ಕಚೇರಿ ಸಮಯದ ಆಚೆಗೆ ಉದ್ಯೋಗಿಗಳನ್ನು ಕಂಪೆನಿಯಿಂದ ಸಂಪರ್ಕಿಸಿದರೆ ದಂಡ ವಿಧಿಸುವ ಕಾನೂನು ತಂದಿದೆ ಈ ದೇಶ

| Updated By: Srinivas Mata

Updated on: Nov 11, 2021 | 3:43 PM

ಕಂಪೆನಿಗಳು ಕಾರ್ಯ ನಿರ್ವಹಣೆ ಸಮಯದ ಆಚೆಗೆ ಉದ್ಯೋಗಿಗಳನ್ನು ಸಂಪರ್ಕಿಸುವುದನ್ನು ಈ ದೇಶದಲ್ಲಿ ನಿರ್ಬಂಧಿಸಲಾಗಿದೆ. ಇದಕ್ಕಾಗಿ ಕಾನೂನು ಮಾಡಲಾಗಿದೆ.

ಕಚೇರಿ ಸಮಯದ ಆಚೆಗೆ ಉದ್ಯೋಗಿಗಳನ್ನು ಕಂಪೆನಿಯಿಂದ ಸಂಪರ್ಕಿಸಿದರೆ ದಂಡ ವಿಧಿಸುವ ಕಾನೂನು ತಂದಿದೆ ಈ ದೇಶ
ಸಾಂದರ್ಭಿಕ ಚಿತ್ರ
Follow us on

ಪೋರ್ಚುಗಲ್‌ನ ಸಂಸತ್ತು ಇತ್ತೀಚೆಗೆ ಹೊಸ ಕಾರ್ಮಿಕ ಕಾನೂನನ್ನು ಪರಿಚಯಿಸಿದೆ. ಅದರ ಪ್ರಕಾರವಾಗಿ, ಕಚೇರಿ ಸಮಯದ ಆಚೆಗೆ ಉದ್ಯೋಗಿಗಳನ್ನು ಸಂಪರ್ಕಿಸುವ ಕಂಪೆನಿಗಳಿಗೆ ದಂಡ ವಿಧಿಸಲಾಗುತ್ತದೆ. ಕಂಪೆನಿ ಆವರಣದಿಂದ ಹೊರಗೆ ತಮ್ಮ ಕೆಲಸವನ್ನು ಮಾಡುವ ಉದ್ಯೋಗಿಗಳಿಗೆ ಹೊಸ ಕಾರ್ಮಿಕ ಕಾನೂನು ಹೆಚ್ಚುವರಿ ರಕ್ಷಣೆ ನೀಡುತ್ತದೆ. ಸುದ್ದಿ ಸಂಸ್ಥೆ ಎಪಿ ಪ್ರಕಾರ, ಹೊಸ ನಿಯಮಗಳು ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವ ಟ್ರೆಂಡ್​ಗೆ ಪ್ರತಿಕ್ರಿಯೆಯಾಗಿದೆ ಎಂದು ಪೋರ್ಚುಗಲ್‌ನ ಸಮಾಜವಾದಿ ಸರ್ಕಾರ ಹೇಳಿದೆ. ಇದು ಮನೆಯಿಂದಲೇ ಕೆಲಸ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ನೋಡುತ್ತದೆ. ಆದರೆ ಅದಕ್ಕೆ ಕಾರ್ಮಿಕ ಕಾನೂನನ್ನು ಅಳವಡಿಸಿಕೊಳ್ಳಲು ಬಯಸಿದೆ ಎಂದು ಹೇಳಿದೆ.

