ಐಟಿಆರ್ ಸಲ್ಲಿಕೆ ವೇಳೆ ಈ ಆದಾಯ ಮರೆಮಾಚಿದರೆ 10 ಲಕ್ಷ ರೂ ದಂಡ: ಆದಾಯ ತೆರಿಗೆ ಇಲಾಖೆ ಸೂಚನೆ

Income Tax dept campaign: ಐಟಿಆರ್ ಫಾರ್ಮ್​ನಲ್ಲಿ ವಿದೇಶೀ ಆಸ್ತಿ ಮತ್ತು ಆದಾಯ ವಿವರವನ್ನು ದಾಖಲಿಸುವುದನ್ನು ನೀವು ಮರೆತಿದ್ದರೆ ಈಗಲೇ ಪರಿಷ್ಕೃತ ರಿಟರ್ನ್ ಸಲ್ಲಿಸಿರಿ. ವಿದೇಶೀ ಆಸ್ತಿ ಮಾಹಿತಿಯನ್ನು ಮರೆಮಾಚಿದರೆ 10 ಲಕ್ಷ ರೂ ದಂಡ ಕಟ್ಟಬೇಕಾದೀತು. ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡಿದೆ. ಪರಿಷ್ಕೃತ ರಿಟರ್ನ್ ಸಲ್ಲಿಸಲು ಡಿಸೆಂಬರ್ 31ರವರೆಗೂ ಕಾಲಾವಕಾಶ ಇದೆ.

ಐಟಿಆರ್ ಸಲ್ಲಿಕೆ ವೇಳೆ ಈ ಆದಾಯ ಮರೆಮಾಚಿದರೆ 10 ಲಕ್ಷ ರೂ ದಂಡ: ಆದಾಯ ತೆರಿಗೆ ಇಲಾಖೆ ಸೂಚನೆ
ಇನ್ಕಮ್ ಟ್ಯಾಕ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 17, 2024 | 12:14 PM

ನವದೆಹಲಿ, ನವೆಂಬರ್ 17: ಆದಾಯ ತೆರಿಗೆ ಪಾವತಿದಾರರು ತಮ್ಮ ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ವಿದೇಶಗಳಲ್ಲಿರುವ ತಮ್ಮ ಆಸ್ತಿ ಮತ್ತು ಆದಾಯದ ಮಾಹಿತಿಯನ್ನು ಬಹಿರಂಗಪಡಿಸದೇ ಇದ್ದರೆ ಭಾರೀ ಮೊತ್ತದ ದಂಡ ಕಟ್ಟಬೇಕಾಗುತ್ತದೆ. 2015ರ ಅಪ್ರಕಟಿತ ವಿದೇಶೀ ಆದಾಯ ಮತ್ತು ಆಸ್ತಿಗಳ ಕಪ್ಪು ಹಣ ಕಾಯ್ದೆ ಅಡಿಯಲ್ಲಿ 10 ಲಕ್ಷ ರೂ ದಂಡ ವಿಧಿಸಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಇಂದು ಭಾನುವಾರ ಎಚ್ಚರಿಕೆ ನೀಡಿದೆ.

ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ತೆರಿಗೆಪಾವತಿದಾರರಲ್ಲಿ ಜಾಗೃತಿ ಮೂಡಿಸುವ ಹೊಸ ಅಭಿಯಾನವನ್ನು ನಿನ್ನೆ ಶನಿವಾರ ಆರಂಭಿಸಿದೆ. ಇದರ ಭಾಗವಾಗಿ ವಿದೇಶೀ ಆಸ್ತಿ ಮತ್ತು ಆದಾಯದ ಮಾಹಿತಿಯನ್ನು ತೆರಿಗೆ ಇಲಾಖೆಯ ಗಮನಕ್ಕೆ ತರುವುದು ಎಷ್ಟು ಮುಖ್ಯ ಎಂಬ ಸಂದೇಶವನ್ನು ಅದು ರವಾನಿಸಿದೆ.

