ಎನ್ಡಿಟಿವಿ ಓಪನ್ ಆಫರ್ ವೇಳೆ ಅದಾನಿ ಗ್ರೂಪ್ನಿಂದ ರಹಸ್ಯ ಮಾಹಿತಿ ಸೋರಿಕೆ: ಸೆಬಿ ಆರೋಪ
SEBI alleges insider trading in Adani Group's open offer for NDTV shares: 2022ರಲ್ಲಿ ಎನ್ಡಿಟಿವಿ ಷೇರುಗಳನ್ನು ಓಪನ್ ಆಫರ್ ಮೂಲಕ ಖರೀದಿಸುವಾಗ ಅದಾನಿ ಗ್ರೂಪ್ನಿಂದ ಅಕ್ರಮವಾಗಿದೆ ಎಂದು ಸೆಬಿ ಆರೋಪಿಸಿದೆ. ಓಪನ್ ಆಫರ್ ಮಾಡುವ ಮುನ್ನ ಬೆಲೆ ವಿಚಾರವನ್ನು ರಹಸ್ಯವಾಗಿಡಲು ಅದಾನಿ ಗ್ರೂಪ್ ವಿಫಲವಾಗಿದೆ ಎಂಬುದು ಸೆಬಿ ಆರೋಪ. ಪ್ರಣವ್ ಅದಾನಿ ಹಾಗೂ ಅವರ ಕೆಲ ಸಂಬಂಧಿಗಳಿಗೆ ಸೆಬಿಯಿಂದ ನೋಟೀಸ್ ಜಾರಿಯಾಗಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮುಂಬೈ, ಡಿಸೆಂಬರ್ 17: ಅದಾನಿ ಗ್ರೂಪ್ (Adani Group) ಮೇಲೆ ಮತ್ತೊಂದು ಪ್ರಕರಣದಲ್ಲಿ ಸೆಬಿ (SEBI) ಕಣ್ಣು ಬಿದ್ದಿದೆ. ಮೂರು ವರ್ಷಗಳ ಹಿಂದೆ ಎನ್ಡಿಟಿವಿ ಷೇರುಗಳನ್ನು ಖರೀದಿಸಲು ಅದಾನಿ ಗ್ರೂಪ್ ಓಪನ್ ಆಫರ್ ಕೊಡುವ ಸಂದರ್ಭದಲ್ಲಿ ರಹಸ್ಯ ಮಾಹಿತಿ ಸೋರಿಕೆ ಮಾಡಲಾಗಿದೆ ಎನ್ನುವುದು ಸೆಬಿ ಮಾಡುತ್ತಿರುವ ಆರೋಪವಾಗಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಗೌತಮ್ ಅದಾನಿ ಅವರ ಮಗ, ಹಾಗೂ ಅದಾನಿ ಎಂಟರ್ಪ್ರೈಸಸ್ನ ನಿರ್ದೇಶಕರಾದ ಪ್ರಣವ್ ಅದಾನಿ ಅವರು ಎನ್ಡಿಟಿವಿ ಷೇರು ಖರೀದಿಸುವ ಓಪನ್ ಆಫರ್ನ ಬೆಲೆ ಇತ್ಯಾದಿ ಮಾಹಿತಿಯನ್ನು ತಮ್ಮ ಮಾವ ಧನಪಾಲ್ ಶಾ ಹಾಗೂ ಬಾವಂದಿರಾದ ಕುನಾಲ್ ಶಾ ಮತ್ತು ನೃಪಾಲ್ ಶಾ ಅವರಿಗೆ ಹಂಚಿಕೊಂಡಿದ್ದರು ಎಂದು ಸೆಬಿ ಹೇಳಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ
ಸೆಬಿ 2025ರ ಅಕ್ಟೋಬರ್ 15ರಂದು ಪ್ರಣವ್ ಅದಾನಿ ಮತ್ತಿತರರಿಗೆ ನೋಟೀಸ್ ಕೊಟ್ಟಿದೆ. ಈ ನೋಟೀಸ್ನ ಪ್ರತಿಯನ್ನು ಪಡೆದಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಹೇಳಿಕೊಳ್ಳಲಾಗಿದೆ. ಈ ಹಿಂದೆಯೂ ಅದಾನಿ ಗ್ರೂಪ್ ವಿರುದ್ಧ ಸೆಬಿ ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಆರೋಪ ಮಾಡಿತ್ತು. ಎಸ್ಬಿ ಎನರ್ಜಿ ಹೋಲ್ಡಿಂಗ್ಸ್ನ ಷೇರಗಳನ್ನು ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಖರೀದಿಸುವ ಮುನ್ನ ಸೂಕ್ಷ್ಮವಾದ ಬೆಲೆ ಮಾಹಿತಿಯನ್ನು ಪ್ರಣವ್ ಅದಾನಿ ಸೋರಿಕೆ ಮಾಡಿದ್ದರು ಎಂಬುದು ಸೆಬಿ ಆರೋಪವಾಗಿತ್ತು. ಆದರೆ, ಇತ್ತೀಚೆಗಷ್ಟೇ, ಈ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಇದೆ ಎನ್ನುವ ಕಾರಣಕ್ಕೆ ಪ್ರಕರಣವನ್ನು ಕೈಬಿಟ್ಟಿತು. ಈಗ ಎನ್ಡಿಟಿವಿ ಖರೀದಿ ಪ್ರಕರಣದಲ್ಲಿ ಸೆಬಿ ಆರೋಪ ಮಾಡುತ್ತಿದೆ.
