ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷೆಗಿಂತ ಮೇಲೆ; ಭಾರತದ ಮೇಲೆ ಆಗುವ ಪರಿಣಾಮಗಳೇನು?

|

Updated on: Mar 13, 2024 | 6:09 PM

US Inflation & India connection: ಅಮೆರಿಕದ ಹಣದುಬ್ಬರ 2024ರ ಫೆಬ್ರುವರಿ ತಿಂಗಳಲ್ಲಿ ಶೇ. 3.2ಕ್ಕೆ ಏರಿದೆ. ಜನವರಿಯಲ್ಲಿ ಹಣದುಬ್ಬರ ಶೇ. 3.1ರಷ್ಟು ಇತ್ತು. ಇದರ ಬೆನ್ನಲ್ಲೇ ಇಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂಚಲನ ಉಂಟಾಗಿದ್ದು ವಿವಿಧ ಸೂಚ್ಯಂಕಗಳು ಇಳಿಕೆ ಕಂಡಿವೆ. ಅಮೆರಿಕದಲ್ಲಿ ಹಣದುಬ್ಬರ ಏರಿರುವುದರಿಂದ ಬಡ್ಡಿದರ ಕಡಿತ ಆಗುವುದಿಲ್ಲ ಎನ್ನುವ ನಿರೀಕ್ಷೆಯಲ್ಲಿ ಈ ವ್ಯತ್ಯಯಗಳಾಗುತ್ತಿವೆ.

ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷೆಗಿಂತ ಮೇಲೆ; ಭಾರತದ ಮೇಲೆ ಆಗುವ ಪರಿಣಾಮಗಳೇನು?
ಅಮೆರಿಕ
Follow us on

ನವದೆಹಲಿ, ಮಾರ್ಚ್ 13: ಸತತವಾಗಿ ಇಳಿಯುತ್ತಾ ಬಂದಿದ್ದ ಅಮೆರಿಕದ ಹಣದುಬ್ಬರ ದರ (Inflation rate) ಫೆಬ್ರುವರಿ ತಿಂಗಳಲ್ಲಿ ಶೇ. 3.2ಕ್ಕೆ ಹೆಚ್ಚಿರುವುದು ಬಹಳಷ್ಟು ಮಂದಿಗೆ ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಜನವರಿಯಲ್ಲಿ ಶೇ. 3.1ರಷ್ಟು ಹಣದುಬ್ಬರ ಇತ್ತು. ಫೆಬ್ರುವರಿಯಲ್ಲಿ ಅಷ್ಟೇ ಇರಬಹುದು, ಅಥವಾ ಇನ್ನೂ ಸ್ವಲ್ಪ ಇಳಿಯಬಹುದು ಎಂದು ತಜ್ಞರು ಎಣಿಕೆ ಮಾಡಿಕೊಂಡಿದ್ದರು. ಆದರೆ, ಸ್ವಲ್ಪ ಏರಿಕೆಯೇ ಆಗಿದೆ. ಇದೇನೂ ಅಂಥ ದೊಡ್ಡ ವ್ಯತ್ಯಯವಾಗದೇ ಹೋದರೂ ಅದರ ಪರಿಣಾಮ ಹಲವಿರಬಹುದು. ಅದರಲ್ಲೂ ಪ್ರಮುಖವಾಗಿ, ಫೆಡರಲ್ ರಿಸರ್ವ್ (US central bank) ತನ್ನ ಬಡ್ಡಿದರಗಳನ್ನು (fed rates) ಕಡಿತಗೊಳಿಸಬೇಕೆನ್ನುವ ನಿರ್ಧಾರವನ್ನು ಹಿಂತೆಗೆದುಕೊಂಡು ಬಿಟ್ಟರೆ ಅನ್ನುವ ಅನುಮಾನ ಕಾಡತೊಡಗಿದೆ.

ಅಮೆರಿಕದ ಆರ್ಥಿಕತೆಯ ಜೊತೆ ಬಹುತೇಕ ಇಡೀ ವಿಶ್ವ ತಳುಕು ಹಾಕಿಕೊಂಡಿದೆ. ಅದರಲ್ಲೂ ಭಾರತೀಯ ಮಾರುಕಟ್ಟೆ ಅಮೆರಿಕದ ಪರಿಸ್ಥಿತಿಗೆ ಸಂವೇದಿಯಾಗಿರುತ್ತದೆ. ನಿನ್ನೆ ಅಮೆರಿಕದಲ್ಲಿ ಹಣದುಬ್ಬರ ಏರಿಕೆ ಆಗಿರುವ ವರದಿ ಬರುತ್ತಿದ್ದಂತೆಯೇ ಭಾರತದಲ್ಲಿ ಷೇರುಪೇಟೆ ಸಾಕಷ್ಟು ನಷ್ಟ ಮಾಡಿಕೊಂಡಿದೆ. ಸೆನ್ಸೆಕ್ಸ್, ನಿಫ್ಟಿಯ ವಿವಿಧ ಸೂಚ್ಯಂಕಗಳು ಇಂದು ಇಳಿಕೆ ಕಂಡಿವೆ. 10 ಲಕ್ಷ ಕೋಟಿ ರೂಗೂ ಹೆಚ್ಚು ಷೇರುಸಂಪತ್ತು ಕರಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹೀಗೇ ಆದರೆ ಮುಂದೆ ಅಮೆರಿಕ ದಿವಾಳಿ ಆಗುತ್ತೆ: ಸರ್ಕಾರವನ್ನು ಎಚ್ಚರಿಸಿದ ಉದ್ಯಮಿ ಇಲಾನ್ ಮಸ್ಕ್

