ನವದೆಹಲಿ: ಬ್ರಿಟನ್ನ ನೂತನ ಪ್ರಧಾನಮಂತ್ರಿಯಾಗಿ ರಿಷಿ ಸುನಕ್ (Rishi Sunak) ಆಯ್ಕೆಯಾಗಿದ್ದಾರೆ. ಈ ಹಿಂದೆ ಪ್ರಧಾನಿ ಸ್ಥಾನದ ರೇಸ್ನಲ್ಲಿ ಅವರಿದ್ದಾಗಲೂ ಅವರಿಗಿಂತಲೂ ಹೆಚ್ಚು ಚರ್ಚೆಯಾಗಿದ್ದು ಅವರ ಸಿರಿವಂತ ಪತ್ನಿ ಅಕ್ಷತಾ ಮೂರ್ತಿ (Akshata Murty), ಅತ್ತೆ-ಮಾವ ಸುಧಾ ಮೂರ್ತಿ (Sudha Murthy) ಹಾಗೂ ನಾರಾಯಣ ಮೂರ್ತಿ (NR Narayana Murthy) ಅವರ ಆಸ್ತಿ, ಸಂಪತ್ತಿನ ಮತ್ತು ತೆರಿಗೆ ಪಾವತಿ ಬಗ್ಗೆ. ಜನಸಾಮಾನ್ಯರು ಜೀವನಕ್ಕಾಗಿ ಪರದಾಡುತ್ತಿದ್ದರೆ ಬ್ರಿಟನ್ ಪ್ರಧಾನಿಯಾಗುವವರ ಪತ್ನಿ ಹಾಗೂ ಅತ್ತೆ-ಮಾವ ಕೋಟ್ಯಂತರ ಆಸ್ತಿ ಗಳಿಸಿದ್ದಾರೆ. ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು.
ತೆರಿಗೆ ವಿನಾಯಿತಿ ಪಡೆಯಲು ಅಕ್ಷತಾ ನಾನ್ ಡೊಮಿಸೈಲ್ ಸ್ಥಾನಮಾನ (ಈ ಸ್ಥಾನಮಾನ ಹೊಂದಿರುವವರು ವಿದೇಶಗಳಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಪಾವತಿಸುವಂತಿಲ್ಲ ಎನ್ನುತ್ತದೆ ಬ್ರಿಟನ್ ಕಾಯ್ದೆ) ಉಳಿಸಿಕೊಂಡಿದ್ದಾರೆ ಎಂದು ಬ್ರಿಟನ್ ಪ್ರತಿಪಕ್ಷಗಳ ನಾಯಕರು ಮಾಡಿದ್ದ ಟೀಕೆಗಳಿಗೂ ಸುನಕ್ ಸ್ಪಷ್ಟನೆ ನೀಡಿದ್ದರು. ಅಕ್ಷತಾ ಅಂತಿಮವಾಗಿ ತಂದೆ ತಾಯಿಗೋಸ್ಕರ ಭಾರತಕ್ಕೆ ವಾಪಸಾಗುವ ಚಿಂತನೆ ಹೊಂದಿದ್ದಾರೆ. ಆದರೂ ಇಂಗ್ಲೆಂಡ್‌ನಲ್ಲಿ ಸಂಪಾದಿಸುವ ಪ್ರತಿ ಹಣಕ್ಕೂ ತೆರಿಗೆ ಪಾವತಿಸಿದ್ದಾರೆ. ಭಾರತದಲ್ಲಿ ಗಳಿಸುವ ಆದಾಯಕ್ಕೂ ಅವರು ಪೂರ್ಣ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಹೇಳಿದ್ದರು.
ನಾರಾಯಣ ಮೂರ್ತಿ ಸಾಧನೆ, ಸಂಪತ್ತು
1981ರಲ್ಲಿ ಟೆಕ್ ದೈತ್ಯ ಇನ್ಫೋಸಿಸ್ ಅನ್ನು ಸ್ಥಾಪಿಸಿದವರು ರಿಷಿ ಸುನಕ್ ಮಾವ ಎನ್.ಆರ್. ನಾರಾಯಣ ಮೂರ್ತಿ. ಇವರು ತಮ್ಮ ಕಂಪನಿ ಮೂಲಕ ಸುಮಾರು 75 ಶತಕೋಟಿ ಡಾಲರ್ ಮೌಲ್ಯದ ಹೊರಗುತ್ತಿಗೆ ನೀಡುವ ಮೂಲಕ ಭಾರತವನ್ನು ವಿಶ್ವದಲ್ಲೇ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದವರು.
2012ರ ಫಾರ್ಚೂನ್ ನಿಯತಕಾಲಿಕೆಯಲ್ಲಿ ಪ್ರಕಟವಾದ 12 ಮಂದಿ ಮಹಾನ್ ಉದ್ಯಮಿಗಳ ಪಟ್ಟಿಯಲ್ಲಿ ಹೆಸರು ಪಡೆದ ಇಬ್ಬರು ಅಮೆರಿಕೇತರ ವ್ಯಕ್ತಿಗಳಲ್ಲಿ ನಾರಾಯಣ ಮೂರ್ತಿ ಸಹ ಒಬ್ಬರು.