ಇದನ್ನೂ ಓದಿ: ಮ್ಯಾನೇಜ್ಮೆಂಟ್ ಸ್ಕೂಲ್​ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ

ಫಾರೀನ್ ಅಸೆಟ್ ಎಂದರೇನು?

ವಿದೇಶದಲ್ಲಿ ನಿಮಗೆ ಆಸ್ತಿ ಇದೆ ಎಂದರೆ ಅದು ಚಿರಾಸ್ತಿಯೋ, ಚರಾಸ್ತಿಯೋ ಏನು ಬೇಕಾದರೂ ಆಗಬಹುದು. ವಿದೇಶದ ಬ್ಯಾಂಕ್​ವೊಂದರಲ್ಲಿ ಖಾತೆ ಹೊಂದಿದ್ದರೆ ಅದೂ ವಿದೇಶೀ ಆಸ್ತಿ ಎನಿಸುತ್ತದೆ. ವಿದೇಶದಲ್ಲಿ ಮನೆ ಅಥವಾ ಲ್ಯಾಂಡ್ ಪ್ರಾಪರ್ಟಿ ಹೊಂದಿದ್ದರೆ, ಷೇರು, ಇನ್ಷೂರೆನ್ಸ್ ಇತ್ಯಾದಿ ಇದ್ದರೆ ಅದು ವಿದೇಶದಲ್ಲಿನ ಆಸ್ತಿ ಎಂದು ಪರಿಗಣಿತವಾಗುತ್ತದೆ.

ತೆರಿಗೆ ಪಾವತಿದಾರರು ತಮ್ಮ ಐಟಿಆರ್ ಸಲ್ಲಿಕೆ ವೇಳೆ ಈ ವಿದೇಶೀ ಆಸ್ತಿ ಅಥವಾ ವಿದೇಶೀ ಮೂಲದ ಆದಾಯವನ್ನು ದಾಖಲಿಸುವುದು ಕಡ್ಡಾಯವಾಗಿದೆ. ಗಮನಿಸಬೇಕಾದ ಸಂಗತಿ ಎಂದರೆ, ತೆರಿಗೆ ಪಾವತಿದಾರರ ಒಟ್ಟಾರೆ ಆದಾಯವು ಟ್ಯಾಕ್ಸಬಲ್ ಲಿಮಿಟ್​ಗಿಂತಲೂ ಕಡಿಮೆ ಇದ್ದರೂ ವಿದೇಶೀ ಆಸ್ತಿಗಳ ವಿವರವನ್ನು ದಾಖಲಿಸುವುದು ಕಡ್ಡಾಯ ಎನ್ನಲಾಗಿದೆ.

ಇದನ್ನೂ ಓದಿ: ಡಿಸೆಂಬರ್ 21ಕ್ಕೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ 55ನೇ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯುವ ಸಾಧ್ಯತೆ

ಈ ವಿದೇಶೀ ಆಸ್ತಿಗಳ ವಿಚಾರದಲ್ಲಿ ತೆರಿಗೆ ಪಾವತಿದಾರರಲ್ಲಿ ಜಾಗೃತಿ ಮೂಡಿಸಲು ಐಟಿ ಇಲಾಖೆ ಅಭಿಯಾನ ನಡೆಸಿದೆ. ಐಟಿಆರ್ ಸಲ್ಲಿಕೆ ಮಾಡಿದವರಿಗೆ ಎಸ್ಸೆಮ್ಮೆಸ್ ಮತ್ತು ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಒಂದು ವೇಳೆ 2024-25ರ ಮೌಲ್ಯಮಾಪನ ವರ್ಷಕ್ಕೆ ಈಗಾಗಲೇ ಐಟಿಆರ್ ಸಲ್ಲಿಸಿದ್ದು, ಅದರಲ್ಲಿ ವಿದೇಶೀ ಆಸ್ತಿ ವಿವರವನ್ನು ನೀಡದೇ ಇದ್ದವರಿಗೆ ಇನ್ನೂ ಕಾಲಾವಕಾಶ ಇದೆ. ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರವರೆಗೂ ಅವಕಾಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