Recession: 80 ವರ್ಷದಲ್ಲಿ ಮೊದಲ ಬಾರಿಗೆ ಡಬಲ್ ರಿಸಿಶನ್; ಭಾರತ ಪರವಾಗಿಲ್ಲ
ಒಂದು ವೇಳೆ ಹಣದುಬ್ಬರವು ನಿರೀಕ್ಷೆಗಿಂತ ಹೆಚ್ಚು ಮಟ್ಟದಲ್ಲೇ ಮುಂದುವರಿದು ಬಡ್ಡಿ ದರಗಳೂ ತಕ್ಕಂತೆ ಹೆಚ್ಚುತ್ತಿದ್ದರೆ ಖಂಡಿತವಾಗಿ ಜಾಗತಿಕ ಆರ್ಥಿಕತೆ ಮತ್ತೊಂದು ಹಿಂಜರಿತದ ಸ್ಥಿತಿಗೆ ಇಳಿಯುತ್ತದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ದೆಹಲಿ: ಕೋವಿಡ್ (Covid-19 Pandemic) ಬಂದ ಬಳಿಕ ಕುಸಿದು ಹೋಗಿದ್ದ ಜಾಗತಿಕ ಆರ್ಥಿಕತೆ ಕಳೆದ ಒಂದು ವರ್ಷದಿಂದ ಚೇತರಿಕೆ ಕಾಣುತ್ತಿದೆಯಾದರೂ ಇದೀಗ ರಷ್ಯಾ ಉಕ್ರೇನ್ ಯುದ್ಧ ಮತ್ತಿತರ ಕಾರಣದಿಂದ ಮತ್ತೊಮ್ಮೆ ಆರ್ಥಿಕ ಹಿಂಜರಿತದ (Global Economic Recession) ಸ್ಥಿತಿಗೆ ಧಾವಿಸುತ್ತಿದೆ. ವಿಶ್ವ ಬ್ಯಾಂಕ್ (World Bank) ಇತ್ತೀಚೆಗೆ ಬಿಡುಗಡೆ ಮಾಡಿದ ಅಂದಾಜು ವರದಿ ಪ್ರಕಾರ 2023ರಲ್ಲಿ ಜಾಗತಿಕ ಆರ್ಥಿಕತೆ ಶೇ. 1.7ರಷ್ಟು ಮಾತ್ರ ಬೆಳವಣಿಗೆ ಸಾಧಿಸಬಹುದು ಎನ್ನಲಾಗಿದೆ. ಹಣದುಬ್ಬರ (Inflation) ಹೆಚ್ಚುತ್ತಿದ್ದು, ಅದನ್ನು ನಿಯಂತ್ರಿಸಲು ಬಡ್ಡಿ ದರಗಳನ್ನೂ ಏರಿಕೆ ಮಾಡಲಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆ ದುರ್ಬಲಗೊಂಡಿದೆ. ಜಾಗತಿಕವಾಗಿ ಉದ್ಯೋಗಕಡಿತ (Job Cuts) ಹೆಚ್ಚುತ್ತಿದೆ. ಹೂಡಿಕೆಗಳು ಕಡಿಮೆಗೊಳ್ಳುತ್ತಿವೆ. ಒಂದು ವೇಳೆ ಹಣದುಬ್ಬರವು ನಿರೀಕ್ಷೆಗಿಂತ ಹೆಚ್ಚು ಮಟ್ಟದಲ್ಲೇ ಮುಂದುವರಿದು ಬಡ್ಡಿ ದರಗಳೂ ತಕ್ಕಂತೆ ಹೆಚ್ಚುತ್ತಿದ್ದರೆ ಖಂಡಿತವಾಗಿ ಜಾಗತಿಕ ಆರ್ಥಿಕತೆ ಮತ್ತೊಂದು ಹಿಂಜರಿತದ ಸ್ಥಿತಿಗೆ ಇಳಿಯುತ್ತದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಈ ಬಾರಿ ಆವರಿಸುವ ಆರ್ಥಿಕ ಹಿಂಜರಿತವು ಸುದೀರ್ಘ ಕಾಲ ಇರಬಹುದು ಎಂಬ ಭಯ ಇದೆ. ಈ ದಶಕದಲ್ಲಿ ಎರಡು ಬಾರಿ ಗ್ಲೋಬಲ್ ರಿಸಿಶನ್ ಸ್ಥಿತಿ ಬರುತ್ತಿದೆ. ವಿಶ್ವ ಬ್ಯಾಂಕ್ ಪ್ರಕಾರ, ಕಳೆದ 80 ವರ್ಷದಲ್ಲಿ ಇಂಥ ಸ್ಥಿತಿ ಬಂದಿರುವುದು ಇದೇ ಮೊದಲ ಬಾರಿಗೆಯಂತೆ. ಈ ವರ್ಷ, ಅಂದರೆ 2023 ಬಹಳ ಕೆಟ್ಟ ವರ್ಷವಾಗಿರಲಿದೆ. ಹಲವು ದೇಶಗಳ ಆರ್ಥಿಕತೆ ತೀರಾ ಮಂದಗತಿಯಲ್ಲಿ ಮುನ್ನಡೆಯುವ ಸಾಧ್ಯತೆ ಇದೆ. ಅದರಲ್ಲೂ ಸುಧಾರಿತ ದೇಶಗಳ ಆರ್ಥಿಕ ಬೆಳವಣಿಗೆ ದರ ಶೇ. 95ರಷ್ಟು ಕಡಿಮೆ ಆಗಲಿದೆ. ಅಭಿವೃದ್ಧಿಶೀಲ ಮತ್ತು ಉದಯೋನ್ಮುಖ ಆರ್ಥಿಕತೆಯ ದೇಶಗಳ ಬೆಳವಣಿಗೆ ಇಳಿಮುಖವಾಗುವುದು ಶೇ. 70 ಎಂದು ಭಾವಿಸಲಾಗಿದೆ. ಆದರೂ ಸುಧಾರಿತ ದೇಶಗಳಿಗಿಂತ ಅಭಿವೃದ್ಧಿಶೀಲ ದೇಶಗಳಿಗೆ ಜಾಗತಿಕ ಆರ್ಥಿಕ ಹಿನ್ನಡೆಯ ದುಷ್ಪರಿಣಾಮ ಹೆಚ್ಚು ತೀವ್ರವಾಗಿ ಕಾಡಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.