ಇದನ್ನೂ ಓದಿ: ಒಗ್ಗೂಡಿ, ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿ: ಬ್ರಿಟನ್ ಪ್ರಧಾನಿಯಾದ ನಂತರ ಪಕ್ಷದ ನಾಯಕರಿಗೆ ರಿಷಿ ಸುನಕ್ ಮೊದಲ ಸಂದೇಶ
ರಿಷಿ ಸುನಕ್ ಅವರ ಅತ್ತೆ ಸುಧಾಮೂರ್ತಿ ‘ಟಾಟಾ ಮೋಟಾರ್ಸ್’ನಲ್ಲಿ ಮೊದಲ ಮಹಿಳಾ ಎಂಜಿನಿಯರ್ ಆಗಿ ನೇಮಕವಾದವರು. ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂಬ ಷರತ್ತಿನ ಬಗ್ಗೆ ಕಂಪನಿಯ ಚೇರ್ಮನ್ಗೇ ಪೋಸ್ಟ್‌ಕಾರ್ಡ್ ಮೂಲಕ ದೂರು ನೀಡಿ ಪ್ರಸಿದ್ಧರಾದವರು.
ಸುಧಾಮೂರ್ತಿ ಅವರು ಸಮಾಜ ಸೇವೆಯಲ್ಲಿಯೂ ಗುರುತಿಸಿಕೊಂಡವರು. ಸುಮಾರು 60,000 ಗ್ರಂಥಾಲಯಗಳನ್ನು ಹಾಗೂ 16,000 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅಪಾರ ಸಂಪತ್ತು ಹೊಂದಿರುವ ಹೊರತಾಗಿಯೂ ಸರಳ ಜೀವನ ಮತ್ತು ವಿನಮ್ರತೆಯಿಂದಲೇ ಖ್ಯಾತಿ ಪಡೆದಿದ್ದಾರೆ.
ಸುಧಾಮೂರ್ತಿ ಅವರು ಮಕ್ಕಳಾದ ಅಕ್ಷತಾ ಮತ್ತು ರೋಹನ್‌ಗೆ ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಮಾಡಿದ್ದಲ್ಲದೆ, ಅದರಂತೆಯೇ ಬೆಳೆಸಿದ್ದರು. ಅವರ ಮನೆಯಲ್ಲಿ ಟಿವಿಯನ್ನೇ ಇಟ್ಟುಕೊಂಡಿರಲಿಲ್ಲ. ಮಕ್ಕಳು ತಮ್ಮ ಸಹಪಾಠಿಗಳಂತೆ ಆಟೋ ರಿಕ್ಷಾದಲ್ಲಿ ಶಾಲೆಗೆ ಹೋಗಬೇಕೆಂದು ಸೂಚಿಸಿದ್ದರು.
2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಷತಾ-ಸುನಕ್
ಅಕ್ಷತಾ ಮೂರ್ತಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದಾಗ ಸುನಕ್ ಅವರನ್ನು ಭೇಟಿಯಾಗಿದ್ದರು. ಸುನಕ್ ಆಗ ಆಕ್ಸಫರ್ಡ್ನಿಂದ ಪದವಿ ಪಡೆದಿದ್ದರು. ಬಳಿಕ ಇಬ್ಬರೂ ಪ್ರೀತಿಸಿ 2009ರಲ್ಲಿ ಮದುವೆಯಾದರು. ಅಕ್ಷತಾ-ಸುನಕ್ ದಂಪತಿಗೆ ಇಬ್ಬರು ಮಗಳಂದಿರಿದ್ದಾರೆ.
ಅಕ್ಷತಾ ಮೂರ್ತಿ ಸಂಪತ್ತು…
ಅಕ್ಷತಾ ಮೂರ್ತಿ ಇನ್ಫೋಸಿಸ್ ಕಂಪನಿಯ ಸುಮಾರು ಶೇ 0.9ರಷ್ಟು ಷೇರುಗಳನ್ನು ಹೊಂದಿದ್ದಾರೆ. ಸುಮಾರು 8 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ (730 ಮಿಲಿಯನ್ ಪೌಂಡ್) ಮೌಲ್ಯದ ಸಂಪತ್ತು ಹೊಂದಿದ್ದಾರೆ. ಇವರ ವೈಯಕ್ತಿಕ ಸಂಪತ್ತಿನ ಮೌಲ್ಯವೇ 460 ದಶಲಕ್ಷ ರೂಪಾಯಿ ಎಂದು 2021ರಲ್ಲಿ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ನಾನ್ ಡೊಮಿಸೈಲ್ ಸ್ಥಾನಮಾನ ಹೊಂದಿರುವ ಅವರು ಬ್ರಿಟನ್ನಲ್ಲಿ ತೆರಿಗೆ ಪಾವತಿಸುತ್ತಿಲ್ಲ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಆದರೆ, ಇದಕ್ಕೆ ಸುನಕ್ ಸ್ಪಷ್ಟನೆ ನೀಡಿದ್ದರು.
ಮೂರ್ತಿ ಹಾಗೂ ಸುನಕ್ ಲಂಡನ್ನಲ್ಲಿ ಲಕ್ಷಾಂತರ ಪೌಂಡ್ ಮೌಲ್ಯದ ಐದು ಬೆಡ್ರೂಂ ಮನೆ ಹಾಗೂ ಕನಿಷ್ಠ ನಾಲ್ಕು ಆಸ್ತಿಗಳನ್ನು ಹೊಂದಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಫ್ಲ್ಯಾಟ್ ಅನ್ನೂ ಹೊಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