ನವದೆಹಲಿ, ಡಿಸೆಂಬರ್ 25: ತೈಲ ವ್ಯವಹಾರದಲ್ಲಿ ರುಪಾಯಿಯಲ್ಲಿ ಹಣ ಸ್ವೀಕರಿಸಲು ಯಾವ ತೈಲ ಸರಬರಾಜುದಾರರು ಸಿದ್ಧ ಇಲ್ಲ ಎನ್ನುವಂತಹ ಸುದ್ದಿ ಬಂದ ಬೆನ್ನಲ್ಲೇ ಇದೀಗ ಯುಎಇ ದೇಶ ರುಪಾಯಿಯಲ್ಲಿ ಪೇಮೆಂಟ್ ಸ್ವೀಕರಿಸಿರುವ ಸುದ್ದಿಯೊಂದು ಮಾಧ್ಯಮಗಳಲ್ಲಿ ಬಂದಿದೆ. ಸಂಯುಕ್ತ ಅರಬ್ ಸಂಸ್ಥಾನದಿಂದ (UAE) ಖರೀದಿಸಲಾದ ತೈಲಕ್ಕೆ ಭಾರತ ರುಪಾಯಿ ಕರೆನ್ಸಿಯಲ್ಲಿ ಹಣ ಪಾವತಿಸಿದೆ. ಯುಎಇ ತೈಲ ಮಾರಾಟದಲ್ಲಿ ಭಾರತದ ಕರೆನ್ಸಿಯಲ್ಲಿ ಹಣ ಪಾವತಿ ಪಡೆದದ್ದು ಇದೇ ಮೊದಲು ಎನ್ನಲಾಗಿದೆ. ಅಂತರರಾಷ್ಟ್ರೀಯ ವ್ಯವಹಾರದಲ್ಲಿ ರುಪಾಯಿ ಕರೆನ್ಸಿ (Rupee currency) ಬಳಕೆ ಹೆಚ್ಚೆಚ್ಚು ಮಾಡುವ ಇರಾದೆ ಹೊಂದಿರುವ ಭಾರತಕ್ಕೆ ಇದು ಆರಂಭಿಕ ಹೆಜ್ಜೆಗಳು ಮಾತ್ರ.
ಈ ಹಿಂದೆ ರಷ್ಯಾದಿಂದ ತೈಲ ಖರೀದಿ ಮಾಡಿದಾಗ ಕೆಲವೊಮ್ಮೆ ಭಾರತೀಯ ಕಂಪನಿಗಳು ರುಪಾಯಿಯಲ್ಲಿ ಹಣ ಪಾವತಿ ಮಾಡಿದ್ದಿದೆ. ಆದರೆ, ಹೆಚ್ಚಿನ ಅಂತರರಾಷ್ಟ್ರೀಯ ವ್ಯವಹಾರಗಳು ಡಾಲರ್ ಕರೆನ್ಸಿಯಲ್ಲಿ ನಡೆಯುವುದರಿಂದ ರುಪಾಯಿ ಕರೆನ್ಸಿಯನ್ನು ಸ್ವೀಕರಿಸಲು ಸಹಜವಾಗಿ ಯಾರೂ ಆಸಕ್ತಿ ತೋರುವುದಿಲ್ಲ. ರುಪಾಯಿ ಕರೆನ್ಸಿ ಸ್ವೀಕರಿಸಿದರೆ ಅದರ ಮರುಬಳಕೆ ಮಾಡುವುದು ಕಷ್ಟವಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ರಫ್ತುದಾರರು ರುಪಾಯಿ ಸ್ವೀಕಾರಕ್ಕೆ ಹಿಂದೇಟು ಹಾಕುವುದುಂಟು.
ಇದನ್ನೂ ಓದಿ: ಪೇಟಿಎಂನಲ್ಲಿ ಕೆಲಸ ಕಳೆದುಕೊಂಡ ಶೇ. 10ಕ್ಕೂ ಹೆಚ್ಚು ಉದ್ಯೋಗಿಗಳು; ಈ ವರ್ಷ ಕಂಡ ಅತಿದೊಡ್ಡ ಲೇ ಆಫ್ಗಳಲ್ಲಿ ಇದೂ ಒಂದು
ಈ ವಿಚಾರ ಆರ್ಬಿಐ ಮತ್ತು ಸರ್ಕಾರಕ್ಕೂ ತಿಳಿದಿದೆ. ಹೀಗಾಗಿ, ರುಪಾಯಿ ಕರೆನ್ಸಿಯಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆಸಲು ನಿರ್ದಿಷ್ಟ ಅವಧಿಯ ಗುರಿಗಳನ್ನು ಇಟ್ಟಿಲ್ಲ. ಹಂತ ಹಂತವಾಗಿ ರುಪಾಯಿ ಬಳಕೆ ಹೆಚ್ಚಿಸುವುದು ಸರ್ಕಾರದ ಉದ್ದೇಶ. ಅದಕ್ಕಾಗಿ 20ಕ್ಕೂ ಹೆಚ್ಚು ದೇಶಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆರ್ಬಿಐ ಹಲವು ಬ್ಯಾಂಕುಗಳಿಗೆ ವೋಸ್ಟ್ರೋ ಅಕೌಂಟ್ಗಳನ್ನು ರಚಿಸಲು ಅನುಮತಿಸಿದೆ. ರುಪಾಯಿ ಕರೆನ್ಸಿ ಬಳಕೆ ಮಾಡಲು ಬೇಕಾದ ಸೌಕರ್ಯ ವ್ಯವಸ್ಥೆಯನ್ನು (ಇನ್ಫ್ರಾಸ್ಟ್ರಕ್ಚರ್) ಭಾರತ ಮಾಡುತ್ತಿದೆ.
ಒಂದು ದೇಶದ ಜೊತೆ ದ್ವಿಪಕ್ಷೀಯ ವ್ಯಾಪಾರ ಅಥವಾ ಕೊಡು ಕೊಳ್ಳುವಿಕೆ ಸಮಾನವಾಗಿದ್ದರೆ ರುಪಾಯಿ ಕರೆನ್ಸಿ ಬಳಕೆ ಸಿಂಧು ಎನಿಸುತ್ತದೆ. ಭಾರತದ ರಫ್ತು ಪ್ರಮಾಣ ಆಮದು ಪ್ರಮಾಣಕ್ಕಿಂತ ಬಹಳ ಕಡಿಮೆ ಇರುವುದರಿಂದ ರುಪಾಯಿ ಕರೆನ್ಸಿಗೆ ಸೂಕ್ತ ಮಾರುಕಟ್ಟೆ ನಿರ್ಮಾಣವಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