
ನವದೆಹಲಿ, ಜುಲೈ 16: ನಿರೀಕ್ಷೆಯಂತೆ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ (India US trade deal) ಕುದುರಲು ಕೃಷಿ ಕ್ಷೇತ್ರ ಪ್ರಮುಖ ತೊಡಕಾಗಿದೆ. ಎರಡೂ ದೇಶಗಳು ಈ ಕ್ಷೇತ್ರದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿರುವುದು ಇದಕ್ಕೆ ಕಾರಣ. ಅರ್ಧಕ್ಕಿಂತಲೂ ಹೆಚ್ಚು ಭಾರತೀಯರ ಬದುಕಿಗೆ ಆಧಾರವಾಗಿರುವ ಕೃಷಿ ಕ್ಷೇತ್ರವನ್ನು ವಿದೇಶೀ ಆಮದುಗಳಿಂದ ರಕ್ಷಿಸಲು ಭಾರತ ಪ್ರಯತ್ನಿಸುತ್ತಿದೆ. ಅಂತೆಯೇ, ಕೃಷಿ ಆಮದುಗಳಿಗೆ ಭಾರತವು ಶೇ. 40ರ ಆಸುಪಾಸಿನ ದರದ ಸುಂಕವನ್ನು ವಿಧಿಸುತ್ತಿದೆ. ಪ್ರಸಕ್ತ ನಡೆಯುತ್ತಿರುವ ಮಾತುಕತೆಗಳಲ್ಲಿ ಅಮೆರಿಕದವರು ಈ ಕೃಷಿ ಟ್ಯಾರಿಫ್ ಅನ್ನು ಭಾರತ ಕಡಿಮೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ನಲ್ಲಿ ಬಂದ ವರದಿ ಪ್ರಕಾರ ಅಮೆರಿಕದ ಕೃಷಿ ರಫ್ತುಗಳಿಗೆ ಭಾರತವು ಟ್ಯಾರಿಫ್ ಅನ್ನು ಶೇ. 39ರಿಂದ ಶೇ. 5ಕ್ಕೆ ಇಳಿಸಬೇಕೆಂದು ಒತ್ತಡ ಹೇರಲಾಗುತ್ತಿದೆ. ಇದೇ ಸೋಮವಾರದಿಂದ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ಎರಡೂ ದೇಶಗಳ ನಿಯೋಗಗಳು ವ್ಯಾಪಾರ ಒಪ್ಪಂದ ಸಂಬಂಧ ಮಾತುಕತೆಗಳನ್ನು ನಡೆಸಲಿವೆ. ಈ ವೇಳೆ ಯಾವ್ಯಾವ ಸರಕುಗಳಿಗೆ ಎಷ್ಟೆಷ್ಟು ಟ್ಯಾರಿಫ್ ಹಾಕಬೇಕು ಎಂಬುದನ್ನು ನಿರ್ಧರಿಸಬಹುದು.
ಭಾರತವು ಕೃಷಿ ಉತ್ಪನ್ನಗಳ ಆಮದು ಮೇಲೆ ಶೇ. 39ರಷ್ಟು ಟ್ಯಾರಿಫ್ ಹಾಕುತ್ತದೆ. ಅಮೆರಿಕವು ವಿಧಿಸುವ ಟ್ಯಾರಿಫ್ ಕೇವಲ ಶೇ. 3 ಮಾತ್ರವೇ. ದ್ವಿಪಕ್ಷೀಯ ವ್ಯಾಪಾರ ಸಂಬಂಧವು ಕೊಡುಕೊಳ್ಳುವಿಕೆಯನ್ನು ಆಧರಿಸಬೇಕು. ಎರಡೂ ಕಡೆಗೆ ಲಾಭವಾಗುವ ರೀತಿ ಇರಬೇಕು ಎಂಬುದು ಅಮೆರಿಕದ ವಾದ.
ಇದನ್ನೂ ಓದಿ: ಜೂನ್ನಲ್ಲಿ ಟ್ರೇಡ್ ಡೆಫಿಸಿಟ್ ಇಳಿಕೆ; ಈ ಹಣಕಾಸು ವರ್ಷ ಸರಕುಗಳ ವ್ಯಾಪಾರ ಕೊರತೆ ಹಿಗ್ಗುವ ಸಾಧ್ಯತೆ
ಅಮೆರಿಕದಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಪೂರ್ಣ ವಾಣಿಜ್ಯಾತ್ಮಕವಾಗಿದೆ. ದೊಡ್ಡದೊಡ್ಡ ಫಾರ್ಮ್ಗಳಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಸರ್ಕಾರದಿಂದಲೂ ಸಾಕಷ್ಟು ಸಬ್ಸಿಡಿ ಸಿಗುತ್ತದೆ. ಆದರೆ, ಭಾರತದಲ್ಲಿ ಸಣ್ಣ ಪುಟ್ಟ ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಸಾಗುವಳಿ ಮಾಡಿಕೊಂಡು ಹೋಗುತ್ತಿದ್ದಾರೆ. ಅರ್ಧಕ್ಕಿಂತ ಹೆಚ್ಚಿನ ಜನಸಂಖ್ಯೆಗೆ ಕೃಷಿಯೇ ಆಧಾರವಾಗಿದೆ. ಇದರಿಂದ ಬರುತ್ತಿರುವ ಆದಾಯವೂ ಅಷ್ಟಕಷ್ಟೇ. ಅಮೆರಿಕದ ಕಮರ್ಷಿಯಲ್ ಕೃಷಿಗೆ ಹೋಲಿಸಿದರೆ ಭಾರತದಲ್ಲಿ ಕೃಷಿ ಉತ್ಪನ್ನಶೀಲತೆ ಬಹಳ ಕಡಿಮೆ. ಹೀಗಾಗಿ, ಮುಕ್ತ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳನ್ನು ಎದುರಿಸಲು ಭಾರತದ ರೈತರಿಗೆ ಸಾಧ್ಯವಾಗದೇ ಹೋಗಬಹುದು. ಹೀಗಾಗಿ, ಭಾರತವು ಡೈರಿ ಇತ್ಯಾದಿ ಕೃಷಿ ವಲಯವನ್ನು ರಕ್ಷಿಸಲು ಕಟಿಬದ್ಧವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