ಷೇರುಪೇಟೆಯಲ್ಲಿ ಟಾಟಾ ಟೆಕ್ನಾಲಜೀಸ್ ಸದ್ಯಕ್ಕೆ ಸೂಪರ್ ಹಿಟ್; ಮೇ 27ರ ನಂತರ ಬದಲಾಗುತ್ತಾ ಮ್ಯಾಜಿಕ್?

|

Updated on: Nov 30, 2023 | 2:43 PM

Tata Technologies Share Price: ಎರಡು ದಶಕದ ಹಿಂದೆ ಟಿಸಿಎಸ್ ಬಳಿಕ ಷೇರುಪೇಟೆಗೆ ಪ್ರವೇಶ ಮಾಡಿದ ಮೊದಲ ಟಾಟಾ ಸಂಸ್ಥೆ ಟಾಟಾ ಟೆಕ್ನಾಲಜೀಸ್. 475-500 ರೂ ಐಪಿಒ ಬೆಲೆ ಇದ್ದರೂ 1,200 ರೂಗೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿ, ಮೊದಲ ದಿನದ ವಹಿವಾಟಿನಲ್ಲಿ 1,400 ರೂ ಗಡಿ ದಾಟಿತ್ತು. ಅದರ ಅನ್​ಲಿಸ್ಟೆಡ್ ಷೇರುಗಳನ್ನು ಖರೀದಿಸಿದವರಿಗೆ ಮೇ 27ರವರೆಗೆ ಲಾಕಿನ್ ಪೀರಿಯಡ್ ಇರುತ್ತದೆ. ಅಲ್ಲಿಯವರೆಗೆ ಅವರು ಆ ಷೇರುಗಳನ್ನು ಮಾರುವಂತಿಲ್ಲ. ಮೇ 27ರ ಬಳಿಕ ಬೆಲೆ ವ್ಯತ್ಯಯ ಆಗಬಹುದು.

ಷೇರುಪೇಟೆಯಲ್ಲಿ ಟಾಟಾ ಟೆಕ್ನಾಲಜೀಸ್ ಸದ್ಯಕ್ಕೆ ಸೂಪರ್ ಹಿಟ್; ಮೇ 27ರ ನಂತರ ಬದಲಾಗುತ್ತಾ ಮ್ಯಾಜಿಕ್?
ಟಾಟಾ ಟೆಕ್ನಾಲಜೀಸ್
Follow us on

ನವದೆಹಲಿ, ನವೆಂಬರ್ 30: ಪೇಟಿಎಂನ ಷೇರುಪೇಟೆ ಪದಾರ್ಪಣೆಯ ವೈಭವವನ್ನು ಮೀರಿಸುವ ರೀತಿಯಲ್ಲಿ ಟಾಟಾ ಟೆಕ್ನಾಲಜೀಸ್ (Tata Technologies) ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಅಮೋಘ ಡೆಬ್ಯೂ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಮೊದಲ ದಿನವೇ ಟಾಟಾ ಟೆಕ್ನಾಲಜೀಸ್ ಷೇರು ಶೇ. 180ರಷ್ಟು ಬೆಲೆಹೆಚ್ಚಳ ಕಂಡಿದೆ. ಟಿಸಿಎಸ್ ಬಳಿಕ ಷೇರುಮಾರುಕಟ್ಟೆಗೆ ಪ್ರವೇಶ ಮಾಡಿರುವ ಮೊದಲ ಟಾಟಾ ಗ್ರೂಪ್ ಕಂಪನಿ ಎನಿಸಿರುವ ಟಾಟಾ ಟೆಕ್ನಾಲಜೀಸ್ 2023ರಲ್ಲಿ ಮೊದಲ ಸೂಪರ್ ಹಿಟ್ ಪದಾರ್ಪಣೆ ಎನಿಸಿದೆ.

ಐಪಿಒದಲ್ಲಿ ಟಾಟಾ ಟೆಕ್ನಾಲಜೀಸ್ ತನ್ನ ಷೇರನ್ನು ಕೇವಲ 475-500 ರೂ ಆಫರ್ ಮಾಡಿತ್ತು. ಒಟ್ಟು 6.08 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟಕ್ಕಿಡಲಾಗಿತ್ತು. ಜನರು ಖರೀದಿಸಲು ಸಿಕ್ಕಾಪಟ್ಟೆ ಮುಗಿಬಿದ್ದಿದ್ದರು. ಪರಿಣಾಮವಾಗಿ ನಿನ್ನೆ ನವೆಂಬರ್ 29ರಂದು ಬಿಎಸ್​ಇ ಮತ್ತು ಎನ್​ಎಸ್​ಇ ಷೇರುವಿನಿಮಯ ಮಾರುಕಟ್ಟೆಯಲ್ಲಿ ಟಾಟಾ ಟೆಕ್ನಾಲಜೀಸ್ ಷೇರು ಬರೋಬ್ಬರಿ 1,200 ರೂಗೆ ಲಿಸ್ಟ್ ಆಗಿತ್ತು. ಮೊದಲ ದಿನವೇ ಈ ಷೇರಿನ ಬೆಲೆ 1,400 ರೂಗೆ ಜಂಪ್ ಆಗಿ ಹೋಗಿತ್ತು. ಇವತ್ತು (ನವೆಂಬರ್ 30) ಮಧ್ಯಾಹ್ನದ ವೇಳೆಗೆ ಅದರ ಷೇರುಬೆಲೆ 1,339 ರೂ ಇದೆ.

