TCS FY22 Q1 Results: ಟಿಸಿಎಸ್ ಮೊದಲ ತ್ರೈಮಾಸಿಕ ಲಾಭ 9008 ಕೋಟಿ ರೂ.; ಷೇರಿಗೆ 7 ರೂ. ಡಿವಿಡೆಂಡ್

| Updated By: Srinivas Mata

Updated on: Jul 08, 2021 | 11:55 PM

ದೇಶದ ಅತಿದೊಡ್ಡ ಐಟಿ ಸೇವಾ ಪೂರೈಕೆದಾರ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್​) FY22 Q1 ಲಾಭ 9008 ಕೋಟಿ ರೂ. ದಾಖಲಿಸಿದೆ. ಪ್ರತಿ ಷೇರಿಗೆ 7 ರೂಪಾಯಿಯಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ.

TCS FY22 Q1 Results: ಟಿಸಿಎಸ್ ಮೊದಲ ತ್ರೈಮಾಸಿಕ ಲಾಭ 9008 ಕೋಟಿ ರೂ.; ಷೇರಿಗೆ 7 ರೂ. ಡಿವಿಡೆಂಡ್
ಸಾಂದರ್ಭಿಕ ಚಿತ್ರ
Follow us on

ದೇಶದ ಅತಿದೊಡ್ಡ ಐಟಿ ಸೇವಾ ಪೂರೈಕೆದಾರ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್​) 2021ನೇ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕದ FY21 Q1 ಹಣಕಾಸು ಫಲಿತಾಂಶವನ್ನು ಜುಲೈ 8ರಂದು ಪ್ರಕಟಿಸಿದೆ. ಈ ತ್ರೈಮಾಸಿಕದಲ್ಲಿ ಕಂಪೆನಿಯು ಕನ್ಸಾಲಿಡೇಟೆಡ್ ಲಾಭ 9,008 ಕೋಟಿ ರೂಪಾಯಿ ದಾಖಲಿಸಿದೆ. ಸತತವಾಗಿ ಎರಡನೇ ತ್ರೈಮಾಸಿಕ ಶೇ 2.6ರಷ್ಟು ಕಡಿಮೆ ದಾಖಲು ಮಾಡಿದೆ. ಆದಾಯದಲ್ಲಿ ಕಡಿಮೆ ಆದ ಕಾರಣಕ್ಕೆ ಹೀಗಾಗಿದ್ದು, ವಿಶ್ಲೇಷಕರ ನಿರೀಕ್ಷೆಯನ್ನು ತಲುಪುವಲ್ಲಿ ವಿಫಲವಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಏಕೀಕೃತ ಲಾಭದ ಲೆಕ್ಕಕ್ಕೆ ಹೋಲಿಸಿದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 28.5ರಷ್ಟು ಬೆಳವಣಿಗೆ ಕಂಡುಬಂದಿದೆ. ಆದರೆ ಇತರ ಆದಾಯವು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ ಶೇಕಡಾ 22.6ರಷ್ಟು ಇಳಿಕೆ ಕಂಡು, Q1FY22ರಲ್ಲಿ 721 ಕೋಟಿ ರೂಪಾಯಿ ತಲುಪಿದೆ.

ಜೂನ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆಪರೇಷನ್ಸ್​ನಿಂದ (ಕಾರ್ಯಾಚರಣೆಗಳಿಂದ) ಬರುವ ಆದಾಯವು ಅನುಕ್ರಮವಾಗಿ ಶೇಕಡಾ 3.9 ರಷ್ಟು ಏರಿಕೆಯಾಗಿ 45,411 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಟಿಸಿಎಸ್ ಹೇಳಿದೆ. ಎಲ್ಲ ಲೆಕ್ಕಾಚಾರಗಳಲ್ಲೂ ವಿಶ್ಲೇಷಕರ ನಿರೀಕ್ಷೆಗಳನ್ನು ಮುಟ್ಟಲು ವಿಫಲವಾಗಿವೆ. ಸಿಎನ್‌ಬಿಸಿ-ಟಿವಿ 18 ಸಮೀಕ್ಷೆ ನಡೆಸಿದ ವಿಶ್ಲೇಷಕರ ಅಂದಾಜಿನ ಪ್ರಕಾರ, ತ್ರೈಮಾಸಿಕದಲ್ಲಿ 45,777 ಕೋಟಿ ರೂಪಾಯಿಗಳ ಆದಾಯ ಹಾಗೂ 9,352 ಕೋಟಿ ರೂಪಾಯಿ ಲಾಭ ಬರಬೇಕಿತ್ತು. “ವೈರಸ್​ನ ಹೊಸ ವೇರಿಯಂಟ್​ಗಳು ಮತ್ತು ಸಂಭಾವ್ಯ ಮೂರನೇ ಅಲೆಯ ಭೀತಿಯನ್ನು ಗಮನಿಸಿದರೆ, ನಾವು ಯಾವ ರೀತಿ ಪರಿಸ್ಥಿತಿ ಉದ್ಭವಿಸಬಹುದು ಎಂದು ನೋಡುತ್ತಿದ್ದೇವೆ. ಮತ್ತು ನಮ್ಮ ಪ್ರಮುಖ ಮಾರುಕಟ್ಟೆಗಳು ಮತ್ತು ಇತರ ಉದ್ಯಮಗಳ ಅವಕಾಶಗಳ ಬಗ್ಗೆ ಆಶಾವಾದಿಗಳಾಗಿದ್ದೇವೆ,” ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೋಪಿನಾಥನ್ ಹೇಳಿದ್ದಾರೆ.

