ನವದೆಹಲಿ: ಭಾರತದಲ್ಲಿ ಕಾರುಗಳ ಮಾರಾಟ ಹೆಚ್ಚುತ್ತಿದೆ. ಫೆಬ್ರುವರಿ ತಿಂಗಳ ವಾಹನ ಮಾರಾಟಗಳ ವಿವರ (Wholesale Car Sales Report) ಪ್ರಕಟವಾಗಿದ್ದು, ವರ್ಷವಾರು ಲೆಕ್ಕದಲ್ಲಿ ಶೇ. 10.41ರಷ್ಟು ಹೆಚ್ಚು ವಾಹನಗಳು ಮಾರಾಟ ಕಂಡಿರುವುದು ತಿಳಿದುಬಂದಿದೆ. 2022ರ ಫೆಬ್ರುವರಿಯಲ್ಲಿ 3,02,729 ವಾಹನಗಳ ಮಾರಾಟವಾಗಿತ್ತು. 2023ರ ಫೆಬ್ರುವರಿಯಲ್ಲಿ ಈ ಸಂಖ್ಯೆ 3,34,245ಕ್ಕೆ ಏರಿದೆ. ಆದರೆ, ತಿಂಗಳುವಾರು ಲೆಕ್ಕ ಪರಿಗಣಿಸಿದರೆ ಮಾರಾಟ ಕಡಿಮೆ ಆಗಿದೆ. ಜನವರಿಗೆ ಹೋಲಿಸಿದರೆ ಫೆಬ್ರುವರಿಯಲ್ಲಿ ವಾಹನ ಮಾರಾಟ ಶೇ. 3.37ರಷ್ಟು ಕಡಿಮೆ ಆಗಿದೆ. ಈ ದತ್ತಾಂಶವು ಹೋಲ್ಸೇಲ್ ಮಾರುಕಟ್ಟೆಯ ವಿವರವನ್ನು ಒಳಗೊಂಡಿದೆ.
ಕಾರು ಮಾರುಕಟ್ಟೆಯಲ್ಲಿ ಮಾರುತಿ ಕಂಪನಿಯ (Maruti) ಪ್ರಾಬಲ್ಯ ಅಬಾಧಿತವಾಗಿ ಮುಂದುವರಿದಿದೆ. ಮಾರಾಟವಾದ ಕಾರುಗಳಲ್ಲಿ ಶೇ. 44.12ರಷ್ಟು ಮಾರುತಿ ಸುಜುಕಿಯ ಕಾರುಗಳೇ ಆಗಿವೆ. ಫೆಬ್ರುವರಿಯಲ್ಲಿ ಮಾರುತಿ ಸುಜುಕಿಯ 1,47,467 ಕಾರುಗಳು ಸೇಲ್ ಆಗಿವೆ. ಆದರೆ, ಕಿಯಾ ಮತ್ತು ಟೊಯೊಟಾ ಸಂಸ್ಥೆಯ ಕಾರುಗಳು ಅತಿ ಹೆಚ್ಚು ಹೆಚ್ಚಳ ಕಂಡಿವೆ. ಒಟ್ಟಾರೆ ಕಾರು ಮಾರಾಟದಲ್ಲಿ ಕಿಯಾ ಮತ್ತು ಟೊಯೊಟಾ 5 ಮತ್ತು 6ನೇ ಸ್ಥಾನದಲ್ಲಿದ್ದರೂ ಅವುಗಳ ಜನಪ್ರಿಯತೆ ಗಮನಾರ್ಹವಾಗಿ ಹೆಚ್ಚುತ್ತಿದೆ. ಕಾರು ಮಾರಾಟ ಹೆಚ್ಚಳದಲ್ಲಿ ಕಿಯಾಗಿಂತ ಟೊಯೋಟಾ ಮುಂದಿದೆ. ಟೊಯೊಟಾ ಕಾರು ಮಾರಾಟ ಶೇ. 74.58ರಷ್ಟು ಹೆಚ್ಚಾದರೆ, ಕಿಯಾ ಮೋಟಾರ್ಸ್ನ ಕಾರು ಮಾರಾಟ ಶೇ. 35.75ರಷ್ಟು ವೃದ್ಧಿಸಿದೆ.
