ನವದೆಹಲಿ, ಏಪ್ರಿಲ್ 17: ಇಲಾನ್ ಮಸ್ಕ್ (Elon Musk) ಭಾರತಕ್ಕೆ ಮೂರು ದಿನಗಳ ಭೇಟಿಗೆ ಬರುತ್ತಿದ್ದಾರೆ. ಇಲ್ಲಿ ಎಲೆಕ್ಟ್ರಿಕ್ ಕಾರುಗಳ (Electric Car) ತಯಾರಿಕೆಗೆ ಅವರು ಫ್ಯಾಕ್ಟರಿ ಸ್ಥಾಪಿಸುವ ಸನ್ನಾಹದಲ್ಲಿದ್ದಾರೆ. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಟೆಸ್ಲಾಗೆ (Tesla) ಭಾರತವೇ ಕೊನೆಯ ಇವಿ ಮಾರುಕಟ್ಟೆ ಆಗಬಹುದಾ ಎಂಬ ಅನುಮಾನ ಕಾಡುವಂತೆ ಮಾಡಿದೆ. ಮೊದಲಿಗೆ, ಟೆಸ್ಲಾ ಕಂಪನಿಯ ಷೇರು ಬೆಲೆ (share market) 2024ರಲ್ಲಿ ಶೇ. 37ರಷ್ಟು ಕುಸಿತ ಕಂಡಿದೆ. ಅದರ ಮಾರುಕಟ್ಟೆ ಮೌಲ್ಯ 500 ಬಿಲಿಯನ್ ಡಾಲರ್ ಮಟ್ಟಕ್ಕಿಂತ ಕಡಿಮೆಗೆ ಬಂದಿದೆ. ಕಂಪನಿಯಲ್ಲಿ ಲೇ ಆಫ್ ಕೂಡ ನಡೆಯುತ್ತಿದೆ. ಟೆಸ್ಲಾಗೆ ಏನಾಗಿದೆ?
ಮೊದಲಿಗೆ, ಕಳೆದ ಕೆಲ ವರ್ಷಗಳಿಂದಲೂ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಅನಭಿಷಿಕ್ತ ದೊರೆಯಾಗಿತ್ತು. ಈಗ ಚೀನೀ ಕಂಪನಿಗಳು ಪ್ರಬಲ ಪೈಪೋಟಿ ನೀಡುತ್ತಿವೆ. ಸ್ವತಃ ಇಲಾನ್ ಮಸ್ಕ್ ಅವರೇ ಈ ಚೀನಾ ಸ್ಪರ್ಧೆ ಬಗ್ಗೆ ಆತಂಕದ ಮಾತುಗಳನ್ನಾಡಿದ್ದಾರೆ. ಚೀನಾದ ಬಿವೈಡಿ ಕಂಪನಿ ಈಗ ಟೆಸ್ಲಾವನ್ನು ಹಿಂದಿಕ್ಕಿ, ವಿಶ್ವದಲ್ಲಿ ಅತಿಹೆಚ್ಚು ಎಲೆಕ್ಟ್ರಿಕ್ ಕಾರು ಮಾರುವ ಸಂಸ್ಥೆ ಎನಿಸಿದೆ.
ಸ್ಮಾರ್ಟ್ಫೋನ್ನಲ್ಲಿ ಐಫೋನ್ ಇದ್ದಂತೆ, ಎಲೆಕ್ಟ್ರಿಕ್ ಕಾರ್ ಕ್ಷೇತ್ರದಲ್ಲಿ ಟೆಸ್ಲಾ ಇದೆ. ಉತ್ಕೃಷ್ಟ ಗುಣಮಟ್ಟದ ಟೆಸ್ಲಾ ಕಾರುಗಳು ದುಬಾರಿ ಕೂಡ ಹೌದು. ಚೀನಾ ಕಂಪನಿಗಳು ಕಡಿಮೆ ಬೆಲೆಗೆ ಗುಣಮಟ್ಟದ ಇವಿ ತಯಾರಿಸುತ್ತವೆ. ಬೆಲೆ ವಿಚಾರದಲ್ಲಿ ಚೀನೀ ಕಂಪನಿಗಳಿಗೆ ಟೆಸ್ಲಾ ಪೈಪೋಟಿ ನೀಡುವುದು ಕಷ್ಟ.