ಇದನ್ನೂ ಓದಿ: ಬಿಎಸ್​ಇ ಒಟ್ಟಾರೆ ಷೇರುಸಂಪತ್ತು 4 ಟ್ರಿಲಿಯನ್ ಡಾಲರ್; ಇತಿಹಾಸದಲ್ಲಿ ಇದೇ ಮೊದಲು; ಎನ್​ಎಸ್​ಇಯಲ್ಲೂ ಉತ್ತಮ ಏರಿಕೆ

2024ರ ಮೇ 27ರ ಬಳಿಕ ಟಾಟಾ ಟೆಕ್ನಾಲಜೀಸ್ ಷೇರು ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯ ಆಗುತ್ತಾ?

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದ ಯಾವುದೇ ಕಂಪನಿಯಾದರೂ ಕೂಡ ಖಾಸಗಿಯಾಗಿ ಷೇರುಗಳನ್ನು ನಿರ್ದಿಷ್ಟ ಬೆಲೆಗೆ ವಿತರಿಸುತ್ತದೆ. ಟಾಟಾ ಟೆಕ್ನಾಲಜೀಸ್​ನ ಅನ್​ಲಿಸ್ಟೆಡ್ ಷೇರು 2020ರಲ್ಲಿ 100 ರೂ ಬೆಲೆ ಹೊಂದಿತ್ತು. ಈ ವರ್ಷ ಐಪಿಒಗೆ ಮೊದಲು ಅದರ ಷೇರುಬೆಲೆ ಬರೋಬ್ಬರಿ 1,000 ರೂ ಗಡಿದಾಟಿತ್ತು.

ಇದೀಗ ಐಪಿಒ ಆಗಿ ಷೇರುಪೇಟೆಯಲ್ಲಿ ಷೇರು ಲಿಸ್ಟ್ ಆಗಿದೆ. ನಿಯಮದ ಪ್ರಕಾರ, ಲಿಸ್ಟ್ ಆಗಿಲ್ಲದ ಷೇರುಗಳನ್ನು ಇನ್ನು 6 ತಿಂಗಳವರೆಗೆ ಮಾರಾಟ ಮಾಡುವಂತಿಲ್ಲ. ಅಂದರೆ 6 ತಿಂಗಳು ಲಾಕ್ ಇನ್ ಪೀರಿಯಡ್ ಇರುತ್ತದೆ. ಅದು 2024ರ ಮೇ 27ರವರೆಗೂ ಈ ಅವಧಿ ಇರುತ್ತದೆ. ಅದಾದ ಬಳಿಕ ಈ ಅನ್​ಲಿಸ್ಟೆಡ್ ಷೇರುಗಳನ್ನು ಮಾರುಕಟ್ಟೆಯಲ್ಲಿ ಮಾರಬಹುದು. ಆಗ ಟಾಟಾ ಟೆಕ್ನಾಲಜೀಸ್ ಷೇರುಗಳು ದೊಡ್ಡ ಪ್ರಮಾಣದಲ್ಲಿ ಮಾರಾಟಕ್ಕೆ ಸಿಗುತ್ತವೆ. ಬೆಲೆಯಲ್ಲಿ ಗಮನಾರ್ಹ ಇಳಿಕೆ ಆದರೂ ಆಗಬಹುದು.

ಇದನ್ನೂ ಓದಿ: ತನ್ನ ಪೂರ್ತಿ ಪೇಟಿಎಂ ಪಾಲು ಮಾರಿಬಿಟ್ಟ ವಾರನ್ ಬಫೆಟ್; ಹೂಡಿಕೆತಜ್ಞನಿಗೆ ಆದ ನಷ್ಟ ಬರೋಬ್ಬರಿ 507 ಕೋಟಿ ರೂ

ಇಲ್ಲಿ ಇನ್ನೊಂದು ವಿಶೇಷ ಎಂದರೆ ಟಾಟಾ ಟೆಕ್ನಾಲಜೀಸ್ ಸಂಸ್ಥೆ ಕಳೆದ ಎರಡು ದಶಕದಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ ಮೊದಲ ಟಾಟಾ ಗ್ರೂಪ್ ಕಂಪನಿಯಾಗಿದೆ. ಟಿಸಿಎಸ್ ಲಿಸ್ಟ್ ಆದ ಬಳಿಕ ಬೇರೆ ಯಾವ ಟಾಟಾ ಸಂಸ್ಥೆಯೂ ಷೇರುಪೇಟೆಗೆ ಎಂಟ್ರಿ ಕೊಟ್ಟಿರಲಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