Stock Market Investors Wealth: ಆರು ದಿನಗಳಲ್ಲಿ ಕರಗಿತು ಷೇರು ಹೂಡಿಕೆದಾರರ 18 ಲಕ್ಷ ಕೋಟಿ ರೂ. ಸಂಪತ್ತು

| Updated By: Srinivas Mata

Updated on: Jun 18, 2022 | 7:25 PM

ಕಳೆದ ಆರು ದಿನದಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರರ 18 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

Stock Market Investors Wealth: ಆರು ದಿನಗಳಲ್ಲಿ ಕರಗಿತು ಷೇರು ಹೂಡಿಕೆದಾರರ 18 ಲಕ್ಷ ಕೋಟಿ ರೂ. ಸಂಪತ್ತು
ಸಾಂದರ್ಭಿಕ ಚಿತ್ರ
Follow us on

ಕಳೆದ ಆರು ದಿನಗಳ ಷೇರು ಮಾರುಕಟ್ಟೆ (Share Market) ಕುಸಿತದ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು ರೂ. 18 ಲಕ್ಷ ಕೋಟಿ ರೂಪಾಯಿಗಳಷ್ಟು ಕುಸಿದಿದ್ದು, ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವಾದ 17.5 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ಜಾಗತಿಕ ಕೇಂದ್ರ ಬ್ಯಾಂಕ್‌ಗಳ ಬಡ್ಡಿ ದರ ಏರಿಕೆ, ವಿದೇಶಿ ನಿಧಿಯ ಹೊರಹರಿವು ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಜಿಗಿತದ ಮಧ್ಯೆ ಈಕ್ವಿಟಿ ಹೂಡಿಕೆದಾರರು ಕಳೆದ ಆರು ಸೆಷನ್‌ಗಳಲ್ಲಿ ಇತ್ತೀಚಿನ ಮಾರುಕಟ್ಟೆ ಕುಸಿತಕ್ಕೆ ರೂ. 18.17 ಲಕ್ಷ ಕೋಟಿಗಳನ್ನು ಕಳೆದುಕೊಂಡಿದ್ದಾರೆ. ವಾಸ್ತವವಾಗಿ, ಭಾರತೀಯ ಷೇರುಗಳಲ್ಲಿನ ನಿರಂತರ ದುರ್ಬಲ ಕುಸಿತವು ಜೂನ್ 9 ಮತ್ತು ಜೂನ್ 17ರ ಮಧ್ಯೆ ಬಿಎಸ್​ಇ ಲಿಸ್ಟೆಡ್​ ಸಂಸ್ಥೆಗಳ ಮಾರುಕಟ್ಟೆ ಬಂಡವಾಳವನ್ನು ರೂ. 18,17,747.13 ಕೋಟಿಗಳಿಂದ ಇಳಿಯವಂತೆ ಮಾಡಿ, 2,36,77,816.08 ಕೋಟಿ ರೂಪಾಯಿಗೆ ತಲುಪಿಸಿದೆ.

ಇದು ಯಾವ ಪ್ರಮಾಣದ ನಷ್ಟ ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಸಲು ಒಂದು ಹೋಲಿಕೆ ಎದುರಿಗೆ ಇಡಲಾಗಿದೆ. ಅಂದರೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಮಾರುಕಟ್ಟೆ ಮೌಲ್ಯ ಶುಕ್ರವಾರ 17,51,686.52 ಕೋಟಿ ಆಗಿದ್ದು, ಕಳೆದ ಆರು ಸೆಷನ್‌ಗಳಲ್ಲಿ ಈಕ್ವಿಟಿ ಹೂಡಿಕೆದಾರರ ಒಟ್ಟು ಸಂಪತ್ತು ರೂ. 18,17,747.13 ಕೋಟಿ ನಷ್ಟವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಏಪ್ರಿಲ್ 27ರಂದು ತನ್ನ ಷೇರಿನ ಬೆಲೆಯಲ್ಲಿನ ಏರಿಕೆಯ ನಂತರ ರೂ. 19 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನು ತಲುಪಿದ ಮೊದಲ ಭಾರತೀಯ ಕಂಪೆನಿಯಾಗಿದೆ. ಮಾರುಕಟ್ಟೆಯ ಹೆವಿ ವೇಟ್ ಷೇರುಗಳು ಬಿಎಸ್​ಇಯಲ್ಲಿ ಅದರ ದಾಖಲೆಯ ಗರಿಷ್ಠ ರೂ. 2,827.10ಕ್ಕೆ ಶೇ 1.85ರಷ್ಟು ಜಿಗಿದವು. ಷೇರು ಬೆಲೆಯಲ್ಲಿನ ಲಾಭದ ನಂತರ ಕಂಪೆನಿಯ ಮಾರುಕಟ್ಟೆ ಮೌಲ್ಯವು ಬಿಎಸ್‌ಇಯಲ್ಲಿ ರೂ. 19,12,814 ಕೋಟಿಗೆ ಜಿಗಿದಿದೆ.

ಆಸ್ತಿ ವರ್ಗಗಳಾದ್ಯಂತ ಒಂದು ವಾರದ ಚಲನೆಗಳ ನಂತರ 30 ಸ್ಟಾಕ್​ಗಳ ಗುಚ್ಛವಾದ ಎಸ್​ಅಂಡ್​ಪಿ ಬಿಎಸ್​ಇ ಸೆನ್ಸೆಕ್ಸ್ ಮತ್ತು ವಿಶಾಲವಾದ ಎನ್​ಎಸ್​ಇ ನಿಫ್ಟಿಯು ಮೇ 2020ರಿಂದ ಈಚೆಗೆ ಅತ್ಯಂತ ಕೆಟ್ಟ ವಾರವನ್ನು ಅನುಭವಿಸಿತು. ಏಕೆಂದರೆ ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಏರುತ್ತಿರುವ ಹಣದುಬ್ಬರವನ್ನು ಪಳಗಿಸಲು ಬಿಗಿಯಾದ ನೀತಿಯನ್ನು ದ್ವಿಗುಣಗೊಳಿಸಿವೆ. 30-ಷೇರುಗಳ ಗುಚ್ಛ ಬಿಎಸ್‌ಇ ಸೆನ್ಸೆಕ್ಸ್ 3,959.86 ಪಾಯಿಂಟ್‌ಗಳು ಅಥವಾ ಶೇಕಡಾ 7.15ರಷ್ಟು ಕುಸಿದಿದೆ ಮತ್ತು ಶುಕ್ರವಾರ, ಇದು ಒಂದು ವರ್ಷದ ಕನಿಷ್ಠ ಮಟ್ಟವಾದ 50,921.22 ಪಾಯಿಂಟ್ಸ್ ಅನ್ನು ತಲುಪಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Rakesh Jhunjhunwala: ಷೇರುಪೇಟೆ ವಹಿವಾಟಿನ ಆರಂಭದ 15 ನಿಮಿಷದಲ್ಲಿ ಜುಂಜುನ್​ವಾಲಾರ 900 ಕೋಟಿ ರೂಪಾಯಿ ಉಡೀಸ್