ಕೊರೊನಾ ಎರಡನೇ ಅಲೆಯಿಂದಾಗಿ ಭಾರತ ಮತ್ತು ಏಷ್ಯಾ ಪೆಸಿಫಿಕ್​ನಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕದ ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ ಎಂದು ಟಿಸಿಎಸ್ ಹೇಳಿದೆ. ಭಾರತವು ಶೇಕಡಾ 14.1ರಷ್ಟು ಕುಸಿತವನ್ನು ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕಕ್ಕೆ ಮತ್ತು ವರ್ಷದಿಂದ ವರ್ಷಕ್ಕೆ ಶೇ 25.3 ರಷ್ಟು ಹೆಚ್ಚಳವನ್ನು ದಾಖಲಿಸಿದರೆ, ಏಷ್ಯಾ ಪೆಸಿಫಿಕ್ ವ್ಯವಹಾರವು ಶೇಕಡಾ 2.4 ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 9.3ರಷ್ಟು ಹೆಚ್ಚಾಗಿದೆ. ಕಳೆದ ಹನ್ನೆರಡು ತಿಂಗಳಲ್ಲಿ ಐಟಿ ಸೇವೆಗಳ ಪ್ರಮಾಣವು ಶೇ 8.6ರಷ್ಟಿದೆ ಎಂದು ಟಿಸಿಎಸ್ ಹೇಳಿದೆ. ತ್ರೈಮಾಸಿಕ ನಿವ್ವಳ ಉದ್ಯೋಗಿಗಳ ಸೇರ್ಪಡೆ 20,409 ರಷ್ಟಿದೆ. ಜೂನ್ 2021ರ ವೇಳೆಗೆ ಒಟ್ಟು ಉದ್ಯೋಗಿಗಳ ಸಂಖ್ಯೆ 5,09,058 ತಲುಪಿದೆ. ಇನ್ನು ಟಿಸಿಎಸ್ ಪ್ರತಿ ಷೇರಿಗೆ 7 ರೂಪಾಯಿಯಂತೆ ಮಧ್ಯಂತರ ಲಾಭಾಂಶ ಘೋಷಿಸಿದೆ. ಅಂದಹಾಗೆ ಗುರುವಾರದ ಕೊನೆಗೆ ಟಿಸಿಎಸ್ ಷೇರು ಬೆಲೆ ಬಿಎಸ್‌ಇಯಲ್ಲಿ ಶೇ 0.56 ರಷ್ಟು ಇಳಿಕೆಯಾಗಿ 3,257.10 ರೂಪಾಯಿ ಇತ್ತು.

ಇದನ್ನೂ ಓದಿ: TCS salary: ಟಿಸಿಎಸ್​ ಸಿಇಒ ರಾಜೇಶ್ ವಾರ್ಷಿಕ ವೇತನ ಶೇ 52ರಷ್ಟು, ಸಿಒಒ ಸುಬ್ರಮಣಿಯಮ್​ಗೆ ಶೇ 60ರಷ್ಟು ಹೆಚ್ಚಳ

(TCS company announced FY22 Q1 results on July 8th. Rs 9008 consolidated profit and Rs 7 interim dividend per share)

Published On - 11:55 pm, Thu, 8 July 21