ಆವತ್ತಿನ 10,000 ರೂ ಹೂಡಿಕೆ ಇವತ್ತು 300 ಕೋಟಿ ರೂ; ಕೋಟಕ್ ಮಹೀಂದ್ರ ಬ್ಯಾಂಕ್​ನ ಅಸಾಮಾನ್ಯ ಬೆಳವಣಿಗೆ ಬಣ್ಣಿಸಿದ ಉದಯ್ ಕೋಟಕ್

Uday Kotak: ನಂಬುಗೆ ಮತ್ತು ಪಾರದರ್ಶಕತೆಯ ಮೂಲ ತತ್ವಗಳ ಆಧಾರದ ಮೇಲೆ ನಮ್ಮ ಹಣಕಾಸು ಸಂಸ್ಥೆಯನ್ನು ನಿರ್ಮಿಸಿದ್ದೇವೆ. ನಮ್ಮ ಸಹಭಾಗಿಗಳಿಗೆ ನಾವು ಮೌಲ್ಯ ಒದಗಿಸಿದ್ದೇವೆ. ಒಂದು ಲಕ್ಷ ನೇರ ಉದ್ಯೋಗ ಕೊಟ್ಟಿದ್ದೇವೆ. 1985ರಲ್ಲಿ ತಮ್ಮೊಂದಿಗೆ ಯಾರಾದರೂ 10,000 ರೂ ಹೂಡಿಕೆ ಮಾಡಿದ್ದರೆ, ಆ ಹಣ ಇವತ್ತು ಸುಮಾರು 300 ಕೋಟಿ ರೂ ಆಗಿರುತ್ತಿತ್ತು ಎಂದು ಕೋಟಕ್ ಮಹೀಂದ್ರ ಬ್ಯಾಂಕ್​ನ ನಿರ್ಗಮಿತ ಸಿಇಒ ಉದಯ್ ಕೋಟಕ್ ಹೇಳಿದ್ದಾರೆ.

ಆವತ್ತಿನ 10,000 ರೂ ಹೂಡಿಕೆ ಇವತ್ತು 300 ಕೋಟಿ ರೂ; ಕೋಟಕ್ ಮಹೀಂದ್ರ ಬ್ಯಾಂಕ್​ನ ಅಸಾಮಾನ್ಯ ಬೆಳವಣಿಗೆ ಬಣ್ಣಿಸಿದ ಉದಯ್ ಕೋಟಕ್
ಉದಯ್ ಕೋಟಕ್

Updated on: Sep 03, 2023 | 2:16 PM

ನವದೆಹಲಿ, ಸೆಪ್ಟೆಂಬರ್ 3: ಕೋಟಕ್ ಮಹೀಂದ್ರ ಬ್ಯಾಂಕ್ ಅನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದು ಇದೀಗ ಸಿಇಒ ಮತ್ತು ಎಂಡಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಉದಯ್ ಕೋಟಕ್, ಹೂಡಿಕೆದಾರರಿಗೆ ಎಂಥ ಭರ್ಜರಿ ಲಾಭ ಆಗಿದೆ ಎಂಬುದನ್ನು ತಿಳಿಸಿದ್ದಾರೆ. 38 ವರ್ಷದಲ್ಲಿ 3 ಲಕ್ಷಪಟ್ಟು ಲಾಭ ತಂದಿರುವ ಸಂಗತಿಯನ್ನು ಉದಯ್ ಕೋಟಕ್ ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ (Twitter) ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ 1985ರಲ್ಲಿ ಕೋಟಕ್​ನಲ್ಲಿ ಯಾರಾದರೂ 10,000 ರೂ ಹೂಡಿಕೆ ಮಾಡಿದ್ದರೆ ಇವತ್ತು ಅದು ಸುಮಾರು 300 ಕೋಟಿ ರೂ ಆಗಿ ಬೆಳೆದಿರುತ್ತಿತ್ತು ಎಂದು ಕೋಟಕ್ ಮಹೀಂದ್ರ ಬ್ಯಾಂಕ್​ನ ನಿರ್ಗಮಿತ ಸಿಇಒ ಟ್ವೀಟ್ ಮಾಡಿದ್ದಾರೆ.

‘ನಂಬುಗೆ ಮತ್ತು ಪಾರದರ್ಶಕತೆಯ ಮೂಲ ತತ್ವಗಳ ಆಧಾರದ ಮೇಲೆ ನಮ್ಮ ಹಣಕಾಸು ಸಂಸ್ಥೆಯನ್ನು ನಿರ್ಮಿಸಿದ್ದೇವೆ. ನಮ್ಮ ಸಹಭಾಗಿಗಳಿಗೆ (Stakeholders) ನಾವು ಮೌಲ್ಯ ಒದಗಿಸಿದ್ದೇವೆ. ಒಂದು ಲಕ್ಷ ನೇರ ಉದ್ಯೋಗ ಕೊಟ್ಟಿದ್ದೇವೆ. 1985ರಲ್ಲಿ ತಮ್ಮೊಂದಿಗೆ ಯಾರಾದರೂ 10,000 ರೂ ಹೂಡಿಕೆ ಮಾಡಿದ್ದರೆ, ಆ ಹಣ ಇವತ್ತು ಸುಮಾರು 300 ಕೋಟಿ ರೂ ಆಗಿರುತ್ತಿತ್ತು,’ ಎಂದು ಉದಯ್ ಕೋಟಕ್ ಹೇಳಿದ್ದಾರೆ.


