Successful Business: ಗೃಹಿಣಿ ಹರಿಣಿಯ ಸಾಹಸಗಾಥೆ; ಅನಾರೋಗ್ಯಪೀಡಿತ ಮಗನಿಗಾಗಿ ಶುರುಮಾಡಿದ ಕಂಪನಿಯಲ್ಲಿ 100 ಮಂದಿ ಉದ್ಯೋಗ
Earth Rythm Startup Story: ಡೌನ್ಸ್ ಸಿಂಡ್ರೋಮ್ನಿಂದ ಬಳಲುತ್ತಿದ್ದ ಮಗನಿಗೋಸ್ಕರ ಸ್ಕಿನ್ ಕೇರ್ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಹರಿಣಿ ಶಿವಕುಮಾರ್ ಅವರೀಗ ಅಂಥ ಉತ್ಪನ್ನಗಳನ್ನು ಇಟ್ಟುಕೊಂಡು 200 ಕೋಟಿ ರೂ ಮೌಲ್ಯದ ಕಂಪನಿ ಕಟ್ಟಿದ್ದಾರೆ.
ನಮಗೆ ವ್ಯವಹಾರದ ಗಂಧ ಗಾಳಿ ಗೊತ್ತಿಲ್ಲ. ನಾವೇನು ಬ್ಯುಸಿನೆಸ್ ಮಾಡೋಣ, ನಾವ್ಯಾವ ಸಾಧನೆ ಮಾಡೋಣ ಎಂದು ಹಲಬುವ ಕೋಟ್ಯಂತರ ಜನರ ಮಧ್ಯೆ ಹರಿಣಿ ಶಿವಕುಮಾರ್ (Harini Sivakumar) ಅವರಂಥ ವ್ಯಕ್ತಿಗಳು ಅಪರೂಪಕ್ಕೆ ಸಿಗುತ್ತಾರೆ. ಅನಾರೋಗ್ಯಪೀಡಿತ ಮಗನಿಗೋಸ್ಕರ ತಮ್ಮ ಕೆಲಸ ಬಿಟ್ಟು ಮನೆಯಲ್ಲಿ ಗೃಹಿಣಿಯಾಗಿ ಏಳು ವರ್ಷ ಸಂಸಾರ ನಿಭಾಯಿಸಿದ್ದ ಹಾರಿಣಿ ಶಿವಕುಮಾರ್, ಅದೇ ಮಗನಿಂದಾಗಿ ಕಂಪನಿ ತೆರೆದು ಇದೀಗ 200 ಕೋಟಿ ವ್ಯವಹಾರದ ಸಂಸ್ಥೆಯಾಗಿ ಬೆಳೆಸಿದ್ದಾರೆ. ಮನೆಯಲ್ಲೇ ಕಚೇರಿ ಮಾಡಿ ಆರಂಭವಾದ ಅವರ ಅರ್ತ್ ರಿದಮ್ ಕಂಪನಿಯಲ್ಲಿ (Earth Rythm) ಈಗ 100ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚೆಚ್ಚು ಬರುತ್ತಿದೆ. ಆದರೆ, ಈ ಹಂತಕ್ಕೆ ಬರಲು ಹರಿಣಿ ಪಟ್ಟ ಶ್ರಮ ನಿಜಕ್ಕೂ ಬಹಳ ಮಂದಿಗೆ ಸ್ಫೂರ್ತಿ ನೀಡಬಹುದು.
ಹರಿಣಿ ಮಾಡಿದ್ದೆಲ್ಲವೂ ಮಗನಿಗಾಗಿ
ಹರಿಣಿ ಶಿವಕುಮಾರ್ ಅವರ ಮಗುವಿಗೆ ಡೌನ್ ಸಿಂಡ್ರೋಮ್ ಖಾಹಿಲೆ ಇತ್ತು. ಇಂಥ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂದುಳಿದಿರುತ್ತಾರೆ. ತಮ್ಮ ಮಗುವಿಗೆ ಡೌನ್ಸ್ ಸಿಂಡ್ರೋಮ್ ಇರುವುದು ಗೊತ್ತಾದ ಬಳಿಕ ಹರಿಣಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮನೆಯಲ್ಲೇ ಇದ್ದು ಮಗುವಿನ ಹಾರೈಕೆಗೆ ತೊಡಗುತ್ತಾರೆ. ಇದು ಈಗಿನ ಕಾಲದಲ್ಲಿ ಒಬ್ಬ ತಾಯಿ ಮಾಡುವ ಒಂದು ದೊಡ್ಡ ತ್ಯಾಗವೇ ಸರಿ.
