TCS: ಯೂರೋಪ್ನಲ್ಲಿ ಉದ್ಯೋಗಿಗಳು ಮೆಚ್ಚುವ ಕಂಪನಿಗಳಲ್ಲಿ ಟಿಸಿಎಸ್ಗೆ ಮೊದಲ ಸ್ಥಾನ
Top employer of Europe: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಯೂರೋಪ್ನಲ್ಲಿ ಟಾಪ್ ಎಂಪ್ಲಾಯರ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಫ್ರಾನ್ಸ್, ಸ್ಪೇನ್ ಬೆಲ್ಜಿಯಂ ಸೇರಿದಂತೆ 12 ಐರೋಪ್ಯ ದೇಶಗಳಲ್ಲಿ ಟಿಸಿಎಸ್ ಟಾಪ್ ಎಂಪ್ಲಾಯರ್ ಆಗಿದೆ. ಉದ್ಯೋಗಿಗಳ ಬಗ್ಗೆ ಕಾಳಜಿ, ಉತ್ತಮ ಕೆಲಸದ ವಾತಾವರಣ ಕಲ್ಪಿಸಿರುವುದು ಟಾಪ್ ಎಂಪ್ಲಾಯರ್ನ ಮಾನದಂಡವಾಗಿದೆ.
ಬೆಂಗಳೂರು, ಜನವರಿ 19: ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS- Tata Consultancy Services) ತನ್ನ ಉದ್ಯೋಗಿಗಳಿಗೆ ಉತ್ತಮ ಕೆಲಸದ ವಾತಾವರಣ ಕಲ್ಪಿಸಿರುವ ಕೆಲವೇ ಸಂಸ್ಥೆಗಳಲ್ಲೂ ಒಂದಾಗಿದೆ. ಅದಕ್ಕೆ ದ್ಯೋತಕ ಎಂಬಂತೆ ಯೂರೋಪ್ನಲ್ಲಿ ಟಾಪ್ ಎಂಪ್ಲಾಯರ್ (Top Employer) ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಟಾಪ್ ಎಂಪ್ಲಾಯರ್ಸ್ ಇನ್ಸ್ಟಿಟ್ಯೂಟ್ ಸಂಸ್ಥೆ ಈ ವರ್ಷದ ಟಾಪ್ ಎಂಪ್ಲಾಯರ್ ಪ್ರಶಸ್ತಿಯನ್ನು ಟಿಸಿಎಸ್ಗೆ ನೀಡಿದೆ. ಈ ವರ್ಷ ಮಾತ್ರವಲ್ಲ ಸತತ 12ನೆ ಬಾರಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ.
‘ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಸ್ವಿಟ್ಜರ್ಲ್ಯಾಂಡ್, ಜರ್ಮನಿ, ಹಂಗೆರಿ, ಸ್ವೀಡನ್, ಇಟಲಿ, ಫಿನ್ಲ್ಯಾಂಡ್, ಡೆನ್ಮಾರ್ಕ್, ನಾರ್ವೆ, ಫ್ರಾನ್ಸ್ ಮತ್ತು ಸ್ಪೇನ್ ಈ 12 ದೇಶಗಳಲ್ಲಿ ಟಿಸಿಎಸ್ ಟಾಪ್ ಎಂಪ್ಲಾಯರ್ ಆಗಿ ಪರಿಗಣಿತವಾಗಿದೆ,’ ಎಂದು ಟಾಪ್ ಎಂಪ್ಲಾಯರ್ಸ್ ಇನ್ಸ್ಟಿಟ್ಯೂಟ್ ತನ್ನ ವರದಿಯೊಂದರಲ್ಲಿ ತಿಳಿಸಿದೆ.
ಟಾಪ್ ಎಂಪ್ಲಾಯರ್ ಆಗಿ ಪರಿಗಣಿಸಲು ಮಾನದಂಡವೇನು?
ಟಾಪ್ ಎಂಪ್ಲಾಯರ್ ಎಂದರೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಹೊಂದಿದ ಸಂಸ್ಥೆ ಎಂದಲ್ಲ. ಉದ್ಯೋಗಿಗಳಿಗೆ ಕೆಲಸ ಮಾಡಲು ಅತ್ಯುತ್ತಮ ವಾತಾವರಣ ಕಲ್ಪಿಸಿರುವ ಸಂಸ್ಥೆಗಳು ಟಾಪ್ ಎಂಪ್ಲಾಯರ್ ಎನಿಸುತ್ತವೆ. ಉದ್ಯೋಗಿಗಳ ಬಗ್ಗೆ ಕಾಳಜಿ, ಅವರ ವೃತ್ತಿ ಏಳ್ಗೆ, ಕೌಶಲ್ಯ ಹೆಚ್ಚಳ ಹೀಗೆ ಉದ್ಯೋಗಿಗಳ ವೈಯಕ್ತಿಕ ಅಭಿವೃದ್ಧಿ ಮತ್ತು ವೃತ್ತಿ ಅಭಿವೃದ್ಧಿಗೆ ಅನುಕೂಲವಾಗುವಂತಹ ಅವಕಾಶವನ್ನು ಈ ಕಂಪನಿಗಳು ಕಲ್ಪಿಸುತ್ತವೆ.
