Zee Entertainment: ಈ ಮೀಡಿಯಾ ಕಂಪೆನಿ​ ಷೇರು ಒಂದೇ ದಿನದಲ್ಲಿ ಶೇ 40ರಷ್ಟು ಏರಿಕೆ; ಏಕೆ, ಏನು ಇಲ್ಲಿದೆ ಮಾಹಿತಿ

| Updated By: Srinivas Mata

Updated on: Sep 15, 2021 | 11:42 AM

ಝೀ ಎಂಟರ್​ಟೇನ್​ಮೆಂಟ್​ ಎಂಟರ್​ಪ್ರೈಸಸ್​ ಷೇರು ಮಂಗಳವಾದ ಒಂದೇ ದಿನದಲ್ಲಿ ಶೇ 40ರಷ್ಟು ಏರಿಕೆ ದಾಖಲಿಸಿದೆ. ಇದರ ಹಿಂದಿನ ಕಾರಣ ಏನು ಎಂಬ ವಿವರ ಇಲ್ಲಿದೆ.

Zee Entertainment: ಈ ಮೀಡಿಯಾ ಕಂಪೆನಿ​ ಷೇರು ಒಂದೇ ದಿನದಲ್ಲಿ ಶೇ 40ರಷ್ಟು ಏರಿಕೆ; ಏಕೆ, ಏನು ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಝೀ ಎಂಟರ್​ಟೇನ್​ಮೆಂಟ್ ಎಂಟರ್​ಪ್ರೈಸಸ್ ಲಿಮಿಟೆಡ್​ ಷೇರು ಮಂಗಳವಾರ ಭರ್ಜರಿ ಏರಿಕೆ ಕಂಡಿದೆ. ಕಂಪೆನಿಯನ್ನು ಖರೀದಿ ಮಾಡಬಹುದು ಎಂಬ ಭರವಸೆ ಮೇಲೆ ಶೇ 40ರಷ್ಟು ಮೇಲೇರಿತು. ಇದಕ್ಕೂ ಒಂದು ದಿನ ಮೊದಲು, ಕಂಪೆನಿಯ ಅತಿದೊಡ್ಡ ಷೇರುದಾರರೊಬ್ಬರು ಮಂಡಳಿಯನ್ನು ಒತ್ತಾಯಿಸಿ, ಸ್ಥಾಪಕ ಸುಭಾಷ್ ಚಂದ್ರ ಅವರ ಮಗ ಪುನೀತ್ ಗೋಯೆಂಕಾರನ್ನು ನಿರ್ದೇಶಕ ಹುದ್ದೆಯಿಂದ ಕೆಳಗೆ ಇಳಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಮಂಡಳಿಯಲ್ಲಿ ಬದಲಾವಣೆ ಮಾಡುವಂತೆಯೂ ಕೇಳಲಾಗಿದೆ. ಒಂದು ವೇಳೆ ಆಡಳಿತವು ಬದಲಾದಲ್ಲಿ ತಮ್ಮ ಷೇರನ್ನು ಮುಕ್ತವಾಗಿ ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂಬ ನಿರೀಕ್ಷೆ ಹೂಡಿಕೆದಾರರದು. ಸ್ಟ್ರಾಟೆಜಿಕ್ ಹೂಡಿಕೆದಾರರಿಗೆ ಈ ಕಂಪೆನಿಯು ಆಕರ್ಷಕ ಗುರಿಯಾಗಿ ಕಂಡಿದೆ. “ಸದ್ಯಕ್ಕೆ ಕಂಪೆನಿಯನ್ನು ಯಾರೇ ಖರೀದಿ ಮಾಡಬೇಕು ಅಂದರೂ ಈಗಿರುವ ಮಂಡಳಿ ಹಾಗೂ ಮೇಲ್​ ಸ್ತರದ ಆಡಳಿತವು ಪುನರ್​ ರಚನೆ ಆಗಬೇಕು,” ಎಂದು ಈಗಿನ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

