Elon Musk: ಒಂದೇ ರಾತ್ರಿಯಲ್ಲಿ ಕರಗಿತು ಟೆಸ್ಲಾ ಸಿಇಒ ಎಲಾನ್ ಮಸ್ಕ್ 79 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ
ಟೆಸ್ಲಾ ಕಂಪೆನಿಯ ಷೇರುಗಳ ಮೌಲ್ಯದಲ್ಲಿ ರಾತ್ರೋರಾತ್ರಿ ಇಳಿಕೆ ಆಗಿದ್ದರಿಂದ ಕಂಪೆನಿ ಸಿಇಒ ಎಲಾನ್ ಮಸ್ಕ್ ಆಸ್ತಿ ಮೌಲ್ಯದಲ್ಲಿ 1100 ಕೋಟಿ ಅಮೆರಿಕನ್ ಡಾಲರ್ ಕುಸಿದು, ವಿಶ್ವದ ಎರಡನೇ ಶ್ರೀಮಂತ ಎನಿಸಿದ್ದಾರೆ.

ಟೆಸ್ಲಾ ಕಂಪೆನಿಯ ಷೇರುಗಳ ಮಾರಾಟ ಒತ್ತಡ ಕಂಡುಬಂದಿದ್ದರಿಂದ ಕಂಪೆನಿ ಸಂಸ್ಥಾಪಕ ಎಲಾನ್ ಮಸ್ಕ್ ಆಸ್ತಿ 1100 ಕೋಟಿ ಅಮೆರಿಕನ್ ಡಾಲರ್ ಕರಗಿಹೋಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ 79 ಸಾವಿರ ಕೋಟಿ ಒಂದೇ ರಾತ್ರಿಯಲ್ಲಿ ಉಡೀಸ್ ಆಗಿದೆ. ಆ ಮೂಲಕ ಎಲಾನ್ ಮಸ್ಕ್ ಒಟ್ಟು ಆಸ್ತಿ ಪ್ರಮಾಣ 16,900 ಕೋಟಿ ಯುಎಸ್ಡಿಗೆ ಬಂದುನಿಂತಿದೆ ಎಂಬ ಮಾಹಿತಿ ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕ ತೆರೆದಿಟ್ಟಿದೆ. ಅಂದಹಾಗೆ ಅಮೆಜಾನ್ನ ಜೆಫ್ ಬೆಜೋಸ್ ಹಾಗೂ ಎಲಾನ್ ಮಸ್ಕ್ ಮಧ್ಯೆ ನಂಬರ್ ಒನ್ ಶ್ರೀಮಂತ ಯಾರು ಎಂಬ ಮ್ಯೂಸಿಕಲ್ ಚೇರ್ ನಡೆಯುತ್ತಿದ್ದು, 17,800 ಕೋಟಿ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ ಬೆಜೋಸ್ ಮತ್ತೆ ವಿಶ್ವದ ನಂಬರ್ ಒನ್ ಶ್ರೀಮಂತರಾಗಿದ್ದಾರೆ.
ಅಮೆರಿಕದ ಬಾಂಡ್ಗಳ ಯೀಲ್ಡ್ ಏರಿಕೆಯಾದ ನಂತರ ತಂತ್ರಜ್ಞಾನ ವಲಯದ ಷೇರುಗಳ ಮೇಲೆ ಒತ್ತಡ ಹೆಚ್ಚಾಗಿದೆ. ಯೀಲ್ಡ್ ಜಾಸ್ತಿ ಆಗುತ್ತಿದ್ದಂತೆ ಬಾಂಡ್ಗಳು ಆಕರ್ಷಕ ಎನಿಸಿವೆ. ಆ ಕಾರಣಕ್ಕೆ ಷೇರುಗಳಿಂದ ಹಣ ವಾಪಸ್ ತೆಗೆಯಲಾಗುತ್ತಿದೆ. ಅದರಲ್ಲೂ ಕಳೆದ ವರ್ಷ ಮಾರುಕಟ್ಟೆ ಚೇತರಿಕೆಯಿಂದ ಬೆಲೆ ಗರಿಷ್ಠ ಮಟ್ಟದಲ್ಲಿರುವ ಷೇರುಗಳಿಂದ ಹಣ ವಾಪಸ್ ತೆಗೆದುಕೊಳ್ಳಲಾಗುತ್ತಿದೆ. ಆಪಲ್ ಕಂಪೆನಿ ಷೇರು ಶೇ 3.4, ಮೈಕ್ರೋಸಾಪ್ಟ್ ಶೇ 2.7 ಹಾಗೂ ಟೆಸ್ಲಾ ಕಂಪೆನಿ ಷೇರು ಶೇ 6.9ರಷ್ಟು ನೆಲ ಕಚ್ಚಿದೆ.
ಕಳೆದ ಜನವರಿಯಲ್ಲಿ ಒಟ್ಟು ಆಸ್ತಿ ಮೌಲ್ಯ 21000 ಕೋಟಿ ಅಮೆರಿಕನ್ ಡಾಲರ್ ತಲುಪುವ ಮೂಲಕ ನಂಬರ್ ಒನ್ ಶ್ರೀಮಂತನ ಸ್ಥಾನದಲ್ಲಿ ಗಟ್ಟಿಯಾಗಿ ಬಂದು ಕೂತಿದ್ದರು ಮಸ್ಕ್. ಈಚೆಗಷ್ಟೇ ಟೆಸ್ಲಾ ಕಂಪೆನಿಯಿಂದ ಎಲಾನ್ ಮಸ್ಕ್ಗೆ ಟೆಕ್ನೋಕಿಂಗ್ ಅಂತಲೂ ಮುಖ್ಯ ಹಣಕಾಸು ಅಧಿಕಾರಿ ಝಾಚ್ ಕಿರ್ಹೋರ್ನ್ರನ್ನು ಮಾಸ್ಟರ್ ಆಫ್ ಕಾಯಿನ್ ಎಂದು ಕರೆದಿದೆ. ಇದರಿಂದ ಅವರಿಬ್ಬರಿಗೆ ಹೆಚ್ಚು ಜವಾಬ್ದಾರಿ ಸೇರ್ಪಡೆ ಆಗುತ್ತದೆಯೇ ಎಂಬ ಬಗ್ಗೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.
ಇದನ್ನೂ ಓದಿ: ಎಲಾನ್ ಮಸ್ಕ್ಗೆ ಸೇರಿದ 1,95,000 ಕೋಟಿಗೂ ಹೆಚ್ಚು ಸಂಪತ್ತು ಒಂದೇ ವಾರದಲ್ಲಿ ಕಿಡಿಗೆ ತಾಗಿದ ಕರ್ಪೂರದಂತಾಯ್ತು