
ಭಾರತದ ಷೇರು ಮಾರುಕಟ್ಟೆಯ (Stock Market) ಗಾತ್ರ ಬಹಳ ದೊಡ್ಡದು. ವಿಶ್ವದ ಐದು ಅಗ್ರಗಣ್ಯ ಮಾರುಕಟ್ಟೆಗಳಲ್ಲಿ ಭಾರತವೂ ಇದೆ. ಈ ಮಾರುಕಟ್ಟೆಯ ಒಟ್ಟು ಬಂಡವಾಳವು ದೇಶದ ಜಿಡಿಪಿಯಷ್ಟಿದೆ ಎಂಬುದು ಗಮನಾರ್ಹ. ಇದಕ್ಕಿಂತಲೂ 2-3 ಪಟ್ಟು ದೊಡ್ಡದು ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ (Futures & Options) ಮಾರುಕಟ್ಟೆ. ಎಫ್ ಅಂಡ್ ಒ ಟ್ರೇಡಿಂಗ್ ಭಾರತದಲ್ಲಿ ಬಹಳ ದೊಡ್ಡದಾಗಿ ನಡೆಯುತ್ತದೆ. ಇಡೀ ವಿಶ್ವದ ಶೇ. 78ರಷ್ಟು ಎಫ್ ಅಂಡ್ ಒ ಟ್ರೇಡಿಂಗ್ ಭಾರತದಲ್ಲೇ ಆಗುತ್ತದೆ ಎಂದರೆ ಅಚ್ಚರಿ ಎನಿಸಬಹುದು. ಬಹಳಷ್ಟು ಜನರು ಎಫ್ ಅಂಡ್ ಒ ಟ್ರೇಡಿಂಗ್ ಮಾಡಿ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ಕಾರಣಕ್ಕೆ ಸೆಬಿ ಇತ್ತೀಚೆಗೆ ಈ ವಿಧದ ಟ್ರೇಡಿಂಗ್ಗೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಿದ್ದು.
ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಎಂಬುದು ಷೇರು ಮಾರುಕಟ್ಟೆಯ ಡಿರೈವೇಟಿವ್ಸ್ ಸೆಗ್ಮೆಂಟ್ಗೆ ಸೇರುವಂಥವು. ಡಿರೈವೇಟಿವ್ ಎಂಬುದು ಒಂದು ರೀತಿ ಬೆಟ್ಟಿಂಗ್ನಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ, ಇದರ ಮೂಲ ಉದ್ದೇಶ ಬೇರೆ ಇದೆ. ಬೆಲೆ ಏರಿಕೆ ಅಥವಾ ಇಳಿಕೆಯಿಂದ ಆಗುವ ನಷ್ಟವನ್ನು ತಗ್ಗಿಸಲು ಹೂಡಿಕೆದಾರರಿಗೆ ಇರುವ ಒಂದು ಮಾರ್ಗ.
ಇಲ್ಲಿ ಎಫ್ ಅಂಡ್ ಒದಲ್ಲಿ ಎರಡು ವಿಧ ಇದೆ. ಒಂದು ಫ್ಯೂಚರ್ಸ್ ಟ್ರೇಡಿಂಗ್. ಮತ್ತೊಂದು ಆಪ್ಷನ್ಸ್ ಟ್ರೇಡಿಂಗ್.
ಇದನ್ನೂ ಓದಿ: ಮ್ಯುಚುವಲ್ ಫಂಡ್ ಉದ್ಯಮದಲ್ಲಿ 74 ಲಕ್ಷ ಕೋಟಿ ರೂ; 8 ಕೋಟಿ ಎಸ್ಐಪಿ ಅಕೌಂಟ್; ಗೋಲ್ಡ್ ಇಟಿಎಫ್ಗಳಿಗೆ ಬೇಡಿಕೆ
ಒಂದು ಆಸ್ತಿಯನ್ನು ನಿಗದಿತ ದರದಲ್ಲಿ ಭವಿಷ್ಯದ ದಿನವೊಂದರಲ್ಲಿ ಖರೀದಿಸಲು ಅಥವಾ ಮಾರಲು ಮಾಡಿಕೊಳ್ಳುವ ಒಪ್ಪಂದ ಅಥವಾ ಕಾಂಟ್ರಾಕ್ಟ್ ಅನ್ನು ಫ್ಯೂಚರ್ಸ್ ಎನ್ನುತ್ತಾರೆ.
