ಜಿನ್ (NIM) ಈ ತ್ರೈಮಾಸಿಕಕ್ಕೆ ಶೇ 3.15ರಷ್ಟಿದೆ. ದೇಶೀಯ ನಿವ್ವಳ ಬಡ್ಡಿ ಮಾರ್ಜಿನ್ FY22 ಮೊದಲ ತ್ರೈಮಾಸಿಕಕ್ಕೆ ಶೇ 3.15 ಇದ್ದು, ವರ್ಷದಿಂದ ವರ್ಷಕ್ಕೆ 9 ಬಿಪಿಎಸ್ ಕಡಿಮೆ ಆಗಿದೆ. ಠೇವಣಿಯು ವರ್ಷದಿಂದ ವರ್ಷಕ್ಕೆ ಶೇ 8.82ರಷ್ಟು ಏರಿಕೆ ಆಗಿದೆ. ಕರೆಂಟ್ ಅಕೌಂಟ್ ಡೆಪಾಸಿಟ್ ಶೇ 11.75ರಷ್ಟು ಬೆಳವಣಿಗೆ ಆಗಿದ್ದು, ಉಳಿತಾಯ ವರ್ಷದಿಂದ ವರ್ಷಕ್ಕೆ ನೋಡಿದರೆ ಶೇ 10.55ರಷ್ಟು ಬೆಳವಣಿಗೆ ಆಗಿದೆ.

ದೇಶೀಯ ಸಾಲದ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಶೇ 5.64 ಇತ್ತು. ಅದು ಮುಖ್ಯವಾಗಿ ರೀಟೇಲ್ (ಪರ್ಸನಲ್) ಅಡ್ವಾನ್ಸಸ್ (ವರ್ಷದಿಂದ ವರ್ಷಕ್ಕೆ ಶೇ 16.47), ಕೃಷಿ ಮುಂಗಡ (ವರ್ಷದಿಂದ ವರ್ಷಕ್ಕೆ ಶೇ 2.48) ಮತ್ತು ಎಸ್​ಎಂಇ (ವರ್ಷದಿಂದ ವರ್ಷಕ್ಕೆ ಶೇ 2.01) ಎಂದು ಬಿಎಸ್​ಇ ಫೈಲಿಂಗ್​ನಲ್ಲಿ ತಿಳಿಸಲಾಗಿದೆ. ನಿವ್ವಳ ನಾನ್-ಪರ್ಫಾರ್ಮಿಂಗ್ ಅಸೆಟ್ಸ್ ರೇಷಿಯೋ ವರ್ಷದಿಂದ ವರ್ಷಕ್ಕೆ 9 ಬಿಪಿಎಸ್​ ಇಳಿದು, ಶೇ 1.77ಕ್ಕೆ ಇಳಿದಿದೆ. ಗ್ರಾಸ್​ ಎನ್​ಪಿಎ ರೇಷಿಯೋ ವರ್ಷದಿಂದ ವರ್ಷಕ್ಕೆ 12 ಬಿಪಿಎಸ್​ ಇಳಿದು, ಶೇ 5.32 ಮುಟ್ಟಿದೆ. ಈ ತ್ರೈಮಾಸಿಕದಲ್ಲಿ ಎನ್​ಪಿಎ ಪ್ರಾವಿಷನ್ 5029.8 ಕೋಟಿ ರೂಪಾಯಿ ಇದ್ದು, ಕಳೆದ ಬಾರಿ 9914.2 ಕೋಟಿ ರೂ. ಇತ್ತು ಹಾಗೂ ವರ್ಷದಿಂದ ವರ್ಷಕ್ಕೆ ನೋಡಿದಾಗ ರೂ. 9420 ಕೋಟಿ ಇತ್ತು. ಬುಧವಾರ ದಿನಾಂತ್ಯಕ್ಕೆ ನಿಫ್ಟಿಯಲ್ಲಿ ಎಸ್​ಬಿಐ ಷೇರಿನ ದರ ಶೇ 2.34 ಅಥವಾ 10.45 ರೂಪಾಯಿ ಹೆಚ್ಚಳವಾಗಿ, 456.95 ರೂಪಾಯಿ ಮುಟ್ಟಿತು.

ಇದನ್ನೂ ಓದಿ: SBI Home Loan: ಎಸ್​ಬಿಐ ಗೃಹ ಸಾಲಕ್ಕೆ ಆಗಸ್ಟ್​ 31ರ ತನಕ ಪ್ರೊಸೆಸಿಂಗ್ ಶುಲ್ಕ ಮನ್ನಾ ವಿಸ್ತರಣೆ

ಇದನ್ನೂ ಓದಿ: SBI MOD: ಯಾವುದೇ ದಂಡ ಶುಲ್ಕ ಇಲ್ಲದೆ ಎಸ್​ಬಿಐ ಈ ಟರ್ಮ್​ ಡೆಪಾಸಿಟ್​ನಿಂದ ಹಣ ತೆಗೆಯುವುದು ಹೇಗೆ ಗೊತ್ತಾ?

(State Bank Of India FY22 Q1 Results Net Profit At Rs 6504 Crore)