Elon Musk: ಡೆಲವೇರ್ ಉದ್ಯಮ ಕೋರ್ಟ್ ಮೊದಲ ಮುಖ್ಯ ನ್ಯಾಯಾಧೀಶೆ ಎದುರು ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಒಪ್ಪಂದ ರದ್ದು ವ್ಯಾಜ್ಯ
ಟ್ವಿಟ್ಟರ್ ಖರೀದಿ ಒಪ್ಪಂದವನ್ನುರದ್ದು ಮಾಡಿರುವ ಪ್ರಕರಣ ಅಮೆರಿಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಖ್ಯಾತವಾದ ಡೆಲವೇರ್‌ನ ಉದ್ಯಮ ನ್ಯಾಯಾಲಯದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆ ಕೈಗೆತ್ತಿಕೊಳ್ಳಲಿದ್ದಾರೆ.
ಟ್ವಿಟ್ಟರ್ ಖರೀದಿ ಒಪ್ಪಂದ ರದ್ದು ಮಾಡಿರುವುದಾಗಿ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ (Elon Musk) ಘೋಷಿಸಿದ್ದಾರೆ. ಆದರೆ ಈ ಖರೀದಿ ಒಪ್ಪಂದವನ್ನು ಎಲಾನ್ ಮಸ್ಕ್ ಬಿಡಬೇಕು ಅಂದುಕೊಂಡರೂ ಅಷ್ಟು ಸುಲಭಕ್ಕೆ ಬಿಡಲು ಸಾಧ್ಯವಿಲ್ಲದಂಥ ಸನ್ನಿವೇಶ ನಿರ್ಮಾಣವಾಗಿದೆ. ಅಮೆರಿಕದಲ್ಲಿ ರಾಷ್ಟ್ರ ಮಟ್ಟದಲ್ಲಿ ಖ್ಯಾತವಾದ ಡೆಲವೇರ್‌ನ ಉದ್ಯಮ ನ್ಯಾಯಾಲಯದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆ ಈಗ ಟ್ವಿಟ್ಟರ್ ಒಪ್ಪಂದ ರದ್ದು ಪ್ರಕರಣ ಕೈಗೆತ್ತಿಕೊಳ್ಳಲಿದ್ದಾರೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, 44 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ (ಸುಮಾರು ರೂ. 3,51,000 ಕೋಟಿ)ಗೆ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖರೀದಿಸುವ ತನ್ನ ಒಪ್ಪಂದಕ್ಕೆ ಎಲಾನ್ ಮಸ್ಕ್ ಬದ್ಧವಾಗಿರಬೇಕು ಎಂದು ಪ್ರಯತ್ನಿಸುತ್ತದೆ.
ಕಳೆದ ವರ್ಷ ಚಾನ್ಸೆರಿ ನ್ಯಾಯಾಲಯದಲ್ಲಿ ಆಂಡ್ರೆ ಬೌಚರ್ಡ್ ನಿವೃತ್ತರಾದ ನಂತರ ಚಾನ್ಸೆಲರ್ ಅಥವಾ ಮುಖ್ಯ ನ್ಯಾಯಾಧೀಶರ ಪಾತ್ರವನ್ನು ಕ್ಯಾಥಲೀನ್ ಮೆಕ್‌ಕಾರ್ಮಿಕ್ ಅವರು ವಹಿಸಿಕೊಂಡರು. ಅಂದ ಹಾಗೆ ಇದು ದೊಡ್ಡ ಕಾರ್ಪೊರೇಟ್ ವಿವಾದಗಳ ಇತ್ಯರ್ಥಕ್ಕೆ ಅನುಕೂಲಕರ ಸ್ಥಳವಾಗಿದೆ. ಮೆಕ್‌ಕಾರ್ಮಿಕ್‌ರ ಮೊದಲ ನಿರ್ಧಾರಗಳಲ್ಲಿ ಸೆಪ್ಟೆಂಬರ್‌ನಲ್ಲಿ ನಾಲ್ಕು ದಿನಗಳ ವಿಚಾರಣೆ ನಡೆಸುವಂತೆ ಟ್ವಿಟ್ಟರ್‌ನಿಂದ ಮಾಡಿದ ವಿನಂತಿ ಸೇರಿದೆ. ಇಂಥ ಸಂಕೀರ್ಣ ಪ್ರಕರಣಗಳಲ್ಲಿ ಇದು ಬಹಳ ಬಿಗಿಯಾದ ಸಮಯದ ಚೌಕಟ್ಟು ಹೊಂದಿದೆ. ಅಂದಹಾಗೆ ವಿಲೀನದ ಕುರಿತು ಮೆಕ್‌ಕಾರ್ಮಿಕ್‌ರ ಅಂತಿಮ ಆದೇಶವನ್ನು ಡೆಲವೇರ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು.