ಇದನ್ನೂ ಓದಿ: 32 ವರ್ಷ ನಂತರ ಸಿಕ್ಕ ಷೇರು ಸರ್ಟಿಫಿಕೇಟ್ನ ಬೆಲೆ ಕೇಳಿ ಹೌಹಾರುತ್ತೀರಿ; 200 ರೂಗಳ ಈ ಷೇರುಬೆಲೆ ಈಗ 2.5 ಲಕ್ಷ ರೂ
ಏನಿದು ಎನ್ಡಿಟಿವಿ ಪ್ರಕರಣ?
2022ರಲ್ಲಿ ಅದಾನಿ ಎಂಟರ್ಪ್ರೈಸಸ್ ಸಂಸ್ಥೆಯು ಎನ್ಡಿಟಿವಿಯ ಶೇ 26ರಷ್ಟು ಷೇರುಗಳನ್ನು ಸಾರ್ವಜನಿಕ ಷೇರುದಾರರಿಂದ ಓಪನ್ ಆಫರ್ ಮೂಲಕ ಖರೀದಿಸುತ್ತದೆ. ಓಪನ್ ಆಫರ್ ನಿರ್ವಹಣೆ ಮಾಡುವ ಹೊಣೆ ಹೊತ್ತಿದ್ದ ಜೆಎಂ ಫೈನಾನ್ಷಿಯಲ್ ಸಂಸ್ಥೆ ಆಗಸ್ಟ್ 23ರಂದು ಟ್ರೇಡಿಂಗ್ ಅವಧಿ ಮುಗಿದ ಬಳಿಕ ಈ ಓಪನ್ ಆಫರ್ ಬಗ್ಗೆ ಷೇರು ವಿನಿಮಯ ಕೇಂದ್ರಗಳಿಗೆ ಮಾಹಿತಿ ನೀಡುತ್ತದೆ.
ಓಪನ್ ಆಫರ್ನಲ್ಲಿ ಪ್ರತೀ ಷೇರಿಗೆ 294 ರೂ ಬೆಲೆ ಇಡಲಾಗುತ್ತದೆ. ಈ ರೀತಿ ಓಪನ್ ಆಫರ್ ಮಾಡುವಾಗ ಷೇರು ಖರೀದಿಸುವ ಬೆಲೆ ಹಾಗೂ ದಿನದ ಮಾಹಿತಿಯನ್ನು ಬಹಳ ರಹಸ್ಯವಾಗಿ ಇಡಬೇಕಾಗುತ್ತದೆ. ಓಪನ್ ಆಫರ್ ಮಾಡುತ್ತಿರುವ ಸಂಸ್ಥೆಯಾಗಲೀ, ಷೇರು ವಿನಿಮಯ ಕೇಂದ್ರಗಳಾಗಲೀ ಅಥವಾ ಮಾಹಿತಿ ಗೊತ್ತಿರುವ ಯಾವುದೇ ಸಂಬಂಧಿತ ವ್ಯಕ್ತಿಯಾಗಲೀ ಇದನ್ನು ಅಧಿಕೃತವಾಗಿ ಘೋಷಿಸುವವರೆಗೂ ರಹಸ್ಯವಾಗಿ ಇಟ್ಟಿರಬೇಕಾಗುತ್ತದೆ.