ಇದನ್ನೂ ಓದಿ: ದೇವನಹಳ್ಳಿ: ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆಗೊಳಿಸಿದ ಮೋದಿ: ಏನಿದು? ಎಷ್ಟು ಕೋಟಿ ಖರ್ಚಾಗಿದೆ? ಇಲ್ಲಿದೆ ವಿವರ
ಟಿಸಿಎಸ್ ಸಂಸ್ಥೆ ತನ್ನಲ್ಲಿ ಕೆಲಸ ಮಾಡುವ ಎಲ್ಲಾ ಸಾಫ್ಟ್ವೇರ್ ಎಂಜಿನಿಯರುಗಳಿಗೂ ಜನರೇಟಿವ್ ಎಐ ತಂತ್ರಜ್ಞಾನವನ್ನು ಕಲಿಸಿಕೊಡುತ್ತಿದೆ. ಡಿಜಿಟಲ್ ಸ್ಕಿಲ್, ಹೊಸ ಟೆಕ್ನಾಲಜಿಗಳನ್ನು ಉದ್ಯೋಗಿಗಳಲ್ಲಿ ತುಂಬಿಸುತ್ತಿದೆ. ಈಗಾಗಲೇ ಒಂದೂವರೆ ಲಕ್ಷ ಉದ್ಯೋಗಿಗಳಿಗೆ ಜನರೇಟಿವ್ ಎಐ ಟೆಕ್ನಾಲಜಿಯಲ್ಲಿ ತರಬೇತಿ ನೀಡಿದೆ.
ಅಂತೆಯೇ, ಟಿಸಿಎಸ್ ಕೇವಲ ಯೂರೋಪ್ನಲ್ಲಿ ಮಾತ್ರವಲ್ಲ ಏಷ್ಯಾ ಪೆಸಿಫಿಕ್ ಮತ್ತು ಅಮೆರಿಕದಲ್ಲೂ ಟಾಪ್ ಎಂಪ್ಲಾಯರ್ ಎಂಬ ಗೌರವಕ್ಕೆ ಪಾತ್ರವಾಗಿದೆ.
ಉದ್ಯೋಗಿಗಳ ಸಂಖ್ಯೆಯಲ್ಲೂ ಟಿಸಿಎಸ್ ದೈತ್ಯ
ಟಿಸಿಎಸ್ ಸಂಸ್ಥೆಯಲ್ಲಿ ಜಾಗತಿಕವಾಗಿ 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ರೈಲ್ವೇಸ್, ಆರ್ಮಿ ಮತ್ತು ಪೋಸ್ಟ್ ಇಲಾಖೆ ಬಿಟ್ಟರೆ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿದ ಭಾರತೀಯ ಸಂಸ್ಥೆ ಇದು.
ಇದನ್ನೂ ಓದಿ: Masala Chai: ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳು; ಭಾರತದ ಮಸಾಲ ಚಾಯ್ ಎರಡನೇ ಸ್ಥಾನದಲ್ಲಿ; ಅಗ್ರಸ್ಥಾನ ಯಾವುದಕ್ಕೆ?
ಯೂರೋಪ್ನಲ್ಲಿ ಟಿಸಿಎಸ್ 17,000 ಉದ್ಯೋಗಿಗಳ ಬಳಗ ಹೊಂದಿದೆ. ಅವರ ಪೈಕಿ 5,000ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಹತ್ತು ವರ್ಷಕ್ಕೂ ಹೆಚ್ಚು ಅವಧಿಯಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಟಿಸಿಎಸ್ ಯೂರೋಪ್ನಲ್ಲಿ 2023-24ರ ಅವಧಿಯಲ್ಲಿ 1,000 ಉದ್ಯೋಗಿಗಳನ್ನು ನೇಮಕಾತಿ ಮಾಡಿದೆ. ಅದರಲ್ಲಿ ಬಹಳ ವಿಶೇಷ ಎಂದರೆ 142 ದೇಶಗಳ ಮಂದಿ ಈ 1,000 ಉದ್ಯೋಗಿಗಳ ಪಟ್ಟಿಯಲ್ಲಿದ್ದಾರೆ. ನೇಮಕವಾದ ಸ್ಥಳೀಯರಲ್ಲಿ ಶೇ. 32 ಮಂದಿ ಮಹಿಳಾ ಉದ್ಯೋಗಿಗಳೇ ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