ನವದೆಹಲಿ: ಅದಾನಿ ಗ್ರೂಪ್ ಹಿಂಡನ್ಬರ್ಗ್ ರಿಸರ್ಚ್ ಪ್ರಕರಣ (Adani-Hindenburg Case) ಸಂಬಂಧ ತನಿಖೆ ನಡೆಸುತ್ತಿರುವ ತನಿಖೆಗೆ ಸುಪ್ರೀಂ ಕೋರ್ಟ್ 3 ತಿಂಗಳು ಮಾತ್ರ ಹೆಚ್ಚುವರಿ ಕಾಲಾವಕಾಶ ಕೊಡಲಾಗಿದೆ. ತನಿಖೆ ನಡೆಸಲು 6 ತಿಂಗಳು ಹೆಚ್ಚಿನ ಕಾಲಾವಕಾಶಕ್ಕಾಗಿ ಸೆಬಿ (SEBI) ಕೋರಿಕೆ ಮಾಡಿತ್ತು. ನಿರೀಕ್ಷೆಯಂತೆ ಸರ್ವೋಚ್ಚ ನ್ಯಾಯಾಲಯ (Supreme Court) ಸೆಬಿ ಮನವಿ ಮಾಡಿದಷ್ಟು ಸಮಯ ನೀಡಲು ನಿರಾಕರಿಸಿದೆ. 6 ತಿಂಗಳು ಬದಲು 3 ತಿಂಗಳು ಮಾತ್ರ ಹೆಚ್ಚಿನ ಕಾಲಾವಕಾಶ ಪಡೆದು ತನಿಖೆ ಪೂರ್ಣಗೊಳಿಸಿ ತನಗೆ ವರದಿ ಸಲ್ಲಿಸಬೇಕೆಂದು ಸೆಬಿಗೆ ಸರ್ವೋಚ್ಚ ನ್ಯಾಯಪೀಠ ಆದೇಶಿಸಿದೆ. ಸುಪ್ರೀಂ ಸೂಚನೆ ಪ್ರಕಾರ ಸೆಬಿ ಆಗಸ್ಟ್ 14ರೊಳಗೆ ತನ್ನ ವರದಿ ಸಲ್ಲಿಸಬೇಕಾಗುತ್ತದೆ.
ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡನ್ಬರ್ಗ್ ರಿಸರ್ಚ್ ಜನವರಿ ತಿಂಗಳಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ವಿರುದ್ಧ ಹಲವು ಗಂಭೀರ ಆರೋಪಗಳಿರುವ ತನಿಖಾ ವರದಿಯನ್ನು ಬಿಡುಗಡೆ ಮಾಡಿತ್ತು. ಸುಳ್ಳು ಲಾಭದ ವರದಿ ಸೇರಿದಂತೆ ವಿವಿಧ ವಂಚನೆಯ ಮಾರ್ಗಗಳಿಂದ ಷೇರುಬೆಲೆ ಕೃತಕವಾಗಿ ಉಬ್ಬಿಸುವುದು ಇತ್ಯಾದಿ ಆರೋಪಗಳನ್ನು ಹಿಂಡನ್ಬರ್ಗ್ ರಿಸರ್ಚ್ ಕಂಪನಿ ತನ್ನ ವರದಿಯಲ್ಲಿ ಮಾಡಿತ್ತು. ಅದಾದ ಬಳಿಕ ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಬೆಲೆ ತೀವ್ರವಾಗಿ ಕುಸಿತಕಂಡವು. ದೇಶ ವಿದೇಶಗಳಲ್ಲಿ ಈ ಬೆಳವಣಿಗೆ ಸಂಚಲನ ಸೃಷ್ಟಿಸಿತು.
