ಗುಡ್​ ನ್ಯೂಸ್: ಇ-ಕಾಮರ್ಸ್ ಪಾವತಿ, ಷೇರು ಖರೀದಿಗೆ ಯುಪಿಐ​ನಲ್ಲಿ ಹೊಸ ಫೀಚರ್ ಘೋಷಿಸಿದ ಆರ್​ಬಿಐ

| Updated By: ಗಣಪತಿ ಶರ್ಮ

Updated on: Dec 07, 2022 | 2:38 PM

‘ಸಿಂಗಲ್ ಬ್ಲಾಕ್ ಆ್ಯಂಡ್ ಮಲ್ಟಿಪಲ್ ಡೆಬಿಟ್ಸ್’ ಫಿಚರ್ ಇ-ಕಾಮರ್ಸ್ ತಾಣಗಳಿಗೆ ಪಾವತಿ ಮಾಡುವುದನ್ನು ಸುಲಭವಾಗಿಸಲಿದೆ. ಅದೇ ರೀತಿ ಸರ್ಕಾರಿ ಷೇರುಗಳಲ್ಲಿ ಹೂಡಿಕೆಗೂ ಅನುವು ಮಾಡಿಕೊಡಲಿದೆ ಎಂದು ಆರ್​ಬಿಐ ಗವರ್ವನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಗುಡ್​ ನ್ಯೂಸ್: ಇ-ಕಾಮರ್ಸ್ ಪಾವತಿ, ಷೇರು ಖರೀದಿಗೆ ಯುಪಿಐ​ನಲ್ಲಿ ಹೊಸ ಫೀಚರ್ ಘೋಷಿಸಿದ ಆರ್​ಬಿಐ
ಸಾಂದರ್ಭಿಕ ಚಿತ್ರ
Image Credit source: PTI
Follow us on

ನವದೆಹಲಿ: ಇ-ಕಾಮರ್ಸ್ ತಾಣಗಳಲ್ಲಿ (e-Commerce) ಆರ್ಡರ್ ಮಾಡಿದ ವಸ್ತುಗಳು ಕೈಸೇರಿದ ಬಳಿಕವೇ ಅಥವಾ ಸೇವೆಗಳನ್ನು ಪಡೆದ ನಂತರವೇ ಹಣ ಪಾವತಿ ಮಾಡಲು ಮತ್ತು ಷೇರುಗಳ ಖರೀದಿಗೆ ಅನುವು ಮಾಡಿಕೊಡುವ ಹೊಸ ಫೀಚರ್ ಅನ್ನು ಯುಪಿಐ ಪಾವತಿ (UPI) ವ್ಯವಸ್ಥೆಯಲ್ಲಿ ಅಳವಡಿಸುವುದಾಗಿ ಆರ್​ಬಿಐ (RBI) ಬುಧವಾರ ತಿಳಿಸಿದೆ. ‘ಸಿಂಗಲ್ ಬ್ಲಾಕ್ ಆ್ಯಂಡ್ ಮಲ್ಟಿಪಲ್ ಡೆಬಿಟ್ಸ್ (Single-Block-And-Multiple Debits)’ ಫೀಚರ್​ ಅನ್ನು ಯುಪಿಐನಲ್ಲಿ ಪರಿಚಯಿಸಲಾಗುವುದು. ಇದು ಹೆಚ್ಚು ವಿಶ್ವಾಸಾರ್ಹವಾಗಿರಲಿದೆ ಎಂದು ಆರ್​ಬಿಐ ಹೇಳಿದೆ.

‘ಸಿಂಗಲ್ ಬ್ಲಾಕ್ ಆ್ಯಂಡ್ ಮಲ್ಟಿಪಲ್ ಡೆಬಿಟ್ಸ್’ ಫಿಚರ್ ಇ-ಕಾಮರ್ಸ್ ತಾಣಗಳಿಗೆ ಪಾವತಿ ಮಾಡುವುದನ್ನು ಸುಲಭವಾಗಿಸಲಿದೆ. ಅದೇ ರೀತಿ ಸರ್ಕಾರಿ ಷೇರುಗಳಲ್ಲಿ ಹೂಡಿಕೆಗೂ ಅನುವು ಮಾಡಿಕೊಡಲಿದೆ ಎಂದು ಆರ್​ಬಿಐ ಗವರ್ವನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಏನಿದು ಹೊಸ ಫೀಚರ್?

