
ನವದೆಹಲಿ, ಡಿಸೆಂಬರ್ 17: ಪಾಕಿಸ್ತಾನಕ್ಕೆ ಅಮೆರಿಕ 686 ಮಿಲಿಯನ್ ಡಾಲರ್ (ಸುಮಾರು 6,000 ಕೋಟಿ ರೂ) ಮಿಲಿಟರಿ ಪ್ಯಾಕೇಜ್ ಬಿಡುಗಡೆ ಮಾಡಲು ಸಮ್ಮತಿಸಿದೆ. ಈ ಡೀಲ್ ಪ್ರಕಾರ ಪಾಕಿಸ್ತಾನಕ್ಕೆ (Pakistan) ಈಗಾಗಲೇ ನೀಡಲಾಗಿರುವ ಎಫ್-16 ಯುದ್ಧವಿಮಾನಗಳನ್ನು ಅಪ್ಗ್ರೇಡ್ ಮಾಡುವುದು, ಸುಧಾರಿತ ತಂತ್ರಜ್ಞಾನದ ನೆರವು ನೀಡುವುದು ಇತ್ಯಾದಿ ಸೇರಿವೆ ಎಂದು ಹೇಳಲಾಗುತ್ತಿದೆ. ಒಂದೆಡೆ, ಉಗ್ರಗಾಮಿಗಳ ಆವಾಸ ಸ್ಥಾನ ಎಂದೇ ಭಾವಿಸಲಾಗಿರುವ ಪಾಕಿಸ್ತಾನ, ಇನ್ನೊಂದೆಡೆ, ಉಗ್ರರೆಂದರೆ ನಖಶಿಖಾಂತ ವಿರೋಧಿಸುವ ಅಮೆರಿಕ, ಅದು ಹೇಗೆ ಈ ಎರಡು ದೇಶಗಳ ನಡುವೆ ಸಂಬಂಧ ಗಾಢವಾಗಲು ಸಾಧ್ಯ?
ಪಾಕಿಸ್ತಾನದ ಜೊತೆ ಅಮೆರಿಕ ಮಾತ್ರವಲ್ಲ, ಚೀನಾ ಕೂಡ ಆಪ್ತ. ಆಪ್ತ ಅಷ್ಟೇ ಅಲ್ಲ, ಪರಮಾಪ್ತ. ಚೀನಾ ಜೊತೆ ಪಾಕ್ ಅತ್ಯಾಪ್ತವಾದರೂ ಅದನ್ನು ಕಂಡೂ ಕಾಣದಂತಿರುತ್ತೆ ಅಮೆರಿಕ. ಇನ್ನು, ಅಮೆರಿಕ ಜೊತೆ ಪಾಕಿಸ್ತಾನ ಶಸ್ತ್ರಾಸ್ತ್ರ ಸಂಬಂಧ ಹೊಂದಿದ್ದರೂ ಚೀನಾ ಕಣ್ಣು ಮಿಟುಕಿಸುವುದಿಲ್ಲ. ಭಾರತಕ್ಕೂ ಸಿಗದ ಒಂದಷ್ಟು ಬೆಲೆ ಪಾಕಿಸ್ತಾನಕ್ಕೆ ಬರಲು ಹೇಗೆ ಸಾಧ್ಯ?
ಪಾಕಿಸ್ತಾನ ಇರುವ ಭೌಗೋಳಿಕ ಜಾಗವೇ ಅಂಥದ್ದು. ಏಷ್ಯಾದ ಬಹಳ ಆಯಕಟ್ಟಿನ ಸ್ಥಳಗಳಲ್ಲಿರುವ ದೇಶಗಳಲ್ಲಿ ಅದೂ ಒಂದು. ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ಭಾಗಗಳಿಗೆ ಪಾಕಿಸ್ತಾನ ಒಂದು ಕೊಂಡಿಯಂತೆ ನಿಂತಿದೆ. ಹೀಗಾಗಿ, ಪಾಕಿಸ್ತಾನಕ್ಕೆ ಬೇಡಿಕೆ ಹೆಚ್ಚು.
ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ಬಂದಾಗಿನಿಂದಲೇ ಎರಡಕ್ಕೂ ದಾರಿಗಳು ಬೇರೆಬೇರೆಯಾದವು. ಭಾರತವು ಸೋಷಿಯಲಿಸ್ಟ್ ಪರಂಪರೆಯತ್ತ ವಾಲುತ್ತಾ, ಕಮ್ಯೂನಿಸ್ಟ್ ಶಕ್ತಿಗಳ ಪ್ರಭಾವಕ್ಕೆ ಒಳಗಾಯಿತು. ಇನ್ನೊಂದೆಡೆ ಭಾರತದ ಹಾದಿಗೆ ವಿರುದ್ಧವಾಗಿ ಪಾಕಿಸ್ತಾನವು ಕಮ್ಯೂನಿಸ್ಟ್ ವಿರೋಧಿ ಪಾಳಯಕ್ಕೆ ಹತ್ತಿರವಾಯಿತು. ಅಲ್ಲಿಂದಲೇ ಅಮೆರಿಕ ಪಾಕಿಸ್ತಾನ ಸಂಬಂಧ ಬೆಳೆಯತೊಡಗಿತು.
ಇದನ್ನೂ ಓದಿ: ವಾರಕ್ಕೆ 3 ದಿನ ವೀಕಾಫ್ಗೂ ಅವಕಾಶ, ಆದರೆ… ಭಾರತದ ಹೊಸ ಕಾರ್ಮಿಕ ಕಾನೂನು ಹೇಳೋದಿದು
ಎಂಬತ್ತರ ದಶಕದಲ್ಲಿ ನಡೆದ ಸೋವಿತ್ ಮತ್ತು ಅಫ್ಘಾನ್ ಯುದ್ಧವು ಪಾಕಿಸ್ತಾನವು ಅಮೆರಿಕಕ್ಕೆ ವಿಐಪಿ ದೇಶವಾಗಿ ಮಾರ್ಪಡಿಸಿತ್ತು. ತನ್ನ ಪರಮವೈರಿಯಾದ ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನವನ್ನು ಆಕ್ರಮಿಸಿವುದನ್ನು ಶತಾಯ ಗತಾಯ ತಡೆಯಲೇಬೇಕೆಂದು ಹೊರಟ ಅಮೆರಿಕಕ್ಕೆ ಪಾಕಿಸ್ತಾನ ಬಹಳ ಕೆಲಸಕ್ಕೆ ಬಂತು.
ಪಾಕಿಸ್ತಾನದ ಮೂಲಕ ಅಫ್ಗಾನಿಸ್ತಾನದ ಮುಜಾಹಿದೀನ್ಗಳಿಗೆ (ಹೋರಾಟಗಾರರು) ಅಮೆರಿಕದ ನೆರವು ದೊರಕುತ್ತಾ ಹೋಯಿತು. ಇದರಿಂದಾಗಿ ಸೋವಿಯತ್ ರಷ್ಯಾ ಅಫ್ಗಾನ್ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಇಲ್ಲಿಂದಲೇ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮುಖ್ಯ ಪರ್ವ ಶುರುವಾಗೋದು. ಪಾಕಿಸ್ತಾನವು ಉಗ್ರರ ನೆಲೆಯಾಗಿ ಬೆಳೆಯತೊಡಗಿತು. ಅಮೆರಿಕವು ಅದಕ್ಕೆ ನೀರುಣಿಸುತ್ತಾ ಪೋಷಿಸುತ್ತಾ ಬರುತ್ತಿದೆ.
ತೈಲ ಸಮೃದ್ಧ ಇರಾನ್, ಇರಾಕ್ ಇತ್ಯಾದಿ ದೇಶಗಳನ್ನು ನಿಯಂತ್ರಣದಲ್ಲಿಡಲು ಅಮೆರಿಕಕ್ಕೆ ಪಾಕಿಸ್ತಾನ ಆಯಕಟ್ಟಿನ ಸ್ಥಳವಾಯಿತು. ಪಾಕಿಸ್ತಾನದಲ್ಲಿ ಅಮೆರಿಕದ ಯುದ್ಧ ನೆಲೆಗಳು ಸ್ಥಾಪನೆಗೊಂಡವು. ರಷ್ಯಾ, ಚೀನಾ, ಭಾರತ, ಅಫ್ಗಾನಿಸ್ತಾನ, ಇರಾನ್ ಇತ್ಯಾದಿ ದೇಶಗಳ ಮೇಲೆ ಮಿಲಿಟರಿ ಒತ್ತಡ ಹೇರಲು ಅಮೆರಿಕ ಪಾಕಿಸ್ತಾನದ ನೆಲ ಸೂಕ್ತವೆನಿಸಿತು. ಇದಕ್ಕಾಗಿ, ಪಾಕಿಸ್ತಾನಕ್ಕೆ ಅಮೆರಿಕದಿಂದ ಅನಿರ್ಬಂಧಿತವಾಗಿ ನೆರವುಗಳು ಹರಿದುಬರುತ್ಲೇ ಇರುತ್ತದೆ. ಟ್ರಂಪ್ ಇರಲಿ, ಬುಶ್ ಇರಲಿ, ಕ್ಲಿಂಟನ್ ಇರಲಿ, ಯಾರೇ ಇರಲಿ, ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಂಧ ಅಬಾಧಿತವಾಗಿಯೇ ಮುಂದುವರಿದಿದೆ.
ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್ಗೆ ತಕ್ಕ ಉತ್ತರ; ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ
ಕೋಲ್ಡ್ ವಾರ್ ಬಳಿಕ ಸೋವಿಯತ್ ರಷ್ಯಾ ಜಾಗಕ್ಕೆ ಚೀನಾ ಏರಿದೆ. ಅಮೆರಿಕದ ನಂತರ ಚೀನಾ ಸೂಪರ್ ಪವರ್ ದೇಶ ಎನಿಸಿದೆ. ಸೂಪರ್ ಪವರ್ ಆಗಿ ಮುಂದುವರಿಯಬೇಕೆಂದರೆ ತನ್ನ ಜಾಗ ಭದ್ರ ಮಾಡಿಕೊಳ್ಳಬೇಕು. ಪಾಕಿಸ್ತಾನದ ಬಗ್ಗೆ ಚೀನಾ ಒಲವು ತೋರಲು ಮೂರು ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಮೊದಲನೆಯದು, ಪಾಕಿಸ್ತಾನದ ಭೌಗೋಳಿಕ ಆಯಕಟ್ಟಿನ ಸ್ಥಳ. ಎರಡನೆಯದು, ಭಾರತವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುವುದು. ಮೂರನೆಯದು, ವ್ಯಾಪಾರಕ್ಕೆ ಅನುಕೂಲವಾಗುವುದು.
ಬಿಆರ್ಐ ಅಥವಾ ಬೆಲ್ಟ್ ರೋಡ್ ಇನಿಯೇಟಿವ್ ಚೀನಾ ಪಾಲಿಗೆ ಅತ್ಯಂತ ಮಹತ್ವಾಕಾಂಕ್ಷೆ ಪ್ರಾಜೆಕ್ಟ್. ಈ ಯೋಜನೆಯ ಪ್ರಮುಖ ಕೊಂಡಿಯೇ ಸಿಪೆಕ್. ಪಶ್ಚಿಮ ಏಷ್ಯಾ, ಯೂರೋಪ್ ಮತ್ತು ಆಫ್ರಿಕನ್ ದೇಶಗಳಿಗೆ ತನ್ನ ಸರಕುಗಳನ್ನು ಸಾಗಿಸಲು ಚೀನಾಗೆ ಸಿಪೆಕ್ ಯೋಜನೆ ಮುಖ್ಯ. ಇದು ಚೀನಾದಿಂದ ಆರಂಭವಾಗಿ ಪಾಕಿಸ್ತಾನದ ಗ್ವಾದರ್ ಪೋರ್ಟ್ವರೆಗೆ ಕಾರಿಡಾರ್ ಆಗಿದೆ. ಈ ಕಾರಿಡಾರ್ ಮೂಲಕ ಸರಕುಗಳನ್ನು ಗ್ವಾದರ್ ಪೋರ್ಟ್ಗೆ ಸಾಗಿಸಿ, ಅಲ್ಲಿಂದ ಹಡಗಿನಲ್ಲಿ ಬೇರೆ ಬೇರೆ ಕಡೆ ಸಾಗಿಸಲು ಚೀನಾಗೆ ಸಾಧ್ಯವಾಗುತ್ತದೆ. ಸದ್ಯ ಅದು ಸೌತ್ ಚೀನಾ ಸಮುದ್ರದ ಮೂಲಕ ಸುತ್ತುಬಳಸಿ ಸಾಗಬೇಕು. ಸಿಪೆಕ್ ಕಾರಿಡಾರ್ ಈ ಸುತ್ತುಬಳಕೆಯನ್ನು ತಪ್ಪಿಸಿ, ನೇರ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಪಾಕಿಸ್ತಾನ ಎಂದರೆ ಚೀನಾಗೂ ಬಹಳ ಮುಖ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