Budget Expectation: ಲಾಭ ತರದ ಡಿಜಿಟಲ್ ಪೇಮೆಂಟ್: 8000 ಕೋಟಿ ರೂ ಧನಸಹಾಯಕ್ಕೆ ಅಪೇಕ್ಷೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 11, 2023 | 7:34 PM

ವ್ಯಕ್ತಿಯಿಂದ ವರ್ತಕರಿಗೆ ಮಾಡಲಾಗುವ ಹಣ ವಹಿವಾಟಿನ ಸೌಕರ್ಯ ವ್ಯವಸ್ಥೆಗಾಗಿ ನೀಡಲಾಗುವ ಸಬ್ಸಿಡಿ ಹಣವನ್ನು 2023ರ ಬಜೆಟ್ ನಲ್ಲಿ 8,000 ಕೋಟಿ ರೂಗೆ ಏರಿಸಬೇಕು. ಹಾಗೆಯೇ, ರೂಪೇ ಡೆಬಿಟ್ ಕಾರ್ಡ್ ಗೆ ಎಂಡಿಆರ್ ದರದ ವಿನಾಯಿತಿ ಕೊಡುವುದಕ್ಕಾಗಿ ಸರ್ಕಾರ 2,000 ಕೋಟಿ ರೂ ಸಬ್ಸಿಡಿ ಒದಗಿಸಬೇಕು ಎಂದು ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ ಮನವಿ ಮಾಡಿದೆ.

Budget Expectation: ಲಾಭ ತರದ ಡಿಜಿಟಲ್ ಪೇಮೆಂಟ್: 8000 ಕೋಟಿ ರೂ ಧನಸಹಾಯಕ್ಕೆ ಅಪೇಕ್ಷೆ
ಪ್ರಾತಿನಿಧಿಕ ಚಿತ್ರ
Image Credit source: financialexpress.com
Follow us on

ದೆಹಲಿ: ಭಾರತದಲ್ಲಿ ಡಿಜಿಟಲ್ ವಹಿವಾಟು ಸೌಕರ್ಯ ವ್ಯವಸ್ಥೆ (UPI payment platform) ಇಡೀ ಜಗತ್ತಿನ ಕಣ್ಕುಕ್ಕುವಷ್ಟು ದಷ್ಟಪುಷ್ಟವಾಗಿ ಬೆಳೆದು ನಿಂತಿದೆ. ದೇಶದಲ್ಲಿ ಯುಪಿಐ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಯುಪಿಐ (Unified Payment Interface) ಎಂಬ ಪೇಮೆಂಟ್ ವ್ಯವಸ್ಥೆಯನ್ನು ಬಳಸುವ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಇತ್ಯಾದಿ ಪೇಮೆಂಟ್ ಪ್ಲಾಟ್ ಫಾರ್ಮ್​ಗಳು ದಿನಕ್ಕೆ ಕೋಟ್ಯಂತರ ಹಣ ವಹಿವಾಟಿಗೆ ವೇದಿಕೆಯಾಗಿವೆ. ಆದರೂ ಕೂಡ ಲಾಭ ಇಲ್ಲದೇ ಈ ಅಪ್ಲಿಕೇಶನ್​ಗಳು (Payment Apps) ನಲುಗಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ತಮಗೆ ಲಾಭಕ್ಕೆ ದಾರಿ ಕೊಡಬೇಕು ಅಥವಾ ತಾತ್ಕಾಲಿಕವಾಗಿ ಧನಸಹಾಯವನ್ನಾದರೂ ನೀಡಬೇಕೆಂಬುದು ಈ ಪೇಮೆಂಟ್ ಪ್ಲಾಟ್ ಫಾರ್ಮ್​ಗಳ ಹಲವು ದಿನಗಳ ಬೇಡಿಕೆ. ಈ ಬಾರಿಯ ಬಜೆಟ್​ನಲ್ಲಿ ಡಿಜಿಟಲ್ ಪೇಮೆಂಟ್ ಸೌಕರ್ಯಕ್ಕಾಗಿ ಹೆಚ್ಚಿನ ಸಬ್ಸಿಡಿ ಕೊಡಬೇಕು ಎಂದು ಈ ಉದ್ಯಮದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವ್ಯಕ್ತಿಯಿಂದ ವರ್ತಕರಿಗೆ (Person to Merchant) ಮಾಡಲಾಗುವ ಹಣ ವಹಿವಾಟಿನ ಸೌಕರ್ಯ ವ್ಯವಸ್ಥೆಗಾಗಿ ನೀಡಲಾಗುವ ಸಬ್ಸಿಡಿ ಹಣವನ್ನು 2023ರ ಬಜೆಟ್​ನಲ್ಲಿ 8,000 ಕೋಟಿ ರೂಗೆ ಏರಿಸಬೇಕು. ಹಾಗೆಯೇ, ರೂಪೇ ಡೆಬಿಟ್ ಕಾರ್ಡ್​ಗೆ ಎಂಡಿಆರ್ ದರದ ವಿನಾಯಿತಿ ಕೊಡುವುದಕ್ಕಾಗಿ ಸರ್ಕಾರ 2,000 ಕೋಟಿ ರೂ. ಸಬ್ಸಿಡಿ ಒದಗಿಸಬೇಕು ಎಂದು ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ ಮನವಿ ಮಾಡಿದೆ.

