AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರುವ ಕಾರಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ; ಇನ್ನೆರಡು ವರ್ಷದೊಳಗೆ ಕಾಣಲಿದೆ ಮೊದಲ ಏರ್ ಟ್ಯಾಕ್ಸಿ

Air taxis in India by Archer Aviation: ಇನ್ನೆರಡು ವರ್ಷದಲ್ಲಿ ಭಾರತದಲ್ಲಿ ಫ್ಲೈಯಿಂಗ್ ಕಾರು ಅಡಿ ಇಡುವ ಸಾಧ್ಯತೆ ಇದೆ. 2026ಕ್ಕೆ ಏರ್ ಟ್ಯಾಕ್ಸಿ ಪರಿಚಯಿಸಲು ಆರ್ಚರ್ ಏವಿಯೇಶನ್ ಸಿದ್ಧವಾಗಿದೆ. ಭಾರತ, ಅಮೆರಿಕ ಮತ್ತು ಯುಎಇ ದೇಶಗಳಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭಗೊಳ್ಳಬಹುದು. ಇಂಡಿಗೋ ಏರ್​ಲೈನ್ಸ್ ಮಾಲೀಕ ಇಂಟರ್​ಗ್ಲೋಬ್ ಎಂಟರ್​ಪ್ರೈಸಸ್ ಜೊತೆ ಆರ್ಚರ್ ಏವಿಯೇಶನ್ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿದೆ.

ಹಾರುವ ಕಾರಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ; ಇನ್ನೆರಡು ವರ್ಷದೊಳಗೆ ಕಾಣಲಿದೆ ಮೊದಲ ಏರ್ ಟ್ಯಾಕ್ಸಿ
ಏರ್ ಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2024 | 2:37 PM

Share

ನವದೆಹಲಿ, ಸೆಪ್ಟಂಬರ್ 2: ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಹೋಗಿರುವ ಭಾರತೀಯರಿಗೆ, ಅದರಲ್ಲೂ ಬೆಂಗಳೂರಿಗರಿಗೆ ಮೆಟ್ರೋ ರೈಲು ಆಪದ್ಬಾಂಧವದಂತೆ ಇದೆ. ಈಗ ಅದರ ಜೊತೆಗೆ ಏರ್ ಟ್ಯಾಕ್ಸಿ ಕೂಡ ಬರುತ್ತಿದೆ. 2026ರಲ್ಲಿ ಹಾರುವ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದೆ. ಆರ್ಚರ್ ಏವಿಯೇಶನ್ ಸಂಸ್ಥೆ ಭಾರತ, ಅಮೆರಿಕ ಮತ್ತು ಯುಎಇ ದೇಶಗಳಲ್ಲಿ ಏರ್ ಟ್ಯಾಕ್ಸಿ ಅಥವಾ ಹಾರುವ ಕಾರನ್ನು ಪರಿಚಯಿಸಲಿದೆ. ಈ ಸಂಬಂಧ ಈ ದೇಶಗಳಲ್ಲಿ ಇರುವ ಕಾನೂನು ತೊಡಕುಗಳನ್ನು ಅವಲೋಕಿಸಲಾಗುತ್ತಿದ್ದು, ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ 2026ರಲ್ಲಿ ಬೆಂಗಳೂರು ಮೊದಲಾದ ಕೆಲ ನಗರಗಳಲ್ಲಿ ಏರ್ ಟ್ಯಾಕ್ಸಿಗಳನ್ನು ಕಾಣಬಹುದು. ಹಾರುವ ಕಾರುಗಳನ್ನು ಆರ್ಚರ್ ಏವಿಯೇಶನ್ ಸಂಸ್ಥೆ ಮಾತ್ರವೇ ಅಲ್ಲ, ಇನ್ನೂ ಕೆಲ ಕಂಪನಿಗಳು ತಯಾರಿಸುತ್ತಿವೆ.

ಹೆಲಿಕಾಪ್ಟರ್​ನಂತಿರುವ ಏರ್ ಟ್ಯಾಕ್ಸಿಗಳು

ಏರ್ ಟ್ಯಾಕ್ಸಿಗಳು ಹೆಲಿಕಾಪ್ಟರ್​ನಂತೆ ಇರಲಿವೆ. ಒಂದು ದೊಡ್ಡ ಡ್ರೋನ್​ಗೂ ಹೋಲಿಕೆ ಮಾಡಬಹುದು. ಹೆಲಿಕಾಪ್ಟರ್​ಗೆ ಬಹಳಷ್ಟು ಇಂಧನ ಬೇಕಾಗುತ್ತದೆ. ಶಬ್ದವೂ ಕಿರಿಕಿರಿಯಾಗುವಷ್ಟು ವಿಪರೀತ ಇರುತ್ತದೆ. ಏರ್ ಟ್ಯಾಕ್ಸಿ ಪೂರ್ಣ ಎಲೆಕ್ಟ್ರಿಕ್ ಆಗಿರುತ್ತದೆ. ಇದು ಹೊರಡಿಸುವ ಶಬ್ದ ಕೂಡ ಬಹಳ ಕಡಿಮೆ ಇರಲಿದೆ. ಚಾಲಕ ಅಥವಾ ಪೈಲಟ್ ಸೇರಿ ಐದು ಜನರು ಏರ್ ಟ್ಯಾಕ್ಸಿಯಲ್ಲಿ ಕೂರಬಹುದು. ಬ್ಯಾಟರಿಯನ್ನು ಒಮ್ಮೆ ರೀಚಾರ್ಜ್ ಮಾಡಿದರೆ 160 ಕಿಮೀ ದೂರದವರೆಗೂ ಹೋಗಬಹುದು.

