Subsidy Cut: ಅತ್ತ ರೈತ, ಇತ್ತ ಐಟಿ; ರಸಗೊಬ್ಬರ ಸಬ್ಸಿಡಿಗೆ ಖೋತಾ; ಐಟಿ ಹಾರ್ಡ್ವೇರ್ಗೆ ಜಿಗಿತ; ಕೇಂದ್ರ ಸಂಪುಟದಿಂದ ಸದ್ಯದಲ್ಲೇ ಅನುಮೋದನೆ?
Center May Cut Subsidy For Fertilizers: ವರದಿಗಳ ಪ್ರಕಾರ, ಡಿಎಪಿ, ಎಂಒಪಿ ಇತ್ಯಾದಿ ರಸಗೊಬ್ಬರಗಳಿಗೆ ನೀಡಲಾಗುವ ಎನ್ಬಿಎಸ್ ಸಬ್ಸಿಡಿಯಲ್ಲಿ ಶೇ. 35ರಷ್ಟು ಕಡಿಮೆ ಮಾಡಲಾಗುವ ನಿರೀಕ್ಷೆ ಇದೆ. ಹೊಸ ದರಗಳು 2023ರ ಸೆಪ್ಟೆಂಬರ್ವರೆಗೂ ಇರಲಿವೆ.
ನವದೆಹಲಿ: ರಸಗೊಬ್ಬರಕ್ಕೆ (Fertilizer) ನೀಡಲಾಗುತ್ತಿರುವ ಸಬ್ಸಿಡಿಯನ್ನು ಕಡಿಮೆ ಮಾಡಲು ಮತ್ತು ಪಿಎಲ್ಐ ಸ್ಕೀಮ್ನಲ್ಲಿ ಐಟಿ ಹಾರ್ಡ್ವೇರ್ ಕ್ಷೇತ್ರಕ್ಕೆ 17,000 ರೂ ಕೊಡುವ ಯೋಜನೆಗೆ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವರದಿಗಳ ಪ್ರಕಾರ, ಡಿಎಪಿ, ಎಂಒಪಿ ಇತ್ಯಾದಿ ರಸಗೊಬ್ಬರಗಳಿಗೆ ನೀಡಲಾಗುವ ಎನ್ಬಿಎಸ್ ಸಬ್ಸಿಡಿಯಲ್ಲಿ ಶೇ. 35ರಷ್ಟು ಕಡಿಮೆ ಮಾಡಲಾಗುವ ನಿರೀಕ್ಷೆ ಇದೆ. ಸಬ್ಸಿಡಿ ಕಡಿತದೊಂದಿಗೆ ರಸಗೊಬ್ಬರದ ಹೊಸ ದರಗಳು 2023ರ ಸೆಪ್ಟೆಂಬರ್ವರೆಗೂ ಇರಲಿವೆ.
ಏನಿದು ಎನ್ಬಿಎಸ್ ಸಬ್ಸಿಡಿ?
ಎನ್ಬಿಎಸ್ ಎಂದರೆ ನ್ಯೂಟ್ರಿಯೆಂಟ್ ಬೇಸ್ಡ್ ಸ್ಕೀಮ್. ಪೋಷಕಾಂಶ ಆಧಾರಿತ ಯೋಜನೆ. ರಸಗೊಬ್ಬರದಲ್ಲಿ ಇರುವ ಎನ್, ಪಿ. ಕೆ ಮತ್ತು ಎಸ್ ಪೋಷಕಾಂಶಗಳ ಆಧಾರದ ಮೇಲೆ ಅದಕ್ಕೆ ರಿಯಾಯಿತಿ ಅಥವಾ ಸಬ್ಸಿಡಿ ನೀಡಲಾಗುತ್ತದೆ. ಮಣ್ಣಿನ ಗುಣಮಟ್ಟ ಕಾಪಾಡಲು ಈ ಪೋಷಕಾಂಶಗಳು ಅವಶ್ಯಕ. ಹೀಗಾಗಿ, ಇಂಥ ಪೋಷಕಾಂಶ ಇರುವ ರಸಗೊಬ್ಬರದ ಮಾರಾಟಕ್ಕೆ ಸರ್ಕಾರ ಉತ್ತೇಜನ ನೀಡಲು ಎನ್ಬಿಎಸ್ ಸಬ್ಸಿಡಿ ಯೋಜನೆಯನ್ನು ಕಳೆದ ವರ್ಷ ಆರಂಭಿಸಿತ್ತು.
