
ನವದೆಹಲಿ, ಜುಲೈ 30: ಅಮೆರಿಕದೊಂದಿಗೆ ಭಾರತ ಆಗಸ್ಟ್ 1ರೊಳಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದಿದ್ದರೆ ಹೆಚ್ಚಿನ ಆಮದು ಸುಂಕ ಎದುರಿಸಬೇಕಾಗಬಹುದು ಎಂದು ವರದಿಗಳು ಹೇಳುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಳ್ಳದ ದೇಶಗಳಿಗೆ ಆಗಸ್ಟ್ 1ರಿಂದ ಅಧಿಕ ಮಟ್ಟದ ಟ್ಯಾರಿಫ್ ಹಾಕಲಾಗುತ್ತದೆ ಎಂದು ಬಾರಿ ಬಾರಿ ಹೇಳುತ್ತಲೇ ಬಂದಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಟ್ರಂಪ್ ಅವರು ಇದನ್ನು ಪುನರುಚ್ಚರಿಸಿದ್ದು, ಡೀಲ್ ಮಾಡಿಕೊಳ್ಳದ ದೇಶಗಳಿಗೆ ಅಧಿಕ ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಭಾರತದ ಮೇಲೆ ಶೇ. 20-25ರಷ್ಟು ತೆರಿಗೆ ಹಾಕುವುದಾಗಿಯೂ ಅವರು ತಿಳಿಸಿದ್ದಾರೆ.
ಟ್ರಂಪ್ ನೀಡಿದ ಡೆಡ್ಲೈನ್ಗೆ ಒಂದೆರಡು ದಿನ ಮಾತ್ರವೇ ಬಾಕಿ ಇರುವುದು. ಅಮೆರಿಕ ಮತ್ತು ಭಾರತ ನಡುವೆ ಅಷ್ಟು ಬೇಗ ಟ್ರೇಡ್ ಡೀಲ್ ಕುದುರುವ ಸಾಧ್ಯತೆ ಇಲ್ಲ. ಹಲವು ತಿಂಗಳಿಂದ ಎರಡೂ ದೇಶಗಳ ಮಧ್ಯೆ ಮಾತುಕತೆಗಳು ನಡೆಯುತ್ತಿವೆ. ಐದು ಸುತ್ತಿನ ಮಾತುಕತೆ ಮುಗಿದಿದೆ. ಆಗಸ್ಟ್ 25ರಂದು ಭಾರತದಲ್ಲಿ ಆರನೇ ಸುತ್ತಿನ ಮಾತುಕತೆ ನಡೆಯಲಿದೆ.
ಇದನ್ನೂ ಓದಿ: ಭಾರತದಲ್ಲಿ ಆನ್ಲೈನ್ ಶಾಪಿಂಗ್ ಮಾಡೋರು ನೂರರಲ್ಲಿ 25 ಕೂಡ ಇಲ್ಲವಾ? ಇಲ್ಲಿದೆ ಮೆಕಿನ್ಸೀ ವರದಿ
ಅಮೆರಿಕ ಇತ್ತೀಚೆಗೆ ಇಂಡೋನೇಷ್ಯಾ ಮತ್ತು ವಿಯೆಟ್ನಾಂ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿತ್ತು. ಅದರಲ್ಲಿ ಅಮೆರಿಕ ತನ್ನ ಉತ್ಪನ್ನಗಳಿಗೆ ಶೂನ್ಯ ತೆರಿಗೆಯನ್ನು ಗಿಟ್ಟಿಸಿತ್ತು. ಇನ್ನೊಂದೆಡೆ, ವಿಯೆಟ್ನಾಂ ಮತ್ತು ಇಂಡೋನೇಷ್ಯಾ ದೇಶಗಳ ವಸ್ತುಗಳಿಗೆ ಶೇ. 20ರ ಆಸುಪಾಸಿನ ಟ್ಯಾರಿಫ್ ಹೇರಲು ಡೀಲ್ ಆಗಿತ್ತು. ಅದೇ ಮಾದರಿಯಲ್ಲಿ ಭಾರತದೊಂದಿಗೆ ಡೀಲ್ ಕುದುರಿಸಲು ಅಮೆರಿಕ ಪ್ರಯತ್ನಿಸುತ್ತಿದೆ.
ವಿಯೆಟ್ನಾಂ ಮತ್ತು ಇಂಡೋನೇಷ್ಯಾ ಮಾದರಿಯಲ್ಲಿ ಟ್ರೇಡ್ ಡೀಲ್ ಮಾಡಿಕೊಳ್ಳಲು ಭಾರತ ಸಿದ್ಧವಿಲ್ಲ. ತನ್ನ ಕೃಷಿ ಕ್ಷೇತ್ರವನ್ನು ರಕ್ಷಿಸಿಕೊಳ್ಳಲು ಸರ್ಕಾರ ಅತೀ ಪ್ರಯತ್ನ ನಡೆಸುತ್ತಿದೆ. ಕೆಲ ತಜ್ಞರು ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಲು ಜಪಾನ್ ಮಾದರಿಯನ್ನು ಶಿಫಾರಸು ಮಾಡುತ್ತಿದ್ದಾರೆ. ಜಪಾನ್ ತನ್ನ ಕೃಷಿ ಕ್ಷೇತ್ರವನ್ನು ತೆರೆದಿಡಲು ಒಪ್ಪಿಕೊಂಡು, ಅಮೆರಿಕದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಮತ್ತಷ್ಟು ಸುಲಭ ಪ್ರವೇಶ ಪಡೆಯುವಂತೆ ಒಪ್ಪಂದ ಮಾಡಿಕೊಂಡಿದೆ. ಜಪಾನ್ಗೆ ಹೆಚ್ಚು ಉಪಯೋಗುವ ವ್ಯಾಪಾರ ಒಪ್ಪಂದ ಅದು.
ಇದನ್ನೂ ಓದಿ: ಸ್ನೇಹಿತನಿಗೆ ಕಾನೂನು ತೊಂದರೆ; ಇಡೀ ದೇಶಕ್ಕೆ ಟ್ಯಾರಿಫ್ ಕಟ್ಟಳೆ ಹಾಕಿದ ಡೊನಾಲ್ಡ್ ಟ್ರಂಪ್
ಭಾರತದೊಂದಿಗೆ ಅಮೆರಿಕ ಟ್ರೇಡ್ ಡೆಫಿಸಿಟ್ ಹೊಂದಿದೆ. ಇದನ್ನು ತಗ್ಗಿಸಲು ಅದು ವ್ಯಾಪಾರ ಒಪ್ಪಂದದ ಮಾರ್ಗ ಬಳಸುತ್ತಿದೆ. ಭಾರತ ತನ್ನ ಕೃಷಿ ಕ್ಷೇತ್ರವನ್ನು ತೆರೆಯುವುದಕ್ಕಿಂತ ಹೆಚ್ಚಾಗಿ, ಅಮೆರಿಕದ ಶಸ್ತ್ರಾಸ್ತ್ರಗಳು, ನೈಸರ್ಗಿಕ ಅನಿಲ ಮತ್ತು ನ್ಯೂಕ್ಲಿಯಾರ್ ರಿಯಾಕ್ಟರ್ಗಳನ್ನು ಖರೀದಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಣ್ಣು ಉದುರಿಸಲು ಪ್ರಯತ್ನಿಸಬಹುದು ಎನ್ನುವ ಸಲಹೆಗಳೂ ಕೇಳಿಬರುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