
ವಾಷಿಂಗ್ಟನ್, ಮೇ 30: ಈ ಕ್ಯಾಲಂಡರ್ ವರ್ಷದ ಮೊದಲ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಅಮೆರಿಕದ ಜಿಡಿಪಿ (GDP) ಶೇ. 0.2ರಷ್ಟು ಕುಸಿತ ಕಂಡಿದೆ. ಅಂದರೆ, ಮೈನಸ್ 0.2 ಪ್ರತಿಶತದಷ್ಟು ಕಡಿಮೆಗೊಂಡಿದೆ. ಕಳೆದ ಮೂರು ವರ್ಷದಲ್ಲಿ ಯಾವುದೇ ಕ್ವಾರ್ಟರ್ನಲ್ಲಿ ಅಮೆರಿಕ ಆರ್ಥಿಕತೆ ಕಂಡ ಮೊದಲ ಕುಸಿತ ಇದಾಗಿದೆ. ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ವ್ಯಾಪಾರ ನೀತಿ ಹಾಗೂ ಇತರ ಕ್ರಮಗಳು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.
ಕುತೂಹಲ ಎಂದರೆ, ಈ ಕ್ವಾರ್ಟರ್ನಲ್ಲಿ ಆರ್ಥಿಕತೆ ಶೇ. 0.30ರಷ್ಟು ಕುಸಿತ ಕಾಣಬಹುದು ಎಂದು ಈ ಹಿಂದೆ ಅಂದಾಜು ಮಾಡಲಾಗಿತ್ತು. ಅದಕ್ಕಿಂತ ತುಸು ಉತ್ತಮ ಸ್ಥಿತಿಯಲ್ಲಿರಬಹುದು ಎಂದು ಈ ಬಾರಿಯ ಅಂದಾಜು ಹೇಳುತ್ತಿದೆ. ಅಮರಿಕದ ವಾಣಿಜ್ಯ ಇಲಾಖೆ ಮಾಡುವ ಮೂರು ಅಂದಾಜುಗಳಲ್ಲಿ ಇದು ಎರಡನೆಯದು. ಜೂನ್ 26ರಂದು ಮೂರನೇ ಹಾಗೂ ಅಂತಿಮ ಅಂದಾಜು ಹೊರಬರಲಿದೆ. ಏಪ್ರಿಲ್ ತಿಂಗಳಲ್ಲಿ ಇಲಾಖೆಯು ಮೊದಲ ಅಂದಾಜು ಬಹಿರಂಗಗೊಳಿಸಿತ್ತು. ಅದರ ಪ್ರಕಾರ ಜಿಡಿಪಿ ಶೇ. 0.3ರಷ್ಟು ಕುಸಿದಿರಬಹುದು ಎಂದು ಹೇಳಿತ್ತು.
ಜಿಡಿಪಿ ಎಷ್ಟು ಬೆಳೆದಿದೆ ಎಂದು ನಿಖರವಾಗಿ ತಿಳಿಯಬೇಕೆಂದರೆ ಹಲವಾರು ದತ್ತಾಂಶಗಳನ್ನು ಕ್ರೋಢೀಕರಿಸಿ ವಿಶ್ಲೇಷಿಸುವ ಅವಶ್ಯಕತೆ ಇರುತ್ತದೆ. ಅಗತ್ಯವಾಗಿರುವ ಕೆಲ ದತ್ತಾಂಶಗಳು ಅಂತಿಮ ರೂಪದಲ್ಲಿ ಸಿಗಲು ಒಂದೆರಡು ತಿಂಗಳು ಬೇಕಾಗಬಹುದು. ಹೀಗಾಗಿ, ಒಂದು ಕ್ವಾರ್ಟರ್ ಅವಧಿ ಮುಗಿದ ಬಳಿಕ ಒಂದು ತಿಂಗಳಲ್ಲಿ ಅಡ್ವಾನ್ಸ್ ಎಸ್ಟಿಮೇಟ್ ಮಾಡಲಾಗುತ್ತದೆ. ಇದರಲ್ಲಿ ಪೂರ್ಣ ದತ್ತಾಂಶ ಇರುವುದಿಲ್ಲ. ಹೀಗಾಗಿ, ಇದು ನಿಖರವಾಗಿರುವುದಿಲ್ಲವಾದರೂ ಜಿಡಿಪಿ ಎಷ್ಟಿರಬಹುದು ಎನ್ನುವ ಒಂದು ಅಂದಾಜು ಸಿಗುತ್ತದೆ.
