AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

US-India: ಅಮೆರಿಕ ವಾಣಿಜ್ಯ ಸಚಿವೆ ಜೀನಾ ಭಾರತ ಭೇಟಿ; ಸಿಇಒ ಫೋರಂ ಮತ್ತಿತರ ಸಭೆಗಳಲ್ಲಿ ಭಾಗಿ; ಇಲ್ಲಿದೆ ಅವರ ಪ್ರವಾಸದ ಅಜೆಂಡಾ

Gina Raimondo India Visit: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧ ವೃದ್ಧಿಸುವ ಪ್ರಯತ್ನಗಳ ಭಾಗವಾಗಿ ಯುಎಸ್​ನ ಕಾಮರ್ಸ್ ಸೆಕ್ರೆಟರಿ ಜೀನಾ ರೇಮಾಂಡೋ ಅವರು ಭಾರತಕ್ಕೆ ಬರುತ್ತಿದ್ದು, ಮಾರ್ಚ್ 11ರವರೆಗೆ ವಿವಿಧ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ.

US-India: ಅಮೆರಿಕ ವಾಣಿಜ್ಯ ಸಚಿವೆ ಜೀನಾ ಭಾರತ ಭೇಟಿ; ಸಿಇಒ ಫೋರಂ ಮತ್ತಿತರ ಸಭೆಗಳಲ್ಲಿ ಭಾಗಿ; ಇಲ್ಲಿದೆ ಅವರ ಪ್ರವಾಸದ ಅಜೆಂಡಾ
ಜೀನಾ ರೆಮಾಂಡೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 07, 2023 | 1:17 PM

Share

ನವದೆಹಲಿ: ಮಾರ್ಚ್ 10ರಂದು ಇಲ್ಲಿ ನಡೆಯಲಿರುವ ಭಾರತ ಅಮೆರಿಕ ವಾಣಿಜ್ಯಾತ್ಮಕ ಸಂವಾದ (US-India Commercial Dialogue) ಮತ್ತು ಸಿಇಒ ಫೋರಂನಲ್ಲಿ (CEO Forum) ಪಾಲ್ಗೊಳ್ಳಲು ಅಮೆರಿಕದ ವಾಣಿಜ್ಯ ಸಚಿವೆ ಜೀನಾ ರೆಮಾಂಡೋ (US Secretary of Commerce Gina Raimondo) ರಾಷ್ಟ್ರ ರಾಜಧಾನಿಗೆ ಬರುತ್ತಿದ್ದಾರೆ. ಇದೇ ವೇಳೆ ಅವರು ಭಾರತದ ಸರ್ಕಾರಿ ಮತ್ತು ಖಾಸಗಿ ವಲಯದ ಹಣಕಾಸು ಸಂಸ್ಥೆಗಳ ಅಧಿಕಾರಿಗಳೊಂದಿಗಿನ ಸಭೆಯಲ್ಲೂ ಭಾಗವಹಿಸಲಿದ್ದಾರೆ. ಕಳೆದ ತಿಂಗಳು ನವದೆಹಲಿಯಲ್ಲಿ ಇಂಡೋ ಪೆಸಿಫಿಕ್ ಎಕನಾಮಿಕ್ ಫ್ರೇಮ್​ವರ್ಕ್​ನ (Indo Pacific Economic Framework) ವಿಶೇಷ ಸುತ್ತಿನ ಸಭೆ ನಡೆದಿತ್ತು. ಅದರ ಬೆನ್ನಲ್ಲೇ ಅಮೆರಿಕದ ವಾಣಿಜ್ಯ ಸಚಿವೆ ಪ್ರವಾಸ ಕೈಗೊಂಡಿದ್ದಾರೆ. ಮಾರ್ಚ್ 11ರವರೆಗೆ ಅವರು ಭಾರತದಲ್ಲಿ ಇರಲಿದ್ದು, ಆ ನಂತರ ಅಮೆರಿಕಕ್ಕೆ ಮರಳಲಿದ್ದಾರೆ.

