ಯುಪಿಐ ಈಗ ಅತ್ಯಂತ ಜನಪ್ರಿಯವಾಗಿರುವ ಪಾವತಿ ಪ್ಲಾಟ್ಫಾರ್ಮ್ ಆಗಿ ಬೆಳೆದಿದೆ. ಬಹುತೇಕ ಭಾರತೀಯರು ಯುಪಿಐ (UPI) ಮೂಲಕ ಹಣದ ಪಾವತಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಯುಪಿಐ ಕೂಡ ಹೊಸ ಹೊಸ ಫೀಚರ್ ಅಳವಡಿಸಿಕೊಂಡು ಹೆಚ್ಚೆಚ್ಚು ಜನಸ್ನೇಹಿ ಮತ್ತು ಬಳಕೆಸ್ನೇಹಿಯಾಗುತ್ತಿದೆ. ಇದೇ ವೇಳೆ, ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಯುಪಿಐನಲ್ಲೂ ಕ್ರೆಡಿಟ್ ಲೈನ್ (Pre-sanctioned credit line) ಸೌಲಭ್ಯ ಒದಗಿಸುವ ಒಂದು ಫೀಚರ್ ಅನ್ನು ತರಲು ಆರ್ಬಿಐ ಹೊರಟಿದೆ. ಈಗಿರುವ ವ್ಯವಸ್ಥೆಯಲ್ಲಿ ಯುಪಿಐನಲ್ಲಿ ಹಣ ಪಾವತಿ ಮಾಡಬೇಕಾದರೆ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬೇಕು. ಆರ್ಬಿಐನ ಹೊಸ ಪ್ರಸ್ತಾಪದ ಪ್ರಕಾರ, ಯುಪಿಐ ಖಾತೆಗೆ ಬ್ಯಾಂಕ್ನಿಂದ ನಿರ್ದಿಷ್ಟ ಪ್ರಮಾಣದ ಕ್ರೆಡಿಟ್ ಲೈನ್ ಸಿಗುತ್ತದೆ. ಅಂದರೆ, ಯುಪಿಐ ವ್ಯಾಲಟ್ಗೆ ಪೂರ್ವದಲ್ಲೇ ನಿಗದಿತ ಪ್ರಮಾಣದ ಸಾಲದ ಹಣ ಹಾಕಲಾಗಿರುತ್ತದೆ. ಆರ್ಬಿಐ ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿದೆ.
ಯುಪಿಐಗೆ ಸದ್ಯ ನಿಮ್ಮ ಸೇವಿಂಗ್ಸ್ ಖಾತೆ, ಓವರ್ಡ್ರಾಫ್ಟ್ ಅಕೌಂಟ್, ಪ್ರೀಪೇಡ್ ವ್ಯಾಲಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಲಿಂಕ್ ಮಾಡಬಹುದು. ಈಗ ಕ್ರೆಡಿಟ್ ಲೈನ್ ಸೌಲಭ್ಯವೂ ದೊರೆಯುತ್ತದೆ. ಈ ಕ್ರೆಡಿಟ್ ಲೈನ್ನಲ್ಲಿ ಎಷ್ಟು ಹಣದ ಮಿತಿ ಇರುತ್ತದೆ, ಎಷ್ಟು ಅವಧಿಯೊಳಗೆ ಅದನ್ನು ತೀರಿಸಬೇಕು, ಅವಧಿ ಮೀರಿದರೆ ಬಡ್ಡಿ ಎಷ್ಟು ಇತ್ಯಾದಿ ಅಂಶಗಳನ್ನ ಬ್ಯಾಂಕ್ಗಳು ನಿರ್ಧರಿಸಬೇಕಾಗುತ್ತದೆ.
ಇದನ್ನೂ ಓದಿ: ಸಾವರಿನ್ ಗೋಲ್ಡ್ ಬಾಂಡ್; ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಆರ್ಬಿಐನಿಂದ ವೇಳಾಪಟ್ಟಿ ಬಿಡುಗಡೆ
ಭಾರತೀಯ ರಿಸರ್ವ್ ಬ್ಯಾಂಕ್ ಇದೆ ಏಪ್ರಿಲ್ ತಿಂಗಳಲ್ಲಿ ಈ ಫೀಚರ್ ಅನ್ನು ಪ್ರಸ್ತಾಪಿಸಿತ್ತು. ಯುಪಿಐನಲ್ಲಿ ಡೆಪಾಸಿಟ್ ಅಕೌಂಟ್ ಜೊತೆಗೆ ಪ್ರೀ ಸ್ಯಾಂಕ್ಷನ್ಡ್ ಕ್ರೆಡಿಟ್ ಲೈನ್ ಅನ್ನು ಬ್ಯಾಂಕುಗಳು ಒದಗಿಸಬೇಕೆಂದು ಆರ್ಬಿಐ ಹೇಳಿತ್ತು.
ಸದ್ಯ, ಯುಪಿಐ ಖಾತೆಗೆ ನಮ್ಮ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ ಅವಕಾಶ ಇದೆ. ಎಲ್ಲಾ ಕ್ರೆಡಿಟ್ ಕಾರ್ಡ್ಗಳನ್ನು ಲಿಂಕ್ ಮಾಡಲು ಬರುವುದಿಲ್ಲ. ರುಪೇ ಕ್ರೆಡಿಟ್ ಕಾರ್ಡ್ ಅನ್ನು ಮಾತ್ರ ಸದ್ಯಕ್ಕೆ ಯುಪಿಐಗೆ ಲಿಂಕ್ ಮಾಡಬಹುದು. ಈಗ ಎಲ್ಲಾ ಯುಪಿಐ ಬಳಕೆದಾರರಿಗೂ ಅವರ ಬ್ಯಾಂಕುಗಳಿಂದ ಕ್ರೆಡಿಟ್ ಲೈನ್ ಸಿಕ್ಕರೆ ಬಹಳಷ್ಟು ಪ್ರಯೋಜನ ಎನಿಸುತ್ತದೆ.
ಇದನ್ನೂ ಓದಿ: ಸೆ. 30ರೊಳಗೆ ಈ ಕೆಲಸ ಮಾಡದಿದ್ದರೆ ಪಿಪಿಎಫ್, ಸೇವಿಂಗ್ಸ್ ಸ್ಕೀಮ್ ಇತ್ಯಾದಿ ನಿಮ್ಮ ಹೂಡಿಕೆ ಸ್ಥಗಿತಗೊಳ್ಳಲಿದೆ
ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಯುಪಿಐ ಬಳಸಿ 1,000 ಕೋಟಿ ವಹಿವಾಟುಗಳಲ್ಲಿ 996.5 ಕೋಟಿ ರೂ ಮೊತ್ತದಷ್ಟು ಹಣದ ವರ್ಗಾವಣೆಗಳಾಗಿವೆ. ಇದರೊಂದಿಗೆ ಡಿಜಿಟಲ್ ಟ್ರಾನ್ಸಾಕ್ಷನ್ನಲ್ಲಿ ಭಾರತ ಮೇರು ಸ್ಥಾನದಲ್ಲಿದೆ. ಈಗ ಯುಪಿಐಗೆ ಕ್ರೆಡಿಟ್ ಲೈನ್ ಸಿಕ್ಕರೆ ವಹಿವಾಟು ಪ್ರಮಾಣ ಇನ್ನಷ್ಟು ಏರುವುದರಲ್ಲಿ ಅನುಮಾನ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