ಇದನ್ನೂ ಓದಿ: Ashneer Grover: 5 ವರ್ಷ ಪೂರೈಸಿದ ಉದ್ಯೋಗಿಗಳಿಗೆ ಮರ್ಸಿಡಿಸ್ ಕಾರು ಉಡುಗೊರೆ ನೀಡಿದ ಭಾರತ್‌ಪೇ ಸಂಸ್ಥಾಪಕ ಅಶ್ನೀರ್ ಗ್ರೋವರ್

2021-22ರ ಬಜೆಟ್​ನಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಉತ್ತೇಜಿಸಲು ಸರ್ಕಾರ 1,500 ಕೋಟಿ ರೂ ಧನಸಹಾಯ ಬಿಡುಗಡೆ ಮಾಡಿತ್ತು. 2022-23 ಬಜೆಟ್​ನಲ್ಲೂ ಅದೇ ಮೊತ್ತದ ನೆರವು ಮುಂದುವರಿಸಲು ನಿರ್ಧರಿಸಲಾಗಿತ್ತು. ಇದೀಗ ಈ ಸಬ್ಸಿಡಿ ಮೊತ್ತವನ್ನು 10 ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸಬೇಕೆಂದು ಈ ಪೇಮೆಂಟ್ ಕಂಪನಿಗಳು ಕೇಳುತ್ತಿವೆ.

ಸದ್ಯ ಭಾರತದಲ್ಲಿ ಯುಪಿಐ ಆಧಾರಿತ ಪಾವತಿಯ ಯಾವ ವಹಿವಾಟಿಗೂ ಶುಲ್ಕ ನಿಗದಿ ಮಾಡಲಾಗಿಲ್ಲ. ವರ್ತಕರಿಂದಲೂ ಪಾವತಿ ಶುಲ್ಕ ಪಡೆಯುವಂತಿಲ್ಲ ಎಂದು ಸರ್ಕಾರ ತಾಕೀತು ಮಾಡಿದೆ. ಇದು ಭಾರತದಲ್ಲಿ ಪೇಮೆಂಟ್ ವ್ಯವಸ್ಥೆಯನ್ನು ಜನರು ಆತುಕೊಳ್ಳಲು ಅನುವಾಗಲೆಂದು ಸರ್ಕಾರ ಶುಲ್ಕರಹಿತ ಪೇಮೆಂಟ್ ವ್ಯವಸ್ಥೆಯನ್ನು ಮುಂದುವರಿಸಿದೆ. ಆದರೆ, ಇದು ಹೆಚ್ಚು ದಿನ ಮುಂದುವರಿಯಲಾಗದು. ಪೇಮೆಂಟ್ ಪ್ಲಾಟ್ ಫಾರ್ಮ್ ಕಂಪನಿಗಳು ಹೆಚ್ಚು ದಿನ ನಷ್ಟದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಲಾಭ ಕಂಡುಕೊಳ್ಳಲು ಸರ್ಕಾರ ಅವಕಾಶ ನೀಡಲೇಬೇಕಾಗುತ್ತದೆ. ಅದು ಮುಂದಿನ ವರ್ಷದ ಬಜೆಟ್​ನಲ್ಲಿ ತೀರ್ಮಾನವಾಗಬಹುದು.

ಡಿಜಿಟಲ್ ಪೇಮೆಂಟ್ ಕಂಪನಿಗಳು ಹೇಗೆ ಲಾಭ ಮಾಡಬಹುದು?