ಝೀಗೆ ಏಷ್ಯಾದಲ್ಲಿ ಅತಿ ಹೆಚ್ಚಿನ ವೀಕ್ಷಕರಿದ್ದಾರೆ ಮತ್ತು ಪ್ರಾದೇಶಿಕವಾಗಿ ದೊಡ್ಡ ಪ್ರಮಾಣದಲ್ಲಿ ಅಸ್ತಿತ್ವ ಇದೆ. ಜತೆಗೆ ಪ್ರಾದೇಶಿಕ ಭಾಷೆಯಲ್ಲೂ ಸುದ್ದಿ ಹಾಗೂ ಮನರಂಜನೆಗೆ ಉತ್ತಮ ಸಂಖ್ಯೆಯಲ್ಲಿ ಚಾನೆಲ್​ಗಳನ್ನೂ ಹೊಂದಿದೆ. ಮಂಗಳವಾರದಂದು ಝೀ ಎಂಟರ್​ಟೇನ್​ಮೆಂಟ್ ಎಂಟರ್​ಪ್ರೈಸಸ್ ಷೇರು ಖರೀದಿಸಿದವರಲ್ಲಿ ರಾಕೇಶ್ ಝುಂಝುನ್​ವಾಲಾ ಸಹ ಇದ್ದಾರೆ. 50 ಲಕ್ಷ ಷೇರುಗಳನ್ನು ಎನ್​ಎಸ್​ಇಯಲ್ಲಿ 110.22 ಕೋಟಿ ರೂಪಾಯಿಗೆ ಬ್ಲಾಕ್​ ಡೀಲ್​ನಲ್ಲಿ ಖರೀದಿ ಮಾಡಿದ್ದಾರೆ. ಝುಂಝುನ್​ವಾಲ ಅವರು ಷೇರಿಗೆ ತಲಾ 220.44 ರೂಪಾಯಿಯಂತೆ 0.52ರಷ್ಟು ಪಾಲನ್ನು ತಮ್ಮ ಹೂಡಿಕೆ ಸಂಸ್ಥೆಯಾದ ರೇರ್​ ಎಂಟರ್​ಪ್ರೈಸಸ್​ಗಾಗಿ ಖರೀದಿ ಮಾಡಿದ್ದಾರೆ.

BofA ಸೆಕ್ಯೂರಿಟೀಸ್​ನಿಂದ 115 ಕೋಟಿ ರೂಪಾಯಿಗೆ ಖರೀದಿ
ಮತ್ತೊಂದು ಪ್ರತ್ಯೇಕ ವಹಿವಾಟಿನಲ್ಲಿ 236.20 ರೂಪಾಯಿಯಂತೆ 48.60 ಲಕ್ಷ ಷೇರುಗಳನ್ನು BofA ಸೆಕ್ಯೂರಿಟೀಸ್ ಯುರೋಪ್ SA 115 ಕೋಟಿ ರೂಪಾಯಿಗೆ ಖರೀದಿಸಿದೆ. ಜೂನ್​ವರೆಗೆ ಲೆಕ್ಕ ನೋಡಿದರೆ BofA ಸೆಕ್ಯೂರಿಟೀಸ್ ಝೀನಲ್ಲಿ ಶೇ 1.03ರಷ್ಟು ಷೇರನ್ನು ಹೊಂದಿತ್ತು. ಮಂಗಳವಾರದಂದು ಝೀ ಎಂಟರ್​ಟೇನ್​ಮೆಂಟ್​ ಎಂಟರ್​ಪ್ರೈಸಸ್​ ಷೇರು ದಿನಾಂತ್ಯಕ್ಕೆ ಬಿಎಸ್​ಇಯಲ್ಲಿ 74.70 ರೂಪಾಯಿ ಅಥವಾ ಶೇ 40ರಷ್ಟು ಹೆಚ್ಚಳವಾಗಿ ರೂ. 261.50ಕ್ಕೆ ವಹಿವಾಟು ಮುಗಿಸಿತು. ಇದಕ್ಕೂ ಒಂದು ದಿನ ಮೊದಲು, ಝೀ ಎಂಟರ್​ಟೇನ್​ಮೆಂಟ್​ ಎಂಟರ್​ಪ್ರೈಸಸ್​ನ ಪ್ರಮುಖ ಷೇರುದಾರರಾದ (ಶೇ 17.88ರಷ್ಟು ಪಾಲಿದೆ) ಇನ್ವೆಸ್ಕೊ ಡೆವಲಪಿಂಗ್ ಮಾರ್ಕೆಟ್ಸ್ ಫಂಡ್ ಹಾಗೂ OFI ಗ್ಲೋಬಲ್​ ಷೀನಾ ಫಂಡ್​ನಿಂದ ಗೋಯೆಂಕಾ ಮತ್ತು ಇತರ- ಮನೀಶ್ ಛೋಕಾನಿ ಮತ್ತು ಅಶೋಕ್ ಕುರಿಯನ್- ನಿರ್ದೇಶಕರಾಗಿ ಪದಚ್ಯುತಗೊಳಿಸಲು ಕೇಳಲಾಗಿತ್ತು.

ಈ ಫಂಡ್​ಗಳಿಂದ ಸೆಪ್ಟೆಂಬರ್ 12ರಂದು ಪತ್ರ ಬಂದ ನಂತರ ಛೋಕಾನಿ ಮತ್ತು ಕುರಿಯನ್ ಕಾರ್ಯನಿರ್ವಾಹಕೇತರ ಮತ್ತು ಸ್ವತಂತ್ರೇತರ ನಿರ್ದೇಶಕ ಹುದ್ದೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದರು. ಈ ಎರಡೂ ಸಾಂಸ್ಥಿಕ ಹೂಡಿಕೆದಾರರು ವಿಶೇಷ ಸಾಮಾನ್ಯ ಸಭೆ (EGM) ಕರೆಯುವಂತೆ ಕೇಳಿದ್ದರು. ಆ ಮೂಲಕ ಮಂಡಳಿಯಲ್ಲಿ ಪುನರ್​ರಚನೆ ಮಾಡುವ ವಿಚಾರವಾಗಿ ಷೇರುದಾರರ ದೃಷ್ಟಿಕೋನ ಏನು ಎಂಬುದನ್ನು ತಿಳಿಯಲು ಈ ಸಭೆ ಕರೆಯಬೇಕು ಎನ್ನಲಾಗಿತ್ತು. ಈ ಪತ್ರದ ಮೂಲಕ ಆರು ಸ್ವತಂತ್ರ ನಿರ್ದೇಶಕರನ್ನು ನೇಮಿಸುವಂತೆ ಪ್ರಸ್ತಾವ ಮಾಡಲಾಗಿದೆ.