ಇದನ್ನೂ ಓದಿ: ಪ್ಲಾಸ್ಟಿಕ್, ರಬ್ಬರ್ ವಸ್ತು ಖರೀದಿಸುವಾಗ ಮೇಡ್ ಇನ್ ಚೀನಾ ಗಮನಿಸಿ… ಡ್ರ್ಯಾಗನ್ ಮಣಿಸಲು ನಿಮ್ಮ ಕೈಲಿದೆ ಅಸ್ತ್ರ
ಮತ್ತೊಂದು ತಿಂಗಳ ಬಳಿಕ ಎರಡನೇ ಅಂದಾಜು ಸಿಗುತ್ತದೆ. ಅದಾಗಿ ಒಂದು ತಿಂಗಳ ಬಳಿಕ ಅಂತಿಮ ಅಂದಾಜು ಬರುತ್ತದೆ. ಈ ಮೂರನೇ ಅಂದಾಜು ಹೆಚ್ಚು ನಿಖರವಾಗಿರುತ್ತದೆ. ಅದರ ಜಿಡಿಪಿ ಚಿತ್ರಣವನ್ನೇ ಅಂತಿಮ ಎಂದು ಪರಿಗಣಿಸಲಾಗುತ್ತದೆ.
ಹಿಂದಿನ ಕ್ವಾರ್ಟರ್ನಲ್ಲಿ, ಅಂದರೆ, 2024ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಅಮೆರಿಕದ ಜಿಡಿಪಿ ಶೇ. 2.4ರಷ್ಟು ಬೆಳೆದಿತ್ತು. ನಂತರದ ಕ್ವಾರ್ಟರ್ನಲ್ಲಿ ಜಿಡಿಪಿ ಕುಸಿದಿರುವುದು ಅಸಾಮಾನ್ಯ ಸಂಗತಿ. ಇದಕ್ಕೆ ಕಾರಣ ಟ್ರಂಪ್ ಅವರ ಟ್ಯಾರಿಫ್ ಕ್ರಮ ಎನ್ನಲಾಗಿದೆ.
ಈ ಕ್ವಾರ್ಟರ್ನ್ಲಲ್ಲಿ ಅಮೆರಿಕದ ಆಮದು ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಟ್ರಂಪ್ ಸರ್ಕಾರ ಟ್ಯಾರಿಫ್ ಕ್ರಮ ಘೋಷಿಸಬಹುದು ಎನ್ನುವುದು ಖಚಿತವಾಗುತ್ತಿದ್ದಂತೆಯೇ ಬಹಳಷ್ಟು ಅಮೆರಿಕನ್ ಕಂಪನಿಗಳು ಎಂದಿಗಿಂತ ಹೆಚ್ಚು ಆಮದು ಮಾಡಿಕೊಂಡವು.
ಇದನ್ನೂ ಓದಿ: ಅಮೆರಿಕಕ್ಕೆ ಐಫೋನ್ ರಫ್ತು: ಭಾರತ ಹೊಸ ಇತಿಹಾಸ; ಇದೇ ಮೊದಲ ಬಾರಿಗೆ ಚೀನಾವನ್ನು ಹಿಂದಿಕ್ಕಿದ ಭಾರತ
ಮೊದಲ ಕ್ವಾರ್ಟರ್ನಲ್ಲಿ ಆಮದು ಹೆಚ್ಚಾಗಿದ್ದರಿಂದ ಜಿಡಿಪಿ ದರ ಮೈನಸ್ಗೆ ಹೋಗಿದೆ. ಕಂಪನಿಗಳು ಮಾರ್ಚ್ನಲ್ಲೇ ಸಾಕಷ್ಟು ಆಮದು ಮಾಡಿಕೊಂಡಿರುವುದರಿಂದ ಎರಡನೇ ಕ್ವಾರ್ಟರ್ನ್ಲಲಿ ಎಂದಿಗಿಂತ ಕಡಿಮೆ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಅಮೆರಿಕದ ಜಿಡಿಪಿ ಪಾಸಿಟಿವ್ ದರದಲ್ಲಿ ಇರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