ರೂಪೇ ಕಾರ್ಡ್ ಮೂಲಕ ನಡೆಯುವ ವಹಿವಾಟು ಮತ್ತು ಕಡಿಮೆ ಮೊತ್ತದ ಯುಪಿಐ ವಹಿವಾಟುಗಳ ಸೌಕರ್ಯಕ್ಕಾಗಿ ಸರ್ಕಾರ 2021ರಲ್ಲಿ ರೀಇಂಬರ್ಸ್ಮೆಂಟ್ ಸ್ಕೀಮ್ ಪ್ರಕಟಿಸಿತ್ತು. ಅಂದರೆ ಪೇಮೆಂಟ್ ಕಂಪನಿಗಳಿಗೆ 1,300 ಕೋಟಿ ರೂ ಸಬ್ಸಿಡಿ ಕೊಟ್ಟಿತ್ತು. ಗ್ರಾಹಕರಿಂದ ವರ್ತಕರಿಗೆ ಮಾಡಲಾಗುವ ಪಾವತಿಯ ವಹಿವಾಟಿನಲ್ಲಿ ವರ್ತಕರಿಂದ ಶುಲ್ಕ ವಸೂಲು ಮಾಡಬಾರದು. ಹಣ ರವಾನೆಯಾಗುವ ಬ್ಯಾಂಕಿಗೆ ನಿಗದಿತ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಆ ಹಣವನ್ನು ಬ್ಯಾಂಕು ಪೇಮೆಂಟ್ ಪ್ಲಾಟ್ ಫಾರ್ಮ್ ಕಂಪನಿಗಳಿಗೆ ವರ್ಗಾವಣೆ ಮಾಡುತ್ತದೆ. ಇದು ಪೇಮೆಂಟ್ ಕಂಪನಿಗಳಿಗೆ ಸದ್ಯ ಇರುವ ಪ್ರಮುಖ ಆದಾಯ ಮೂಲ.
ಹಾಗೆಯೇ, ಪೇಮೆಂಟ್ ಅಪ್ಲೇಶನ್​ಗಳಲ್ಲಿ ನಾವು ವಿದ್ಯುತ್ ಬಿಲ್, ನೀರಿನ ಬಿಲ್, ಡಿಟಿಎಚ್ ಬಿಲ್ ಇತ್ಯಾದಿಗೆ ಯುಪಿಐ ಮೂಲಕ ಹಣ ಪಾವತಿ ಮಾಡಿದಾಗ ಆ ಸೇವಾ ಪೂರೈಕೆದಾರರಿಂದ ಪೇಮೆಂಟ್ ಆಪ್ ಕಂಪನಿಗಳಿಗೆ ಕಮಿಷನ್ ರೂಪದಲ್ಲಿ ಹಣ ಸಿಗುತ್ತದೆ. ಇದೂ ಕೂಡ ಅವುಗಳಿಗೆ ಇನ್ನೊಂದು ಆದಾಯ ಮೂಲ.

ಇದನ್ನೂ ಓದಿ: Gold Price Today: ಚಿನ್ನದ ಬೆಲೆ ತುಸು ಇಳಿಕೆ; ಇಂದೂ ಬದಲಾಗಿಲ್ಲ ಬೆಳ್ಳಿ ದರ

ಆದರೆ, ಇವೆರಡರಿಂದ ಪೇಮೆಂಟ್ ಪ್ಲಾಟ್ ಫಾರ್ಮ್​ಗಳ ಸ್ವಾವಲಂಬನೆಗೆ ಅಗತ್ಯವಾದಷ್ಟು ಆದಾಯ ಸಿಗುವುದಿಲ್ಲ. ಹೀಗಾಗಿ, ನಿರ್ದಿಷ್ಟ ಮೊತ್ತದ ಯುಪಿಐ ವಹಿವಾಟಿಗೆ ಇಂತಿಷ್ಟು ಶುಲ್ಕ ನಿಗದಿ ಮಾಡಬೇಕು ಎಂಬುದು ಪೇಮೆಂಟ್ ಪ್ಲಾಟ್ ಫಾರ್ಮ್​ಗಳು ಬಹಳ ದಿನಗಳಿಂದ ಬೇಡಿಕೊಳ್ಳುತ್ತಿವೆ. ಇದಕ್ಕೆ ಸರ್ಕಾರ ಅನುಮತಿ ನೀಡಿದರೆ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಇನ್ನಷ್ಟು ಕಂಪನಿಗಳು ಲಗ್ಗೆ ಹಾಕಿ ಹೆಚ್ಚು ಬಂಡವಾಳ ಹರಿದು ಬಂದು ತಂತ್ರಜ್ಞಾನ ಔನ್ನತ್ಯ ಸಾಧಿಸಿ ಈ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತದೆ ಎಂಬ ಅಭಿಪ್ರಾಯಗಳಿವೆ.

ಭಾರತದಲ್ಲಿ ಒಂದು ದಿನದಲ್ಲಿ ಕೋಟಿಗಟ್ಟಲೆ ಯುಪಿಐ ಹಣಪಾವತಿ ನಡೆಯುತ್ತದೆ. ಸಣ್ಣ ಮೊತ್ತದ ಶುಲ್ಕ ನಿಗದಿ ಮಾಡಿದರೆ ಪೇಮೆಂಟ್ ಕಂಪನಿಗಳು ಬಹಳಷ್ಟು ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೆಡಿಟ್ ಕಾರ್ಡ್ ವಹಿವಾಟಿಗೆ ಶುಲ್ಕ ಇರುವ ರೀತಿಯಲ್ಲಿ ಯುಪಿಐ ವಹಿವಾಟಿಗೂ ಶುಲ್ಕ ನಿಗದಿಯಾಗುವ ದಿನ ದೂರ ಇಲ್ಲ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.