
ವಾಷಿಂಗ್ಟನ್, ಆಗಸ್ಟ್ 26: ಅಮೆರಿಕದ ಚಿಪ್ ತಯಾರಕರಾದ ಇಂಟೆಲ್ (Intel) ಸಂಸ್ಥೆಯಲ್ಲಿ ಇಲ್ಲಿನ ಸರ್ಕಾರ ಶೇ. 10ರಷ್ಟು ಪಾಲು ಪಡೆದಿರುವುದಾಗಿ ಘೋಷಿಸಿದೆ. ಪಕ್ಕಾ ಕ್ಯಾಪಿಟಲಿಸ್ಟ್ ಆರ್ಥಿಕತೆಯ ದೇಶವೆನಿಸಿರುವ ಅಮೆರಿಕದಲ್ಲಿ, ಅಲ್ಲಿಯ ಖಾಸಗಿ ಕಂಪನಿಗಳಲ್ಲಿ ಸರ್ಕಾರ ಮಧ್ಯಪ್ರವೇಶಿಸಿರುವುದು ಬಹಳ ಮಂದಿಗೆ ಅಚ್ಚರಿ ಮೂಡಿಸಿರುವ ಸಂಗತಿ ಎನಿಸಿದೆ. ಇಷ್ಟಕ್ಕೆ ಸುಮ್ಮನಾಗದ ಸರ್ಕಾರ, ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳಲ್ಲಿ ಪಾಲು ಪಡೆಯುವುದಾಗಿ ಹೇಳಿದೆ. ಅಮೆರಿಕವು ಕ್ಯಾಪಿಟಲಿಸ್ಟ್ ದೇಶದಿಂದ ಸೋಷಿಯಲಿಸ್ಟ್ ದೇಶವಾಗಿ ಬದಲಾಗುತ್ತಿದೆ ಎಂದು ಅಲ್ಲಿಯ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ಸಮಯದಲ್ಲಿ ವಿಶ್ವದ ಅತಿದೊಡ್ಡ ಚಿಪ್ ತಯಾರಕರೆನಿಸಿದ್ದ ಇಂಟೆಲ್ ಸಂಸ್ಥೆ ಸ್ಮಾರ್ಟ್ಫೋನ್ ಯುಗ ಆರಂಭಗೊಂಡ ಬಳಿಕ ತನ್ನ ಬೇಡಿಕೆ ಕಳೆದುಕೊಳ್ಳುತ್ತಾ ಬಂದಿದೆ. ಅಮೆರಿಕದ ಭದ್ರತೆ ಮತ್ತು ತಂತ್ರಜ್ಞಾನ ಸ್ವಾತಂತ್ರ್ಯಕ್ಕೆ ಇಂಟೆಲ್ ಪಾತ್ರ ಹೆಚ್ಚು ಇರುವುದರಿಂದ ಅದನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ 2022ರಲ್ಲಿ ಅಂದಿನ ಬೈಡನ್ ನೇತೃತ್ವದ ಸರ್ಕಾರವು ಒಟ್ಟು 10.9 ಬಿಲಿಯನ್ ಡಾಲರ್ ಧನಸಹಾಯ ನೀಡಿತು. ವಿವಿದ ರಾಜ್ಯಗಳಲ್ಲಿ ಕಮರ್ಷಿಯಲ್ ಚಿಪ್ ಫ್ಯಾಬ್ ಘಟಕಗಳು ಹಾಗೂ ಮಿಲಿಟರಿ ದರ್ಜೆ ಚಿಪ್ಗಳನ್ನು ತಯಾರಿಸಲು ಸರ್ಕಾರ ಈ ಹೂಡಿಕೆ ಮಾಡಿತ್ತು.