ಉದಾಹರಣೆಗೆ, ಇದೇ ಡಿಸೆಂಬರ್ ತಿಂಗಳಲ್ಲಿ ಟೊಮೆಟೋ ಬೆಲೆ ಎಷ್ಟೇ ಇರಲಿ, ಆದರೆ 50 ಕಿಲೋ ಟೊಮೆಟೋ ಹಣ್ಣನ್ನು 500 ರೂಪಾಯಿಗೆ ಖರೀದಿಸುತ್ತೀರಿ ಎಂದು ಒಪ್ಪಂದ ಮಾಡಿಕೊಳ್ಳುತ್ತೀರಿ. ಒಂದು ವೇಳೆ ಡಿಸೆಂಬರ್ನಲ್ಲಿ 50 ಕಿಲೋ ಟೊಮೆಟೋ ಬೆಲೆ 700 ರೂಗೆ ಏರಿದರೆ ನಿಮಗೆ 200 ರೂ ಲಾಭ ಸಿಗುತ್ತದೆ. ಒಂದು ವೇಳೆ ಅದರ ಬೆಲೆ 400 ರೂಗೆ ಇಳಿದಿದ್ದರೆ ನಿಮಗೆ 100 ರೂ ನಷ್ಟ ಆಗುತ್ತದೆ. ಇದನ್ನೇ ಫ್ಯೂಚರ್ಸ್ ಕಾಂಟ್ರಾಕ್ಟ್ ಎನ್ನುವುದು. ಬೆಲೆಗಳು ಅತಿರೇಕವಾಗಿ ಏರಿಳಿತ ಆಗುವುದಿದ್ದರೆ, ಅಥವಾ ಅನಿಶ್ಚಿತವಾಗಿದ್ದರೆ ಆಗ ಸರಕುಗಳಿಗೆ ಬೆಲೆ ರಕ್ಷಣೆ ಒದಗಿಸಲು ಸಹಾಯವಾಗುತ್ತದೆ. ಇದನ್ನೇ ಹೆಡ್ಜಿಂಗ್ ಎನ್ನುವುದು.
ಷೇರು ಮಾರುಕಟ್ಟೆಯಲ್ಲಿ ಫ್ಯೂಚರ್ಸ್ ಕಾಂಟ್ರಾಕ್ಟ್ ಕೂಡ ಇದೇ ರೀತಿ ಇರುತ್ತದೆ. ನಿಫ್ಟಿ50, ಬ್ಯಾಂಕ್ ನಿಫ್ಟಿ ಇತ್ಯಾದಿ ಇಂಡೆಕ್ಸ್ ಫ್ಯೂಚರ್ಸ್ಗಳನ್ನು ಖರೀದಿಸಲು ಅಥವಾ ಮಾರಲು ಕಾಂಟ್ರಾಕ್ಟ್ ಮಾಡಿಕೊಳ್ಳಬಹುದು. ಆದರೆ, ಇಲ್ಲಿ ವಾಸ್ತವದಲ್ಲಿ ನೀವು ಷೇರುಗಳ ಮಾಲಕತ್ವ ಹೊಂದಿರುವ ಅಗತ್ಯ ಇರುವುದಿಲ್ಲ.