ಮಗನ ಹಾರೈಕೆ ವಿದ್ಯೆ ಕಲಿಯಲು ಕೋರ್ಸ್ ಕಲಿತ ಹರಿಣಿ
ತನ್ನ ವಿಶೇಷ ಮಗುವನ್ನು ಸಂಭಾಳಿಸುವ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ಹರಿಣಿ ಶಿವಕುಮಾರ್ ಅವರು ನಾರ್ತಾಂಪ್ಟನ್ ಯೂನಿವರ್ಸಿಟಿಯಲ್ಲಿ ಸ್ಪೆಷಲ್ ಎಜುಕೇಶನ್ ಎಂಎ ಮಾಡುತ್ತಾರೆ.
ತಮ್ಮ ಮಗುವಿಗೆ ಸುರಕ್ಷಿತ ಉತ್ಪನ್ನಗಳು ಸಿಗುತ್ತಿಲ್ಲ ಎಂಬುದು ಗೊತ್ತಾದ ಬಳಿಕ ಹರಿಣಿ ಅವರು ಪರ್ಸನಲ್ ಕೇರ್ ಸೈನ್ಸ್ ಇನ್ಸ್ಟಿಟ್ಯೂಟ್ನಿಂದ ಅಡ್ವಾನ್ಸ್ಡ್ ಕಾಸ್ಮೆಟಿಕ್ ಸೈನ್ಸ್, ಅಡ್ವಾನ್ಸ್ಡ್ ಫಾರ್ಮುಲೇಶನ್ಸ್ ಡಿಪ್ಲೊಮಾ ಕೋರ್ಸ್ ಓದುತ್ತಾರೆ.
ಇದೇ ಹೊತ್ತಲ್ಲಿ ತಾನು ಪಡೆದ ಶಿಕ್ಷಣದ ಜ್ಞಾನ ಉಪಯೋಗಿಸಿ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸುತ್ತಾರೆ. ಎಲ್ಲವೂ ಮಗನಿಗೋಸ್ಕರವೇ. ರಾಸಾಯನಿಕಮುಕ್ತವಾಗಿರುವ ಮತ್ತು ನೈಸರ್ಗಿಕವಾಗಿರುವ ಇವರ ಸ್ಕಿನ್ ಕೇರ್ ಉತ್ಪನ್ನಗಳು ಎಲ್ಲರಿಗೂ ಉಪಯುಕ್ತ ಎನಿಸತೊಡಗುತ್ತದೆ.
ವ್ಯವಹಾರ ಆರಂಭವಿಸಿದ ಹರಿಣಿ ಶಿವಕುಮಾರ್
ತಾವು ಕಂಡುಹಿಡಿದ ಸ್ಕಿನ್ ಕೇರ್ ಉತ್ಪನ್ನಗಳು ಇತರರಿಗೆ ಅನುಕೂಲವಾಗುತ್ತದೆ, ಮಾರಾಟ ಮಾಡಲು ಯೋಗ್ಯ ಎನಿಸಿವೆ ಎಂದು ಗೊತ್ತಾದ ಬಳಿಕ ಹರಿಣಿ ಶಿವಕುಮಾರ್ 2015ರಲ್ಲಿ ತಮ್ಮ ಉತ್ಪನ್ನಗಳ ಮಾರಾಟಕ್ಕೆ ತೊಡಗುತ್ತಾರೆ. ತಾವೇ ಖುದ್ದಾಗಿ ಹೋಗಿ ಯಾವುದಾದರೂ ಎಕ್ಸಿಬಿಷನ್ನಲ್ಲಿ ಸ್ಟಾಲ್ ಹಾಕಿ ತಮ್ಮ ಉತ್ಪನ್ನಗಳ ಪ್ರಚಾರದಲ್ಲಿ ತೊಡಗುತ್ತಾರೆ. ಅದೇ ಹೊತ್ತಲ್ಲಿ ಚೆನ್ನೈ ಬ್ಯುಸಿನೆಸ್ ಸ್ಕೂಲ್ನಲ್ಲಿ ರೀಟೇಲ್ ಮ್ಯಾನೇಜ್ಮೆಂಟ್ನಲ್ಲಿ ಪಿಜಿ ಡಿಪ್ಲೊಮಾ ಓದುತ್ತಾರೆ.
