Rakesh Jhunjhunwala: ಸ್ಟಾರ್ ಹೆಲ್ತ್ ಇನ್ಷೂರೆನ್ಸ್ ಲಿಸ್ಟಿಂಗ್ನಿಂದ ರಾಕೇಶ್ ಜುಂಜುನ್ವಾಲಾಗೆ 6 ಸಾವಿರ ಕೋಟಿ ರೂ. ಲಾಭ
ಷೇರು ಮಾರುಕಟ್ಟೆ ಹಿರಿಯ ಹೂಡಿಕೆದಾರರಾದ ರಾಕೇಶ್ ಜುಂಜುನ್‌ವಾಲಾ ಅವರು ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಷೂರೆನ್ಸ್ ಕಂಪೆನಿಯ ಲಿಸ್ಟಿಂಗ್ನಲ್ಲಿ 6000 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ.
ಷೇರುಪೇಟೆಯ ಹಿರಿಯ ಹೂಡಿಕೆದಾರರಾದ ರಾಕೇಶ್ ಜುಂಜುನ್‌ವಾಲಾ ಅವರ ಬೆಂಬಲದ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಷೂರೆನ್ಸ್ ಕಂಪೆನಿಯ ಷೇರುಗಳು ಶುಕ್ರವಾರ ದುರ್ಬಲ ಆರಂಭ ಪಡೆದುಕೊಂಡಿತು. ಆ ನಂತರ ಚೇತರಿಕೆ ಕಂಡಿತು. ಬಿಎಸ್‌ಇಯಲ್ಲಿ ಪ್ರತಿ ಷೇರಿಗೆ 940 ರೂಪಾಯಿಯ ದಿನದ ಗರಿಷ್ಠ ಮಟ್ಟಕ್ಕೆ ಏರಿತು. ಸ್ಟಾರ್ ಹೆಲ್ತ್ ಷೇರುಗಳು ಅದರ ಮೊದಲ ದಿನದ ಕೊನೆಗೆ ರೂ. 906.85ರೊಂದಿಗೆ ಎನ್ಎಸ್ಇಯಲ್ಲಿ ವ್ಯವಹಾರ ಚುಕ್ತಾ ಮಾಡಿದೆ. ಕಂಪೆನಿಯ ಪ್ರವರ್ತಕರಲ್ಲಿ ಒಬ್ಬರಾಗಿ, ಖಾಸಗಿ ಆರೋಗ್ಯ ವಿಮಾದಾರ ಕಂಪೆನಿಯಲ್ಲಿ ಶೇ 14ರಷ್ಟು ಪಾಲನ್ನು ಹೊಂದಿರುವ ರಾಕೇಶ್ ಜುಂಜುನ್‌ವಾಲಾ, 6,000 ಕೋಟಿ ರುಪಾಯಿಗಳಷ್ಟು ಲಾಭವನ್ನು ಗಳಿಸಿದ್ದಾರೆ. ಏಕೆಂದರೆ ಷೇರುಗಳು ಇಂಟ್ರಾಡೇ ಗರಿಷ್ಠ 940 ರೂಪಾಯಿ ತಲುಪಿತ್ತು. ಜುಂಜುನ್‌ವಾಲಾ ಸರಾಸರಿ ಸ್ವಾಧೀನ ವೆಚ್ಚವು ಪ್ರತಿ ಈಕ್ವಿಟಿ ಷೇರಿಗೆ 156 ರೂಪಾಯಿ ಆಗಿತ್ತು ಎಂದು ಸ್ಟಾರ್ ಹೆಲ್ತ್‌ನ ಪ್ರಾಸ್ಪೆಕ್ಟಸ್ ತೋರಿಸಿದೆ.
