
ವಾಷಿಂಗ್ಟನ್, ಆಗಸ್ಟ್ 14: ಚೀನಾದಿಂದ ಕಳ್ಳದಾರಿಗಳಲ್ಲಿ ಸರಕುಗಳು ಹರಿದುಬರುತ್ತಿವೆ ಎನ್ನುವ ಆತಂಕ ಅಮೆರಿಕಕ್ಕೆ ಇನ್ನಿಲ್ಲದಂತೆ ಕಾಡುತ್ತಿದೆ. ಅಮೆರಿಕ ಅಧ್ಯಕ್ಷರ ಗೃಹಕಚೇರಿಯಾದ ಶ್ವೇತಭವನ (White House) ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ, ಚೀನಾದ ಸರಕುಗಳ ಮೇಲಿನ ಹೆಚ್ಚಿನ ಆಮದು ಸುಂಕವನ್ನು (Tariffs) ತಪ್ಪಿಸಲು ಅಕ್ರಮ ಮಾರ್ಗಗಳನ್ನು ಬಳಸಲಾಗುತ್ತಿರುವ 40ಕ್ಕೂ ಹೆಚ್ಚು ದೇಶಗಳ ಪಟ್ಟಿಯಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿ (Tier-1) ಹೆಸರಿಸಲಾಗಿದೆ. ಕೆನಡಾ, ಯೂರೋಪಿಯನ್ ಯೂನಿಯನ್, ದಕ್ಷಿಣ ಕೊರಿಯಾ ಇತ್ಯಾದಿ ಅಮೆರಿಕದ ಮಿತ್ರ ದೇಶಗಳೂ ಈ ಪ್ರಮುಖ ಪಟ್ಟಿಯಲ್ಲಿರುವುದು ಗಮನಾರ್ಹ.
ಅಮೆರಿಕದ ವೈಟ್‌ಹೌಸ್ ಆಫೀಸ್ ಆಫ್ ಟ್ರೇಡ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಪಾಲಿಸಿ ಬಿಡುಗಡೆ ಮಾಡಿರುವ ಈ ವರದಿಯು ಇದನ್ನು “ದಿ ಗ್ರೇಟ್ ಟ್ರಾನ್ಸ್‌ಶಿಪ್‌ಮೆಂಟ್ ಸ್ಕ್ಯಾಮ್” (The Great Transhipment Scam) ಎಂದು ಹೆಸರಿಡಲಾಗಿದೆ. ಚೀನಾದ ರಫ್ತುದಾರರು ಅಮೆರಿಕ ವಿಧಿಸಿರುವ ಭಾರೀ ಟ್ಯಾರಿಫ್‌ನಿಂದ ಬಚಾವಾಗಲು ತಮ್ಮ ವಸ್ತುಗಳನ್ನು ಮೂರನೇ ದೇಶಗಳ ಮೂಲಕ ದಾರಿ ಬದಲಿಸಿ (Rerouting), ಬೇರೆ ಲೇಬಲ್ (Relabelling) ಹಾಕಿ ಅಥವಾ ಸಣ್ಣಪುಟ್ಟ ಬದಲಾವಣೆ ಮಾಡಿ ಅಮೆರಿಕಕ್ಕೆ ಕಳುಹಿಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.
ಇದನ್ನೂ ಓದಿ: ಪ್ರಿ-ರೈಡ್ ಟಿಪ್ಸ್ ಬಂದ್: ಓಲಾ, ಉಬರ್, ರ‍್ಯಾಪಿಡೋ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್
ವರದಿಯಲ್ಲಿ 40ಕ್ಕೂ ಹೆಚ್ಚು ದೇಶಗಳನ್ನು ಟಿಯರ್-1, ಟಿಯರ್-2 ಮತ್ತು ಟಿಯರ್-3 ಎಂದು 3 ವಿಭಾಗಗಳಾಗಿ ವಿಂಗಡಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ವ್ಯಾಪಾರ ಸಲಹೆಗಾರ ಪಿಟರ್ ನವಾರೊ (Peter Navarro) ಅವರ ಪ್ರಕಾರ, ಈ ರೀತಿಯ ಅಕ್ರಮ ರಫ್ತಿನಿಂದಾಗಿ ಅಮೆರಿಕ ಸರ್ಕಾರಕ್ಕೆ ಸುಮಾರು 60 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಆಮದು ಸುಂಕದ ನಷ್ಟವಾಗಿದೆ.
ಭಾರತ, ಮೆಕ್ಸಿಕೋ ಮತ್ತು ವಿಯೆಟ್ನಾಂ ಮೂಲಕವೇ 2025ರಲ್ಲಿ ಚೀನಾದಿಂದ ಸುಮಾರು $67 ಶತಕೋಟಿ ಮೌಲ್ಯದ ಸರಕುಗಳನ್ನು ಮರು-ರಫ್ತು ಮಾಡಲಾಗಿದೆ ಎಂದು ಅಮೆರಿಕ ವರದಿ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬಹಳ ಹೆಚ್ಚಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್, ಬೈಕುಗಳು; ರಾಜ್ಯದ ಇವಿ ನೀತಿಗಳೇ ಇದಕ್ಕೆ ಕಾರಣವಾ?
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