ಮಾರ್ಚ್ 10ರಂದು ಯುಎಸ್ಇಂಡಿಯಾ ಕಮರ್ಷಿಯಲ್ ಡೈಲಾಗ್ ಅಂಡ್ ಸಿಇಒ ಫೋರಂ ಸಭೆ ನಡೆಯಲು ನಿಗದಿಯಾಗಿದೆ. ಎರಡೂ ದೇಶಗಳ ಮಧ್ಯೆ ಹೊಸ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳ ಸೃಷ್ಟಿಗೆ ಎಡೆ ಮಾಡಿಕೊಡಬಹುದಾದ ವಿವಿಧ ವಲಯಗಳಲ್ಲಿ ಪರಸ್ಪರ ಸಹಭಾಗಿತ್ವದ ಬಗ್ಗೆ ಅವರು ಈ ವೇದಿಕೆಯಲ್ಲಿ ಚರ್ಚಿಸಲಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಸುಧಾರಣೆಗೆ ಮತ್ತು ಎರಡೂ ದೇಶಗಳ ಮಧ್ಯೆ ವಾಣಿಜ್ಯ ಸಂಬಂಧಗಳನ್ನು ಇನ್ನಷ್ಟು ಆಳಕ್ಕೆ ತೆಗೆದುಕೊಂಡು ಹೋಗಲು ಅಮೆರಿಕ ಸರ್ಕಾರ ಎಷ್ಟು ಉತ್ಸುಕವಾಗಿದೆ ಎಂಬುದನ್ನು ಜೀನಾ ರೇಮಾಂಡೋ ಈ ಸಂದರ್ಭದಲ್ಲಿ ತೋರ್ಪಡಿಸಲಿದ್ದಾರೆ.

2022 ನವೆಂಬರ್​ನಲ್ಲಿ ಅಮೆರಿಕದ ವಾಣಿಜ್ಯ ಸಚಿವೆ ಜೀನಾ ರೇಮಾಂಡೋ ಮತ್ತು ಭಾರತದ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಭಾರತ ಅಮೆರಿಕ ಸಿಇಒ ಫೋರಂಗೆ ಚಾಲನೆ ಸಿಕ್ಕಿತ್ತು. ಸರಬರಾಜು ಸರಪಳಿ ವ್ಯವಸ್ಥೆಯನ್ನು ಬಲಪಡಿಸುವುದು, ಇಂಧನ ಭದ್ರತೆ ಹೆಚ್ಚಿಸುವುದು, ಗ್ರೀನ್​ಹೌಸ್ ಗ್ಯಾಸ್ ನಿಯಂತ್ರಿಸುವುದು, ಡಿಜಿಟಲ್ ವ್ಯಾಪಾರ ಸುಧಾರಿಸುವುದು, ಕೋವಿಡೋತ್ತರ ಆರ್ಥಿಕ ಚೇತರಿಕೆಯ ದಾರಿ ಸುಗಮಗೊಳಿಸುವುದು ಇತ್ಯಾದಿ ಆದ್ಯತೆಯ ವಿಚಾರಗಳನ್ನು ಆ ಸಭೆಯಲ್ಲಿ ಗುರುತಿಸಲಾಗಿತ್ತು.

ಇದನ್ನೂ ಓದಿMeta Layoffs- ಫೇಸ್​ಬುಕ್​ಗೆ ಶೇ.13ರಷ್ಟು ಲೇ ಆಫ್ ಸಾಕಾಗಿಲ್ಲ, ಮತ್ತೊಂದು ಸುತ್ತಿನ ಫೈರಿಂಗ್​ಗೆ ಮೆಟಾ ಅಣಿ

ಅಮೆರಿಕ ಮತ್ತು ಭಾರತ ಸಂಬಂಧಕ್ಕೆ ಇದು ಆಶೋತ್ತರ ಸಂದರ್ಭ. ಹೋಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಭಾರತಕ್ಕೆ ಬರಲು ಖುಷಿಯಾಗುತ್ತಿದೆ ಎಂದು ಜೀನಾ ರೇಮಾಂಡೋ ಹರ್ಷ ವ್ಯಕ್ತಪಡಿಸಿದ್ದಾರೆ.

ಸಿಇಒ ಫೋರಂ, ವಾಣಿಜ್ಯಾತ್ಮಕ ಸಂವಾದ ಮತ್ತು ಐಪಿಇಎಫ್ ಸಭೆಯಲ್ಲಿ ನಾವು ಎರಡೂ ದೇಶಗಳನ್ನು ಇನ್ನಷ್ಟು ಸನಿಹಕ್ಕೆ ತರುತ್ತಿದ್ದೇವೆ. ಈಗಿರುವ ವ್ಯಾಪಾರ ಮಾರುಕಟ್ಟೆ ವಿಸ್ತರಿಸುವುದಲ್ಲದೇ ಹೊಸ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎರಡೂ ದೇಶಗಳಿಗೆ ಇರುವ ಬದ್ಧತೆಯನ್ನು ಇನ್ನಷ್ಟು ಬಲಗೊಳಿಸುತ್ತಿದ್ದೇವೆ ಎಂದು ಜೀನಾ ರೆಮಾಂಡೋ ತಮ್ಮ ಭಾರತ ಭೇಟಿಯ ಅಜೆಂಡಾ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Tue, 7 March 23