ಇದಾದ ಬಳಿಕ ಸುಪ್ರೀಮ್ ಕೋರ್ಟ್ ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸೆಬಿಗೆ ಹೊಣೆ ಹೊರಿಸಿ 2 ತಿಂಗಳು ಗಡುವು ನೀಡಿತು. ಏಪ್ರಿಲ್ಗೆ ಈ ಗಡುವು ಮುಗಿದಿದೆ. ಆದರೆ, ತನಗೆ ಇನ್ನೂ 6 ತಿಂಗಳು ಹೆಚ್ಚಿನ ಕಾಲಾವಕಾಶ ಬೇಕು ಎಂದು ಸೆಬಿ ಕೋರಿಕೊಂಡಿತು. ಹಿಂಡನ್ಬರ್ಗ್ ರಿಸರ್ಚ್ ಕಂಪನಿಯ ವರದಿಯಲ್ಲಿರುವ ಆರೋಪಗಳ ಪೈಕಿ 12 ಆರೋಪಗಳು ಬಹಳ ಸಂಕೀರ್ಣದ್ದಾಗಿದ್ದು, ತನಿಖೆಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ವಾದಿಸಿದ್ದ ಸೆಬಿ, ಅಮೆರಿಕದಲ್ಲಿ ಇಂಥ ಪ್ರಕರಣಗಳ ತನಿಖೆಗೆ ಸರಾಸರಿ 2 ವರ್ಷ ಆಗುವುದನ್ನು ಉದಾಹರಿಸಿತು. ಆದರೆ, ಸುಪ್ರೀಂ ಕೋರ್ಟ್ 6 ತಿಂಗಳ ಬದಲು 3 ತಿಂಗಳು ಹೆಚ್ಚುವರಿ ಕಾಲಾವಕಾಶಕ್ಕೆ ಮಾತ್ರ ಸಮ್ಮತಿ ನೀಡಿದೆ.
ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಆಗಸ್ಟ್ 14ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಸೆಬಿಗೆ ಸೂಚಿಸಿದೆ. ಆರು ಸದಸ್ಯರ ಸಮಿತಿ ಸಲ್ಲಿಸುವ ತನಿಖಾ ವರದಿಯನ್ನು ತಾನು ಪರಾಮರ್ಶಿಸುವುದಾಗಿ ನ್ಯಾಯಪೀಠ ಹೇಳಿದೆ. ಇನ್ನು, ಬೇಸಿಗೆ ರಜೆ ಬಳಿಕ ಜುಲೈ 11ರಂದು ನ್ಯಾಯಪೀಠ ಮತ್ತೊಮ್ಮೆ ಈ ಪ್ರಕರಣದ ಸ್ಥಿತಿಗತಿಯ ವಿಚಾರಣೆ ನಡೆಸಲಿದೆ.
ಅದಾನಿ ಗ್ರೂಪ್ ಹಿಂಡನ್ಬರ್ಗ್ ರಿಸರ್ಚ್ ಪ್ರಕರಣದ ತನಿಖೆ ನಡೆಸುತ್ತಿರುವ ಸೆಬಿ ವಿಶೇಷ ಸಮಿತಿಯಲ್ಲಿ ಅರು ಮಂದಿ ಇದ್ದಾರೆ. ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಎಂ ಸಪ್ರೆ ಈ ಸಮಿತಿ ನೇತೃತ್ವ ವಹಿಸಿದ್ದಾರೆ. ಇನ್ಫೋಸಿಸ್ ಸಹ–ಸಂಸ್ಥಾಪಕ ನಂದನ್ ನಿಲೇಕಣಿ, ಮಾಜಿ ಎಸ್ಬಿಐ ಛೇರ್ಮನ್ ಓಪಿ ಭಟ್, ನಿ. ನ್ಯಾ| ಜೆ.ಪಿ. ದೇವಧರ್, ಮಾಜಿ ಬ್ಯಾಂಕರ್ ಕೆ.ವಿ. ಕಾಮತ್ ಮತ್ತು ವಕೀಲ ಸೋಮಶೇಖರ್ ಸುಂದರೇಶನ್ ಅವರಿದ್ದಾರೆ.