Supreme Court: ಕಂಪೆನಿಗಳ ಸಾಲಕ್ಕೆ ವೈಯಕ್ತಿಕವಾಗಿ ಖಾತ್ರಿ ಆದ ಮಲ್ಯ ಟು ಅನಿಲ್ ಅಂಬಾನಿಯ ತನಕ ಹಣ ವಸೂಲಿಗೆ ಬಂತು ಬಲ

|

Updated on: May 21, 2021 | 1:47 PM

ವಿಜಯ್ ಮಲ್ಯರಿಂದ ಮೊದಲುಗೊಂಡು ಅನಿಲ್ ಅಂಬಾನಿ ತನಕ ತಮ್ಮ ಕಂಪೆನಿಗಳ ಸಾಲಕ್ಕೆ ವೈಯಕ್ತಿಕ ಗ್ಯಾರಂಟರ್ ಆಗಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್​ ಇಂದು ನೀಡಿರುವ ತೀರ್ಪು ಮಹತ್ವದ್ದಾಗಿದೆ.

Supreme Court: ಕಂಪೆನಿಗಳ ಸಾಲಕ್ಕೆ ವೈಯಕ್ತಿಕವಾಗಿ ಖಾತ್ರಿ ಆದ ಮಲ್ಯ ಟು ಅನಿಲ್ ಅಂಬಾನಿಯ ತನಕ ಹಣ ವಸೂಲಿಗೆ ಬಂತು ಬಲ
ಸುಪ್ರೀಂಕೋರ್ಟ್​
Follow us on

ಉದ್ಯಮಿ ವಿಜಯ್ ಮಲ್ಯರಿಂದ ಮೊದಲುಗೊಂಡು ಅನಿಲ್ ಅಂಬಾನಿ ತನಕ ಬಹಳ ಮಹತ್ವದ್ದಾದ ಆದೇಶವೊಂದನ್ನು ಸುಪ್ರೀಂ ಕೋರ್ಟ್ ಶುಕ್ರವಾರದಂದು ನೀಡಿದೆ. ಅದೇನು ಅಂದರೆ, ಕಂಪೆನಿಯ ಸಾಲಕ್ಕೆ ವೈಯಕ್ತಿಕವಾಗಿ ಗ್ಯಾರಂಟರ್​ ಆಗಿದ್ದಲ್ಲಿ, ಕಂಪೆನಿಯಿಂದ ಸಾಲ ಮರುಪಾವತಿ ಆಗದಿದ್ದಾಗ ಬ್ಯಾಂಕ್​ಗಳು ಸಾಲ ವಸೂಲಾತಿಗಾಗಿ ಗ್ಯಾರಂಟರ್ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸಾಲಬಾಧ್ಯತೆ ಹಾಗೂ ದಿವಾಳಿತನ ಸಂಹಿತೆ (IBC) ಅಡಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ಎಲ್​. ನಾಗೇಶ್ವರ್ ರಾವ್, ಎಸ್​. ರವಿಂದ್ರ ಭಟ್ ಅವರನ್ನು ಒಳಗೊಂಡ ಪೀಠವು ತಿಳಿಸಿರುವ ಪ್ರಕಾರ, ಐಬಿಸಿಯ ತೀರುವಳಿ ಯೋಜನೆ ಇದೆ ಎಂದ ಮಾತ್ರಕ್ಕೆ ಬ್ಯಾಂಕ್​ಗಳಿಗೆ ನೀಡಬೇಕಾದ ಸಾಲದ ಜವಾಬ್ದಾರಿಯಿಂದ ವೈಯಕ್ತಿಕ ಗ್ಯಾರಂಟರ್ ಬಿಡುಗಡೆ ಆಗುವುದಕ್ಕೆ ಸಾಧ್ಯವಿಲ್ಲ ಎಂದಿದೆ.