ಇದನ್ನು ಓದಿ: ಪಾಶ್ಚಾತ್ಯ ದೇಶಗಳ ಆರ್ಥಿಕ ಹಿಂಜರಿತ ಭಾರತಕ್ಕೆ ಹೂಡಿಕೆದಾರರನ್ನು ಸೆಳೆಯಲು ಅವಕಾಶ; ನಿರ್ಮಲಾ ಸೀತಾರಾಮನ್
ಸುಧಾರಿತ ಆರ್ಥಿಕತೆಯ ದೇಶಗಳಲ್ಲಿ ಹಣದುಬ್ಬರ ಮತ್ತಿತರ ಕಾರಣಕ್ಕೆ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ. ಅದರ ಪರಿಣಾಮವಾಗಿ ಜಾಗತಿಕ ಹೂಡಿಕೆಗಳು ಆ ದೇಶಗಳಿಗೆ ಕೇಂದ್ರಿತವಾಗತೊಡಗಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಹಾಕಲಾಗಿದ್ದ ವಿದೇಶೀ ಹೂಡಿಕೆಗಳು ಕಾಲ್ತೆಗೆದುಕೊಂಡು ಹೋಗಿವೆ. ಬಂಡವಾಳ ಕಡಿಮೆಗೊಂಡಿರುವುದರ ಜೊತೆಗೆ ಸಾಲದ ಹೊರೆ ಹೊತ್ತಿರುವ ಅಭಿವೃದ್ಧಿಶೀಲ ದೇಶಗಳು ಕೆಲ ವರ್ಷಗಳವರೆಗೂ ಜಗ್ಗಿಕೊಂಡೇ ಸಾಗಬೇಕಾದ ಪರಿಸ್ಥಿತಿ ಇದೆ.
ಭಾರತ ಪರವಾಗಿಲ್ಲ
ವಿಶ್ವ ಬ್ಯಾಂಕ್ ಪ್ರಕಾರ ಈಗಿನ ಹಣಕಾಸು ವರ್ಷದಲ್ಲಿ (2022-23) ಭಾರತದ ಆರ್ಥಿಕತೆ ಶೇ. 6.9 ಇದೆ. ಮುಂದಿನ ಹಣಕಾಸು ವರ್ಷದಲ್ಲಿ ಇದರ ಬೆಳವಣಿಗೆ ದರ ಶೇ. 6.6ಕ್ಕೆ ಇಳಿಯಬಹುದು ಎಂದು ಅದು ಅಭಿಪ್ರಾಯಪಟ್ಟಿದೆ. ಆದರೂ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಗಮನಿಸಿದರೆ ಭಾರತದ್ದು ಉತ್ತಮ ಸ್ಥಿತಿ ಎನ್ನಲಾಗಿದೆ. ಉದಯೋನ್ಮುಖ ಮತ್ತು ಅಭಿವೃದ್ಧಿಶೀಲವೆನಿರುವ ಏಳು ಅತಿದೊಡ್ಡ ಆರ್ಥಿಕತೆಯ ದೇಶಗಳ ಪೈಕಿ ಭಾರತದ ಆರ್ಥಿಕತೆಯೇ ಅತಿಹೆಚ್ಚು ಬೆಳವಣಿಗೆ ಸಾಧಿಸುತ್ತದೆ ಎಂಬುದು ವಿಶ್ವ ಬ್ಯಾಂಕ್ ನಿನ್ನೆ (ಜ. 10) ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ.
ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ 2023ರಲ್ಲಿ ಶೇ. 3.6ರಷ್ಟು ಆಗಬಹುದು. ಒಂದು ವೇಳೆ ಪಾಕಿಸ್ತಾನದಲ್ಲಿ ಆರ್ಥಿಕ ಕುಸಿತ ಆಗದೇ ಹೋಗಿದ್ದರೆ ದಕ್ಷಿಣ ಏಷ್ಯಾ ಒಟ್ಟಾರೆಯಾಗಿ ಉತ್ತಮ ಸ್ಥಿತಿಯಲ್ಲಿರುತ್ತಿತ್ತು. ಈ ಪ್ರದೇಶದಲ್ಲಿ 2024ರಲ್ಲಿ ಶೇ. 4.6ರಷ್ಟು ಆರ್ಥಿಕ ಅಭಿವೃದ್ಧಿ ಆಗುವ ನಿರೀಕ್ಷೆ ಇದೆ. ಭಾರತದಂತೆ ಬಾಂಗ್ಲಾದೇಶದ ಆರ್ಥಿಕತೆಯೂ ಉತ್ತಮವಾಗಿ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Wed, 11 January 23