ಇದು ಫ್ಯೂಚರ್ಸ್ ಟ್ರೇಡಿಂಗ್ ರೀತಿಯದ್ದು. ಆದರೆ. ಸ್ವಲ್ಪ ವ್ಯತ್ಯಾಸ ಇರುತ್ತದೆ. ಒಂದು ನಿರ್ದಿಷ್ಟ ದಿನಾಂಕದಲ್ಲಿ ನಿಗದಿತ ಬೆಲೆಗೆ ಖರೀದಿಸಲು ಅಥವಾ ಮಾರಬಹುದು. ಆದರೆ, ಖರೀದಿ ಅಥವಾ ಮಾರಲೇಬೇಕು ಎನ್ನುವ ಬಾಧ್ಯತೆ ಇರುವುದಿಲ್ಲ. ಅದು ಐಚ್ಛಿಕ ಮಾತ್ರ. ಹೀಗಾಗಿ, ಆಪ್ಷನ್ಸ್ ಟ್ರೇಡಿಂಗ್ ಎನ್ನುವುದು.
ಇದನ್ನೂ ಓದಿ: ಟ್ರೇಡಿಂಗ್ ತುಂಬಾ ಗೋಜಲು ಅನಿಸುತ್ತಾ? ನಿತಿನ್ ಕಾಮತ್ ಅವರ ಈ ಟ್ರಿಕ್ ಉಪಯೋಗಿಸಿ
ಆಪ್ಷನ್ಸ್ ಟ್ರೇಡಿಂಗ್ನಲ್ಲಿ ಕಾಲ್ ಆಪ್ಷನ್ ಮತ್ತು ಪುಟ್ ಆಪ್ಷನ್ ಎನ್ನುವ ಎರಡು ವಿಧ ಇರುತ್ತವೆ. ಕಾಲ್ ಆಪ್ಷನ್ ಎಂದರೆ ಖರೀದಿಸುವ ಹಕ್ಕು. ಪುಟ್ ಆಪ್ಷನ್ ಎಂದರೆ ಮಾರುವ ಹಕ್ಕು.
ಮುಂದಿನ ಮೂರು ದಿನದೊಳಗೆ 50 ಕಿಲೋ ಟೊಮೆಟೋವನ್ನು 500 ರೂಗೆ ಖರೀದಿಸುವ ಆಯ್ಕೆ ಮಾಡುತ್ತೀರಿ. ಅದನ್ನು ಮೀಸಲಿರಿಸಲು 20 ರೂ ಪಾವತಿಸುತ್ತೀರಿ.
ಒಂದು ವೇಳೆ, ಟೊಮೆಟೋ ಬೆಲೆ 600 ರೂ ಆದರೆ, ನಿಮಗೆ 100 ರೂ ಲಾಭ ಸಿಗುತ್ತದೆ. ರಿಸರ್ವ್ ಮಾಡಲು ಪಾವತಿಸಿದ 20 ರೂ ಕಳೆದರೆ ನಿಮಗೆ ಸಿಗುವ ಲಾಭ 80 ರೂ.
ಒಂದು ವೇಳೆ, ಬೆಲೆ 400 ರೂಗೆ ಕುಸಿದುಬಿಟ್ಟರೆ ನೀವು ಟೊಮೆಟೋ ಖರೀದಿಸಬೇಕೆಂಬ ಬಾಧ್ಯತೆ ಇರೋದಿಲ್ಲ. ಖರೀದಿಸದೇ ಇರುವ ನಿರ್ಧಾರ ಮಾಡಬಹುದು. ಆದರೆ, ರಿಸರ್ವ್ ಹಣವಾಗಿ ಪಾವತಿಸಿದ 20 ರೂ ಮಾತ್ರವೇ ನಿಮಗೆ ನಷ್ಟ ಆಗುವಂಥದ್ದು. ಇದಕ್ಕೆ ಕಾಲ್ ಆಪ್ಷನ್ ಎನ್ನುತ್ತಾರೆ.
