ನವದೆಹಲಿ, ಡಿಸೆಂಬರ್ 18: ಫೆಬ್ರುವರಿ 1ರಂದು ಬಜೆಟ್ ಮಂಡನೆ ನಿಮಿತ್ತ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಬಜೆಟ್ ದಿನವಾದ ಫೆಬ್ರುವರಿ 1, ಶನಿವಾರವಾದರೂ ಅಂದು ಟ್ರೇಡಿಂಗ್ಗೆ ಅವಕಾಶ ಸಿಗಬಹುದು ಎನ್ನಲಾಗಿದೆ. ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಚರ್ಚಿಸುತ್ತಿದ್ದು, ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದು ಸಿಎನ್ಬಿಸಿ ಟಿವಿ18 ವರದಿಯಲ್ಲಿ ಹೇಳಲಾಗಿದೆ.
ಫೆಬ್ರುವರಿ 1ರಂದು ಬಜೆಟ್ ಪ್ರಸ್ತುತಪಡಿಸಲಾಗುತ್ತದೆ. ಮುಂದಿನ ಹಣಕಾಸು ವರ್ಷದ ಆಯವ್ಯಯ ಮತ್ತು ವಿಶೇಷ ಯೋಜನೆಗಳ ಘೋಷಣೆಯಾಗುವ ಮಹತ್ವದ ದಿನವಾದ ಅಂದು ಹೂಡಿಕೆದಾರರಿಗೆ ಟ್ರೇಡಿಂಗ್ ಮಾಡಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ.
ಇದನ್ನೂ ಓದಿ: ಮುಳ್ಳಿಗೆ ಮುಳ್ಳು..! ಟ್ಯಾಕ್ಸ್ ಹಾಕುವ ಭಾರತದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳೋದಿದು…
ಶನಿವಾರ ಮತ್ತು ಭಾನುವಾರ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಆದರೆ, ಫೆಬ್ರುವರಿ 1 ಶನಿವಾರವಾದರೂ ಅಂದು ಬಿಎಸ್ಇ ಮತ್ತು ಎನ್ಎಸ್ಇ ಕಾರ್ಯನಿರ್ವಹಿಸಬಹುದು. ಹಿಂದೆ 2015ರ ಫೆಬ್ರುವರಿ 28ರಂದು ಬಜೆಟ್ ಮಂಡನೆ ಆಗಿತ್ತು. ಅಂದು ಶನಿವಾರವಾಗಿದ್ದರೂ ಮಾರುಕಟ್ಟೆ ಟ್ರೇಡಿಂಗ್ಗೆ ತೆರೆದಿತ್ತು. ಈ ಬಾರಿಯ ಬಜೆಟ್ ಮಂಡನೆ ದಿನ ಶನಿವಾರವಾಗಿದ್ದು, ಅಂದೂ ರಜೆ ಇರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಸತತ ಏಳು ಬಜೆಟ್ ಮಂಡಿಸಿದ್ದಾರೆ. ಫೆಬ್ರುವರಿ 1ರದ್ದು ಅವರಿಗೆ ಸತತ ಎಂಟನೇ ಬಜೆಟ್ ಆಗುತ್ತದೆ. ಅಸ್ಥಿರ ಜಾಗತಿಕ ರಾಜಕೀಯ ಪರಿಸ್ಥಿತಿ, ಜಾಗತಿಕ ಆರ್ಥಿಕ ಹಿನ್ನಡೆ, ಸರಿಯಾಗಿ ನಿಯಂತ್ರಣಕ್ಕೆ ಬಾರದ ಹಣದುಬ್ಬರ ಇತ್ಯಾದಿ ವಿವಿಧ ಅಂಶಗಳು ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿವೆ.
ಯಥಾಪ್ರಕಾರ, ಮಧ್ಯಮವರ್ಗದವರು ಆದಾಯ ತೆರಿಗೆ ವಿನಾಯಿತಿ ಘೋಷಣೆ ಆಗಬಹುದಾ ಎನ್ನುವ ಆಶಯದಲ್ಲಿದ್ದಾರೆ. ತಂತ್ರಜ್ಞಾನ ಮತ್ತು ಕೌಶಲ್ಯಗಳ ಕ್ಷೇತ್ರ ಹೆಚ್ಚು ಉತ್ತೇಜನದ ನಿರೀಕ್ಷೆಯಲ್ಲಿವೆ.
ಚುನಾವಣೆಯ ಬಳಿಕ ಜುಲೈನಲ್ಲಿ ಬಜೆಟ್ ಮಂಡನೆ ಆಗಿತ್ತು. ಈಗ ಫೆಬ್ರುವರಿ 1ರಂದು ನಡೆಯಲಿರುವುದು ಎನ್ಡಿಎ 2.0 ಸರ್ಕಾರದ ಎರಡನೇ ಬಜೆಟ್ ಆಗಿರಲಿದೆ. ಜುಲೈ 23ರಂದು ಮಂಡನೆಯಾದ ಬಜೆಟ್ನ ಗಾತ್ರ ಸುಮಾರು 48 ಲಕ್ಷ ಕೋಟಿ ರೂನಷ್ಟಿತ್ತು. ಈ ಬಾರಿ ಬಜೆಟ್ ಗಾತ್ರ 50 ಲಕ್ಷ ಕೋಟಿ ರೂ ಮೀರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