ಹೊಸ ಫೀಚರ್​ನಲ್ಲಿ ಗ್ರಾಹಕರು ನಿರ್ದಿಷ್ಟ ಉದ್ದೇಶಗಳಿಗಾಗಿ ಒಂದಿಷ್ಟು ಮೊತ್ತವನ್ನು ಬ್ಲಾಕ್ ಮಾಡಿ ಇಡಲು ಅವಕಾಶ ದೊರೆಯಲಿದೆ. ಅಗತ್ಯವಿದ್ದಾಗ ಈ ಮೊತ್ತವನ್ನು ಬಳಸಿಕೊಳ್ಳಬಹುದಾಗಿದೆ ಎಂದು ದಾಸ್ ತಿಳಿಸಿದ್ದಾರೆ. ಈ ವ್ಯವಸ್ಥೆಯು ವ್ಯಾಪಾರಿಗಳಿಗೆ ಸಕಾಲಿಕ ಪಾವತಿಯ ಭರವಸೆ ನೀಡಲಿದೆ. ಆದರೆ ಹಣ ಮಾತ್ರ ಗ್ರಾಹಕರ ಖಾತೆಯಲ್ಲೇ ಇರಲಿದೆ. ವಸ್ತುಗಳು ಗ್ರಾಹಕನ ಕೈಸೇರಿದ ಅಥವಾ ಸೇವೆಗಳನ್ನು ಪಡೆದಾದ ಬಳಿಕವೇ ಹಣ ವ್ಯಾಪಾರಿಗಳಿಗೆ ಪಾವತಿಯಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: RBI Repo Rate Hike: ಆರ್​ಬಿಐ ರೆಪೊ ದರ 35 ಮೂಲಾಂಶ ಹೆಚ್ಚಳ; ದುಬಾರಿಯಾಗಲಿದೆ ವಾಹನ, ಗೃಹ ಸಾಲದ ಇಎಂಐ

ಆರ್​ಬಿಐನ ರಿಟೇಲ್ ಡೈರೆಕ್ಟ್ ಸ್ಕೀಮ್​ ಅಡಿಯಲ್ಲಿ ಸರ್ಕಾರಿ ಷೇರುಗಳ ಖರೀದಿಗೂ ಹೊಸ ಫಿಚರ್ ನೆರವಾಗಲಿದೆ. ಹೊಸ ಫೀಚರ್​ ಅನ್ನು ಅಳವಡಿಸುವ ಬಗ್ಗೆ ರಾಷ್ಟ್ರೀಯ ಪಾವತಿ ನಿಗಮಕ್ಕೆ (NPCI) ಪ್ರತ್ಯೇಕ ಸೂಚನೆ ನೀಡಲಾಗುವುದು. ಭಾರತ್ ಬಿಲ್ ಪಾವತಿ ವ್ಯವಸ್ಥೆಯ (BBPS) ವ್ಯಾಪ್ತಿಯನ್ನು ಎಲ್ಲ ಪಾವತಿ ಸೇವೆಗಳಿಗೆ ವಿಸ್ತರಿಸಲಾಗುವುದು ಎಂದೂ ಗವರ್ನರ್ ತಿಳಿಸಿದ್ದಾರೆ. ಹೊಸ ಫೀಚರ್ ಯಾವಾಗಿನಿಂದ ಅಸ್ತಿತ್ವಕ್ಕೆ ಬರಲಿದೆ? ಅದರಲ್ಲಿ ಕಾರ್ಯನಿರ್ವಹಿಸುವುದು ಹೇಗೆ ಎಂಬಿತ್ಯಾದಿ ವಿವರಗಳನ್ನು ಇನ್ನಷ್ಟೇ ಆರ್​ಬಿಐ ತಿಳಿಸಬೇಕಿದೆ.

ಆರ್​ಬಿಐ ಹಣಕಾಸು ನೀತಿ ಸಮಿತಿ ಸಭೆಯ ವರದಿಯನ್ನು ಪ್ರಕಟಿಸುವ ಸಂದರ್ಭದಲ್ಲೇ ಶಕ್ತಿಕಾಂತ ದಾಸ್ ಅವರು ಯುಪಿಐ ಹೊಸ ಫೀಚರ್ ಬಗ್ಗೆ ಘೋಷಣೆ ಮಾಡಿದ್ದಾರೆ. ಆರ್​ಬಿಐ ಹಣಕಾಸು ನೀತಿ ಸಮಿತಿಯು 5, 6 ಹಾಗೂ 7ರಂದು ಸಭೆ ನಡೆಸಿದ್ದು, ಆರು ಮಂದಿ ಸದಸ್ಯರ ಪೈಕಿ ಐವರು ರೆಪೊ ದರ ಹೆಚ್ಚಳಕ್ಕೆ ಸಮ್ಮತಿಸಿದ್ದಾರೆ. ಹೀಗಾಗಿ ರೆಪೊ ದರವನ್ನು 35 ಮೂಲಾಂಶ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅವರು ಘೋಷಿಸಿದ್ದರು. ಪರಿಷ್ಕೃತ ರೆಪೊ ದರ ಶೇಕಡಾ 6.25 ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