ಇದನ್ನೂ ಓದಿ: ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ

ಗೋಲ್ಡ್​ಮನ್ ಸ್ಯಾಕ್ಸ್​ನಂತಹ ಕಂಪನಿಯ ಕನಸಿನಲ್ಲಿ ಶುರುವಾಗಿದ್ದು ಕೋಟಕ್

ಕೋಟಕ್ ಮಹೀಂದ್ರ ಬ್ಯಾಂಕ್​ನ ಅರಂಭಿಕ ಹೆಜ್ಜೆ ಬಗ್ಗೆ ಉದಯ್ ಕೋಟಕ್ ಮಾತನಾಡಿದ್ದಾರೆ. ವಿಶ್ವ ಬ್ಯಾಂಕಿಂಗ್ ದೈತ್ಯರಾದ ಜೆಪಿ ಮಾರ್ಗನ್ ಮತ್ತು ಗೋಲ್ಡ್​ಮನ್ ಸ್ಯಾಕ್ಸ್​ನಂತಹ ರೀತಿಯ ಸಂಸ್ಥೆಯನ್ನು ಕಟ್ಟುವ ಕನಸಿನೊಂದಿಗೆ ಕೋಟಕ್ ಬ್ಯಾಂಕನ್ನು ಸ್ಥಾಪಿಸಲಾಯಿತು. ಮುಂಬೈನ ಫೋರ್ಟ್ ಬಳಿ 300 ಚದರಡಿ ವಿಸ್ತೀರ್ಣದ ಕಚೇರಿಯೊಂದಿಗೆ ಬ್ಯಾಂಕ್ ಆರಂಭವಾಯಿತು. ಆಗ ಇದ್ದದ್ದು ಮೂವರು ಉದ್ಯೋಗಿಗಳು ಮಾತ್ರ. ಇವತ್ತು ಉದ್ಯೋಗಿಗಳ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚು ಇದೆ ಎಂದು ಹೇಳುವ ಉದಯ್ ಕೋಟಕ್, ‘ಮುಂಬರುವ ದಿನಗಳಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಇನ್ನೂ ಹೆಚ್ಚು ಮುಖ್ಯ ಪಾತ್ರ ವಹಿಸುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉದಯ್ ಕೋಟಕ್ ಅವರ ನಿರ್ಗಮನದೊಂದಿಗೆ ಬ್ಯಾಂಕ್​ನ ಎಂಡಿ ಮತ್ತು ಸಿಇಒ ಆಗಿ ದೀಪಕ್ ಗುಪ್ತಾ ಹಂಗಾಮಿಯಾಗಿ ಡಿಸೆಂಬರ್ 31ರವರೆಗೆ ಜವಾಬ್ದಾರಿ ನಿಭಾಯಿಸಲಿದ್ದಾರೆ. ದೀಪಕ್ ಗುಪ್ತಾ ಕೋಟಕ್ ಮಹೀಂದ್ರ ಬ್ಯಾಂಕ್​ನ ಜಂಟಿ ಎಂಡಿಯಾಗಿದ್ದರು. ಈಗ ಉದಯ್ ಕೋಟಕ್ ಅವರು ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಬ್ಯಾಂಕ್​ನಲ್ಲಿ ಸ್ಥಾನ ಹೊಂದಿರಲಿದ್ದಾರೆ.

ಇದನ್ನೂ ಓದಿ: ನಷ್ಟದ ಹೊರೆಯಲ್ಲಿದ್ದ ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಖರೀದಿಸಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

ಕೋಟಕ್ ಮಹೀಂದ್ರ ಬ್ಯಾಂಕ್ ಷೇರು ಎಷ್ಟು ಬೆಳೆದಿದೆ?

2001ರಲ್ಲಿ 2.40 ರೂ ಇದ್ದ ಕೋಟಕ್ ಬ್ಯಾಂಕ್​ನ ಷೇರುಬೆಲೆ ಇದೀಗ 1,772.50 ರೂ ಆಗಿದೆ. ಕಳೆದ ವರ್ಷ 2,171 ರೂವರೆಗೂ ಷೇರುಬೆಲೆ ಏರಿತ್ತು. ಕೋಟಕ್ ಮಹೀಂದ್ರ ಬ್ಯಾಂಕ್​ನ ಷೇರುಬೆಲೆ ಗಣನೀಯವಾಗಿ ಏರಲು ಆರಂಭಿಸಿದ್ದು 2009ರ ಬಳಿಕ. 2009 ಅದರ ಬೆಲೆ 56 ರೂ ಇತ್ತು. ಆಗ ಯಾರಾದರೂ ಈ ಷೇರಿನ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಆ ಹೂಡಿಕೆ ಮೊತ್ತ 31 ಲಕ್ಷ ರುಪಾಯಿಗೂ ಅಧಿಕವಾಗಿರುತ್ತಿತ್ತು. ಅಂದರೆ 13 ವರ್ಷದಲ್ಲಿ ಹೂಡಿಕೆ 31 ಪಟ್ಟು ಹೆಚ್ಚಾಗಿರುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:15 pm, Sun, 3 September 23