ಎಸ್ಸೆಲ್ ಸಮೂಹದ ಶೇ 3.9ರಷ್ಟನ್ನು ಹೊಂದಿದೆ
ಭಾರತೀಯ ಲಿಸ್ಟೆಡ್​ ಕಂಪೆನಿಗೆ ಸಂಬಂಧಿಸಿದಂತೆ ಮಂಡಳಿ ಪುನರ್​ರಚನೆಗೆ ಇದೇ ಮೊದಲ ಬಾರಿಗೆ ವಿದೇಶೀ ಷೇರುದಾರರು ವಿಶೇಷ ಸಾಮಾನ್ಯ ಸಭೆ ಕರೆದಿದ್ದಾರೆ. ಅಂದಹಾಗೆ ಝೀ ಎಂಟರ್​ಟೇನ್​ಮೆಂಟ್​ ಎಂಟರ್​ಪ್ರೈಸಸ್​ ಅನ್ನು ಎಸ್ಸೆಲ್ ಸಮೂಹದ ಸುಭಾಷ್​ ಚಂದ್ರ ಸ್ಥಾಪಿಸಿದ್ದಾರೆ. ಪ್ರಮುಖ ಪಾಲನ್ನು ಇನ್ವೆಸ್ಕೋ ಡೆವಲಪಿಂಗ್ ಮಾರ್ಕೆಟ್ಸ್ ಫಂಡ್ ಹಾಗೂ OFI ಗ್ಲೋಬಲ್ ಚೀನಾ ಫಂಡ್ ಸೇರಿ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಹೊಂದಿದ್ದಾರೆ. ಎಸ್ಸೆಲ್ ಸಮೂಹವು ಕೇವಲ ಶೇ 3.9ರಷ್ಟನ್ನು ಹೊಂದಿದ್ದು, ಸುಭಾಷ್​ ಚಂದ್ರರ ಮಗ ಕಂಪೆನಿಯನ್ನು ಮುನ್ನಡೆಸಲಿದ್ದಾರೆ.

ಜೂನ್​ 21ರಂದು ಮಿಂಟ್​ ವರದಿ ಮಾಡಿರುವಂತೆ, ಕಲರ್ಸ್ ಎಂಟರ್​ಟೇನ್​ಮೆಂಟ್ ಚಾನೆನ್​ ಮಾಲೀಕರಾದ Viacom18 ಮತ್ತು ಝೀ ಎಂಟರ್​ಟೇನ್​ಮೆಂಟ್​ನ ಸುಭಾಷ್ ಚಂದ್ರರ ಮಧ್ಯೆ ವಿಲೀನದ ಆರಂಭದ ಮಾತುಕತೆ ನಡೆದಿದೆ. ಈ ಮೂಲಕ ದೊಡ್ಡ ಮಾಧ್ಯಮ ಸಂಸ್ಥೆ ಸೃಷ್ಟಿ ಆಗಲಿದೆ. ಕಳೆದ ವರ್ಷದಿಂದ Viacom18ನಲ್ಲಿ ಸೋನಿ ಪಿಕ್ಚರ್ಸ್ ನೆಟ್​ವರ್ಕ್ ಜತೆ ಮಾತುಕತೆ ನಡೆದಿತ್ತು. ಅಕ್ಟೋಬರ್​ನಲ್ಲಿ ಮಾತುಕತೆ ಮುರಿದುಬಿದ್ದಿತ್ತು.

ಇದನ್ನೂ ಓದಿ: Zomato: ಜೊಮ್ಯಾಟೋ ಸಹ ಸಂಸ್ಥಾಪಕ ಗೌರವ್ ಗುಪ್ತ ರಾಜೀನಾಮೆ; ಷೇರು ಮೌಲ್ಯ ಕುಸಿತ

IRCTC: ಎರಡು ವರ್ಷದಲ್ಲಿ ಹತ್ತು ಪಟ್ಟಿಗೂ ಹೆಚ್ಚಿನ ರಿಟರ್ನ್ಸ್ ನೀಡಿದ ಸರ್ಕಾರಿ ಸ್ವಾಮ್ಯದ ಈ ಷೇರು

(This Media Company Share Rose 40 Percent Of Price In A Single Day Here Is The Details)