ಜುಂಜುನ್‌ವಾಲಾ ಅವರು ಐಪಿಒದಲ್ಲಿ ಯಾವುದೇ ಷೇರುಗಳನ್ನು ಮಾರಾಟಕ್ಕೆ ಇಟ್ಟಿಲ್ಲ. ಸಿಎನ್ಬಿಸಿ-TV18ಗೆ ಅವರು ನೀಡಿದ ಸಂದರ್ಶನದಲ್ಲಿ, ಹತ್ತಿರದ ಅವಧಿಯ ವಿಚಾರಗಳು ಹೂಡಿಕೆದಾರರ ಮೌಲ್ಯಮಾಪನದ ಗ್ರಹಿಕೆಯ ಮೇಲೆ ಪರಿಣಾಮ ಬೀರಿದರೂ ಅವರು ಸ್ಟಾರ್ ಹೆಲ್ತ್‌ನ ನಿರ್ವಹಣೆಯಲ್ಲಿ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ. ಹೀಗಾಗಿ ಸ್ಟಾರ್ ಹೆಲ್ತ್ ಇನ್ಷೂರೆನ್ಸ್‌ನ ಐಪಿಒನಲ್ಲಿ ಯಾವುದೇ ಷೇರುಗಳನ್ನು ಮಾರಾಟ ಮಾಡಿಲ್ಲ ಎಂದು ಹೇಳಿದ್ದರು. ರೀಟೇಲ್ ಆರೋಗ್ಯ, ಗುಂಪು ಆರೋಗ್ಯ ಮತ್ತು ಸಾಗರೋತ್ತರ ಪ್ರಯಾಣ ವಿಮೆಗಾಗಿ ಕವರೇಜ್ ಆಯ್ಕೆಗಳನ್ನು ಒದಗಿಸುವ ಸ್ಟಾರ್ ಹೆಲ್ತ್, ಕಳೆದ ವಾರ ತನ್ನ ಲಿಸ್ಟಿಂಗ್ ಸಬ್ಸ್ಕ್ರಿಪ್ಷನ್ಗೆ ಸುಮಾರಾದ ಪ್ರತಿಕ್ರಿಯೆಯನ್ನು ಕಂಡಿತು ಮತ್ತು ಅದರ ಆರಂಭಿಕ ಸಾರ್ವಜನಿಕ ಕೊಡುಗೆಯ (IPO) ಮಾರಾಟದ (OFS) ಗಾತ್ರವನ್ನು ಕಡಿತಗೊಳಿಸಿತು. ಒಟ್ಟು ಐಪಿಒ ಗಾತ್ರವನ್ನು 7,249 ಕೋಟಿ ರೂಪಾಯಿಗೆ ಬದಲಾಗಿ 6,400 ಕೋಟಿಗೆ ಇಳಿಸಲಾಯಿತು.
ದೇಶದ ಅತಿ ದೊಡ್ಡ ಖಾಸಗಿ ಆರೋಗ್ಯ ವಿಮಾ ಸಂಸ್ಥೆಯ ಐಪಿಒ ಕಳೆದ ವಾರ ಮುಕ್ತಾಯಗೊಂಡ ಬಿಡ್ಡಿಂಗ್‌ನ ಕೊನೆಯ ದಿನದಂದು ಕೇವಲ ಶೇ 79ರಷ್ಟು ಸಬ್ಸ್ಕ್ರೈಬ್ ಆಗಿತ್ತು. 2021ರ ಮಾರ್ಚ್ಗೆ ಕೊನೆಗೊಂಡ ವರ್ಷದಲ್ಲಿ ಸ್ಟಾರ್ ಹೆಲ್ತ್ ನಷ್ಟವಾದ್ದರಿಂದ ಕೆಲವು ಹೂಡಿಕೆದಾರರು ವಿತರಣೆಯ ಬೆಲೆಯನ್ನು ಪ್ರಶ್ನಿಸಿದ್ದರು. ಕಂಪೆನಿಯು ತನ್ನ ಐಪಿಒಗೆ ಪ್ರತಿ ಷೇರಿಗೆ 870ರಿಂದ 900 ರೂಪಾಯಿ ಮಧ್ಯೆ ಬೆಲೆ ನಿಗದಿಪಡಿಸಿತ್ತು.
ಜುಂಜುನ್‌ವಾಲಾ ಬೆಂಬಲಿತ ಮತ್ತೊಂದು ಕಂಪೆನಿ ಮೆಟ್ರೋ ಬ್ರಾಂಡ್ಸ್ ಶುಕ್ರವಾರ ತನ್ನ ಷೇರು ಮಾರಾಟವನ್ನು ಪ್ರಾರಂಭಿಸಿದೆ. ಪ್ರತಿ ಷೇರಿಗೆ ರೂ. 485-500 ಬೆಲೆಯ ಈ ಇಶ್ಯೂ ರೀಟೇಲ್ ಮಾರಾಟಗಾರರ ವಿತರಣೆಯು ಡಿಸೆಂಬರ್ 14ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: Rakesh Jhunjhunwala: ಒಂದೇ ತಿಂಗಳಲ್ಲಿ ರಾಕೇಶ್ ಜುಂಜುನ್ವಾಲಾಗೆ ಈ ಷೇರಿನಿಂದ 145 ಕೋಟಿ ರೂಪಾಯಿ ಗಳಿಕೆ