ಅಮೆರಿಕದ ಹಣದುಬ್ಬರದ ಪರಿಣಾಮ ಏನು?

ಆಗಲೇ ತಿಳಿಸಿದಂತೆ ಅಮೆರಿಕದ ಸೆಂಟ್ರಲ್ ಬ್ಯಾಂಕ್ ಎನಿಸಿದ ಫೆಡರಲ್ ರಿಸರ್ವ್ ಮುಂದಿನ ಒಂದು ವರ್ಷದಲ್ಲಿ ಮೂರ್ನಾಲ್ಕು ಬಾರಿ ಬಡ್ಡಿದರ ಕಡಿತಗೊಳಿಸಬಹುದು ಎಂಬ ಸುಳಿವು ನೀಡಿತ್ತು. ಸತತವಾಗಿ ಹಣದುಬ್ಬರ ಇಳಿಯುತ್ತದೆ ಎನ್ನುವ ವಿಶ್ವಾಸದಲ್ಲಿ ಅದು ಹೇಳಿದ್ದಿರಬಹುದು. ಈ ಹಣದುಬ್ಬರ ಸ್ವಲ್ಪಮಟ್ಟಿಗೆ ಏರಿರುವುದು ಬಡ್ಡಿದರ ಇಳಿಕೆ ಮಾಡಲಾಗುತ್ತದಾ ಇಲ್ಲವಾ ಎನ್ನುವ ಅನುಮಾನ ಮೂಡಿದೆ.

ಬಡ್ಡಿದರ ಕಡಿತ ಆಗದೇ ಹೋದರೆ ಚಿನ್ನದತ್ತ ವಲಸೆ ಹೋದ ಹೂಡಿಕೆದಾರರು ಮರಳಿ ಅಮೆರಿಕ ಮಾರುಕಟ್ಟೆಗೆ ಬರಬಹುದು. ಇದರಿಂದ ಚಿನ್ನದ ಬೆಲೆ ಇಳಿಯಬಹುದು.

ಇದನ್ನೂ ಓದಿ: 2024ರ ಫೆಬ್ರುವರಿಯಲ್ಲಿ ಭಾರತದ ಹಣದುಬ್ಬರ ಶೇ. 5.09; ಜನವರಿಯಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.8 ಹೆಚ್ಚಳ

ಭಾರತದ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದ ಸಾಂಸ್ಥಿಕ ಹೂಡಿಕದಾರರು ತಮ್ಮ ಬಂಡವಾಳ ಹಿಂತೆಗೆದುಕೊಳ್ಳುವ ಸಾಧ್ಯತೆಯೂ ಇದೆ. ಈಗಾಗಲೆ ಇದು ನಡೆದಿದೆ.

ಇನ್ನು ತಜ್ಞರ ಪ್ರಕಾರ, ಹಣದುಬ್ಬರ ಶೇ. 3.2ಕ್ಕೆ ಹೆಚ್ಚಾಗಿದೆಯಾದರೂ, ಪ್ರಮುಖವಾದ ಸೂಪರ್ ಕೋರ್ ಇನ್​ಫ್ಲೇಶನ್ ಶೇ. 6.1ರಿಂದ ಶೇ. 4.3ಕ್ಕೆ ಇಳಿದಿದೆ. ಇದು ಸಕಾರಾತ್ಮಕ ಸೂಚನೆಯಾಗಿದೆ. ಹೀಗಾಗಿ, ಫೆಡರಲ್ ರಿಸರ್ವ್ ತನ್ನ ಬಡ್ಡಿದರ ಇಳಿಕೆಯ ನಿರ್ಧಾರ ಜಾರಿ ಮಾಡಬಹುದು ಎನ್ನಲಾಗಿದೆ. ಅವರ ಅಂದಾಜು ಪ್ರಕಾರ ಜೂನ್ ತಿಂಗಳಲ್ಲಿ ಬಡ್ಡಿದರ ಕಡಿತ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