ಸಿಬ್ಬಂದಿ ಅಥವಾ ಅವರ ಕುಟುಂಬಗಳ ಗೋಪ್ಯತೆಗೆ ಭಂಗ ತರುವ ಕಂಪೆನಿಗಳಿಗೆ ಹೊಸ ದಂಡಗಳನ್ನು ಈ ನಿಯಮಗಳು ತರುತ್ತವೆ. ಮತ್ತು ಮನೆಯಲ್ಲಿ ಉಂಟಾದ ಕೆಲಸಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಸಿಬ್ಬಂದಿಗೆ ಉದ್ಯೋಗದಾತರು ಒದಗಿಸಬೇಕು ಎಂದು ತಿಳಿಸಿದೆ. ಕಂಪೆನಿಗಳು ಅಪರೂಪದ ಸಂದರ್ಭಗಳಲ್ಲಿ ಹೊರತುಪಡಿಸಿ ಕಚೇರಿ ಸಮಯದ ಹೊರಗೆ ಉದ್ಯೋಗಿಗಳನ್ನು ಸಂಪರ್ಕಿಸುವುದನ್ನು ತಪ್ಪಿಸಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ. ಕೆಲಸದಲ್ಲಿನ ಪ್ರತ್ಯೇಕತೆಯನ್ನು ತಡೆಗಟ್ಟಲು ಕನಿಷ್ಠ ಎರಡು ತಿಂಗಳಿಗೊಮ್ಮೆ ಸಿಬ್ಬಂದಿಯು ತಮ್ಮ ಮೇಲಧಿಕಾರಿಗಳನ್ನು ಭೇಟಿ ಮಾಡಬೇಕು ಎಂದಿದೆ.

ಅಲ್ಲದೆ, ವಿದ್ಯುತ್ ಅಥವಾ ಇಂಟರ್​ನೆಟ್ ಬಿಲ್‌ಗಳಂತಹ ಮನೆಯಲ್ಲಿ ಉಂಟಾಗುವ ಹೆಚ್ಚುವರಿ ವಯಕ್ತಿಕ ವೆಚ್ಚಗಳಿಗಾಗಿ ಕಂಪೆನಿಗಳು ಉದ್ಯೋಗಿಗಳಿಗೆ ಪಾವತಿಸಬೇಕು. ಕೆಲಸದಿಂದ ಹೊರಗಿರುವಾಗ ವೃತ್ತಿಪರ ಸಂವಹನ ವ್ಯವಸ್ಥೆಗಳನ್ನು ಆಫ್ ಮಾಡುವ ಹಕ್ಕನ್ನು ಸಿಬ್ಬಂದಿಗೆ ನೀಡುವಂತಹ ಕ್ರಮವನ್ನು ಜನಪ್ರತಿನಿಧಿಗಳು ತಿರಸ್ಕರಿಸಿದ್ದಾರೆ. ಇನ್ನು ಕಾರ್ಮಿಕ ನಿಯಮಗಳನ್ನು ಪಾಲಿಸದ ಕಂಪೆನಿಗಳು ದಂಡ ಪಾವತಿಸ ಬೇಕಾಗುತ್ತವೆ. ಕಾರ್ಮಿಕರ ಹಕ್ಕುಗಳು ಪ್ರಮುಖ ಸಮಸ್ಯೆಗಳಲ್ಲಿ ಒಂದಾಗುವ ಸಾಧ್ಯತೆ ಇರುವುದರಿಂದ ಜನವರಿಯಲ್ಲಿ ಚುನಾವಣೆಗೆ ಮುಂಚಿತವಾಗಿ ಸಂಸತ್ತು ವಿಸರ್ಜನೆಯಾಗುವ ಮೊದಲು ತೆಗೆದುಕೊಂಡ ಕೊನೆಯ ಕ್ರಮಗಳಲ್ಲಿ ಕಾರ್ಮಿಕ ನಿಯಮಗಳ ಅನುಮೋದನೆಯೂ ಒಂದಾಗಿದೆ.

ಇದನ್ನೂ ಓದಿ: ಡಿಸೆಂಬರ್​ಗೆ ವರ್ಕ್ ಫ್ರಮ್ ಹೋಮ್ ಕೊನೆ? ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆತರಲು ಐಟಿ ಕಂಪೆನಿಗಳ ಯೋಜನೆ