AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯರ ಒಟ್ಟಾರೆ ವೆಚ್ಚದಲ್ಲಿ ಆಹಾರದ ಪ್ರಮಾಣ ಇಳಿಮುಖ; ಜನರ ಹಣಕಾಸು ಪರಿಸ್ಥಿತಿ ಸುಧಾರಿಸಿತಾ?

NSSO survey data on Indian household's expenditure ratio for food: 2022-23ರ ಎನ್​ಎಸ್​ಎಸ್​ಒ ಸರ್ವೆ ಪ್ರಕಾರ ಭಾರತದ ಸರಾಸರಿ ಕುಟುಂಬವೊಂದು ಮಾಡುವ ಒಟ್ಟಾರೆ ವೆಚ್ಚದಲ್ಲಿ ಆಹಾರದ ಪಾಲು ಶೇ. 50ಕ್ಕಿಂತಲೂ ಕಡಿಮೆ ಇದೆ. ಇದು ಭಾರತೀಯರ ಆದಾಯ ಹೆಚ್ಚಳದ ಕುರುಹಾಗಿದೆ ಎಂದು ವಿಶ್ಲೇಷಿಸಲಾಗಿದೆ. ಗ್ರಾಮೀಣ ಮತ್ತು ನಗರ ಭಾಗಗಳೆರಡರಲ್ಲೂ ಹತ್ತು ವರ್ಷದಲ್ಲಿ ಆಹಾರ ವೆಚ್ಚದ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿರುವುದು ಕಂಡುಬಂದಿದೆ.

ಭಾರತೀಯರ ಒಟ್ಟಾರೆ ವೆಚ್ಚದಲ್ಲಿ ಆಹಾರದ ಪ್ರಮಾಣ ಇಳಿಮುಖ; ಜನರ ಹಣಕಾಸು ಪರಿಸ್ಥಿತಿ ಸುಧಾರಿಸಿತಾ?
ಭಾರತೀಯ ಕುಟುಂಬ (Pexel photo)
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2024 | 7:33 PM

Share

ನವದೆಹಲಿ, ಸೆಪ್ಟೆಂಬರ್ 2: ಭಾರತದಲ್ಲಿ ಜನರ ಒಟ್ಟಾರೆ ವೆಚ್ಚದಲ್ಲಿ ಆಹಾರದ ಪ್ರಮಾಣ ಕಡಿಮೆ ಆಗುತ್ತಾ ಬರುತ್ತಿದೆ. ಸರಾಸರಿ ಭಾರತೀಯನೊಬ್ಬನ ಒಟ್ಟಾರೆ ಮಾಸಿಕ ವೆಚ್ಚದಲ್ಲಿ ಆತ ಆಹಾರಕ್ಕಾಗಿ ಮಾಡುವ ವೆಚ್ಚ ಶೇ. 50ಕ್ಕಿಂತಲೂ ಕಡಿಮೆ ಆಗಿದೆ. ಕಳೆದ ಐದು ದಶಕದಲ್ಲಿ ಈ ಮಟ್ಟಕ್ಕಿಂತ ಕಡಿಮೆಗೆ ಇಳಿದಿರುವುದು ಇದೇ ಮೊದಲು. ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಆಹಾರ ವೆಚ್ಚ ಪ್ರಮಾಣದಲ್ಲಿ ಇಳಿಮುಖ ಆಗಿರುವುದು ಪ್ರಗತಿಯ ಸಂಕೇತ ಎಂದು ಭಾವಿಸಲಾಗಿದೆ. ಅಂದರೆ, ಜನರ ಹಣಕಾಸು ಪರಿಸ್ಥಿತಿ ಸುಧಾರಿಸುತ್ತಿದೆ, ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಎಂದು ಭಾವಿಸಬಹುದು.

ಎನ್​ಎಸ್​ಎಸ್​ಒ ಸಮೀಕ್ಷೆಯು ಗ್ರಾಮೀಣ ಮತ್ತು ನಗರ ಭಾಗಗಳೆರಡರಲ್ಲೂ ದತ್ತಾಂಶ ಕಲೆಹಾಕಿದೆ. ಎರಡೂ ಪ್ರದೇಶಗಳಲ್ಲಿ ಕಳೆದ 10 ವರ್ಷದಲ್ಲಿ ವೆಚ್ಚದಲ್ಲಿ ಆಹಾರದ ಪಾಲು ಕಡಿಮೆ ಆಗಿರುವುದು ವೇದ್ಯವಾಗಿದೆ. 2022-23ರ ಹಣಕಾಸು ವರ್ಷದ ದತ್ತಾಂಶವನ್ನು ಎನ್​ಎಸ್​ಎಸ್​ಒ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಭಾರತದ ಜಿಡಿಪಿಗಿಂತ ಹೆಚ್ಚಿದೆ ಷೇರುಮಾರುಕಟ್ಟೆ ಬಂಡವಾಳ; ಇದು ಆತಂಕಕಾರಿ ಸಂಗತಿಯಾ? ಸಿಇಒ ಎಚ್ಚರಿಕೆಯ ಮಾತುಗಳಿವು

ಗ್ರಾಮೀಣ ಭಾಗದಲ್ಲಿ ಗೃಹ ವೆಚ್ಚದಲ್ಲಿ ಆಹಾರದ ಪಾಲು ಎಷ್ಟು? 2011-12 ಮತ್ತು 2022-23ರ ಪರಿಸ್ಥಿತಿ:

ರಾಷ್ಟ್ರಮಟ್ಟದ ಸರಾಸರಿ ಶೇ. 55.7 ಮತ್ತು ಶೇ. 48.6

ಕರ್ನಾಟಕದಲ್ಲಿ ಇದು ಶೇ 54.2ರಿಂದ ಶೇ. 46.5ಕ್ಕೆ ಇಳಿದಿದೆ. ಚಂಡೀಗಡ ಶೇ. 41.2, ದೆಹಲಿ ಶೇ. 41.6, ಕೇರಳ ಶೇ. 42.5ರಷ್ಟು ಆಹಾರವೆಚ್ಚ ಪ್ರಮಾಣ ಇದೆ. ಇದು ಅತ್ಯಂತ ಕಡಿಮೆ ಮಟ್ಟದ ವೆಚ್ಚ. ಜಮ್ಮು ಕಾಶ್ಮೀರ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ, ಅರುಣಾಚಲಪ್ರದೇಶ, ಸಿಕ್ಕಿಂ, ತ್ರಿಪುರ ಮತ್ತು ಗುಜರಾತ್ ರಾಜ್ಯಗಳಲ್ಲಿ ಆಹಾರ ವೆಚ್ಚದ ಪ್ರಮಾಣ ಶೇ. 50ಕ್ಕಿಂತ ಹೆಚ್ಚಿದೆ. ಅಸ್ಸಾಮ್ ಮತ್ತು ಬಿಹಾರದಲ್ಲಿ ಇದು ಶೇ. 54ಕ್ಕಿಂತ ಹೆಚ್ಚಿದೆ.

ದೆಹಲಿ, ಸಿಕ್ಕಿಂ, ಅಂಡಮಾನ್ ಮೊದಲಾದ ಕೆಲ ರಾಜ್ಯಗಳನ್ನು ಹೊರತುಪಡಿಸಿದರೆ ಬೇರೆ ಪ್ರದೇಶಗಳಲ್ಲಿ ಆಹಾರ ವೆಚ್ಚದ ಪ್ರಮಾಣ ಹತ್ತು ವರ್ಷದಲ್ಲಿ ಗಣನೀಯವಾಗಿ ಇಳಿದಿರುವುದು ಗಮನಿಸಬೇಕಾದ ಸಂಗತಿ.

ನಗರ ಭಾಗಗಳಲ್ಲಿ ಹೇಗಿದೆ ಬೆಳವಣಿಗೆ?

ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರ ಭಾಗದಲ್ಲಿ ಸರಾಸರಿಯಾಗಿ ಮನೆಯೊಂದು ಆಹಾರಕ್ಕೆ ಮಾಡುವ ವೆಚ್ಚದ ಪ್ರಮಾಣ ಕಡಿಮೆ ಇದೆ. ಸರಾಸರಿ ನಗರ ಕುಟುಂಬವೊಂದು ಮಾಡುವ ಆಹಾರ ವೆಚ್ಚದ ಪ್ರಮಾಣ ಶೇ. 41.9ರಷ್ಟಿದೆ. ಹತ್ತು ವರ್ಷದ ಹಿಂದೆ ಇದು ಶೇ. 48ರಷ್ಟಿತ್ತು.

ಇದನ್ನೂ ಓದಿ: ಕಸದಿಂದ ರಸ, ನಿತಿನ್ ಗಡ್ಕರಿ ತಂತ್ರ; 50 ರೂಗೆ ತಗ್ಗಬಲ್ಲುದಾ ಪೆಟ್ರೋಲ್ ಬೆಲೆ?

ಉತ್ತರಾಖಂಡ್, ಚಂಡೀಗಡ್, ತಮಿಳುನಾಡು, ಕರ್ನಾಟಕ, ಆಂಧ್ರ, ಪುದುಚೇರಿ ಮತ್ತು ಕೇರಳ ರಾಜ್ಯಗಳಲ್ಲಿ ಆಹಾರ ವೆಚ್ಚದ ಪ್ರಮಾಣ ಶೇ. 40ಕ್ಕಿಂತಲೂ ಕಡಿಮೆ ಇವೆ. ಗಮನಾರ್ಹ ಎಂದರೆ ಹೆಚ್ಚಿನ ದಕ್ಷಿಣ ರಾಜ್ಯಗಳಲ್ಲಿನ ನಗರವಾಸಿ ಜನರ ಆಹಾರ ವೆಚ್ಚದ ಪ್ರಮಾಣ ಸರಾಸರಿಯಾಗಿ ಶೇ. 40ಕ್ಕಿಂತಲೂ ಕಡಿಮೆ ಇದೆ.

ಲಕ್ಷದ್ವೀಪ ಹೊರತುಪಡಿಸಿದರೆ ದೇಶದ ಯಾವ ನಗರಭಾಗದಲ್ಲೂ ಜನರ ಸರಾಸರಿ ಆಹಾರ ವೆಚ್ಚದ ಪ್ರಮಾಣ ಶೇ. 50 ದಾಟಿಲ್ಲ. ಬಹುತೇಕ ಎಲ್ಲೆಡೆಯೂ ನಗರ ಭಾಗದಲ್ಲಿ ಜನರ ಆರ್ಥಿಕತೆ ಬಹಳಷ್ಟು ಸುಧಾರಣೆ ಕಂಡುಬಂದಿರುವುದು ಎನ್​ಎಸ್​ಎಸ್​ಒ ದತ್ತಾಂಶದಿಂದ ಗೊತ್ತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