ಇದನ್ನೂ ಓದಿ: Bank Crisis: ಬ್ಯಾಂಕುಗಳಿಗೆ ವೈರಲ್ ಫೀವರ್; ಸಿಗ್ನೇಚರ್ ದಿವಾಳಿ; ಅಮೆರಿಕದಲ್ಲಿ ಮಕಾಡೆ ಮಲಗಿದ 3ನೇ ಬ್ಯಾಂಕ್
ಸೌತ್ ಕೊರಿಯಾದ ಹ್ಯುಂಡೈ ಕಂಪನಿ 46,968 ಕಾರುಗಳನ್ನು ಮಾರುವ ಮೂಲಕ ಮಾರುತಿ ನಂತರದ ಸ್ಥಾನದಲ್ಲಿದೆ. ಅದರೆ, ಎರಡನೇ ಸ್ಥಾನಕ್ಕಾಗಿ ಹ್ಯುಂಡೈಗೆ ಟಾಟಾ, ಮಹೀಂದ್ರ ಮತ್ತು ಕಿಯಾ ಪೈಪೋಟಿ ನಡೆಸುತ್ತಿವೆ.
ಹೋಲ್ಸೇಲ್ ಕಾರು ಮಾರುಕಟ್ಟೆಯಲ್ಲಿ 2023 ಫೆಬ್ರುವರಿ ತಿಂಗಳ ಮಾರಾಟ ವಿವರ:
ಇದನ್ನೂ ಓದಿ: Sukanya Samriddhi Yojana: ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿ ದರ ಹೆಚ್ಚುತ್ತಾ? ಠೇವಣಿದಾರರ ನಿರೀಕ್ಷೆ ಈಡೇರಿಸುತ್ತಾ ಸರ್ಕಾರ?
ಫೆಬ್ರುವರಿ ತಿಂಗಳಲ್ಲಿನ ರೀಟೇಲ್ ಮಾರಾಟದ ವಿವರ:
ರೀಟೇಲ್ ಕಾರುಗಳ ಮಾರಾಟ ಫೆಬ್ರುವರಿ ತಿಂಗಳಲ್ಲಿ ಒಟ್ಟು 2,82,799 ಯೂನಿಟ್ಗಳಾಗಿವೆ. ಶೇಕಡವಾರು ಕಾರು ಮಾರಾಟದಲ್ಲಿ ಚೀನಾದ ಬಿವೈಡಿ (ಬ್ಯುಲ್ಡ್ ಯುವರ್ ಡ್ರೀಮ್) ಸಂಸ್ಥೆ ಶೇ. 1800 ಹೆಚ್ಚಳದೊಂದಿಗೆ ನಂಬರ್ ಒನ್ ಎನಿಸಿದೆ. ಭಾರತದ ಫೋರ್ಸ್ ಮೋಟಾರ್ಸ್ ಶೇ. 257ರಷ್ಟು ಮಾರಾಟ ಹೆಚ್ಚಳ ಕಂಡಿದೆ. ಅದು ಬಿಟ್ಟರೆ ಮಹೀಂದ್ರಾ ಮತ್ತು ಟೊಯೊಟಾ ಕಾರುಗಳು ಫೆಬ್ರುವರಿಯಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಮಾರಾಟ ಹೆಚ್ಚಿಸಿಕೊಂಡಿವೆ.
ಹೋಲ್ಸೇಲ್, ರೀಟೇಲ್ ಕಾರುಗಳ ವ್ಯತ್ಯಾಸ ಏನು?
ಇಲ್ಲಿ ರೀಟೇಲ್ ಕಾರುಗಳ ಮಾರಾಟ ಎಂದರೆ ಗ್ರಾಹಕರು ಕಾರು ಖರೀದಿಗೆ ಡೀಲರ್ ಜೊತೆ ನೊಂದಣಿ ಮಾಡಿಸಿರುವುದು. ಅಂದರೆ ಗ್ರಾಹಕರು ಖರೀದಿಸಿರುವ ಕಾರುಗಳ ಸಂಖ್ಯೆ ಇದು. ಹೋಲ್ಸೇಲ್ ಮಾರಾಟ ಎಂದರೆ ಡೀಲರ್ಗಳು ಕಾರು ತಯಾರಕರಿಂದ ಖರೀದಿಸಿದ ಕಾರುಗಳ ಸಂಖ್ಯೆ. ಕೆಲವೊಮ್ಮೆ ಡೀಲರ್ಗಳು ಖರೀದಿಸಿದ ಕಾರುಗಳು ಗ್ರಾಹಕರಿಗೆ ಮಾರಾಟವಾಗದೇ ಉಳಿದುಬಿಡಬಹುದು.