ವಿಲೀನ ಒಪ್ಪಂದದ ಉಲ್ಲಂಘನೆಗಳ ದೀರ್ಘ ಪಟ್ಟಿ
ಕಳೆದ ಮಂಗಳವಾರ ಸಲ್ಲಿಸಿದ ಮೊಕದ್ದಮೆಯಲ್ಲಿ ಮಸ್ಕ್ ಅವರಿಂದ ಆದ ವಿಲೀನ ಒಪ್ಪಂದದ ಉಲ್ಲಂಘನೆಗಳ ದೀರ್ಘ ಪಟ್ಟಿಯನ್ನು ಟ್ವಿಟ್ಟರ್ ಸಲ್ಲಿಸಿದೆ. ಅವರು ಮುಖ್ಯ ಕಾರ್ಯನಿರ್ವಾಹಕರಾಗಿರುವ ಎಲೆಕ್ಟ್ರಿಕ್ ವಾಹನ ತಯಾರಕರಾದ ಟೆಸ್ಲಾ ಇಂಕ್‌ನ ಷೇರುಗಳಲ್ಲಿನ ಕುಸಿತದ ಕಾರಣದಿಂದಾಗಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಭಾಗಶಃ ಹಿಂದೆ ಸರಿಯಲು ಬಯಸಿದ್ದಾರೆ ಎಂದು ಅದು ಹೇಳಿದೆ. ಸ್ಪ್ಯಾಮ್ ಖಾತೆಗಳ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದ ಕಾರಣ ಟ್ವಿಟ್ಟರ್ ವಿಲೀನ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಮಸ್ಕ್ ಆರೋಪಿಸಿದ್ದು, ತಪ್ಪು ಮಾಹಿತಿಯನ್ನು ನೀಡಲಾಗಿದೆ ಮತ್ತು ಕಾರ್ಯನಿರ್ವಾಹಕರನ್ನು ವಜಾ ಮಾಡುವ ಮೂಲಕ ಟ್ವಿಟ್ಟರ್ ಅದರ ಸಾಮಾನ್ಯ ವ್ಯವಹಾರದಿಂದ ದೂರ ಸರಿದಿದೆ ಎಂದು ಹೇಳಿದ್ದಾರೆ.
ಮಸ್ಕ್‌ನ 56 ಶತಕೋಟಿ ಯುಎಸ್ಡಿ (ಸುಮಾರು ರೂ. 4,46,700 ಕೋಟಿ) ಪರಿಹಾರದ ಪ್ಯಾಕೇಜ್ ಅನ್ನು ವಾಹನ ತಯಾರಕರಿಂದ ಅನೂರ್ಜಿತಗೊಳಿಸಲು ಪ್ರಯತ್ನಿಸುತ್ತಿರುವ ಟೆಸ್ಲಾದ ಷೇರುದಾರರ ಪ್ರಕರಣವು ಸಹ ಮೆಕ್‌ಕಾರ್ಮಿಕ್ ಅವರ ಮುಂದಿದೆ. ಅವರು ಆ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ನಲ್ಲಿ ನಿಗದಿಪಡಿಸಿದ್ದಾರೆ. ಟೆಸ್ಲಾ ಮತ್ತು ಎಲಾನ್ ಮಸ್ಕ್ರ ಇತರ ಕಂಪೆನಿಗಳಾದ ಟನೆಲಿಂಗ್ ವೆಂಚರ್ ದಿ ಬೋರಿಂಗ್ ಕಂಪೆನಿ ಮತ್ತು ಸ್ಪೇಸ್‌ಎಕ್ಸ್ ಎಂದು ಕರೆಯುವ ಸ್ಪೇಸ್ ಎಕ್ಸ್‌ಪ್ಲೋರೇಷನ್ ಟೆಕ್ನಾಲಜೀಸ್ ಹೀಗೆ ಯುಎಸ್ನ ಹೆಚ್ಚಿನ ಸಾರ್ವಜನಿಕ ಕಂಪೆನಿಗಳಿಗೆ ಡೆಲವೇರ್ ಒಂದು ಜನಪ್ರಿಯ ಇನ್ಕಾರ್ಪೊರೇಷನ್ ತಾಣವಾಗಿದೆ.