ಇದನ್ನೂ ಓದಿ: ಭಾರತದ ಮೇಲೆ ಹೆಚ್ಚುವರಿ ಟ್ಯಾರಿಫ್; ಅಮೆರಿಕದಿಂದ ಕರಡು ಸೂಚನೆ ಪ್ರಕಟ
ಅಂದು ನೀಡಲಾಗಿದ್ದ 10.9 ಬಿಲಿಯನ್ ಡಾಲರ್ ಅನುದಾನದಲ್ಲಿನ 8.9 ಬಿಲಿಯನ್ ಡಾಲರ್ ಮೊತ್ತದ ಬದಲಾಗಿ ಇಂಟೆಲ್ನ ಶೇ. 10ರಷ್ಟು ಷೇರುಗಳನ್ನು ಈಗ ಟ್ರಂಪ್ ಸರ್ಕಾರವು ಸ್ವಾಧೀನಪಡಿಸಿಕೊಂಡಿದೆ. ಇದರೊಂದಿಗೆ ಇಂಟೆಲ್ ಕಂಪನಿಯಲ್ಲಿ ಅಮೆರಿಕ ಸರ್ಕಾರ ಅತಿದೊಡ್ಡ ಷೇರುದಾರನೆನಿಸಿದೆ. ಇಂಟೆಲ್ ಕಂಪನಿಯನ್ನು ಅಮೆರಿಕ ಸರ್ಕಾರ ಬಹುತೇಕ ಸ್ವಾಧೀನಪಡಿಸಿಕೊಂಡಂತೆ ಎಂದು ಹಲವರು ಬಣ್ಣಿಸಿದ್ದಾರೆ.
2008ರ ಜಾಗತಿಕ ಹಣಕಾಸು ಬಿಕ್ಕಟ್ಟು ಪರಿಸ್ಥಿತಿ ಉದ್ಭವಿಸಿದಾಗ ಅಮೆರಿಕದ ಆಟೊಮೊಬೈಲ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದ್ದವು. ಆಗ ಅಮೆರಿಕ ಸರ್ಕಾರ ನೆರವಿನ ಪ್ಯಾಕೇಜ್ಗಳನ್ನು ನೀಡಿತ್ತು. ಅದಕ್ಕೆ ಬದಲಾಗಿ ಆ ಕಂಪನಿಗಳಲ್ಲಿ ಕಾರ್ಪೊರೇಟ್ ಪಾಲನ್ನು ಪಡೆದಿತ್ತು. ಈಗ ಟ್ರಂಪ್ ಸರ್ಕಾರವು ಇಂಟೆಲ್ನಲ್ಲಿ ಷೇರುಪಾಲನ್ನು ಪಡೆದಿರುವುದು ಗಮನಾರ್ಹ.
ಇದನ್ನೂ ಓದಿ: ‘ಮ್ಯಾಗ್ನೆಟ್ ನೀಡದಿದ್ದರೆ ಚೀನಾವನ್ನು ನಾಶ ಮಾಡುತ್ತೇವೆ’: ಮತ್ತೆ ಆರ್ಭಟಿಸಿದ ಡೊನಾಲ್ಡ್ ಟ್ರಂಪ್
ಇಂಟೆಲ್ಗೆ ಮಾಡಿದ ಧನಸಹಾಯ ಬಳಸಿ ಅದನ್ನು ಶೇ. 10ರಷ್ಟು ಷೇರುಗಳಾಗಿ ಪರಿವರ್ತಿಸಿದ ಕ್ರಮವನ್ನು ಬೇರೆ ಸೆಕ್ಟರ್ಗಳಲ್ಲೂ ಪ್ರಯತ್ನಿಸಲು ಅಮೆರಿಕ ಯೋಜಿಸುತ್ತಿದೆ. ಡೊನಾಲ್ಡ್ ಟ್ರಂಪ್ ಈ ಬಗ್ಗೆ ತಮ್ಮ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ‘ಇಂಟೆಲ್ನಂತಹ ಮತ್ತಷ್ಟು ಪ್ರಕರಣಗಳು ಬರಬಹುದು ಎಂದು ಆಶಿಸುತ್ತಿದ್ದೇನೆ’ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಸರ್ಕಾರದ ಈ ನಡೆಯನ್ನು ಕೆಲವರು ಸ್ವಾಗತಿಸಿದ್ದಾರೆ. ಸಂಕಷ್ಟದಲ್ಲಿರುವ ಕಂಪನಿಗಳಿಗೆ ಸರ್ಕಾರ ಸಹಾಯ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬ ವಾದವೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