ನವದೆಹಲಿ, ಸೆಪ್ಟೆಂಬರ್ 2: ಕೃಷಿ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ 13,966 ಕೋಟಿ ರೂ ಮೊತ್ತದ ಏಳು ಪ್ರಮುಖ ಕೃಷಿ ಯೋಜನೆಗಳಿಗೆ ಕೇಂದ್ರ ಸಂಪುಟ ಇಂದು ಸೋಮವಾರ ಅನುಮೋದನೆ ನೀಡಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕೇಂದ್ರ ಸಚಿವ ಡಾ. ಎ ವೈಷ್ಣವ್ ಈ ವಿಷಯವನ್ನು ತಿಳಿಸಿದರು. ಇದರಲ್ಲಿ ಡಿಜಿಟಲ್ ಅಗ್ರಿಕಲ್ಚರ್ ಮಿಷನ್, ಸುಸ್ಥಿರ ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರ ಇತ್ಯಾದಿ ಯೋಜನೆಗಳೂ ಒಳಗೊಂಡಿವೆ.
ಇದರಲ್ಲಿ ಕೃಷಿ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವುದು; ಬೆಳೆಯ ಗುಣಮಟ್ಟ ಹೆಚ್ಚಿಸಲು ತಳಿ ಸಂಪನ್ಮೂಲದ ಸದ್ಬಳಕೆ ಮಾಡುವುದು; ಬೇಳೆ ಕಾಳು, ಎಣ್ಣಬೀಜ ಮತ್ತು ವಾಣಿಜ್ಯ ಬೆಳೆಗಳ ತಳಿ ಅಭಿವೃದ್ಧಿ; ಕೀಟಗಳು, ಮೈಕ್ರೋಬ್ಗಳು, ಪರಾಗ ಕರ್ತರು ಮುಂತಾದವುಗಳ ಮೇಲೆ ಸಂಶೋಧನೆ ನಡೆಸಲಾಗುವುದು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಡಿಯಲ್ಲಿ ಕೃಷಿ ಶಿಕ್ಷಣ, ಕೃಷಿ ನಿರ್ವಹಣೆ, ಸಾಮಾಜಿಕ ವಿಜ್ಞಾನಗಳನ್ನು ಬಲಪಡಿಸಲು ಈ ಯೋಜನೆ ಹಾಕಲಾಗಿದೆ. ಹೊಸ ಶಿಕ್ಷಣ ನೀತಿಗೆ ಅನುಸಾರವಾಗಿ ಕೃಷಿ ಶಿಕ್ಷಣವನ್ನು ಮೇಲ್ದರ್ಜೆಗೆ ಏರಿಸುವ ಗುರಿ ಇದೆ. ಇದಕ್ಕಾಗಿ ಎಐ, ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್, ರಿಮೋಟ್ ಸೆನ್ಸಿಂಗ್ ಇತ್ಯಾದಿ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಇಥನಾಲ್ ಮಿಶ್ರಿತ ಪೆಟ್ರೋಲ್ನಿಂದಾಗಿ ದೇಶದ ಖಜಾನೆಗೆ ಹತ್ತು ವರ್ಷದಿಂದ ಲಕ್ಷ ಕೋಟಿ ರೂ ಹಣ ಉಳಿತಾಯ?
ಡಿಜಿಟಲ್ ಕೃಷಿ ಯೋಜನೆಯಲ್ಲಿ ಎಐ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಕೃಷಿಗಾರಿಕೆಗೆ ಹೇಗೆ ಬಳಸಬಹುದು, ಆ ಮೂಲಕ ಕೃಷಿ ಉತ್ಪನ್ನಶೀಲತೆ ಹೇಗೆ ಹೆಚ್ಚಿಸುವುದು ಇತ್ಯಾದಿಗೆ ಇದು ನೆರವಾಗಲಿದೆ. ಕೃಷಿಕರ ನೊಂದಣಿ, ಗ್ರಾಮ ಜಮೀನು ನಕ್ಷೆಗಳ ನೊಂದಣಿ, ಬಿತ್ತನೆಗೊಂಡ ಬೆಳೆಗಳ ನೊಂದಣಿ, ಬರ ಪರಿಸ್ಥಿತಿ ಅವಲೋಕನೆ, ಪ್ರವಾಹ ಪರಿಸ್ಥಿತಿ ಅವಲೋಕನೆ, ಹವಾಮಾನ ವರದಿ, ಅಂತರ್ಜಲ ಸ್ಥಿತಿ, ಬೆಳೆ ಇಳುವರಿ ಇತ್ಯಾದಿ ಅನೇಕ ಸಂಗತಿಗಳಿಗೆ ಹೊಸ ತಂತ್ರಜ್ಞಾನವು ನೆರವಾಗಲಿದೆ.
ಜಾನುವಾರುಗಳ ಆರೋಗ್ಯ ಪಾಲನೆ, ಹೈನುಗಾರಿಕೆ ಉತ್ಪಾದನೆ ಹೆಚ್ಚಿಸುವುದು, ಜಾನುವಾರಿನ ತಳಿ ಅಭಿವೃದ್ಧಿ, ಜಾನುವಾರುಗಳಿಗೆ ಅವಶ್ಯಕ ಪೌಷ್ಟಿಕಾಂಶ ಇತ್ಯಾದಿಯನ್ನು ದೃಢಪಡಿಸಲು ಈ ಯೋಜನೆ ಇದೆ.
ತರಕಾರಿ, ಹೂವು, ಹಣಬೆ, ಔಷಧ ಸಸ್ಯ, ಸಾಂಬಾರು ಬೆಳೆ ಇತ್ಯಾದಿ ಬೆಳೆಗಳ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