ಬೆಂಗಳೂರು: ಆ್ಯಪಲ್ ಇಂಕ್ನ (Apple Inc) ಐಫೋನ್ ಅನ್ನು ಬೆಂಗಳೂರಿನಲ್ಲಿ (Bangalore) ತಯಾರಿಸುವ ತೈವಾನ್ನ ತೈಪೆಯಿಯ (Taipei) ವಿಸ್ಟ್ರಾನ್ (Wistron Corp) ಕಂಪನಿಯ ಘಟಕವನ್ನು ಖರೀದಿಸಲು ಟಾಟಾ ಸಮೂಹ (Tata Group) ಮುಂದಾಗಿದ್ದು, ಒಪ್ಪಂದ ಬಹುತೇಕ ಅಂತಿಮಗೊಂಡಿದೆ. ಮಾರ್ಚ್ ಅಂತ್ಯದ ವೇಳೆಗೆ ಖರೀದಿ ಪ್ರಕ್ರಿಯೆ ಕೊನೆಗೊಳ್ಳುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್ಬರ್ಗ್’ ವರದಿ ಮಾಡಿದೆ. ವಿವಿಧ ಸಹಭಾಗಿತ್ವ ಯೋಜನೆಗಳ ಬಗ್ಗೆ ಎರಡೂ ಕಂಪನಿಗಳು ಸಮಾಲೋಚನೆ ನಡೆಸಿವೆ. ಅದರಂತೆ, ವಿಸ್ಟ್ರಾನ್ನ ಬೆಂಗಳೂರು ಘಟಕದ ಹೆಚ್ಚು ಪಾಲನ್ನು ವಹಿಸಿಕೊಳ್ಳುವ ಬಗ್ಗೆ ಟಾಟಾ ಸಮೂಹ ಒಲವು ವ್ಯಕ್ತಪಡಿಸಿದೆ. ವಿಸ್ಟ್ರಾನ್ ಬೆಂಬಲದೊಂದಿಗೆ ಉತ್ಪಾದನೆ ಕಾರ್ಯಾಚರಣೆ ಆರಂಭಿಸಲು ಟಾಟಾ ಉತ್ಸುಕವಾಗಿದೆ ಎಂದು ಮೂಲಗಳು ಹೇಳಿವೆ.
ಆ್ಯಪಲ್ ಇಂಕ್ನ ಐಫೋನ್ಗಳನ್ನು ಭಾರತದಲ್ಲಿ ಮುಖ್ಯವಾಗಿ ತೈವಾನ್ನ ವಿಸ್ಟ್ರಾನ್ ಮತ್ತು ಫಾಕ್ಸ್ಕಾನ್ ಟೆಕ್ನಾಲಜಿ ಸಮೂಹಗಳು ತಯಾರಿಸುತ್ತಿವೆ. ಚೀನಾದಲ್ಲಿಯೂ ಇದೇ ಕಂಪನಿಗಳು ಐಫೋನ್ ತಯಾರಿಸುತ್ತಿವೆ. ಇದೀಗ ಟಾಟಾ ಸಮೂಹ ಐಫೋನ್ ಉತ್ಪಾದನೆ ಆರಂಭಿಸಿದರೆ ಚೀನಾಕ್ಕೆ ಸ್ಪರ್ಧೆಯೊಡ್ಡುವ ಭಾರತದ ಯತ್ನಕ್ಕೆ ಯಶಸ್ಸು ದೊರೆಯಲಿದೆ. ಚೀನಾದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಹಾಗೂ ಅನಿಶ್ಚಿತತೆಯ ಈ ಸಂದರ್ಭದಲ್ಲಿ ಜಾಗತಿಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳು ಭಾರತದ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳುವಂತೆ ಮನವೊಲಿಸುವಲ್ಲಿ ಈ ಒಪ್ಪಂದ ಪೂರಕವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Multibagger Stock: ಟಾಟಾ ಸಮೂಹದ ಈ ಸ್ಟಾಕ್ನಿಂದ ವರ್ಷದಲ್ಲಿ ಶೇ 1000ದಷ್ಟು ರಿಟರ್ನ್ಸ್
ಮಾರ್ಚ್ 31ರ ಒಳಗಾಗಿ ಒಪ್ಪಂದ ಪೂರ್ಣಗೊಳಿಸುವುದು ಟಾಟಾ ಸಮೂಹದ ಗುರಿಯಾಗಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಅಧಿಕೃತವಾಗಿ ವಿನ್ಸ್ಟ್ರಾನ್ ಘಟಕದ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಏಪ್ರಿಲ್ 1ರಿಂದ ಸರ್ಕಾರದ ಭತ್ಯೆಗಳನ್ನು ಪಡೆಯಲಿದೆ ಎಂದು ‘ಬ್ಲೂಮ್ಬರ್ಗ್’ ವರದಿ ಹೇಳಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಲು ಟಾಟಾ ಪ್ರತಿನಿಧಿ ನಿರಾಕರಿಸಿದ್ದಾರೆ. ವಿಸ್ಟ್ರಾನ್ ಮತ್ತು ಆ್ಯಪಲ್ ಕೂಡ ಪ್ರತಿಕ್ರಿಯೆ ನೀಡಿಲ್ಲ.
ವಿಸ್ಟ್ರಾನ್ ಕಂಪನಿಯು 2017ರಲ್ಲಿ ಭಾರತದಲ್ಲಿ ಐಫೋನ್ ತಯಾರಿ ಆರಂಭಿಸಿತ್ತು. ಕಂಪನಿಯ ಬೆಂಗಳೂರಿನಲ್ಲಿರುವ ಘಟಕದಲ್ಲಿ ಐಫೋನ್ ತಯಾರಿಸಲಾಗುತ್ತಿದೆ.