ಷೇರು ಮಾರುಕಟ್ಟೆಯಲ್ಲಿ, ಷೇರು ಬೆಲೆ ಏರುತ್ತದೆ ಎಂದು ನಿಮಗೆ ಅನಿಸಿದಲ್ಲಿ ಕಾಲ್ ಆಪ್ಷನ್ ಉಪಯೋಗಿಸುತ್ತೀರಿ. ಒಂದು ವೇಳೆ, ಷೇರುಬೆಲೆ ಇಳಿಯುತ್ತದೆ ಎಂದನಿಸುತ್ತಿದ್ದರೆ ಪುಟ್ ಆಪ್ಷನ್ ಉಪಯೋಗಿಸುತ್ತೀರಿ.
ಆಪ್ಷನ್ ಖರೀದಿಸುವವರಿಗೆ ಯಾವ ಬಾಧ್ಯತೆ ಇರುವುದಿಲ್ಲ. ಆದರೆ, ಆಪ್ಷನ್ಸ್ ಮಾರುವವರಿಗೆ ಬಾಧ್ಯತೆ ಇರುತ್ತದೆ. ಖರೀದಿಸುವವರು, ಷೇರು ಖರೀದಿಸಲು ಇಚ್ಛಿಸಿದರೆ ಅದನ್ನು ಕೊಡಲೇ ಬೇಕಾಗುತ್ತದೆ. ಹೀಗಾಗಿ, ಆಪ್ಷನ್ಸ್ ಖರೀದಿದಾರರಿಗೆ ರಿಸ್ಕ್ ಕಡಿಮೆ.
ಇದನ್ನೂ ಓದಿ: ಕನ್ನಡಿಗ ಅರವಿಂದ ಮೆಳ್ಳಿಗೇರಿ ಕಟ್ಟಿದ ಉದ್ಯಮ ಸಾಮ್ರಾಜ್ಯ; ಇದು ಪಕ್ಕಾ ಮೇಕ್ ಇನ್ ಇಂಡಿಯಾಗೆ ಮಾದರಿ
ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ಅನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಡೀಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಹೊಂದಿರಬೇಕು. ಅದು ಎಫ್ ಅಂಡ್ ಒಗೆ ಸಕ್ರಿಯಗೊಳಿಸಿರಬೇಕು. ಹಣ ನೀಡದೇ ಈ ಟ್ರೇಡಿಂಗ್ ಅನ್ನು ಅಭ್ಯಾಸ ಮಾಡಲು ಅವಕಾಶ ಕೊಡುವ ಕೆಲ ಟ್ರೇಡಿಂಗ್ ಪ್ಲಾಟ್ಫಾರ್ಮ್ಗಳಿವೆ. ಅವನ್ನು ಬಳಸಿಕೊಳ್ಳಬಹುದು.
ಎಫ್ ಅಂಡ್ ಒ ಟ್ರೇಡಿಂಗ್ನಲ್ಲಿ ಶೇ. 95ಕ್ಕೂ ಹೆಚ್ಚು ಮಂದಿ ನಷ್ಟ ಮಾಡಿಕೊಳ್ಳುತ್ತಾರೆ. ತಜ್ಞರ ಸಲಹೆ ಎಂದರೆ, ಹೊಸದಾಗಿ ಎಫ್ ಅಂಡ್ ಒ ಟ್ರೇಡಿಂಗ್ ಮಾಡಬಯಸುವವರು ಆಪ್ಷನ್ಸ್ ಖರೀದಿಯೊಂದಿಗೆ ಶುರು ಮಾಡಬಹುದು. ಯಾಕೆಂದರೆ, ಇದರಲ್ಲಿ ನಷ್ಟವಾದರೆ ಅದು ಸೀಮಿತ ಮಾತ್ರ.
ಒಂದು ಮಟ್ಟಕ್ಕೆ ನಿಮಗೆ ಆತ್ಮವಿಶ್ವಾಸ ಮೂಡಿದಾಗ ಮಾತ್ರ ಆಪ್ಷನ್ಸ್ ಮಾರಾಟ ಅಥವಾ ಫ್ಯೂಚರ್ಸ್ ಮಾರಾಟಕ್ಕೆ ಮುಂದಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Wed, 17 September 25