YONO App: ಯಾವುದೇ ಬ್ಯಾಂಕ್ ಖಾತೆ ಇರಲಿ, ಎಸ್ಬಿಐ ಯೋನೋ ಆ್ಯಪ್ ಬಳಸಿ ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಕ್ಯಾಷ್ ಹಿಂಪಡೆಯಿರಿ
Cardless Cashwithdrawal Using SBI's YONO App: ಎಸ್ಬಿಐ ಯೋನೋ ಆ್ಯಪ್ನಲ್ಲಿ ಐಸಿಸಿಡಬ್ಲ್ಯೂ ಸೌಲಭ್ಯ ನೀಡಲಾಗಿದೆ; ಯಾವುದೇ ಬ್ಯಾಂಕ್ನ ಖಾತೆದಾರರಿಗೆ ಯಾವುದೇ ಎಟಿಎಂನಿಂದ ಕಾರ್ಡ್ ಇಲ್ಲದೆಯೇ ಕ್ಯಾಷ್ ವಿತ್ಡ್ರಾ ಮಾಡಲು ಈಗ ಸಾಧ್ಯ.
ನವದೆಹಲಿ: ಭಾರತದ ಅತಿದೊಡ್ಡ ಬ್ಯಾಂಕ್ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ‘ಯೋನೋ ಫಾರ್ ಎವೆರಿ ಇಂಡಿಯನ್’ ಆ್ಯಪ್ (SBI YONO App) ಅನ್ನು ಪರಿಷ್ಕರಿಸಿದೆ. ಅದರಲ್ಲಿ ಇಂಟರಾಪರಬಲ್ ಕಾರ್ಡ್ಲೆಸ್ ಕ್ಯಾಷ್ ವಿತ್ಡ್ರಾಯಲ್ (ICCW- Interoperable Cardless Cash Withdrawal) ಸೌಲಭ್ಯ ಒಳಗೊಳ್ಳಲಾಗಿದೆ. ಐಸಿಸಿಡಬ್ಲ್ಯೂ ಸೌಲಭ್ಯದಲ್ಲಿ ನೀವು ಯಾವುದೇ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೂ ಯೋನೋ ಆ್ಯಪ್ ಮೂಲಕ ಯಾವುದೇ ಎಟಿಎಂಗೆ ಹೋಗಿ ಕಾರ್ಡ್ ಇಲ್ಲದೇ ನಗದು ಹಣ ಹಿಂಪಡೆಯಬಹುದು. ಎಸ್ಬಿಐನ 68ನೇ ಬ್ಯಾಂಕ್ ದಿನದ ಹಿನ್ನೆಲೆಯಲ್ಲಿ ಈ ಸೌಲಭ್ಯ ವಿಸ್ತರಿಸಿದೆ. ಎಸ್ಬಿಐ ಗ್ರಾಹಕರು ಮಾತ್ರವಲ್ಲ, ಎಲ್ಲರೂ ಕೂಡ ಬಳಸಬಹುದಾದ ಸೌಲಭ್ಯವಾಗಿದೆ.
2022-23ರಲ್ಲಿ 78.60 ಲಕ್ಷ ಉಳಿತಾಯ ಖಾತೆಗಳು ಯೋನೋ ಪ್ಲಾಟ್ಫಾರ್ಮ್ಗೆ ಜೋಡಿತವಾಗಿದ್ದವು. ಈಗ ಯೋನೋ ಆ್ಯಪ್ ಅನ್ನು ಅಪ್ಗ್ರೇಡ್ ಮಾಡಲಾಗಿದ್ದು, ಬೇರೆ ಬ್ಯಾಂಕ್ನ ಗ್ರಾಹಕರೂ ಕೂಡ ಯೋನೋ ಬಳಸುವ ಮೂಲಕ ಎಸ್ಬಿಐ ವ್ಯಾಪ್ತಿ ವಿಸ್ತರಣೆ ಆಗುತ್ತಿದೆ. ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: PIL: 2,000 ರೂ ನೋಟು ಹಿಂಪಡೆಯುವ ಆರ್ಬಿಐ ನಿರ್ಧಾರಕ್ಕೆ ಆಕ್ಷೇಪಣೆ; ದೆಹಲಿ ಹೈಕೋರ್ಟ್ನಲ್ಲಿ ಪಿಐಎಲ್ ವಜಾ
ಏನಿದು ಇಂಟರಾಪರಬಲ್ ಕಾರ್ಡ್ಲೆಸ್ ಕ್ಯಾಷ್ ವಿತ್ಡ್ರಾಯಲ್ ಸೌಲಭ್ಯ?
