UPI Payments: ಯುಪಿಐ ಪಾವತಿ ಗಣನೀಯ ಹೆಚ್ಚಳ, ದೇಶದ ಜನರಿಗೆ ಶಹಬ್ಬಾಸ್ ಎಂದ ಪ್ರಧಾನಿ ಮೋದಿ

ಡಿಜಿಟಲ್ ಪಾವತಿ ವಿಧಾನವನ್ನು ಅಳವಡಿಸಿಕೊಂಡಿರುವ ನನ್ನೆಲ್ಲ ಭಾರತೀಯರನ್ನು ಶ್ಲಾಘಿಸುತ್ತೇನೆ. ಅವರು ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಗಮನಾರ್ಹವಾಗಿ ಸ್ವೀಕರಿಸಿದ್ದಾರೆ; ಪ್ರಧಾನಿ ನರೇಂದ್ರ ಮೋದಿ

UPI Payments: ಯುಪಿಐ ಪಾವತಿ ಗಣನೀಯ ಹೆಚ್ಚಳ, ದೇಶದ ಜನರಿಗೆ ಶಹಬ್ಬಾಸ್ ಎಂದ ಪ್ರಧಾನಿ ಮೋದಿ
ಸಾಂದರ್ಭಿಕ ಚಿತ್ರ
Image Credit source: PTI
Updated By: Ganapathi Sharma

Updated on: Jan 03, 2023 | 11:08 AM

ನವದೆಹಲಿ: ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯ (Digital Payment System) ಜನಪ್ರಿಯತೆ ಮತ್ತು ಈ ಪಾವತಿ ವಿಧಾನವು ದೇಶದಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದರ ಬಗ್ಗೆ ವ್ಯಕ್ತಿಯೊಬ್ಬರು ಟ್ವಿಟರ್​​ನಲ್ಲಿ ಅಂಕಿಅಂಶ ಸಮೇತ ಮಾಹಿತಿ ಒದಗಿಸಿರುವುದು ಪ್ರಧಾನಿ ನರೇಂದ್ರ ಮೋದಿ (Narendra Modi) ಮೆಚ್ಚುಗೆಗೆ ಪಾತ್ರವಾಗಿದೆ. ಯುಪಿಐ ಪಾವತಿ (UPI Payment) ಹೆಚ್ಚಳದ ಬಗ್ಗೆ ಗಮನ ಸೆಳೆದಿರುವುದನ್ನು ಶ್ಲಾಘಿಸಿರುವ ಮೋದಿ, ಡಿಜಿಟಲ್ ಪಾವತಿ ಹೆಚ್ಚಳಕ್ಕೆ ಉತ್ಸಾಹ ತೋರುತ್ತಿರುವ ದೇಶದ ಜನರನ್ನು ಅಭಿನಂದಿಸಿದ್ದಾರೆ. ‘ಯುಪಿಐಯ ಜನಪ್ರಿಯತೆಯ ಬಗ್ಗೆ ನೀವು ಗಮನ ಸೆಳೆದಿರುವುದನ್ನು ಇಷ್ಟಪಟ್ಟಿದ್ದೇನೆ. ಡಿಜಿಟಲ್ ಪಾವತಿ ವಿಧಾನವನ್ನು ಅಳವಡಿಸಿಕೊಂಡಿರುವ ನನ್ನೆಲ್ಲ ಭಾರತೀಯರನ್ನು ಶ್ಲಾಘಿಸುತ್ತೇನೆ. ಅವರು ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಗಮನಾರ್ಹವಾಗಿ ಸ್ವೀಕರಿಸಿದ್ದಾರೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

12.8 ಲಕ್ಷ ಕೋಟಿ ರೂ. ತಲುಪಿದ ಯುಪಿಐ ವಹಿವಾಟು

2016ರಲ್ಲಿ ಯುಪಿಐ ವಹಿವಾಟು 38 ಲಕ್ಷ ರೂ. ಇತ್ತು. 2022ರ ಡಿಸೆಂಬರ್​ನಲ್ಲಿ ಅದು 12.8 ಲಕ್ಷ ಕೋಟಿ ರೂ. ತಲುಪಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮತ್ತು ಆರ್​ಬಿಐ ದತ್ತಾಂಶಗಳನ್ನು ಉಲ್ಲೇಖಿಸಿ ‘ಟೆಸ್ಟ್​​ಬುಕ್ ಡಾಟ್ ಕಾಂ’ನ ವಿಶೇಷ ಯೋಜನೆಗಳ ವಿಭಾಗದ ಉಪಾಧ್ಯಕ್ಷ ರವಿಸುತಾಂಜನಿ ಎಂಬವರು ಟ್ವೀಟ್ ಮಾಡಿದ್ದರು. 2016ರ ನಂತರ ಪ್ರತಿ ವರ್ಷ ಯುಪಿಐ ವಹಿವಾಟು ಹೇಗೆ ಬೆಳವಣಿಗೆ ಕಂಡಿತು ಎಂಬ ದತ್ತಾಂಶಗಳುಳ್ಳ ಗ್ರಾಫ್​ ಅನ್ನೂ ಅವರು ಟ್ವೀಟ್ ಜತೆ ಲಗತ್ತಿಸಿದ್ದಾರೆ.


ಕಳೆದ ಕ್ಯಾಲೆಂಡರ್ ವರ್ಷದಲ್ಲಿ 7,404 ಕೋಟಿ ಯುಪಿಐ ವಹಿವಾಟು ನಡೆದಿದ್ದು, ಈ ಮಾಧ್ಯಮದ ಮೂಲಕ 125 ಲಕ್ಷ ಕೋಟಿ ರೂ. ಪಾವತಿ ಮಾಡಲಾಗಿದೆ. ಇದೊಂದು ನಂಬಲಸಾಧ್ಯವಾದ ಬೆಳವಣಿಗೆ ಎಂದು ಅವರು ಮತ್ತೊಂದು ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Wrong UPI Transfer: ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿದ್ದರೆ ರಿಫಂಡ್ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

ದೇಶದಲ್ಲಿ ಸರ್ಕಾರವೇ ಅಭಿವೃದ್ಧಿಪಡಿಸಿರುವ ‘ಭೀಮ್’ ಆ್ಯಪ್, ಖಾಸಗಿ ಕ್ಷೇತ್ರದ ಫೋನ್​ ಪೇ, ಗೂಗಲ್ ಪೇ, ವಾಟ್ಸ್​ಆ್ಯಪ್ ಪೇ ಸೇರಿದಂತೆ ಹಲವು ಯುಪಿಐ ಪಾವತಿ ಆಯ್ಕೆಗಳಿವೆ. ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಿಕೊಂಡು ಪಾವತಿ ಮಾಡುವಂತೆ ಸರ್ಕಾರ ಜನರನ್ನು ಉತ್ತೇಜಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಈ ಹಿಂದೆ ಹಲವು ಬಾರಿ ಡಿಜಿಟಲ್ ಪಾವತಿ ವಿಧಾನ ಅನುಸರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