2019ರಲ್ಲಿ ಅವರು ತಮ್ಮ ತಂದೆ ಜೊತೆ ಸೇರಿ ಅರ್ತ್ ರಿದಂ ಕಂಪನಿಯನ್ನು ರೀಲಾಂಚ್ ಮಾಡುತ್ತಾರೆ. ಹರಿಯಾಣದ ಗುರುಗ್ರಾಮದಲ್ಲಿ ಅವರ ಉತ್ಪನ್ನಗಳ ತಯಾರಕ ಘಟಕ ಸ್ಥಾಪನೆ ಆಗುತ್ತದೆ. ವೆಬ್ಸೈಟ್ ಮಾಡುತ್ತಾರೆ. ತಂತ್ರಜ್ಞಾನ ಮತ್ತು ವ್ಯವಹಾರ ಮಿಳಿತಗೊಂಡು ಇವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ.
ಇದನ್ನೂ ಓದಿ: Airtel: ನಿರೀಕ್ಷೆಮೀರಿದ ಲಾಭ ಗಳಿಸಿದ ಏರ್ಟೆಲ್; ಈ ಪ್ಲಾನ್ಗಳಿಗೆ ಶೇ. 15 ಡಿಸ್ಕೌಂಟ್; ಯಾವ್ಯಾವುದಕ್ಕೆ ಇದೆ ರಿಯಾಯಿತಿ?
ಎಂಟು ಮಂದಿ ಸಿಬ್ಬಂದಿವರ್ಗದಿಂದ ಆರಂಭಗೊಂಡ ಇವರ ಸಂಸ್ಥೆಯಲ್ಲಿ ಈಗ 100ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. 160ಕ್ಕೂ ಹೆಚ್ಚು ಉತ್ಪನ್ನಗಳನ್ನು ಇವರು ತಯಾರಿಸುತ್ತಾರೆ. ಹರಿಣಿ ಶಿವಕುಮಾರ್ ಅವರು ಕಂಪನಿಯ ಪ್ರೊಡಕ್ಷನ್ ವಿಭಾಗವನ್ನು ನೋಡಿಕೊಂಡರೆ ಅವರ ತಂದೆಯು ಮಾರಾಟ ಮತ್ತು ಪ್ರಚಾರದ ಜವಾಬ್ದಾರಿ ಹೊತ್ತಿದ್ದಾರೆ.
ಅರ್ತ್ ರಿದಂ ಕಂಪನಿ 2-3 ವರ್ಷದಲ್ಲಿ ಅಗಾಧವಾಗಿ ಬೆಳೆದಿದೆ. 2023ರಲ್ಲಿ 150 ಕೋಟಿ ರೂ ಮೊತ್ತದ ಮಾರಾಟದ ಗುರಿ ಇಟ್ಟುಕೊಂಡಿದೆ. ಈಗ ಇದರ ಮೌಲ್ಯ 200 ಕೋಟಿ ರೂನಷ್ಟಿದೆ.
ಯಾವುದೇ ವ್ಯವಹಾರ ಜ್ಞಾನ ಇಲ್ಲದೇ ತನಗೆ ಇಷ್ಟು ದೊಡ್ಡ ಕಂಪನಿಯನ್ನು ಕಟ್ಟಲು ಸಾಧ್ಯವಾಗಿದೆ ಎಂದರೆ ಯಾರು ಬೇಕಾದರೂ ವ್ಯವಹಾರ ನಡೆಸಿ ಯಶಸ್ವಿಯಾಗಬಹುದು ಎಂದು ಹರಿಣಿ ಹೇಳುತ್ತಾರೆ. ಇದಪ್ಪಾ ಸ್ಪೂರ್ತಿಯ ಮಾತುಗಳೆಂದರೆ..!