Wrong UPI Transfer: ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿದ್ದರೆ ರಿಫಂಡ್ ಮಾಡಿಸುವುದು ಹೇಗೆ? ಇಲ್ಲಿದೆ ಮಾಹಿತಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಯಮಗಳ ಪ್ರಕಾರ, ತಪ್ಪಾಗಿ ಕಳುಹಿಸಲ್ಪಟ್ಟ ಹಣವನ್ನು ನೀವು ಮರಳಿ ಪಡೆಯಬಹುದು. ಇದಕ್ಕಾಗಿ ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.
ಯುಪಿಐ (UPI) ಪಾವತಿ ವಿಧಾನವನ್ನು ಬಹಳ ಸುರಕ್ಷಿತವಾಗಿ ನಡೆಯುವಂತೆ ಮಾಡುವುದಕ್ಕಾಗಿಯೇ ಕ್ಯುಆರ್ ಕೋಡ್ (QR Code) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ವಿಧಾನದಲ್ಲಿ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಬ್ಯಾಂಕ್ ವಿವರಗಳನ್ನು ನಮೂದಿಸಬೇಕಾದ ಅಗತ್ಯ ಇಲ್ಲದಿರುವುದರಿಂದ ಯಾರ ಖಾತೆಗೆ ಹಣ ವರ್ಗ ಮಾಡಬೇಕೋ ಅವರ ಖಾತೆಗೇ ಕಳುಹಿಸುವುದು ಸುಲಭ. ಆದರೆ, ಯುಪಿಐ ಐಡಿ ನಮೂದಿಸುವಾಗ ಒಂದಕ್ಷರ ಅಥವಾ ಒಂದು ಸಂಖ್ಯೆ ತಪ್ಪಿದರೂ ನಾವು ಉದ್ದೇಶಿಸಿರದ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆಯಾಗಬಹುದು. ಹೀಗಾದರೆ ತಕ್ಷಣಕ್ಕೆ ಆತಂಕವಾಗುವುದು ಸಹಜ. ಆದರೆ ತಪ್ಪಾಗಿ ಕಳುಹಿಸಲ್ಪಟ್ಟ ಹಣವನ್ನು ಮರಳಿ ಪಡೆಯಲು ಸಾಧ್ಯವಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಯಮಗಳ ಪ್ರಕಾರ, ತಪ್ಪಾಗಿ ಕಳುಹಿಸಲ್ಪಟ್ಟ ಹಣವನ್ನು ನೀವು ಮರಳಿ ಪಡೆಯಬಹುದು. ಇದಕ್ಕಾಗಿ, ತಪ್ಪಾದ ಯುಪಿಐ ಐಡಿಗೆ ಹಣ ಕಳುಹಿಸಿದ ತಕ್ಷಣವೇ ಯಾವ ಪಾವತಿ ವ್ಯವಸ್ಥೆ ಮೂಲಕ ನೀವು ಹಣ ವರ್ಗಾಯಿಸಿದ್ದೀರೋ ಆ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಗೆ ದೂರು ನೀಡಬೇಕು. ಆ ಸಂಸ್ಥೆಯ ಗ್ರಾಹಕ ಸೇವೆಯನ್ನು ನೀವು ಪಡೆಯಬಹುದು. ಉದಾಹರಣೆಗೆ; ನೀವು ಪೇಟಿಎಂ, ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ವರ್ಗಾಯಿಸಿದರೆ ಆಯಾ ಸಂಸ್ಥೆಗೆ ದೂರು ನೀಡಿ, ಅವರ ಸಹಾಯ ಪಡೆಯಬೇಕು. ರಿಫಂಡ್ ಮಾಡುವಂತೆ ಮನವಿ ಸಲ್ಲಿಸಬೇಕು.
ಇದನ್ನೂ ಓದಿ: Gold ATM: ಹೈದರಾಬಾದ್ನ ಎಟಿಎಂನಲ್ಲಿ ಸಿಗುತ್ತೆ ಚಿನ್ನ! ಹೀಗೆ ವಿತ್ಡ್ರಾ ಮಾಡಬಹುದು ನೋಡಿ
ರಿಫಂಡ್ ಆಗದಿದ್ದರೆ ಆರ್ಬಿಐ ಮೊರೆ ಹೋಗಬಹುದು
ಪಾವತಿ ವ್ಯವಸ್ಥೆಯ ಗ್ರಾಹಕ ಸೇವೆ ಪಡೆದ ಬಳಿಕವೂ ತಪ್ಪಾದ ಯುಪಿಐ ಐಡಿಗೆ ಕಳುಹಿಸಿದ ಹಣ ವಾಪಸ್ ಆಗದಿದ್ದರೆ ಆರ್ಬಿಐ ಒಂಬುಡ್ಸ್ಮೆನ್ ಮೊರೆ ಹೋಗಬಹುದು. ಡಿಜಿಟಲ್ ಪಾವತಿ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆಂದೇ ಆರ್ಬಿಐ ಒಂಬುಡ್ಸ್ಮೆನ್ ನೇಮಕ ಮಾಡಿದೆ. ಪಾವತಿ ವ್ಯವಸ್ಥೆಯು ಆರ್ಬಿಐ ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳದಿದ್ದರೆ, ನಿಗದಿತ ಸಮಯದ ಮಿತಿಯೊಳಗೆ ರಿಫಂಡ್ ಮಾಡದಿದ್ದರೆ ಒಂಬುಡ್ಸ್ಮೆನ್ಗೆ ದೂರು ನೀಡಲು ಗ್ರಾಹಕರಿಗೆ ಅವಕಾಶ ಇದೆ. ತಪ್ಪಾದ ಮೊತ್ತವನ್ನು ಫಲಾನುಭವಿಯ ಖಾತೆಗೆ ವರ್ಗಾವಣೆ ಮಾಡಿದ್ದರೂ ಒಂಬುಡ್ಸ್ಮೆನ್ಗೆ ದೂರು ನೀಡಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 am, Tue, 6 December 22