
ನವದೆಹಲಿ, ಫೆಬ್ರುವರಿ 28: ಷೇರುಪೇಟೆ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾದ ಸೆಬಿಗೆ ಹೊಸ ಮುಖ್ಯಸ್ಥರು ನೇಮಕವಾಗಿದ್ದಾರೆ. ಹಿರಿಯ ಸರ್ಕಾರಿ ಅಧಿಕಾರಿ ತುಹಿನ್ ಕಾಂತ ಪಾಂಡೆ ಅವರನ್ನು ಸೆಬಿ ಛೇರ್ಮನ್ ಆಗಿ ನೇಮಕ ಮಾಡಲಿದ್ದಾರೆ. ಪ್ರಸಕ್ತ ಛೇರ್ಮನ್ ಆಗಿರುವ ಮಾಧಬಿ ಪುರಿ ಬುಚ್ ಅವರ ಅವಧಿ ಶೀಘ್ರದಲ್ಲೇ ಮುಗಿಯಲಿದ್ದು, ಅವರ ಸ್ಥಾನವನ್ನು ಪಾಂಡೆ ತುಂಬಲಿದ್ದಾರೆ.
ಒಡಿಶಾ ಕೇಡರ್ನ 1987ರ ಬ್ಯಾಚ್ನ ಐಎಎಸ್ ಅಧಿಕಾರಿಯಾದ ತುಹಿನ್ ಕಾಂತ ಪಾಂಡೆ ಅವರು ಪಂಜಾಬ್ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಮಾಡಿ, ಬ್ರಿಟನ್ನ ಬರ್ಮಿಂಗ್ಹ್ಯಾಂ ಯೂನಿವರ್ಸಿಟಿಯಲ್ಲಿ ಎಂಬಿಎ ಮಾಡಿದ್ದಾರೆ. ಐಎಎಸ್ ಆದ ಬಳಿಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಗಳಿಸಿದವರಾಗಿದ್ದಾರೆ. ಒಡಿಶಾ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎರಡರ ಅಡಿಯಲ್ಲೂ ಅವರು ಕೆಲಸ ಮಾಡಿದ್ದಾರೆ. ಹಣಕಾಸು, ತೆರಿಗೆ, ಆಡಳಿತ ಇತ್ಯಾದಿ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ.
ಎಲ್ಐಸಿ ಐಪಿಒ, ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಗಳು ಪಾಂಡೆ ಸುಪರ್ದಿಯಲ್ಲಿ ನಡೆದಿವೆ. ವಿಶ್ವಸಂಸ್ಥೆ ಕೈಗಾರಿಕೆ ಅಭಿವೃದ್ದಿ ಸಂಸ್ಥೆಯ (UNIDO) ಪ್ರಾದೇಶಿಕ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ. ಒಡಿಶಾ ಸಣ್ಣ ಕೈಗಾರಿಕೆಗಳ ನಿಗಮ ಮತ್ತು ಒಡಿಶಾ ರಾಜ್ಯ ಹಣಕಾಸು ನಿಗಮಗಳಲ್ಲೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: 2025-26ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ. 7ರಷ್ಟು ಹೆಚ್ಚಳ; ದ್ವಿಚಕ್ರ ವಾಹನಗಳು ಶೇ. 6-9 ಹೆಚ್ಚು ಸೇಲ್: ಇಕ್ರ ಅಂದಾಜು
ತುಹಿನ್ ಕಾಂತ ಪಾಂಡೆ ಅವರು ಸೆಬಿ ಛೇರ್ಮನ್ ಆಗಿ ನೇಮಕವಾಗುವ ಮುನ್ನ ಕಂದಾಯ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮುನ್ನ ಹೂಡಿಕೆ, ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ, ಸರ್ಕಾರಿ ಉದ್ದಿಮೆಗಳ ಇಲಾಖೆ ಹಾಗು ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಈ ಮೂರು ಇಲಾಖೆಗಳಿಗೆ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಪೂರ್ವದಲ್ಲಿ ಅವರು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