ಇದನ್ನೂ ಓದಿ: ಅದೇ ಸಂಬಳ, ಹೆಚ್ಚು ಕೆಲಸ; ಉದ್ಯೋಗಿಗಳನ್ನು ಕಾಡುತ್ತಿದೆ ‘ಒಣ ಬಡ್ತಿ’ ಟ್ರೆಂಡ್
ಇದು ಮಾತ್ರವಲ್ಲ, ಜಾಗತಿಕವಾಗಿ ಇವಿ ಮಾರುಕಟ್ಟೆ ಮಂದಗೊಂಡಿದೆ. ಚೀನಾದಲ್ಲೇ ಆಗಲೇ ಯೂರೋಪ್, ಅಮೆರಿಕದಲ್ಲೇ ಆಗಲೀ ಎಲೆಕ್ಟ್ರಿಕ್ ಕಾರುಗಳ ಮಾರಾಟ ಗಣನೀಯವಾಗಿ ತಗ್ಗಿದೆ. ಭಾರತದಲ್ಲಿ ಮಾತ್ರವೇ ಇವಿ ವಾಹನಗಳ ಮಾರಾಟದಲ್ಲಿ ಹೆಚ್ಚಳ ಆಗುತ್ತಿರುವುದು. ಈಗ ಕಾಲಿಟ್ಟರೆ ಭಾರತದ ಇವಿ ಮಾರುಕಟ್ಟೆಯಲ್ಲಿ ಟೆಸ್ಲಾಗೆ ಹಿಡಿತ ಸಿಗಲು ಸಾಧ್ಯವಾಗಬಹುದು.
ಜಾಗತಿಕವಾಗಿ ಇವಿ ಮಾರಾಟ ಕಡಿಮೆ ಆಗುತ್ತಿರುವ ಸಂಗತಿಯನ್ನು ಇಲಾನ್ ಮಸ್ಕ್ ಐದಾರು ತಿಂಗಳ ಹಿಂದೆಯೇ ಹೇಳಿದ್ದರು. ಅವರು ಎಲೆಕ್ಟ್ರಿಕ್ ಕಾರ್ ತಯಾರಿಸುವುದನ್ನು ಕಡಿಮೆ ಮಾಡಿ ರೋಬೋಟ್ಯಾಕ್ಸಿಯತ್ತ ಗಮನ ಹರಿಸಲಿರುವ ಸುಳಿವನ್ನೂ ನೀಡಿದ್ದಾರೆ.
ಇದನ್ನೂ ಓದಿ: ಟ್ವಿಟ್ಟರ್ ಅಥವಾ ಎಕ್ಸ್ನಲ್ಲಿ ನೀವು ಲೈಕ್, ರಿಪ್ಲೈ ಮಾಡಿದರೂ ಬೀಳುತ್ತೆ ಕಾಸು; ಮಸ್ಕ್ ಕೊಟ್ಟಿದ್ದಾರೆ ಬಿಕ್ ಶಾಕ್
ಸೆಲ್ಫ್ ಡ್ರೈವಿಂಗ್ ಕಾರುಗಳ ತಯಾರಿಕೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಸರಿಪಡಿಸದೇ ಹೋದರೆ ಟೆಸ್ಲಾ ಕಂಪನಿಯ ಮೌಲ್ಯ ಸೊನ್ನೆ ಆಗಿಹೋಗುತ್ತದೆ ಎನ್ನುವ ಘನಘೋರ ವಾಸ್ತವ ಸಂಗತಿಯನ್ನು ಇಲಾನ್ ಮಸ್ಕ್ ತೆರೆದಿಟ್ಟಿರುವುದು ಕುತೂಹಲ ಮೂಡಿಸುತ್ತದೆ.
ರೋಬೋಟ್ಯಾಕ್ಸಿ ಅಥವಾ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಗೆ ಜಾಗತಿಕವಾಗಿ ಕೆಲವಾರು ಕಂಪನಿಗಳು ಕಸರತ್ತು ನಡೆಸುತ್ತಿವೆ. ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಒಂದು ತೊಡಕಾದರೆ, ಬೇರೆ ಬೇರೆ ದೇಶಗಳಲ್ಲಿ ಚಾಲನೆಗೆ ಕಾನೂನು ಸಮ್ಮತಿ ಪಡೆಯುವುದು ಇನ್ನೊಂದು ಪ್ರಮುಖ ಸವಾಲಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