ಇದನ್ನೂ ಓದಿ: ಕಸದಿಂದ ರಸ, ನಿತಿನ್ ಗಡ್ಕರಿ ತಂತ್ರ; 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ?

ಭಾರತವೇ ಅತಿದೊಡ್ಡ ಮಾರುಕಟ್ಟೆ

ಏರ್ ಟ್ಯಾಕ್ಸಿ ತಯಾರಿಸುತ್ತಿರುವ ಆರ್ಚರ್ ಏವಿಯೇಶನ್ ಸಂಸ್ಥೆ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ್ದು. ಇದರ ಚೀಫ್ ಕಮರ್ಷಿಯಲ್ ಆಫೀಸರ್ ನಿಖಿಲ್ ಗೋಯಲ್ ಪ್ರಕಾರ ಏರ್ ಟ್ಯಾಕ್ಸಿಗಳಿಗೆ ಭಾರತವೇ ಅತಿದೊಡ್ಡ ಮಾರುಕಟ್ಟೆ ಆಗಲಿದೆಯಂತೆ. ಇದು ನಗರ ಪ್ರಯಾಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಬಲ್ಲುದು ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಅಂದಹಾಗೆ, ಆರ್ಚರ್ ಏವಿಯೇಶನ್ ಸಂಸ್ಥೆ ಇಂಟರ್​ಗ್ಲೋಬ್ ಎಂಟರ್​ಪ್ರೈಸಸ್ ಸಂಸ್ಥೆ ಜೊತೆ ಸಹಭಾಗಿತ್ವ ಹೊಂದಿದೆ. ಈ ಇಂಟರ್​ಗ್ಲೋಬ್ ಎಂಟರ್​ಪ್ರೈಸಸ್ ಸಂಸ್ಥೆ ಭಾರತದ ಅತಿದೊಡ್ಡ ಏರ್​ಲೈನ್ಸ್ ಆದ ಇಂಡಿಗೋದ ಮಾಲೀಕ ಸಂಸ್ಥೆ. ಭಾರತದಲ್ಲಿ ವಿಮಾನ ಪ್ರಯಾಣವನ್ನು ಸಾಮಾನ್ಯ ಜನರ ಕೈಗೆಟುವಂತೆ ಮಾಡಿದ್ದು ಇಂಡಿಗೋ. ಕಡಿಮೆ ಬೆಲೆಗೆ ಹೆಚ್ಚು ಜನರಿಗೆ ಸೇವೆ ಸಲ್ಲಿಸಿ ಲಾಭ ಮಾಡುವುದು ಈ ಕಂಪನಿಯ ತಂತ್ರ. ಅಂಥದ್ದೇ ಪ್ರಯೋಗವನ್ನು ಏರ್ ಟ್ಯಾಕ್ಸಿ ವಿಚಾರದಲ್ಲೂ ಮಾಡಲು ಆಲೋಚಿಸಲಾಗುತ್ತಿದೆ.

ಇದನ್ನೂ ಓದಿ: ನಿಮ್ಮ ಮಕ್ಕಳನ್ನು ನಾವೇ ನೋಡ್ಕೋತೀವಿ, ನೀವ್ ಮಾತ್ರ ಆಫೀಸ್​ಗೆ ಬಂದು ಕೆಲಸ ಮಾಡಿ: ಉದ್ಯೋಗಿಗಳಿಗೆ ಕಂಪನಿ ತಾಕೀತು

ವರದಿ ಪ್ರಕಾರ ಆರಂಭದಲ್ಲಿ ಇಂಡಿಗೋ ವಿಮಾನ ಪ್ರಯಾಣಿಕರನ್ನು ಟಾರ್ಗೆಟ್ ಮಾಡಲಾಗುತ್ತದೆ. ವಿಮಾನ ನಿಲ್ದಾಣದಿಂದ ಇಂಡಿಗೋ ಪ್ರಯಾಣಿಕರನ್ನು ನಗರದೊಳಗೆ ಏರ್ ಟ್ಯಾಕ್ಸಿ ಮೂಲಕ ಸಾಗಿಸುವ ಪ್ಲಾನ್ ಹಾಕಲಾಗಿದೆ. ಇಂಡಿಗೋ ವಿಮಾನಗಳಲ್ಲಿ ಒಂದು ತಿಂಗಳಲ್ಲಿ 90 ಲಕ್ಷ ಜನರು ಪ್ರಯಾಣಿಸುತ್ತಾರೆ. ಇವರೆಲ್ಲರೂ ಏರ್ ಟ್ಯಾಕ್ಸಿ ಸೇವೆ ಉಪಯೋಗಿಸಿದರೆ ಒಳ್ಳೆಯ ಆದಾಯ ಸಿಕ್ಕಂತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