ಆಗಸ್ಟ್ 23ರಂದು ಸಂಜೆ ಷೇರು ವಿನಿಮಯ ಕೇಂದ್ರಗಳಿಗೆ ಓಪನ್ ಆಫರ್ ಅನ್ನು ತಿಳಿಸಲಾಯಿತು. ಅಗಸ್ಟ್ 24ಕ್ಕೆ ಇದನ್ನು ಬಹಿರಂಗಪಡಿಸಲಾಯಿತು. ಸಾಮಾನ್ಯವಾಗಿ ಈ ರೀತಿ ಓಪನ್ ಆಫರ್ ಪ್ರಕರಣಗಳಲ್ಲಿ ಸೆಬಿ ಯಾವುದಾದರೂ ಇನ್ಸೈಡರ್ ಟ್ರೇಡಿಂಗ್ ನಡೆದಿದೆಯಾ ಎಂದು ಪರಿಶೀಲಿಸುತ್ತದೆ. ಎನ್ಡಿಟಿವಿ ವಿಚಾರದಲ್ಲೂ ಸೆಬಿ ಪರಿಶೀಲನೆ ನಡೆಸಿದೆ. ಓಪನ್ ಆಫರ್ ಸಲ್ಲಿಕೆಯಾಗುವ ಕೆಲ ತಿಂಗಳಿಂದ ಯಾರ್ಯಾರು ಷೇರು ವಹಿವಾಟು ಮಾಡಿದ್ದಾರೆ ಎಂಬಿತ್ಯಾದಿಯನ್ನು ಸೆಬಿ ಗಮನಿಸುತ್ತದೆ.
ಇದನ್ನೂ ಓದಿ: ಎಫ್ಡಿ, ಸಾಲ, ಷೇರು, ಚಿನ್ನ, ವಿಮೆ, ಸೇವಿಂಗ್ಸ್ ಕುರಿತು ಈ ತಪ್ಪು ಅಭಿಪ್ರಾಯ ನಿಮಗಿದೆಯಾ? ಈಗಲೇ ಸರಿಪಡಿಸಿಕೊಳ್ಳಿ
2022ರ ಮೇ 2ರಿಂದ ಸೆಪ್ಟೆಂಬರ್ 15ರವರೆಗಿನ ಅವಧಿಯಲ್ಲಿ ಸೆಬಿ ತನಿಖೆ ನಡೆಸುತ್ತದೆ. ಮಾಹಿತಿ ರಹಸ್ಯವಾಗಿಡಬೇಕಾದ ಅವಧಿಯಲ್ಲಿ ಪ್ರಣವ್ ಅದಾನಿ ಅವರ ಸಂಬಂಧಿಯಾದ ಕುನಾಲ್ ಷಾ ಅವರು ಹಲವು ಬಾರಿ ಎನ್ಡಿಟಿವಿ ಷೇರುಗಳನ್ನು ಖರೀದಿಸಿರುವುದು ಸೆಬಿ ಗಮನಕ್ಕೆ ಬಂದಿದೆ. ಈ ಅವಧಿಯಲ್ಲೇ ಪ್ರಣವ್ ಅದಾನಿ ಜೊತೆ ಕುಣಾಲ್, ನೃಪಾಲ್ ಮತ್ತು ಧನಪಾಲ್ ಶಾ ಅವರು ನಿರಂತರವಾಗಿ ಮೊಬೈಲ್ನಲ್ಲಿ ಸಂಪರ್ಕದಲ್ಲಿದ್ದರು ಎಂಬ ವಿಚಾರವೂ ಸೆಬಿ ಗಮನಕ್ಕೆ ಬಂದಿದೆ.
ಈ ಕಾರಣಕ್ಕೆ 2025ರ ಅಕ್ಟೋಬರ್ 15ರಂದು ಸೆಬಿಯಿಂದ ಪ್ರಣವ್ ಅದಾನಿ ಹಾಗು ಇತರರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಆರೋಪಗಳಿಗೆ ಉತ್ತರ ಕೊಡಬೇಕೆಂದು ನೋಟೀಸ್ನಲ್ಲಿ ತಿಳಿಸಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




