Cairn Energy: ಫ್ರಾನ್ಸ್​ನಲ್ಲಿರುವ ಭಾರತ ಸರ್ಕಾರದ 12714 ಕೋಟಿ ರೂ. ಆಸ್ತಿ ಕೇರ್ನ್ ಎನರ್ಜಿ ವಶಕ್ಕೆ

ಪ್ಯಾರಿಸ್​ನಲ್ಲಿ ಇರುವ ಭಾರತ ಸರ್ಕಾರ ಒಡೆತನದ ಆಸ್ತಿಗಳನ್ನು ಸ್ಕಾಟಿಷ್ ಮೂಲದ ಕೇರ್ನ್ ಎನರ್ಜಿ ವಶಪಡಿಸಿಕೊಂಡಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಮಧ್ಯಸ್ಥಿಕೆ ನ್ಯಾಯಮಂಡಳಿಯು ತೈಲ ಉತ್ಪಾದಕ ಕೇರ್ನ್ ಪರವಾಗಿ ತೀರ್ಪು ನೀಡಿದ ನಂತರ ಈ ಕ್ರಮಕ್ಕೆ ಮುಂದಾಗಿದೆ.

Cairn Energy: ಫ್ರಾನ್ಸ್​ನಲ್ಲಿರುವ ಭಾರತ ಸರ್ಕಾರದ 12714 ಕೋಟಿ ರೂ. ಆಸ್ತಿ ಕೇರ್ನ್ ಎನರ್ಜಿ ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 08, 2021 | 8:59 PM

ಪ್ಯಾರಿಸ್​ನಲ್ಲಿ ಇರುವ ಭಾರತ ಸರ್ಕಾರ ಒಡೆತನದ ಆಸ್ತಿಗಳನ್ನು ಸ್ಕಾಟಿಷ್ ಮೂಲದ ಇಂಧನ ದೈತ್ಯ ಕೇರ್ನ್ ಎನರ್ಜಿ ವಶಪಡಿಸಿಕೊಂಡಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ಗುರುವಾರ ವರದಿ ಮಾಡಿದೆ. ಮಧ್ಯಸ್ಥಿಕೆ ನ್ಯಾಯಮಂಡಳಿಯು ತೈಲ ಉತ್ಪಾದಕ ಕೇರ್ನ್ ಪರವಾಗಿ ತೀರ್ಪು ನೀಡಿದ ನಂತರ ಕೇರ್ನ್ ಎನರ್ಜಿ ಮತ್ತು ಭಾರತ ಸರ್ಕಾರದ ಮಧ್ಯ ತಿಂಗಳುಗಟ್ಟಲೆಯಿಂದ ತಿಕ್ಕಾಟ ನಡೆದಿದೆ. ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ 1.7 ಬಿಲಿಯನ್ ಡಾಲರ್ ಪಾವತಿಸುವಂತೆ ಭಾರತ ಸರ್ಕಾರಕ್ಕೆ ಕೇಳಿದೆ. ಮೂವರು ಸದಸ್ಯರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯು ಕಳೆದ ವರ್ಷ ಕೇರ್ನ್ ಮೇಲಿನ ತೆರಿಗೆಯನ್ನು ಸರ್ವಾನುಮತದಿಂದ ರದ್ದುಗೊಳಿಸಿತು ಮತ್ತು ಮಾರಾಟವಾದ ಷೇರುಗಳನ್ನು ಮರುಪಾವತಿಸಲು ಆದೇಶಿಸಿತು. ಮುಟ್ಟುಗೋಲು ಹಾಕಿಕೊಂಡ ಲಾಭಾಂಶವನ್ನು ಮತ್ತು ತಡೆಹಿಡಿದ ತೆರಿಗೆ ಮರುಪಾವತಿಯನ್ನು ಹಿಂತಿರುಗಿಸಲು ಸೂಚಿಸಲಾಗಿದೆ.