ಈ ತೀರ್ಪಿನಲ್ಲಿ ನಾವು ಅಧಿಸೂಚನೆಯನ್ನು ಎತ್ತಿಹಿಡಿದಿದ್ದೇವೆ ಎಂದು ರವೀಂದ್ರ ಭಟ್ ಹೇಳಿದ್ದಾರೆ. ತೀರ್ಪಿನ ಅಂತಿಮ ಸಾರಾಂಶ ಓದುವಾಗ, ಅಧಿಸೂಚನೆಯ ಸಿಂಧುತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಹಾಕಿಕೊಂಡಿರುವ 75ರಷ್ಟು ಅರ್ಜಿಗಳನ್ನು ಇತ್ಯರ್ಥ ಮಾಡಿದಂತಾಗಿದೆ ಎಂದಿದ್ದಾರೆ. ಈ ತೀರ್ಪಿನ ಮೂಲಕವಾಗಿ ಬ್ಯಾಂಕ್​ಗಳಿಗೆ ಬಲ ಬಂದಂತಾಗಿದೆ. ಏಕೆಂದರೆ, ಕಂಪೆನಿಗಳ ವಿರುದ್ಧವಾಗಿ ದಿವಾಳಿತನದ ಪ್ರಕ್ರಿಯೆ ಬಾಕಿಯಿದ್ದರೂ ಗ್ಯಾರಂಟರ್ ಆಗಿ ಯಾರಿರುತ್ತಾರೋ ಅವರಿಂದ ಸಾಲವನ್ನು ವಸೂಲು ಮಾಢುವುದಕ್ಕೆ ಅವಕಾಶ ಸಿಕ್ಕಂತಾಗಿದೆ. ಈ ಮೂಲಕವಾಗಿ ವಿಶ್ವದಲ್ಲೇ ಅತಿ ಹೆಚ್ಚು ಬ್ಯಾಡ್​ ಲೋನ್​ಗಳಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಸಾಲ ವಸೂಲಾತಿ ಪ್ರಕ್ರಿಯೆ ವೇಗ ಪಡೆದುಕೊಳ್ಳಬಹುದು.

ಭಾರತದ ಋಣಬಾಧ್ಯತೆ ಮತ್ತು ದಿವಾಳಿತನ ಮಂಡಳಿ (IBBI)ಯು ಕೇಳಿಕೊಂಡಿದ್ದ ಪ್ರಕಾರ, ಹೈಕೋರ್ಟ್​ಗಳಲ್ಲಿ ಇರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್​ಗೆ ವರ್ಗಾಯಿಸುವಂತೆ ಮನವಿ ಮಾಡಿತ್ತು. ಆದರೆ ಪರ್ಸನಲ್ ಗ್ಯಾರಂಟರ್ಸ್ ಹಾಗೂ ಕಾರ್ಪೊರೇಟ್ ಸಾಲ ಕೊಟ್ಟವರಿಗೆ ಸಂಬಂಧಿಸಿದ ಸಂಗತಿ ಇದು ಎಂದು ನವೆಂಬರ್ 15, 2019ರಂದು ಹೊರಡಿಸಿದ IBC ಮತ್ತು ಇತರ ವಿಚಾರಗಳನ್ನು ಅರ್ಜಿದಾರರು ಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರು. ಸರ್ಕಾರದ ಅಧಿಸೂಚನೆಯ ಸಿಂಧುತ್ವವನ್ನು ಎತ್ತಿಹಿಡಿದಿರುವ ಕೋರ್ಟ್, ಒಂದು ಕಂಪೆನಿಯ ಋಣಬಾಧ್ಯತೆ ತೀರುವಳಿ ಯೋಜನೆ ಆರಂಭಿಸಲಾಗಿದೆ ಎಂದ ಮಾತ್ರಕ್ಕೆ ಆ ಕಂಪೆನಿಗೆ ಕಾರ್ಪೊರೇಟ್ ಗ್ಯಾರಂಟಿ ನೀಡಿದವರು ವೈಯಕ್ತಿಕವಾಗಿ ಹಣಕಾಸು ಸಂಸ್ಥೆಗಳಿಗೆ ಬಾಕಿ ಪಾವತಿಸುವ ಜವಾಬ್ದಾರಿಯಿಂದ ಬಿಡುಗಡೆಯಾದರು ಅಂತಲ್ಲ ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: ಅನಿಲ್​ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..

ಇದನ್ನೂ ಓದಿ: ಭಾರತದ ಬ್ಯಾಂಕ್​ಗಳು ನೀಡಿರುವುದು ಸಾರ್ವಜನಿಕರ ಹಣ, ನನ್ನನ್ನು ದಿವಾಳಿ ಎಂದು ಘೋಷಿಸಲು ಆಗಲ್ಲ ಎಂದ ಮಲ್ಯ

(Supreme Court on Friday upheld notification validity related to IBC (Insolvency and Bankruptcy Code) of Indian government)