
ನವದೆಹಲಿ, ಆಗಸ್ಟ್ 12: ಮೊಬೈಲ್ ಬಳಕೆದಾರರ ಜೇಬಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕತ್ತರಿ ಬೀಳಲಿದೆ. ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಪ್ಲಾನ್ಗಳ ದರ ಏರಿಕೆ ಆಗಬಹುದು ಎನ್ನುವ ಸುದ್ದಿ ಇದೆ. ಮುಂದಿನ ಆರು ತಿಂಗಳೊಳಗೆ ಟೆಲಿಕಾಂ ಕಂಪನಿಗಳು (telecom companies) ದರ ಏರಿಕೆ ಮಾಡಲು ಅಣಿಗೊಂಡಿವೆ. ಕಳೆದ ವರ್ಷ (2024) ಎಲ್ಲಾ ಟೆಲಿಕಾಂ ಕಂಪನಿಗಳು ಶೇ. 15ರಿಂದ 20ರಷ್ಟು ಏರಿಕೆ ಮಾಡಿದ್ದವು. ಈ ಬಾರಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ. ಶೇ. 10-15ರಷ್ಟು ಏರಿಕೆ ಅಗಬಹುದು ಎಂದು ಹೇಳಲಾಗುತ್ತಿದೆ.
‘ಮೊಬೈಲ್ ಟ್ಯಾರಿಫ್ ಏರಿಕೆ ಆಗುವುದು ನಿಶ್ಚಿತವಾಗಿದೆ. ಕಳೆದ ವರ್ಷಕ್ಕಿಂತ ಕಡಿಮೆ ಏರಿಕೆ ಆಗುವ ನಿರೀಕ್ಷೆ ಇದೆ. ಶೇ. 15-20ಕ್ಕಿಂತ ಕಡಿಮೆ ಏರಿಕೆ ಆಗಬಹುದು’ ಎಂದು ಐಸಿಆರ್ಎ ಸಂಸ್ಥೆಯ ವಿಶ್ಲೇಷಕರೊಬ್ಬರು ಹೇಳಿದ್ದಾಗಿ ಎನ್ಡಿಟಿವಿ ಪ್ರಾಫಿಟ್ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.
ಈ ಹಿಂದೆ ಎರಡು ವರ್ಷಕ್ಕೊಮ್ಮೆ ಮೊಬೈಲ್ ಟ್ಯಾರಿಫ್ಗಳನ್ನು ಪರಿಷ್ಕರಿಸಲಾಗುತ್ತಿತ್ತು. ಈಗ ಹೆಚ್ಚೆಚ್ಚು ಬಾರಿ ದರ ಪರಿಷ್ಕರಣೆ ಆಗಬಹುದು. ಹಾಗೆಯೇ, ಟೆಲಿಕಾಂ ಕಂಪನಿಗಳಿಗೆ ಪ್ರತೀ ಬಳಕೆದಾರರಿಂದ ಸಿಗುವ ಆದಾಯ ಮತ್ತಷ್ಟು ಹೆಚ್ಚಬಹುದು ಎನ್ನುವ ನಿರೀಕ್ಷೆಯೂ ಇದೆ. 2024-25ರಲ್ಲಿ ಪ್ರತೀ ಬಳಕೆದಾರರಿಗೆ ಸರಾಸರಿ ಆದಾಯ 200 ರೂ ಇತ್ತು. 2025-26ರಲ್ಲಿ ಇದು 220 ರೂಗೆ ಏರಿಕೆ ಆಗಬಹುದು ಎನ್ನುವುದು ವಿಶ್ಲೇಷಕರ ಅಂದಾಜು. ಆದರೆ, ವಿಶ್ವದ ಹೆಚ್ಚಿನ ದೇಶಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಇದಕ್ಕಿಂತ ಹೆಚ್ಚಿನ ಆದಾಯ ಇದೆ.
ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ
ಈ ಹಣಕಾಸು ವರ್ಷಾಂತ್ಯದೊಳಗೆ ಮೊಬೈಲ್ ಟ್ಯಾರಿಫ್ಗಳನ್ನು ಪರಿಷ್ಕರಿಸಲಾಗಬಹುದು. 5ಜಿ ಇನ್ಫ್ರಾಸ್ಟ್ರಕ್ಚರ್ ಅಳವಡಿಕೆಗೆ ಸಾಕಷ್ಟು ಬಂಡವಾಳ ವೆಚ್ಚ ಆಗುವ ಅಗತ್ಯತೆ ಇರುವುದರಿಂದ ಅದನ್ನು ಭರಿಸಲು ಟ್ಯಾರಿಫ್ ಏರಿಕೆಯು ಟೆಲಿಕಾಂ ಕಂಪನಿಗಳಿಗೆ ಅನಿವಾರ್ಯವಾಗಿದೆ.
ಇಲ್ಲಿ ಟೆಲಿಕಾಂ ತ್ರಯರಾದ ಜಿಯೋ, ಏರ್ಟೆಲ್ ಮತ್ತು ವಿಐಗಳ ಹೈಯರ್ ಎಂಡ್ ಟ್ಯಾರಿಫ್ಗಳು ಸಮವಾಗಿರಲಿವೆ. ರಿಲಾಯನ್ಸ್ ಜಿಯೋ ಕೂಡ ತನ್ನ ದರಗಳನ್ನು ಪ್ರತಿಸ್ಪರ್ಧಿಗಳಿಗೆ ಸಮನಾಗಿ ಏರಿಸುವ ಸಾಧ್ಯತೆ ಇದೆ. ಆದರೆ, ಹೆಚ್ಚು ಬಳಕೆಯಲ್ಲಿರುವ ಎಂಟ್ರಿ ಲೆವೆಲ್ ಪ್ಲಾನ್ಗಳಲ್ಲಿ ಜಿಯೋ ದರ ಕಡಿಮೆ ಇದೆ.
ಇದನ್ನೂ ಓದಿ: ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್ಬಿಐ ಕರಡು ನಿಯಮಗಳಿವು…
ಇನ್ನೊಂದೆಡೆ, ಬಿಎಸ್ಸೆನ್ನೆಲ್ ಯಾವ ತಂತ್ರ ಅನುಸರಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಜಿಯೋ, ಏರ್ಟೆಲ್, ವಿಐಗಳಿಗಿಂತ ಬಿಎಸ್ಸೆನ್ನೆಲ್ನ ಎಲ್ಲಾ ಟ್ಯಾರಿಫ್ಗಳು ಕಡಿಮೆ ಇದೆ. ಆದರೆ, ಅದು ಅದರ 5ಜಿ ಇನ್ಫ್ರಾಸ್ಟ್ರಕ್ಚರ್ ಇನ್ನೂ ಅಳವಡಿಕೆ ಆಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Tue, 12 August 25