ಡಿಜಿಟಲ್ ವಹಿವಾಟು ವ್ಯವಸ್ಥೆ ಇನ್ನಷ್ಟು ಸಮರ್ಪಕ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಎನ್ಸಿಆರ್ ಕಾರ್ಪೊರೇಷನ್ ಐಸಿಸಿಡಬ್ಲ್ಯೂ ವ್ಯವಸ್ಥೆ ತಂದಿತ್ತು. ಪೇಟಿಎಂ, ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಆ್ಯಪ್ಗಳ ಮೂಲಕ ಎಟಿಎಂನಲ್ಲಿ ಕ್ಯಾಷ್ ವಿತ್ಡ್ರಾ ಮಾಡಿಕೊಳ್ಳುವ ಸೌಲಭ್ಯವೇ ಐಸಿಸಿಡಬ್ಲ್ಯೂ. ಬಹುತೇಕ ಹಣದ ವಹಿವಾಟು ಕಾರ್ಡ್ಲೆಸ್ ಆಗಿರುವುದರಿಂದ ಎಟಿಎಂನಿಂದ ಕ್ಯಾಷ್ ಪಡೆಯಲೂ ಕಾರ್ಡ್ಲೆಸ್ ವ್ಯವಸ್ಥೆ ತರಬೇಕೆಂಬ ಬೇಡಿಕೆ ಇತ್ತು. ಅದಕ್ಕೆ ಉತ್ತರವಾಗಿ ಐಸಿಸಿಡಬ್ಲ್ಯೂ ರೂಪಿಸಲಾಗಿದೆ.
ಇಂಟರಾಪರಬಲ್ ಕಾರ್ಡ್ಲೆಸ್ ಕ್ಯಾಷ್ ವಿತ್ಡ್ರಾಯಲ್ (ಐಸಿಸಿಡಬ್ಲ್ಯೂ) ಸೌಲಭ್ಯ ಇರುವ ಯಾವುದೇ ಎಟಿಎಂ ಸೆಂಟರ್ಗೆ ಹೋಗಿ ಯಾರು ಬೇಕಾದರೂ ಯುಪಿಐ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ಹಣ ಹಿಂಪಡೆಯಬಹುದು.
ಇದನ್ನೂ ಓದಿ: Tata AIA: ವಾಟ್ಸಾಪ್, ಯುಪಿಐ ಮೂಲಕ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ: ಟಾಟಾ ಎಐಎ ಗ್ರಾಹಕರಿಗೆ ಹೊಸ ಅನುಕೂಲ
ಎಟಿಎಂ ಮೆಷೀನ್ನಲ್ಲಿ ವಿತ್ಡ್ರಾ ಕ್ಯಾಷ್ ಆಯ್ಕೆ ಒತ್ತಿದರೆ ಅದರಲ್ಲಿ ಯುಪಿಐ ಎಂಬ ಒಂದು ಆಯ್ಕೆ ಒಳಗೊಂಡಿರುತ್ತದೆ. ಯುಪಿಐ ಆಯ್ಕೆಯನ್ನು ಒತ್ತಿದರೆ ಎಟಿಎಂ ಸ್ಕ್ರೀನ್ನಲ್ಲಿ ಕ್ಯೂಆರ್ ಕೋಡ್ ಕಾಣುತ್ತದೆ. ಯಾವುದೇ ಯುಪಿಐ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ 5,000 ರೂವರೆಗೂ ನಗದು ಹಣವನ್ನು ಪಡೆಯಬಹುದು.
ಈಗ ಎಸ್ಬಿಐನ ಯೋನೋ ಮೊಬೈಲ್ ಆ್ಯಪ್ನಲ್ಲಿ ಈ ಸೌಲಭ್ಯ ಕೊಡಲಾಗಿದೆ. ಯುಪಿಐ ಆ್ಯಪ್ಗಳಂತೆಯೇ ಯೋನೋ ಆ್ಯಪನ್ನೂ ಬಳಸಿ ಹಣ ಹಿಂಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