ಕೇರ್ನ್ ಎನರ್ಜಿಯು 20 ಮಿಲಿಯನ್ ಯುರೋ ಮೌಲ್ಯದ 20 ಆಸ್ತಿಗಳ ಮಾಲೀಕತ್ವವನ್ನು ವರ್ಗಾಯಿಸುತ್ತದೆ ಎಂದು ಎಫ್​ಟಿ ವರದಿ ಮಾಡಿದೆ. ಫ್ರೆಂಚ್ ನ್ಯಾಯಾಲಯವು ತಡೆ ಹಿಡಿದಿರುವುದನ್ನು ಅಧಿಕೃತಗೊಳಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಅಧಿಕೃತ ಮೂಲಗಳು ಇದನ್ನು ನಿರಾಕರಿಸಿದೆ. “ಪ್ಯಾರಿಸ್​ನಲ್ಲಿ ಕೇರ್ನ್ ಎನರ್ಜಿ ಭಾರತ ಸರ್ಕಾರದ ಸರ್ಕಾರಿ ಸ್ವಾಮ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂಬ ಸುದ್ದಿ ವರದಿಗಳು ಬಂದಿವೆ. ಭಾರತ ಸರ್ಕಾರವು ಯಾವುದೇ ಫ್ರೆಂಚ್ ನ್ಯಾಯಾಲಯದಿಂದ ಯಾವುದೇ ಸೂಚನೆ, ಆದೇಶ ಅಥವಾ ಸಂವಹನವನ್ನು ಸ್ವೀಕರಿಸಿಲ್ಲ,” ಎಂದು ತಿಳಿಸಲಾಗಿದೆ. ಈ ಸಂಗತಿಗಳನ್ನು ಕಂಡುಹಿಡಿಯಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಅಂತಹ ಆದೇಶ ಬಂದಾಗಲೆಲ್ಲಾ ಸೂಕ್ತ ಕಾನೂನು ಪರಿಹಾರಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಡ್ಡಿ, ದಂಡವನ್ನು ಒಳಗೊಂಡಂತೆ ಮಧ್ಯಸ್ಥಿಕೆ ಮೊತ್ತವನ್ನು ವಸೂಲಿ ಮಾಡುವ ಸಲುವಾಗಿ ವಿದೇಶದಲ್ಲಿ ಇರುವ 70 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ಕೇರ್ನ್ ಎನರ್ಜಿ ಹೇಳಿದೆ. ಕೇರ್ನ್ ಎನರ್ಜಿ ಗುರುತಿಸಿದ ಸ್ವತ್ತುಗಳ ಪೈಕಿ ಏರ್ ಇಂಡಿಯಾದ ವಿಮಾನಗಳಿಂದ ಹಿಡಿದು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಸೇರಿದ ಹಡಗುಗಳವರೆಗೆ ಇವೆ ಎಂದು ವರದಿಗಳು ತಿಳಿಸಿವೆ. ಮೇ ತಿಂಗಳಲ್ಲಿ ಕೇರ್ನ್ ಎನರ್ಜಿ ಅಮೆರಿಕದಲ್ಲಿ ಮೊಕದ್ದಮೆ ಹೂಡಿದ್ದು, ಏರ್ ಇಂಡಿಯಾವನ್ನು ಭಾರತ ಸರ್ಕಾರವು ಎಷ್ಟು ನಿಯಂತ್ರಿಸುತ್ತಿದೆ, ಅವುಗಳು ‘ಆಲ್ಟರ್ ಈಜೋಸ್’ ಮತ್ತು ವಿಮಾನಯಾನ ಸಂಸ್ಥೆಯನ್ನು ಮಧ್ಯಸ್ಥಿಕೆ ಮೊತ್ತಕ್ಕೆ ಹೊಣೆಗಾರರನ್ನಾಗಿ ಮಾಡಬೇಕು ಎಂದು ಕೇಳಿತ್ತು. ಕೇರ್ನ್ ಎನರ್ಜಿ ಸಲ್ಲಿಸಿದ ಮೊಕದ್ದಮೆಯನ್ನು ಪ್ರಶ್ನೆ ಮಾಡುವುದಕ್ಕೆ ಏರ್​ ಇಂಡಿಯಾಗೆ ಜುಲೈ ಮಧ್ಯದವರೆಗೆ ಸಮಯ ಇದೆ.

ಮಧ್ಯಸ್ಥಿಕೆ ತೀರ್ಪಿನ ತಿಂಗಳುಗಳ ನಂತರ ಭಾರತ ಸರ್ಕಾರ ಇನ್ನೂ ಆ ಮೊತ್ತವನ್ನು ಸ್ವೀಕರಿಸಿಲ್ಲ. ಡಿಸೆಂಬರ್ 2020ರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ತೀರ್ಮಾನವನ್ನು ಬದಿಗಿಡಲು ಸರ್ಕಾರವು ಹೇಗ್ ಕೋರ್ಟ್ ಆಫ್ ಅಪೀಲ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದೆ. ತೆರಿಗೆ ಬೇಡಿಕೆಯನ್ನು ಮರುಪಡೆಯಲು ಮಾರಾಟವಾದ ಷೇರುಗಳ ಮೌಲ್ಯವನ್ನು ಹಿಂತಿರುಗಿಸಲು, ವಶಪಡಿಸಿಕೊಂಡ ಲಾಭಾಂಶವನ್ನು ಮರು ಪಾವತಿಸಲು ಮತ್ತು ತೆರಿಗೆ ಮರುಪಾವತಿಯನ್ನು ತಡೆಹಿಡಿಯಲು ನ್ಯಾಯಮಂಡಳಿ ಭಾರತ ಸರ್ಕಾರಕ್ಕೆ ಆದೇಶಿಸಿತ್ತು. ಕೇರ್ನ್ ಎನರ್ಜಿ “ಅನುಭವಿಸಿದ ಒಟ್ಟು ಹಾನಿಗೆ” ಬಡ್ಡಿ ಮತ್ತು ಮಧ್ಯಸ್ಥಿಕೆಯ ವೆಚ್ಚದೊಂದಿಗೆ ಸರಿದೂಗಿಸಲು ಭಾರತ ಸರ್ಕಾರವನ್ನು ಕೇಳಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯು.ಕೆ. ವೊಡಾಫೋನ್ ಗ್ರೂಪ್ 22,100 ಕೋಟಿ ರೂಪಾಯಿಗಳ ತೆರಿಗೆ ಬೇಡಿಕೆಯ ವಿರುದ್ಧ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ತೀರ್ಪು ತನ್ನ ಪರವಾಗಿ ಪಡೆದಿತ್ತು.

ಇದನ್ನೂ ಓದಿ: Cairn Energyಗೆ ₹8,000 ಕೋಟಿ ನೀಡುವಂತೆ ಭಾರತಕ್ಕೆ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಸೂಚನೆ

(Cairn energy seized Indian government properties in France to recover arbitration award announced by tribunal)

Published On - 8:58 pm, Thu, 8 July 21