ಎನ್ಬಿಎಸ್ ಸಬ್ಸಿಡಿ ಕಡಿತವಾಗಿರುವ ಡಿಎಪಿ ಎಂದರೆ ಡೈ ಅಮೋನಿಯಂ ಫಾಸ್ಫೇಟ್, ಎಂಒಪಿ ಎಂದರೆ ಮ್ಯೂರಿಯೇಟ್ ಆಫ್ ಪೊಟ್ಯಾಷ್ ರಸಗೊಬ್ಬರಗಳು. ಡಿಎಪಿ ರಸಗೊಬ್ಬರ ಈಗ ಬಹಳ ಸಾಮಾನ್ಯ ಬಳಕೆಯಲ್ಲಿದೆ. ಸರ್ಕಾರ ಸಬ್ಸಿಡಿ ಕಡಿತ ಮಾಡಿದ್ದು ರೈತರೊಳಗೆ ಅಸಮಾಧಾನ ಸೃಷ್ಟಿಸುವ ಸಾಧ್ಯತೆ ಇಲ್ಲದಿಲ್ಲ.
ಐಟಿ ಹಾರ್ಡ್ವೇರ್ಗಾಗಿ 17,000 ಕೋಟಿ ರೂ ಪಿಎಲ್ಐ ಸ್ಕೀಮ್
ಐಟಿ ಕ್ಷೇತ್ರದಲ್ಲಿ ಹಾರ್ಡ್ವೇರ್ ಉತ್ಪಾದನೆಗೆ ಉತ್ತೇಜನ ನೀಡಲು 17,000 ಕೋಟಿ ರೂ ಮೊತ್ತದ ಪಿಎಲ್ಐ ಸ್ಕೀಮ್ಗೆ ಕೇಂದ್ರ ಸಂಪುಟ ಅನುಮೋದನೆ ಕೊಡುವ ನಿರೀಕ್ಷೆ ಇದೆ. ಲ್ಯಾಪ್ಟಾಪ್, ಟ್ಯಾಬ್ಲೆಟ್ಸ್, ಪರ್ಸನಲ್ ಕಂಪ್ಯೂಟರ್, ಸರ್ವರ್ ಇತ್ಯಾದಿ ಹಾರ್ಡ್ವೇರ್ಗಳ ಉತ್ಪಾದನೆಗೆ ಈ ಸ್ಕೀಮ್ ಸಹಾಯಕವಾಗಬಹುದು.
ಪಿಎಲ್ಐ ಸ್ಕೀಮ್ ಎಂದರೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ. ಅಂದರೆ, ಉತ್ಪಾದನೆ ಆಧಾರಿತ ಭತ್ಯೆ. ಐಟಿ ಹಾರ್ಡ್ವೇರ್ ಉತ್ಪಾದನೆಯ ಈ ಪಿಎಲ್ಐ ಸ್ಕೀಮ್ 6 ವರ್ಷದ ಅವಧಿಯದ್ದಾಗಿದೆ. ಈ ಯೋಜನೆಯಿಂದ 3 ಲಕ್ಷ ಕೋಟಿ ರೂಗೂ ಹೆಚ್ಚು ಮೌಲ್ಯದ ಉತ್ಪನ್ನಗಳು ತಯಾರಾಗುವ ನಿರೀಕ್ಷೆ ಇದೆ.