ಕೋಲಾರ: ಇಲ್ಲಿಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಘಟಕದಲ್ಲಿ (Tata Wistron Unit) ಕಾರ್ಮಿಕರ ಪ್ರತಿಭಟನೆ ಮತ್ತೊಮ್ಮೆ ಭುಗಿಲೆದ್ದಿದೆ. ವಿಸ್ಟ್ರಾನ್ ಘಟಕವನ್ನು ಖರೀದಿಸಿದ ಬಳಿಕ ಟಾಟಾ ಕಂಪನಿಗೆ ಬಹಳ ಬೇಗ ಕಾರ್ಮಿಕರ ಪ್ರತಿಭಟನೆಯ (Workers Protest) ಬಿಸಿ ತಾಕಿದೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾವಿರಾರು ಕಾರ್ಮಿಕರು ಫ್ಯಾಕ್ಟರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಸದ್ಯ ಟಾಟಾ ವಿಸ್ಟ್ರಾನ್ ಘಟಕದ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕೋಲಾರದಲ್ಲಿ ಐಫೋನ್ ಅಸೆಂಬಲ್ ಮಾಡಲಾಗುತ್ತಿದ್ದ ಬೃಹತ್ ವಿಸ್ಟ್ರಾನ್ ಘಟಕದಲ್ಲಿ ಮೊದಲಿಂದಲೂ ಕಾರ್ಮಿಕರ ಪ್ರತಿಭಟನೆಯ ಕಾವು ಇತ್ತು. ಇದೇ ವೇತನ ವಿಚಾರವಾಗಿ ಕಾರ್ಮಿಕರಿಗೆ ಕಂಪನಿಯ ಆಡಳಿತವರ್ಗದ ವಿರುದ್ಧ ಆಕ್ರೋಶ ಇತ್ತು. ಕಡಿಮೆ ವೇತನ, ಹೆಚ್ಚು ಅವಧಿ ಕೆಲಸ ಇತ್ಯಾದಿ ಮೂಲಕ ತಮ್ಮನ್ನು ಶೋಷಿಸಲಾಗುತ್ತಿದೆ ಎಂಬುದು ಕಾರ್ಮಿಕರ ಅಸಮಾಧಾನವಾಗಿತ್ತು. 2020 ಡಿಸೆಂಬರ್ ತಿಂಗಳಲ್ಲಿ ಕಾರ್ಮಿಕರ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಡಿಸೆಂಬರ್ 12ರಂದು ಕಾರ್ಮಿಕರ ದೊಡ್ಡ ಗುಂಪೊಂದು ಫ್ಯಾಕ್ಟರಿಯಲ್ಲಿ ಲೂಟಿಗೆ ನಿಂತರು.
ಘಟಕದ ಅಸೆಂಬ್ಲಿ ಲೈನ್ಗೂ ಹಾನಿ ಮಾಡಲಾಯಿತು. ಸಾವಿರಾರು ಐಫೋನ್ಗಳನ್ನು ದೋಚಲಾಯಿತು. ಇದರಿಂದ 437 ಕೋಟಿ ನಷ್ಟವಾಗಿರಬಹುದು ಎಂದು ವಿಸ್ಟ್ರಾನ್ ಕಂಪನಿ ಹೇಳಿತು.
ಇದನ್ನೂ ಓದಿ: Tata Group: ಬೆಂಗಳೂರಿನಲ್ಲಿ ಐಫೋನ್ ಉತ್ಪಾದನೆ ಆರಂಭಿಸಿದ ಟಾಟಾ ಗ್ರೂಪ್
ನಾಲ್ಕೈದು ತಿಂಗಳಿಂದ ಕಂಪನಿ ಸಂಬಳ ಕೊಟ್ಟಿಲ್ಲ ಎಂದು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿತ್ತು. ಅಂದು ಘಟಕದಲ್ಲಿ ಏಳೆಂಟು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರ ಪೈಕಿ ಕೆಲವೇ ನೂರು ಮಂದಿ ಅತಿರೇಕವಾಗಿ ಪ್ರತಿಭಟನೆ ನಡೆಸಿದರೆನ್ನಲಾಗಿತ್ತು. ಆ ಬಳಿಕ ವಿಸ್ಟ್ರಾನ್ ಘಟಕವನ್ನು ಮುಚ್ಚಲಾಯಿತು.
ಕಾರ್ಮಿಕರ ಆ ಹಿಂಸಾಚಾರ ಘಟನೆ ಆ್ಯಪಲ್ವರೆಗೂ ಹೋಗಿತ್ತು. ಕಾರ್ಮಿಕರ ವಿಚಾರದಲ್ಲಿ ಆ್ಯಪಲ್ ಕಂಪನಿ ಬಿಗಿನಿಯಮ ಹೊಂದಿದೆ. ತನಗೆ ಉತ್ಪನ್ನಗಳನ್ನು ತಯಾರಿಸಿ ಸರಬರಾಜು ಮಾಡುವ ಕಂಪನಿಗಳೂ ಇದೇ ನೀತಿ ಅನುಸರಿಸಬೇಕೆಂದು ಆ್ಯಪಲ್ ತಾಕೀತು ಮಾಡುತ್ತದೆ. ಅದರಂತೆ ಕಾರ್ಮಿಕರಿಗೆ ಕಡಿಮೆ ವೇತನ ನೀಡುವುದು ಇತ್ಯಾದಿಗಳನ್ನು ನಿರ್ಬಂಧಿಸಲಾಗುತ್ತದೆ. ವಿಸ್ಟ್ರಾನ್ನ ಮ್ಯಾನೇಜ್ಮೆಂಟ್ನ ತಪ್ಪಾಗಿರುವುದು ಬೆಳಕಿಗೆ ಬಂದ ಬಳಿಕ ಹಲವು ಮಂದಿ ಉನ್ನತ ಅಧಿಕಾರಿಗಳ ತಲೆದಂಡಗಳಾದವು.
ಕೆಲ ತಿಂಗಳವರೆಗೂ ಮುಚ್ಚಿದ್ದ ವಿಸ್ಟ್ರಾನ್ ಘಟಕ ಮತ್ತೆ ಆರಂಭವಾಯಿತು. ಅದಾದ ಬಳಿಕ ಟಾಟಾ ಗ್ರೂಪ್ನ ಸಂಸ್ಥೆಯು ವಿಸ್ಟ್ರಾನ್ ಘಟಕ ಮತ್ತದರ ಉತ್ಪಾದನಾ ವ್ಯವಹಾರಗಳನ್ನು ಖರೀದಿ ಮಾಡಿದೆ. ಹೊಸೂರಿನಲ್ಲಿ ಒಂದು ಐಫೋನ್ ಅಸೆಂಬ್ಲಿ ಹೊಂದಿರುವ ಟಾಟಾಗೆ ಈಗ ವಿಸ್ಟ್ರಾನ್ ಒಂದು ದೊಡ್ಡ ಘಟಕವಾಗಿದೆ. ಇತ್ತೀಚೆಗಷ್ಟೇ ಟಾಟಾ ವಿಸ್ಟ್ರಾನ್ನ ಆಡಳಿತ ವಹಿಸಿಕೊಂಡಿತ್ತು. ಈಗ ಆರಂಭದಲ್ಲೇ ಟಾಟಾ ಕಂಪನಿಗೆ ಕಾರ್ಮಿಕ ಪ್ರತಿಭಟನೆಯ ಕಾವು ರಾಚಿದೆ.