ನ್ಯಾಯಾಂಗ ನಿಂದನೆಯ ಆರೋಪದ ಮೂಲಕ ವಾದ
ಅಗತ್ಯ ಇದ್ದಲ್ಲಿ ಎಲಾನ್ ಮಸ್ಕ್ ಅವರ ಅಪಾರ ಪ್ರಮಾಣದ ಆಸ್ತಿಯ ಮೇಲೆ ನ್ಯಾಯಾಲಯ ಹಕ್ಕು ತರುವ ನಿಯಮಾವಳಿಯನ್ನು ನೀಡಲಾಗುತ್ತದೆ. ಆದೇಶದಂತೆ ನಡೆದುಕೊಂಡಿಲ್ಲ ಎಂಬ ಕಾರಣದಿಂದಾಗಿ ನ್ಯಾಯಾಂಗ ನಿಂದನೆಯ ಆರೋಪದ ಮೂಲಕ ವಕೀಲರು ತಮ್ಮ ವಾದವನ್ನು ಪ್ರಾರಂಭಿಸುತ್ತಾರೆ ಮತ್ತು ಅವರು ಆದೇಶವನ್ನು ಅನುಸರಿಸುವ ತನಕ ದಂಡವನ್ನು ವಿಧಿಸುತ್ತಾರೆ ಎಂದು ಹೇಳಿದ್ದಾರೆ. “ನ್ಯಾಯಾಲಯವು ತನ್ನ ಆದೇಶಗಳನ್ನು ಜಾರಿಗೊಳಿಸಲು ಸಮರ್ಥ ಅಧಿಕಾರವನ್ನು ಹೊಂದಿದೆ,” ಎಂದು ಡೆಲವೇರ್‌ನ ವಿಲ್ಮಿಂಗ್‌ಟನ್‌ನಲ್ಲಿ ಲೂಯಿಸ್ ಬ್ರಿಸ್ಬೋಯಿಸ್ ಅವರ ವಕೀಲರಾದ ಫ್ರಾನ್ಸಿಸ್ ಪಿಲೆಗ್ಗಿ ಹೇಳಿದ್ದಾರೆ. ತೀರ್ಪನ್ನು ನಿರ್ಲಕ್ಷಿಸುವುದನ್ನು ಮಸ್ಕ್ ಮುಂದುವರಿಸಿದರೆ ನ್ಯಾಯಾಲಯವು ಟೆಸ್ಲಾ ಮತ್ತು ಇತರ ಡೆಲವೇರ್-ಇನ್ಕಾರ್ಪೊರೇಟೆಡ್ ಕಂಪೆನಿಗಳಿಗೆ ಆಸ್ತಿಗಳನ್ನು ಸ್ಥಗಿತಗೊಳಿಸಲು ಅಥವಾ ಷೇರುಗಳನ್ನು ಹಿಂಪಡೆಯಲು ಆದೇಶ ನೀಡಬಹುದು, ಅಂದಹಾಗೆ ಇದರಲ್ಲಿ ಮಸ್ಕ್ ಪಾಲನ್ನು ಹೊಂದಿದ್ದಾರೆ.
“ಮಕ್ಕಳ ಬೆಳವಣಿಗೆಗೆ ಹಣ ಪಾವತಿಸದ ತಂದೆಯಂತೆ ಮಸ್ಕ್ ಅವರನ್ನು ಪರಿಗಣಿಸಲಾಗುವುದು,” ಎಂದು ಯುಕಾನ್ ಸ್ಕೂಲ್ ಆಫ್ ಲಾ ಪ್ರಾಧ್ಯಾಪಕ ಮೈನರ್ ಮೈಯರ್ಸ್ ಹೇಳಿದ್ದಾರೆ.